'ಅತಿಥಿ ಉಪನ್ಯಾಸಕರ ನೇಮಕ ಅನುಮೋದಿಸಿ'
ಕನ್ನಡಪ್ರಭವಾರ್ತೆ ಹಾಸನ ಮಾ 21
ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಕೈಗೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಉಪನ್ಯಾಸಕರ ಪ್ರತಿಭಟನೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಬಲ ನೀಡಿದೆ.
ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹೇಮಾವತಿ ಪ್ರತಿಮೆಯ ಮೂಲಕ ಎನ್.ಆರ್.ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ಕೆಲ ಸಮಯ ರಸ್ತೆ ತಡೆ ನಡೆಸಿದರು. ನಂತರ ಬಿ.ಎಂ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಈಗಾಗಲೇ ಎಲ್ಲಾ ಕಾಲೇಜುಗಳಿಂದ ಕಳುಹಿಸಿ ಕೊಟ್ಟಿರುವ 2012-13ನೇ ಸಾಲಿನ ಕಾರ್ಯಭಾರದ ಪಟ್ಟಿಯ ಅನುಸಾರವಾಗಿ ಕಾಲೇಜು ಶಿಕ್ಷಣ ಇಲಾಖೆಯು ಕೆಲವರಿಗೆ ಮಾತ್ರ ಅನುಮೋದನೆ ನೀಡಿದ್ದು, ಉಳಿದವರಿಗೆ ಅನುಮೋದನೆ ನೀಡದೆ ವಂಚಿಸಿದೆ. ಆದ ಕಾರಣ ಈ ಕೂಡಲೇ ಎಲ್ಲಾ ಅತಿಥಿ ಉಪನ್ಯಾಸಕರಿಗೆ ಅನುಮೋದನೆ ನೀಡಬೇಕು. ವರ್ಷಾಂತ್ಯವಾದರೂ ಅತಿಥಿ ಉಪನ್ಯಾಸಕರಿಗೆ ವೇತನವನ್ನು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಗಸ್ಟ್ನಿಂದ ಇಲ್ಲಿಯವರೆಗೆ ವೇತನ: ಆಗಸ್ಟ್ನಿಂದ ಪ್ರಸ್ತುತದವರೆಗೆ ನೀಡಬೇಕಾಗಿರುವ ವೇತನ ಕೂಡಲೇ ಸರ್ಕಾರ ಬಿಡುಗಡೆಗೊಳಿಸಬೇಕು. ಪ್ರತಿ ಶೈಕ್ಷಣಿಕ ವರ್ಷ ಜುಲೈನಲ್ಲಿ ಪ್ರಾರಂಭವಾಗುವುದರಿಂದ ಮುಂದಿನ ಶೈಕ್ಷಣಿಕ ವರ್ಷದ ಜುಲೈ ಪ್ರಾರಂಭದಲ್ಲೇ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಅನುಮೋದನೆ ನೀಡಬೇಕು.
ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ಯಾವ ರೀತಿ ಅತಿಥಿ ಉಪನ್ಯಾಸಕರಿಗೆ ಪ್ರತಿ ತಿಂಗಳೂ ವೇತನ ನೀಡುತ್ತಾರೋ ಅದೇ ರೀತಿ ಕಾಲೇಜು ಶಿಕ್ಷಣ ಇಲಾಖೆಯು ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಎಲ್ಲಾ ಅತಿಥಿ ಉಪನ್ಯಾಸಕರಿಗೆ ಪ್ರತಿ ತಿಂಗಳ ಅಂತ್ಯದಲ್ಲಿ ವೇತನವನ್ನು ನೀಡಬೇಕು ಎಂದು ಪಟ್ಟು ಹಿಡಿದರು.
ಮುಂದಿನ ಶೈಕ್ಷಣಿಕ ವರ್ಷಕ್ಕೆ ಮೊದಲ ಆದ್ಯತೆ: ಮುಂದಿನ ಶೈಕ್ಷಣಿಕ ವರ್ಷದ ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಅವರು ಸೇವಾ ಅನುಭವ ಪರಿಗಣನೆಗೆ ತೆಗೆದುಕೊಳ್ಳಬೇಕು. ಈ ಶೈಕ್ಷಣಿಕ ವರ್ಷದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ಮೊದಲ ಆದ್ಯತೆ ನೀಡಿ ನಂತರ ಉಳಿದ ಕಾರ್ಯಭಾರಕ್ಕೆ ಹೊಸಬರನ್ನು ನೇಮಕ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಅನುಭವ ಕಡಿಮೆ ಇರುವವರಿಗೂ ಹಾಗೂ ಅನುಭವ ಇರುವವರಿಗೂ ಒಂದೇ ರೀತಿ ಪರಿಗಣಿಸುವುದು ಸರಿಯಲ್ಲ ಎಂದು ಹೇಳಿದರು.
ಕನಿಷ್ಠ 15 ಸಾವಿರ ರು.ಗಳಿಗೆ ಹೆಚ್ಚಿಸಬೇಕು: ಅತಿಥಿ ಉಪನ್ಯಾಸಕರಿಗೆ ನೀಡುತ್ತಿರುವ ವೇತನ ಕೇವಲ 8 ಸಾವಿರ ರು.ಗಳಾಗಿದ್ದು, ಕನಿಷ್ಠ 15 ಸಾವಿರ ರು.ಗಳಿಗೆ ಹೆಚ್ಚಿಸಬೇಕು. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಹಂತ ಹಂತವಾಗಿ ಕಾಯಂಗೊಳಿಸಬೇಕು. ಸರ್ಕಾರ ಮುಂದೆ ಪ್ರಥಮ ದರ್ಜೆ ಕಾಲೇಜುಗಳಿಗೆ ಉಪನ್ಯಾಸಕರನ್ನು ನೇಮಕ ಮಾಡುವ ಸಂದರ್ಭದಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಮೊದಲ ಆದ್ಯತೆ ನೀಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕ ಚಂದ್ರಶೇಖರ್, ಗಣೇಶ್, ತಿಮ್ಮಶೆಟ್ಟಿ, ರಾಘವೇಂದ್ರ, ರೇಣು ಕುಮಾರ್, ಸಂದೇಶ್, ಪ್ರದೀಪ್, ಲಕ್ಷೀಕಾಂತ್, ಗಿರೀಶ್, ಮಂಜುನಾಥ್, ಯೋಗೇಶ್, ಕಲ್ಪನಾ, ಸೌಮ್ಯ, ವನಿತಾ, ಎಬಿವಿಪಿ ಕಾರ್ಯಕರ್ತರಾದ ನರೇಶ್, ಮಹಿಪಾಲ್, ವಿದ್ಯಾರ್ಥಿಗಳಾದ ಕಾವ್ಯ, ರೂಪ, ಮಂಜುಳ, ದಿವ್ಯ, ಶೃತಿ, ಪಲ್ಲವಿ, ಅನುರಾಧ, ನಂದಿನಿ, ಸಂಧ್ಯಾ, ಪೂರ್ಣಿಮಾ, ಸವಿತಾ, ಸುಹಾಸಿನಿ, ರಮ್ಯ, ರೇಖಾ, ಮಾನಸ, ಕವನ, ನಯನ, ಪ್ರೀತಿ, ಸುಮ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

