ಖರೀದಿಯಲ್ಲಿ ನಿರ್ಲಕ್ಷ್ಯ: ತಂಬಾಕು ಬೆಳೆಗಾರರ ಆಕ್ರೋಶ
ಕ.ಪ್ರ.ವಾರ್ತೆ ರಾಮನಾಥಪುರ ಮಾ.16
ಇಲ್ಲಿನ ತಂಬಾಕು ಮಂಡಳಿಯವರು ತಂಬಾಕನ್ನು ಸರಿಯಾದ ಬೆಲೆಗೆ ಸಮರ್ಪಕವಾಗಿ ಖರೀದಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ತಂಬಾಕು ಬೆಳೆಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಶನಿವಾರ ತಂಬಾಕು ಹರಾಜು ಕಟ್ಟೆಯಲ್ಲಿ ಪ್ರತಿಭಟನೆ ನಡೆಸಿದರು.
ಈ ಹಿಂದೆ ಇದ್ದ ತಂಬಾಕು ಮಂಡಳಿಯ ಹರಾಜು ಅಧೀಕ್ಷಕರಾದ ಉಮಾ ಮಹೇಶ್ವರರಾವ್ ಪ್ರತಿ ದಿನ ಮಂಡಳಿಗೆ ರೈತರು ತರುತ್ತಿದ್ದ ಹದಿನೈದರಿಂದ ಇಪ್ಪತ್ತು ಕ್ವಿಂಟಾಲ್ ತಂಬಾಕಿಗೆ ಉತ್ತಮ ಬೆಂಬಲ ದೊರಕುವಂತೆ ಮಾಡುತ್ತಿದ್ದರು. ಪ್ರತಿ ಕೆಜಿ ತಂಬಾಕನ್ನು 155 ರು. ನಿಂದ 160 ರು. ನೀಡಿ ಖರೀದಿಸುವಂತೆ ಮಾಡುತ್ತಿದ್ದರಲ್ಲದೇ ರ್ರೈತರಿಗೆ ಯಾವುದೇ ರೀತಿ ತಾರತಮ್ಯ ಎಸಗುತ್ತಿರಲಿಲ್ಲ.
ಆದರೆ ಈಗಿನ ಅಧೀಕ್ಷಕರು, ತಂಬಾಕು ಖರೀದಿಸಲು ಇಲ್ಲಿಗೆ ಬಂದಿರುವ ಕಂಪನಿಗಳ ಅಧಿಕಾರಿಗಳೊಂದಿಗೆ ಮನಸೋ ಇಚ್ಛೆಯಂತೆ ಉಡಾಫೆಯಿಂದ ವರ್ತಿಸುತ್ತಾ ಸರಿಯಾಗಿ ತಂಬಾಕು ಬೆಳೆಯನ್ನು ಖರೀದಿಸಲು ಕ್ರಮ ಜರುಗಿಸುತ್ತಿಲ್ಲ ಎಂದು ದೂರಿದರು.
ಪ್ರತಿ ದಿನ ಸುತ್ತಮುತ್ತಲಿನ ಗ್ರಾಮಗಳಾದ ಹಳ್ಳಿಮೈಸೂರು, ಕೇರಳಾಪುರ, ಬೆಳವಾಡಿ, ಕಡವಿನ ಹೊಸಹಳ್ಳಿ, ಸಿದ್ದಾಪುರ, ಬೆಮ್ಮತ್ತಿ, ಮಲ್ಲಿಪಟ್ಟಣ ಹೀಗೆ ಇನ್ನು ಅನೇಕ ಊರುಗಳಿಂದ ರೈತರು ರುವ ತಂಬಾಕನ್ನು ಬಾಡಿಗೆ ವಾಹನಗಳಲ್ಲಿ ನೂರಾರು ರು. ತೆತ್ತು, ಹೊತ್ತು ತರುತ್ತಾರೆ. ಆದರೆ ಒಳ್ಳೆಯ ಬೆಲೆ ದೊರಕುವುದಿಲ್ಲ ಮತ್ತು ನಮಗಿರುವ ಹಣಕಾಸಿನ ಮುಗ್ಗಟ್ಟು ಸರಿಯಾಗಬಹುದೆಂಬ ನಿರೀಕ್ಷೆಯಲ್ಲಿ ಚಾತಕ ಪಕ್ಷಿಗಳಂತೆ ದಿನಗಳನ್ನು ಎಣಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ರೈತರು ಹೇಳಿದರು.
ತಂಬಾಕು ಮಂಡಳಿಯ ಅಧಿಕಾರಿಗಳು ರೈತರು ತಂದ ತಂಬಾಕು ಬೆಳೆಯನ್ನು ಉತ್ತಮ ಬೆಲೆಗೆ ಖರೀದಿಸುವಂತೆ ಮಾಡುವುದಿಲ್ಲ. ಇದರಿಂದ ರೈತರು ಆಕ್ರೋಶ ಭುಗಿಲೆದ್ದು ತಂಬಾಕು ಮಂಡಳಿಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ್ದಲ್ಲದೆ ಸ್ವಲ್ಪ ಹೊತ್ತು ಘರ್ಷಣೆ ಉಂಟಾಗುವ ವಾತಾವರಣ ನಿರ್ಮಾಣವಾಗಿತ್ತು. ರೈತರೆಲ್ಲಾ ವ್ಯಾಪಾರ ಸ್ಥಗಿತಗೊಳಿಸಿ ಪ್ರತಿಭಟಿಸಿದರು.
ಚಂದ್ರಪ್ಪ ವಿರುದ್ಧ ಆಕ್ರೋಶ: ರೈತ ಬಿಳುಗುಲಿ ಗಣೇಶ್ ಮಾತನಾಡಿ, ಈಗಿನ ತಂಬಾಕು ಬೆಳೆಗಾರರ ಅಧ್ಯಕ್ಷ ಮುದಗನೂರು ಚಂದ್ರಪ್ಪ ತಂಬಾಕು ಮಂಡಳಿ ಉದ್ಘಾಟನೆ ದಿನ ಕಾಣಿಸಿಕೊಂಡಿರುವುದು ಬಿಟ್ಟರೆ ಇದುವರೆಗೂ ತಂಬಾಕು ಬೆಳೆಗಾರರ ಸಂಕಷ್ಟವೇನು, ಸರಿಯಾದ ಬೆಂಬಲ ಬೆಲೆ ದೊರಕುತ್ತಿದೆಯೆ ಎಂದು ಒಂದು ದಿನವಾಗಲೀ ಇತ್ತ ಕಡೆ ತಲೆ ಹಾಕಿ ನೋಡಿಲ್ಲ ಎಂದು ದೂರಿದರು.
ಸೂಕ್ತ ಬೆಂಬಲ ಬೆಲೆ ದೊರಕದೆ ಕಂಗಾಲಾಗಿರುವ ರೈತ ಆಕ್ರೋಶಗೊಂಡು ರೈತರನ್ನು ಶೋಷಣೆಗೆ ಒಳಪಡಿಸುತ್ತಿರುವ ಅಧಿಕಾರಿಗಳ ವಿರುದ್ದ ಉಗ್ರಹೋರಾಟ ಮಾಡುವುದಾಗಿ ರೈತರೆಲ್ಲಾ ದನಿಗೂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

