ಹಾಸನ

ಬೇಲೂರು- ಹಳೇಬೀಡು ಯೋಜನಾ ಪ್ರಾಧಿಕಾರ ರಚನೆ

Published On :


ಕನ್ನಡಪ್ರಭವಾರ್ತೆ೤ ಹಾಸನ೤ ಮಾ 14
ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ಸಮಗ್ರ ಅಭಿವೃದ್ಧಿಯ ಜೊತೆಗೆ ಮಲೆನಾಡು ಭಾಗವನ್ನು ಒಳಗೊಂಡಂತೆ ಹೊಸ ಆಕರ್ಷಕ ಕೇಂದ್ರಗಳನ್ನು ಗುರುತಿಸಿ ಪ್ರವಾಸಿಗರನ್ನು ಸೆಳೆಯಲು ಅಗತ್ಯವಿರುವ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳುತ್ತಿದೆ. ಅಲ್ಲದೆ ಬೇಲೂರು, ಹಳೇಬೀಡು ಅಭಿವೃದ್ಧಿಗಾಗಿ ಯೋಜನಾ ಪ್ರಾಧಿಕಾರ ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲಾಡಳಿತ ಹೊಸದೃಷ್ಟಿಕೋನದಲ್ಲಿ ಚಿಂತನೆ ನಡೆಸಿದೆ. ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಗರಿಷ್ಠ ಸೌಕರ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.
ಪ್ರವಾಸಿ ಕೈಪಿಡಿಗೆ ನಿರ್ಧಾರ:  ಜಿಲ್ಲಾಡಳಿತದಿಂದ ಪ್ರವಾಸಿ ತಾಣಗಳ ಅತ್ಯುತ್ತಮ ಛಾಯಾಚಿತ್ರಗಳು, ಮಾಹಿತಿಯನ್ನು ಒಳಗೊಂಡ ಪ್ರವಾಸಿ ಕೈಪಿಡಿ ಹೊರತರಲು ನಿರ್ಧರಿಸಲಾಗಿದೆ. ಎಲ್ಲಾ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಇದು ಪ್ರವಾಸಿಗರಿಗೆ ಸುಲಭ ದರದಲ್ಲಿ ಲಭ್ಯವಾಗುವಂತೆ ಕ್ರಮ ವಹಿಸಲಾಗುವುದು. ಜಿಲ್ಲೆಯ ಹೆದ್ದಾರಿ, ಪ್ರವಾಸಿ ತಾಣಗಳು ವಾಸ್ತವ್ಯಕ್ಕೆ ಇರುವ ಅವಕಾಶಗಳ ಬಗ್ಗೆ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ಹೇಳಿದರು. ಬೇಲೂರು, ಹಳೇಬೀಡು ಸೇರಿದಂತೆ ಪ್ರವಾಸಿ ತಾಣಗಳಲ್ಲಿನ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಸರಿಯಾದ ಸೌಲಭ್ಯಗಳಿಲ್ಲದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಡಾರ್ಮಿಟ್ರಿಗಳನ್ನು ತೆರೆಯುವ ಪ್ರಯತ್ನಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಪಡೆದು ಹೆಚ್ಚಿನ ಸೌಕರ್ಯ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಲಿದೆ ಎಂದರು.
ಸಕಲೇಶಪುರ ಉಪವಿಭಾಗಾಧಿಕಾರಿ ಶ್ರೀವಿದ್ಯಾ ಅವರು ಮಂಜರಾಬಾದ್ ಕೋಟೆ ಬಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಸಕಲೇಶಪುರ ತಾಲೂಕು ಕಚೇರಿಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಚಿಂತಿಸಿದ್ದು, ಸ್ಥಳೀಯರು ಪುರಾತನ ಕಾಲದ ಸಾಧನ ಸಲಕರಣೆ, ದಾಖಲೆಗಳನ್ನು ಈ ಸಂಗ್ರಹಾಲಯಕ್ಕೆ ನೀಡಬೇಕೆಂದು ಕೋರಿದರು.
ಮಂಜರಾಬಾದ್ ಕೋಟೆಯ ಸಮಗ್ರ ಅಭಿವೃದ್ಧಿ:   ಸಭೆಯಲ್ಲಿ ಹಾಜರಿದ್ದ ಸಕಲೇಶಪುರ, ಬೇಲೂರು ಮತ್ತು ಹಾಸನದ ಹೋಂಸ್ಟೆ ಹಾಗೂ ಹೋಟೆಲ್ ಮಾಲೀಕರು ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ನೀಡಿದರು. ಮಂಜರಾಬಾದ್ ಕೋಟೆಯ ಸಮಗ್ರ ಅಭಿವೃದ್ಧಿ ಕುರಿತಂತೆ ಅಪರ ಮುಖ್ಯ ಕಾರ್ಯದರ್ಶಿಯವರ ಪರಿವೀಕ್ಷಣೆ ಸಂದರ್ಭದಲ್ಲಿ ಸೂಚಿಸಿದಂತೆ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ತಿಳಿಸಿದರು. ಬೇಲೂರು ಚನ್ನಕೇಶವಸ್ವಾಮಿ ದೇವಾಲಯ ಹಿಂಭಾಗದಲ್ಲಿ ಬಾಕಿಯಿರುವ 8 ಆಸ್ತಿಗಳನ್ನು ಭೂಸ್ವಾಧೀನಪಡಿಸಿ ಸ್ಥಳದಲ್ಲಿ ಕಲ್ಪಿಸಬೇಕಾದ ಸೌಲಭ್ಯಗಳ ಕುರಿತು ವಿವರಿಸಿದರು.
ಹಳೇಬೀಡು ಸರ್ವೇ ನಂ.358-6ಪಿ ರಲ್ಲಿನ 7.26 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿ ಅನುಷ್ಠಾನಗೊಳಿಸುವ ಬಗ್ಗೆ ಆಗಿರುವ ಪ್ರಗತಿಯ ಬಗ್ಗೆ ಜಿಲ್ಲಾಧಿಕಾರಿಯವರು ಉಪವಿಭಾಗಾಧಿಕಾರಿ, ತಹಸೀಲ್ದಾರರು ಮಾಹಿತಿ ಪಡೆದರು.


ಎಲ್ಲ ಮಾಹಿತಿ ಕಲೆ ಹಾಕಿ

ಬೇಲೂರು, ಹಳೇಬೀಡುಗಳ ಶಾಶ್ವತ ಅಭಿವೃದ್ಧಿಗಾಗಿ ಯೋಜನಾ ಪ್ರಾಧಿಕಾರ ರಚಿಸಲು ನಿರ್ಧರಿಸಲಾಗಿದೆ. ಹಂಪಿ, ಜೋಗ್, ಮಲ್ಪೆಗಳಲ್ಲಿರುವ ಅಭಿವೃದ್ಧಿ ಪ್ರಾಧಿಕಾರಗಳು ಯಾವ ರೀತಿ ಕೆಲಸ ಮಾಡುತ್ತಿದೆ ಮತ್ತು ಅನುದಾನವನ್ನು ಹೇಗೆ ಕ್ರೋಢೀಕರಿಸುತ್ತಿದೆ ಎಂಬುದನ್ನು ಅಧ್ಯಯನ ಮಾಡಿ ಅನುಕೂಲ - ಅನಾನುಕೂಲಗಳನ್ನು ಗಮನಿಸಿ ಕಾಯಂ ಕಚೇರಿ ತೆರೆದು ಕಾರ್ಯ ನಿರ್ವಹಿಸಲಾಗುವುದು.
    ಅದಕ್ಕೆ ಶೀಘ್ರದಲ್ಲೇ ರೂಪು ರೇಷೆ ಸಿದ್ಧಪಡಿಸಲಾಗುವುದು. ಈ ನಿಟ್ಟಿನಲ್ಲಿ ಮುಂದಿನ ಸಭೆಗಳಿಗೆ ಎಲ್ಲಾ ಮಾಹಿತಿಯನ್ನು ಕಲೆ ಹಾಕಿ ಸಭೆಯಲ್ಲಿ ಮಂಡಿಸುವಂತೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಈಗಾಗಲೇ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಿಲ್ಲೆಗೆ ಆಗಮಿಸಿ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಪರಿವೀಕ್ಷಣೆ ನಡೆಸಿದ್ದಾರೆ.
  ಸಕಲೇಶಪುರದ ಮಂಜರಾಬಾದ್ ಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಚಾರಿತ್ರಿಕ ಹಿನ್ನೆಲೆಗಳನ್ನು ಪ್ರವಾಸಿಗರಿಗೆ ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ಪರಿಚಯಿಸಲು ಯೋಜನೆ ರೂಪಿಸಲಾಗಿದೆ.
 ಇದರೊಂದಿಗೆ ಸಕಲೇಶಪುರ ತಾಲೂಕಿನಲ್ಲಿ ಇರುವ ಹಲವು ರಮ್ಯ ತಾಣಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಡಿಸಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.