ಹಾಸನ

ಮಿತ್ರರೆಲ್ಲಾ ಶತ್ರುಗಳು ಶತ್ರುಗಳು ಪರಮ ಮಿತ್ರರು...

Published On :

ಎ.ರಾಘವೇಂದ್ರ ಹೊಳ್ಳ.
ಬೇಲೂರು: ಪುರಸಭೆ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟವಾಗಲಿದ್ದು, ಅಭ್ಯರ್ಥಿಗಳಲ್ಲಿ ಆತಂಕ ಮನೆಮಾಡಿದೆ.  ವಾರ್ಡಿನ ಮತದಾರರ ಪಟ್ಟಿ ಹಿಡಿದು ಯಾರಿಗೆ ಎಲ್ಲಿ ಎಷ್ಟು ಮತಗಳು ಬಿದ್ದಿವೆ, ತಮಗೆ ಎಲ್ಲಿ ಎಷ್ಟು ಹೋಯ್ತು ಎಂಬ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಫಲಿತಾಂಶ ಹೊರಬರುವುದು ಬಾಕಿ ಇದ್ದು ಅಲ್ಲಿಯವರೆಗೆ ಅಭ್ಯರ್ಥಿಗಳು ಪ್ರಸವ ಸಂಕಟ ಅನುಭವಿಸಬೇಕಿದೆ.
ಈಗೇನಿದ್ದರೂ ಮತ ಎಣಿಕೆಯ ಲೆಕ್ಕಾಚಾರದಲ್ಲಿ ನಿರತರಾಗಿರುವ ಅಭ್ಯರ್ಥಿಗಳು ತಮ್ಮ ಪಾಲಿಗೆ ಬಂದ ಮತಗಳ ಬಗ್ಗೆ ಹಾಗೂ ಎದುರಾಳಿಗೆ ಹೋಗಿರುವ ಮತಗಳ ಬಗ್ಗೆ ತಾಳೆ ಹಾಕಿ ನೋಡುತ್ತಿದ್ದಾರೆ. ಹೋಟೆಲ್, ಬಾರ್, ಕಾಫಿ ಅಂಗಡಿಗಳಲ್ಲಿ ಫಲಿತಾಂಶದ ಬಗ್ಗೆ ಚರ್ಚೆ ನಡೆಸುತ್ತಿದ್ದು ಇಂತಹವರಿಗೆ ಇಷ್ಟು ಮತ ಬರುತ್ತೆ ಎಂಬ ವಾದವನ್ನು ಮಂಡಿಸುತ್ತಿದ್ದಾರೆ.  ಇನ್ನು ಮಾಧ್ಯಮದವರು ಕೈಗೆ ಸಿಕ್ಕಿದರೆ ಮುಗಿದೇ ಹೋಯಿತು. ಏನ್ಸಾರ್ ಏನ್‌ಹೇಳುತ್ತೆ ನಿಮ್ಮ ಸಮೀಕ್ಷೆ, ನಿಮ್ಗೆ ಗೊತ್ತಿಲ್ಲದಿರುವುದು ಏನಿದೆ ಸಾರ್, ಕೂತಲ್ಲೇ ಬ್ರಹ್ಮಾಂಡದ ಬಗ್ಗೆ ಹೇಳ್ತಿರಾ, ಅಟ್‌ಲೀಸ್ಟ್ ವಾರ್ಡಿನ ಬಗ್ಗೆ ಗೊತ್ತಿರಲ್ವಾ, ಹೇಳಿ ಸಾರ್ ಯ್ಯಾರು ಗೆಲ್ತಾರೆ, ಯಾವುದು ಮೆಜಾರ್ಜಿಟಿಗೆ ಬರುತ್ತೆ ಅಂತ ತಮ್ಮ ಜವಾಬ್ಧಾರಿಯನ್ನು ಅವರ ಹೆಗಲಿಗೆ ಹಾಕಲು ಮುಂದಾಗುತ್ತಾರೆ.    
ಮಿತ್ರರೆಲ್ಲಾ ಶತ್ರುಗಳು:  ಹಲವಾರು ವರ್ಷಗಳಿಂದ ಮಿತ್ರರಾಗಿ ಜೊತೆಯಲ್ಲೇ ಬೆಳೆದು ಬಂದಿರುವ ಹಾಗೂ ರಾಜಕೀಯದ ಕಾರಣದಿಂದ ಮಿತ್ರರಾಗಿದ್ದವರೆಲ್ಲಾ  ಮಿನಿ ಕದನ ಪುರಸಭೆ ಚುನಾವಣೆಯಲ್ಲಿ ಶತ್ರುಗಳಂತಾದರು. ಗೆಳೆತನ ಬೇರೆ, ಚುನಾವಣೆ ಬೇರೆ ಎಂಬುದು ಹಲವಾರು ಕಡೆ ಗೆಳೆಯರು ನಡುವೆ ನಡೆದ ರಾಜಕೀಯ ಜಿದ್ಧಾಜಿದ್ಧಿ ಸಾಬೀತು ಪಡಿಸಿತು.  ಒಂದು ಕಾಲದಲ್ಲಿ ಪರಮ ಶತ್ರುವಾಗಿದ್ದವರು ಚುನಾವಣೆ ಸಂದರ್ಭದಲ್ಲಿ ಪರಮ ಮಿತ್ರರಾಗಿದ್ದೂ ಕಂಡುಬಂತು.
ಅಲ್ಲದೆ ಶತ್ರುವಿನ ಶತ್ರು ಮಿತ್ರ ಎಂಬ ಮಾತಂತೆ ತಮ್ಮ ಎದುರಾಳಿಗೆ ವೈರಿಯಾಗಿದ್ದವನನ್ನು ಒಲೈಸಿ ಅವರ ಸಹಾಯ ಪಡೆದಿರುವುದು ಉಂಟು. ಚುನಾವಣೆ ಎಂದ ಮೇಲೆ ಕೋಪ ತಾಪ, ವೈಷಮ್ಯ, ಜಿದ್ಧಾಜಿದ್ಧಿ ಹಾಗೂ ತಂತ್ರ ಕುತಂತ್ರ ಸಹಜವಾಗಿ ಇರುತ್ತವೆ.  ಆದರೆ ಕೇವಲ 5 ವರ್ಷದ ಅಧಿಕಾರದ ಆಸೆಗೆ ಜೀವಕ್ಕೆ ಜೀವ ಕೊಡುವ ಗೆಳೆಯರನ್ನು ಶತ್ರುಗಳಾಗುವುದು ಬೇಡ, ಚುನಾವಣೆ ಮುಗಿದ ನಂತರವಾದರೂ ಮತ್ತೆ ಅವರ ಗೆಳೆತನ ಮುಂದುವರೆಯಲಿ ಎಂಬುದಾಗಿ ಹಿರಿಯ ರಾಜಕಾರಣಿಯೊಬ್ಬರ ಕಿವಿಮಾತು.   
ಮರಳಿ ಯತ್ನ ಮಾಡು:   ಪುರಸಭೆ ಚುನಾವಣೆ 2007 ಮೀಸಲಾತಿಯಂತೆ ನಡೆಯುತ್ತದೆ ಎಂಬುದು ಖಚಿತವಾಗುತ್ತಿದ್ದಂತೆ ಬೇರೆ ವಾರ್ಡಿನತ್ತ ಮುಖ ಮಾಡಿದ್ದ ಹಲವಾರು ಮಾಜಿ ಸದಸ್ಯರು ಮತ್ತು ಹೊಸ ಅಭ್ಯರ್ಥಿಗಳು ವಿಧಿಯಿಲ್ಲದೆ ಮತ್ತೆ ತಮ್ಮ ವಾರ್ಡಿನಿಂದಲೇ ನಿಲ್ಲುವಂತಾಯಿತು.  ವಾರ್ಡಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದ ಮಾಜಿ ಸದಸ್ಯರಿಗೆ ಅಂತಹ ಯಾವುದೇ ಮುಜಗರ ಉಂಟಾಗಲಿಲ್ಲ. ಆದರೆ ಗೆದ್ದ ಮೇಲೆ ವಾರ್ಡಿನತ್ತ ಮುಖ  ಹಾಕದ ಸದಸ್ಯರು ಮತ್ತೆ ಅಲ್ಲಿಂದಲೇ ಸ್ಪರ್ಧಿಸಲು ಮುಂದಾದಾಗ ಸಾಕಷ್ಟು ಕಂಡೆ ಮಂಗಳಾರತಿ ಮಾಡಿಸಿಕೊಳ್ಳಬೇಕಾಯಿತು.
ಗೆದ್ದು ಹೋದ ಮೇಲೆ ವಾರ್ಡಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೆ ಕಾಲಹರಣ ಮಾಡಿ,  ಸಾಮಾನ್ಯ ಸಭೆಯಲ್ಲಿ ವಾರ್ಡಿನ ಸಮಸ್ಯೆ ಬಗ್ಗೆ ಒಂದು ಮಾತೂ ಆಡದೆ ಈಗ ಮತ್ತೆ ನಿಲ್ಲುತ್ತೇನೆ ಎಂದು ಬಂದರೆ ಹೇಗೇ ಎಂಬುದು ಮತದಾರರ ಪ್ರಶ್ನೆಯಾಗಿತ್ತು. ಆದರೂ ವಿಧಿಯಿಲ್ಲದೆ ಈಗೊಂದು ಛಾನ್ಸ್ ಕೊಡಿ ಆಮೇಲೆ ನೋಡಿ ಎಂದು ಮತದಾರರಿಗೆ ಮತ್ತೆ ಭರವಸೆ ಕೊಟ್ಟು ಮತ್ತೆ ಮರಳಿ ಯತ್ನ ಮಾಡಿದ್ದಾರೆ.
ಅಡ್ವಾನ್ಸ್ ಬುಕ್ಕಿಂಗ್: ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಕೆಲವು ವಾರ್ಡುಗಳಲ್ಲಿ ಮತದಾರರಿಗೆ ಹಲವಾರು ಆಮಿಷಗಳನ್ನು ಒಡ್‌ಡಲಾಗಿದೆ. ಕೆಲಮೊಂದು ಅಭ್ಯರ್ಥಿಗಳು ಈ ಚುನಾವಣೆಯನ್ನು ಎಷ್ಟರ ಮಟ್ಟಿಗೆ ಪರಿಗಣಿಸಿದರೆಂದರೆ 25 ಮಂದಿ ಕೂಲಿ ಕಾರ್ಮಿಕರಿದ್ದರೆ ಅವರಿಗೆ 15 ದಿನದ ದಿನಗೂಲಿ ಹಣವನ್ನು ಮೊದಲೇ ಆಡ್ವಾನ್ಸ್ ಕೊಟ್ಟು ಅಷ್ಟು ದಿನವೂ ಅವರು ಅಭ್ಯರ್ಥಿಯ ಜೊತೆಗೇ ಇರಬೇಕು. ಬೇರೆ ಅಭ್ಯರ್ಥಿಯ ಗುಂಪಿನೊಂದಿಗೆ ಸೇರುವುದಾಗಲಿ, ಮಾತಾಡುವುದಾಗಲಿ ಮಾಡುವಂತಿಲ್ಲ.
  ಬೆಳಗ್ಗೆ ತಿಂಡಿ, ಮಧ್ಯಾಹ್ನ, ರಾತ್ರಿ ಎಣೆ ಊಟ ಎಲ್ಲಾ ಇವರೊಟ್ಟಿಗೆ ನಡೆಯಬೇಕು. ಒಟ್ಟಿನಲ್ಲಿ ಕಾನ, ಪೀನಾ, ಸೋನಾ ಜೊತೆಯಲ್ಲೇ ನಡೆಯಬೇಕು. ಜೆ.ಪಿ ನಗರ, ನೆಹರೂ ನಗರದ ವಾರ್ಡುಗಳಲ್ಲಿ ಮತದಾರರಿಗೆ ದಿನನಿತ್ಯ ಬಿರಿಯಾನಿ ಪ್ಯಾಕೇಟ್ ಅನ್ನು ನೀಡಲಾಗಿದ್ದು ಕೆಲ ವಾರ್ಡುಗಳ ಮತದಾರರಿಗೆ ಫುಲ್ ಊಟ, ಬೀಡಿ ಪೆಂಕಿ ಪಟ್ಟಣ ಎನ್ನುವಂತಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.