ಹಾಸನ

ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಪ್ರತಿಭಟನೆ

Published On :

ಕ.ಪ್ರ ವಾರ್ತೆ ಹಾಸನ ಮಾ. 19
ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಮಂಗಳವಾರದಿಂದ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದಾರೆ. ಅತಿಥಿ ಉಪನ್ಯಾಸಕರು ನಗರದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿದರು.
ಶೈಕ್ಷಣಿಕ ವರ್ಷದ ಅತಿಥಿ ಉಪನ್ಯಾಸಕರ ಪಟ್ಟಿಯ ಅನುಮೋದನೆಯನ್ನು ಸರ್ಕಾರ ಸರಿಯಾಗಿ ನೀಡಿಲ್ಲ. ಉಪನ್ಯಾಸಕರು ತಮ್ಮ ಕರ್ತವ್ಯ್ನ ಸರಿಯಾಗಿ ನಿರ್ವಹಿಸಿದ್ದರೂ ಅನುಮೋದನೆ ನೀಡುವಲ್ಲಿ ಸಂಬಂಧಪಟ್ಟವರು ವೃಥಾ ವಿಳಂಬ ಮಾಡುತ್ತಿದ್ದಾರೆ. ಆದ ಕಾರಣ ಉಪನ್ಯಾಸಕರ ವೇತನಕ್ಕೆ ಮತ್ತಷ್ಟು ವಿಳಂಬವಾಗುತ್ತಿದ್ದು, ಇದರಿಂದ ತತಮಗೆ ಜೀವನ ನಡೆಸಲು ಕಷ್ಟಕರ ವಾತಾವರಣ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಭಾರ ತಪ್ಪಾಗಿ ನೀಡಲಾಗಿದೆ: ಅಷ್ಟೇ ಅಲ್ಲದೆ ಅತಿಥಿ ಉಪನ್ಯಾಸಕರು ನಿರ್ವಹಿಸಿರುವ ಕಾರ್ಯಭಾರವನ್ನು ತಪ್ಪಾಗಿ ನೀಡಲಾಗಿದೆ. ಹೆಚ್ಚಿನ ಅವಧಿಯವರೆಗೆ ಉಪನ್ಯಾಸಕರು ಕಾರ್ಯನಿರ್ವಹಿಸಿದ್ದರೂ, ಉಪನ್ಯಾಸಕರ ಕಾರ್ಯಭಾರವನ್ನು ಕಡಿತಗೊಳಿಸಿ ಅನ್ಯಾಯ ಎಸಗಲಾಗಿದೆ. ಉಪನ್ಯಾಸಕರಿಂದ ಹೆಚ್ಚಿನ ಕೆಲಸ ನಿರ್ವಹಿಸಿಕೊಂಡು ಕಡಿಮೆ ಕಾರ್ಯಭಾರವನ್ನು  ತೋರಿಸಿದ್ದಾರೆ. ನಿಯೋಜಿಸಿರುವ ಕೆಲಸಕ್ಕಿಂತ ಹೆಚ್ಚಿನ ಕೆಲಸ ಮಾಡಿಸಿಕೊಂಡಿದ್ದರೂ ಸರಿಯಾದ ರೀತಿಯಲ್ಲಿ ಉಪನ್ಯಾಸಕರಿಗೆ ಕಾರ್ಯಭಾರ ನೀಡಿಲ್ಲ ಎಂದು ಆರೋಪಿಸಿದರು.
ಅತಿಥಿ ಉಪನ್ಯಾಸಕರಿಂದ ಮಾಡಿಸಿಕೊಂಡಂತಹ ಕೆಲಸದಲ್ಲಿ ಅತಿಥಿ ಉಪನ್ಯಾಸಕರಿಗೆ ಕೇವಲ ಶೇ.10ರಷ್ಟು ಮಾತ್ರ ವೇತನ ನೀಡಲಾಗುತ್ತಿದೆ. ಸರಿಯಾಗಿ ವೇತನ ನೀಡದೆ ಉಪನ್ಯಾಸಕರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಕಾಯಂಗೊಂಡಿರುವ ಉಪನ್ಯಾಸಕರಂತೆ ಅತಿಥಿ ಉಪನ್ಯಾಸಕರು ಕೂಡ ಪ್ರಾಮಾಣಿಕವಾಗಿ ಹಾಗೂ ಅವರಷ್ಟೇ ಕಾಲಾವಧಿ ಕೆಲಸ ನಿರ್ವಹಿಸುತ್ತಿದ್ದರೂ ವೇತನ ಸರಿಯಾಗಿ ನೀಡುತ್ತಿಲ್ಲ ಎಂದು ದೂರಿದರು. 2012-13ನೇ  ಸಾಲಿನಲ್ಲಿ ನೇಮಕಗೊಂಡಂತಹ ಅತಿಥಿ ಉಪನ್ಯಾಸಕರ ಪಟ್ಟಿಯಲ್ಲಿ ಕೆಲವರ ಹೆಸರನ್ನು ಕೈಬಿಡಲಾಗಿದೆ. ಅಷ್ಟೇ ಅಲ್ಲದೆ ಅವರು ನಿರ್ವಹಿಸಿರುವಂತಹ ಕಾರ್ಯಭಾರವನ್ನು ತಪ್ಪಾಗಿ ನೀಡಿರುವುದು ಉಪನ್ಯಾಸಕರಿಗೆ ಮಾಡಿದ ಘೋರ ಅನ್ಯಾಯವಾಗಿದೆ. ಕಾಯಂ ಉಪನ್ಯಾಸಕರಿಗೆ ನೀಡುವಂತಹ ವೇತನದ ಕಾಲು ಭಾಗದಷ್ಟು ವೇತನವನ್ನು ಅತಿಥಿ ಉಪನ್ಯಾಸಕರಿಗೆ ನೀಡುತ್ತಿಲ್ಲ. ಅದರಲ್ಲೂ ವೇತನವನ್ನು ಕಡಿತಗಳಿಸುತ್ತಿರುವುದು ಖಂಡನೀಯ ಎಂದು ಹೇಳಿದರು.
ವರ್ಷಕ್ಕೊಮ್ಮೆ ವೇತನ:  ಅತಿಥಿ ಉಪನ್ಯಾಸಕರು ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೆಲಸ ನಿರ್ವಹಿಸಿದ್ದರೂ ಒಂದು ವರ್ಷದ ವೇತನವನ್ನು ನೀಡದೆ ಕೇವಲ ಎರಡು ಮೂರು ತಿಂಗಳ ವೇತನ ಮಾತ್ರ ನೀಡಲಾಗಿದೆ. ಪ್ರತಿ ತಿಂಗಳು ನೀಡಬೇಕಿರುವ ವೇತನವನ್ನು ಇತ್ತೀಚೆಗೆ ವರ್ಷಕ್ಕೊಮ್ಮೆ ನೀಡುತ್ತಿದ್ದಾರೆ. ಇದರಿಂದ ಉಪನ್ಯಾಸಕರಿಗೆ ಬಹಳ ತೊಂದರೆ ಉಂಟಾಗಿದೆ. ಜೀವನ ನಡೆಸಲು ಸಾಧ್ಯವಾಗಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೀದಿಗೆ ಬೀಳುವಂತಾಗಿದೆ ಎಂದು ಅಲವತ್ತುಕೊಂಡರು.
ಈ ಹಿಂದೆ 6 ತಿಂಗಳಿಗೊಮ್ಮೆಯಾದರೂ ಉಪನ್ಯಾಸಕರಿಗೆ ವೇತನ ನೀಡಲಾಗುತ್ತಿತ್ತು. ಆದರೆ ಈ ಬಾರಿ ಶೈಕ್ಷಣಿಕ ವರ್ಷ ಕಳೆಯುತ್ತಿದ್ದರೂ ಇನ್ನೂ ವೇತನ ನೀಡಿಲ್ಲ. ಒಂದು ಬಾರಿ ಉಪನ್ಯಾಸಕರ ಪಟ್ಟಿ ಹಾಗೂ ಕಾರ್ಯಭಾರಕ್ಕೆ ಅನುಮೋದನೆಗೆ ಕಳುಹಿಸಿದ್ದನ್ನು ಸರಿಯಾಗಿಲ್ಲ ಎಂದು ಇಲಾಖೆಯಲ್ಲಿ ವಾಪಸ್ ಕಳುಹಿಸಿದ್ದಾರೆ. ಮತ್ತೆ ಪರಿಷ್ಕರಿಸಿ ಇಲಾಖೆಗೆ ಕಳುಹಿಸಿದ್ದರೂ ಅದರಲ್ಲೂ ಕಾರ್ಯಭಾರವನ್ನು ತಪ್ಪಾಗಿ ನೀಡಿದ್ದಾರೆ ಎಂದು ಕಿಡಿಕಾರಿದರು.
ಆದ್ದರಿಂದ ತಮಗಾಗಿರುವ ಅನ್ಯಾಯಕ್ಕೆ ನ್ಯಾಯ ದೊರೆಯುವವರೆಗೂ ತಮ್ಮ ಮುಷ್ಕರವನ್ನು ಹಿಂಪಡೆಯದೆ ಹೋರಾಟ ತೀವ್ರಗೊಳಿಸುವುದಾಗಿ ಅತಿಥಿ ಉಪನ್ಯಾಸಕರು ಎಚ್ಚರಿಕೆ ನೀಡಿದರು. ಅತಿಥಿ ಉಪನ್ಯಾಸಕ ಗಣೇಶ್, ರಾಘವೇಂದ್ರ, ಸಂದೇಶ್, ಪ್ರದೀಪ್, ಲಕ್ಷೀಕಾಂತ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.