5 ವರ್ಷದಲ್ಲಿ ರು. 60 ಲಕ್ಷದ ಅಭಿವೃದ್ಧಿ ಕಾಮಗಾರಿ: ಕುಮಾರಸ್ವಾಮಿ
ಕಪ್ರವಾರ್ತೆ ಸಕಲೇಶಪುರ ಮಾ. 20
ಪಟ್ಟಣದಲ್ಲಿ ಕಳೆದ ಐದು ವರ್ಷದ ಅವಧಿಯಲ್ಲಿ 60 ಲಕ್ಷ ರು. ವೆಚ್ಟದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದ್ದಾರೆ.
ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನ ಸಮೀಪ ನಾನಾ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳ ನಿಧಿ, ಎಸ್ಎಫ್ಸಿ ಹಾಗೂ 13 ನೇ ಹಣಕಾಸು ಯೋಜನೆಯಡಿ ಪಟ್ಟಣದಲ್ಲಿ ರಸ್ತೆ,ಚರಂಡಿ, ಕುಡಿಯುವ ನೀರಿನ ಯೋಜನೆ ಕೈಗೊಳ್ಳಲಾಗಿದ್ದು ಪಟ್ಟಣದಲ್ಲಿ ಬಹುತೇಕ ರಸ್ತೆ ಕಾಮಗಾರಿಗಳು ಸಂಪೂರ್ಣಗೊಂಡಿವೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಪುರಸಭಾ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ತುರ್ತು ಆದ್ಯತೆಯ ಮೇಲೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಮುಖ್ಯಮಂತ್ರಿಗಳ ಯೋಜನೆಯ 5 ಕೋಟಿ ಅನುದಾನದಲ್ಲಿ ಕಾಮಗಾರಿ ಇನ್ನೊಂದು ವಾರದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಈಗಾಗಲೇ ಪಟ್ಟಣದ ದೊಡ್ಡ ಕೆರೆ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರಕಾರ 1.73 ಕೋಟಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಆದೇಶದ ಪ್ರತಿ ಗುತ್ತಿಗೆದಾರರು ಪಡೆದಿದ್ದು ಶೀಘ್ರವೆ ಕಾಮಗಾರಿ ಆರಂಭವಾಗಲಿದ್ದು ಪುರಸಭೆ ಸಹ 45 ಲಕ್ಷ ರು.ಗಳನ್ನು ಕೆರೆ ಅಭಿವೃದ್ಧಿಗೆ ಮೀಸಲಿಟ್ಟಿದೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಶ್ರೀವಿದ್ಯಾ ಪುರಸಭೆ ಮಾಜಿ ಅಧ್ಯಕ್ಷ ಭಾಸ್ಕರ್ಶೆಟ್ಟಿ, ಆದರ್ಶ್,ಯಾದಗಾರ್ ಇಬ್ರಾಹಿಂ, ಜೆಡಿಎಸ್ ಮುಖಂಡ ಸಚ್ಚಿನ್ ಪ್ರಸಾದ್, ಸ.ಬ. ಭಾಸ್ಕರ್, ಜಾತಹಳ್ಳಿ ಪುಟ್ಟಸ್ವಾಮಿ ಹಾಗೂ ಪುರಸಭೆ ನೂತನ ಸದಸ್ಯರು ಇದ್ದರು.
ವಾಡಿಕೆಗಿಂತ ಕಡಿಮೆ ಮಳೆ: ಡಾ. ಭಾನುಪ್ರಕಾಶ್
ಕನ್ನಡಪ್ರಭವಾರ್ತೆ ಹೊಳೆನರಸೀಪುರ ಮಾ 20
ತಾಲೂಕಿನಲ್ಲಿ 2013ನೇ ಸಾಲಿನಲ್ಲಿ ಮಾ.19ರ ವರೆಗೆ 64 ಮಿಮೀ ಮಳೆಯಾಗಿದ್ದು ವಾಡಿಕೆ ಮಳೆಗಿಂತ ಶೇ.492 ರಷ್ಟು ಕಡಿಮೆ ಮಳೆಯಾಗಿರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಯು.ಎಚ್.ಭಾನುಪ್ರಕಾಶ್ ತಿಳಿಸಿದ್ದಾರೆ.
ಜನವರಿಯಲ್ಲಿ 2 ಮಿಮೀ ವಾಡಿಕೆ ಮಳೆಗೆ 0 ಮಿಮೀ ಮಳೆಯಾಗಿದ್ದು, ಫೆಬ್ರವರಿ 2 ಮಿಮೀ ವಾಡಿಕೆ ಮಳೆಗೆ 26 ಮಿಮೀ ಮಳೆಯಾಗಿದೆ. ಮಾರ್ಚ್ನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇದುವರೆವಿಗೆ 38.4 ಮಿಮೀ ಮಳೆಯಾಗಿದೆ. ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣವಿದ್ದು, ಪ್ರಸಕ್ತ ವರ್ಷದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಬೇಸಿಗೆ ಹಂಗಾಮಿನಲ್ಲಿ ಒಟ್ಟು 765 ಹೆ ಬಿತ್ತನೆ ಗುರಿ ಇದ್ದು, ಮಳೆ ಕೊರತೆಯಿಂದ ಕೇವಲ 425 ಹೆ ನಷ್ಟ ಬಿತ್ತನೆಯಾಗಿರುವುದು ಕಂಡು ಬಂದಿದೆ. ನಾಲೆಗಳಿಂದ ನೀರು ಹರಿಸಿರುವ ಕೆಲವು ಕೆರೆ ಅಚ್ಚು ಕಟ್ಟು ಪ್ರದೇಶಗಳಲ್ಲಿ ಮಾತ್ರ ಭತ್ತದ ನಾಟಿ ಕಾರ್ಯ ಪೂರ್ಣಗೊಂಡಿದ್ದು, ನೀರಾವರಿ ಸೌಲಭ್ಯವಿರುವ ಕಡೆ ರಾಗಿ ಮತ್ತು ಮುಸುಕಿನ ಜೊಳ ಬೆಳೆಯಲಾಗುತ್ತಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾರ್ಚ್ನಲ್ಲಿ ಬೀಳುವ ಮಳೆಯಿಂದ ಪೂರ್ವ ಮುಂಗಾರು ಬೆಳೆಗಳಾದ ಅಲಸಂದೆ, ಹೆಸರು, ಉದ್ದು, ಎಳ್ಳು ಹಾಗೂ ಅಲ್ಪಾವದಿ ಬೆಳೆಗಳ ಬಿತ್ತನೆಗೆ ಭೂಮಿ ಸಿದ್ದತೆ ಉಳುಮೆ ಕಾರ್ಯ ನಡೆಸಬಹುದಾಗಿದೆ. ಭತ್ತ ಬೆಳೆಯುವ ಪ್ರದೇಶದಲ್ಲಿ ಭೂಮಿ ಸಿದ್ದತೆ ನಡೆಸಿ ಏಪ್ರಿಲ್ನಲ್ಲಿ ಹಸಿರೆಲೆ ಗೊಬ್ಬರದ ಬೆಳೆಗಳಾದ ಸೆಣಬು, ಡಯಾಂಚಾಗಳನ್ನು ಬೆಳೆಯಬಹುದಾಗಿದೆ ಎಂದು ಭಾನುಪ್ರಕಾಶ್ ತಿಳಿಸಿದ್ದಾರೆ.
ಮಾರ್ಚ್ನಲ್ಲೇ ನೀರಾವರಿ ಮತ್ತು ಖುಷ್ಕಿ ಪ್ರದೇಶಗಳಲ್ಲಿ ಭೂಮಿ ಸಿದ್ದತೆ ಅಥವಾ ಉಳುಮೆ ಮಾಡುವುದರಿಂದ ಪೂರ್ವ ಮುಂಗಾರಿನಲ್ಲಿ ಬೀಳುವಂತಹ ಮಳೆಯನ್ನು ಸಂಪೂರ್ಣವಾಗಿ ಭೂಮಿಯಲ್ಲಿ ಹಿಂಗಲು ಅನುಕೂಲವಾಗುತ್ತದೆ.
ಇದರಿಂದ ಫಲವತ್ತಾದ ಭೂಮಿಯ ಮೇಲ್ಮಣ್ಣು ಕೊಚ್ಚಿ ಹೊಗದಂತೆ ತಡೆಯಬಹುಗದಾಗಿದೆ ಹಾಗೂ ಮಣ್ಣಿನಲ್ಲಿ ತೇವಾಂಶ ಕಾಪಾಡುವುದಲ್ಲದೆ ಭೂಮಿಯಲ್ಲಿ ಅಂತರ್ಜಲ ಹೆಚ್ಚಿಸಬಹುದಾಗಿದೆ ಎಂದು ರೈತರಿಗೆ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯ ಕಣ್ಣಿನ ತಪಾಸಣೆ ಸೂಕ್ತ
ಕನ್ನಡಪ್ರಭವಾರ್ತೆ ಜಾವಗಲ್ ಮಾ.20
ದೇಶದ ಅನೇಕ ಸಮಸ್ಯೆಗಳಲ್ಲಿ, ಆರೋಗ್ಯ ಸಮಸ್ಯೆಗಳು ಮುಖ್ಯವಾಗಿದ್ದು ಇದಕ್ಕಾಗಿ ಸರ್ಕಾರ ಸಾವಿರಾರು ಕೋಟಿ ರು. ವ್ಯಯ ಮಾಡುತ್ತಿದ್ದರೂ ಗ್ರಾಮೀಣ ಜನತೆಗೆ ಏನೂ ಪ್ರಯೋಜನ ಆಗುತ್ತಿಲ್ಲವೆಂದು ಹಾಸನಾಂಬ ಡೆಂಟಲ್ ಕಾಲೇಜಿನ ಕಾರ್ಯದರ್ಶಿ ಯತೀಶ್ ವಿಷಾದಿಸಿದರು. ಜಾವಗಲ್ ಬ್ರಾಹ್ಮಣ ಸಂಘ, ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕ, ಡಾ.ವಿಷ್ಣುವರ್ಧನ್ ಅಭಿಮಾನಿ ಬಳಗ, ಮಾಡೆಲ್ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪ್ರೇರಣಾ ಸ್ವಯಂಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಹಾಗೂ ನೇತ್ರತಜ್ಞ ಜಗದೀಶ್ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಕಣ್ಣಿನ ತೊಂದರೆ ಅನುಭವಿಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಸೌಲಭ್ಯಗಳು ಕಡಿಮೆ ಇರುತ್ತದೆ ಎಂದರು. ಪ್ರತಿಯೊಬ್ಬರೂ ಪ್ರತಿ 6 ತಿಂಗಳಿಗೊಮ್ಮೆ ನೇತ್ರ ತಪಾಸಣೆ ಹಾಗೂ ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳ ಬೇಕೆಂದರು. ಜಿಪಂ ಸದಸ್ಯ ಲಕ್ಷ್ಮಣ್, ತಾಪಂ ಸದಸ್ಯೆ ಲಕ್ಷ್ಮಿ ರವಿಶಂಕರ್, ರಂಗಸ್ವಾಮಿ ಮಾಡೆಲ್ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಡಾ.ವಿನಾಯಕ್, ಮುಖ್ಯ ಶಿಕ್ಷಕ ಪ್ರಸನ್ನಕುಮಾರ್, ಡಾ.ವಿಷ್ಣುವರ್ಧನ್ ಅಭಿಮಾನಿ ಬಳಗದ ಬಿಂದುಮಾಧವ, ಪ್ರೇರಣಾ ಸ್ವಯಂಸೇವಾ ಸಂಸ್ಥೆಯ ರವಿಕುಮಾರ್, ಸುಧಾಕರ್ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

