ಹಾಸನ

ಮದ್ಯ ಮಾರಾಟ ನಿಲ್ಲಿಸಿ, ಸಂಸಾರ ಉಳಿಸಿ

Published On :

ಕನ್ನಡಪ್ರಭವಾರ್ತೆ೤ ಹಾಸನ೤ ಮಾ 21
ಅಕ್ರಮ ಮದ್ಯ ಮಾರಾಟ ತಡೆಗಟ್ಟುವಂತೆ ಆಗ್ರಹಿಸಿ ಅರಸೀಕೆರೆ ತಾಲೂಕಿನ ಮುದುಡಿ ಗ್ರಾಮಸ್ಥರು ಹಾಗೂ  ಅಮೃತೇಶ್ವರ ಮಹಿಳಾ ಸ್ವಸಹಾಯ ಸಂಘದ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ನಂತರ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಮುದುಡಿ ಗ್ರಾಮದಲ್ಲಿ ಅನಧಿಕೃತ ಮದ್ಯದ ಹಾವಳಿ ಮಿತಿ ಮೀರಿದ್ದು, ಗ್ರಾಮದಲ್ಲಿ ಕುಡಿತಕ್ಕೆ ಅಡಿಯಾಳಾಗುವವರು ಹೆಚ್ಚಾಗಿದ್ದಾರೆ. ಗ್ರಾಮದ ಗಂಡಸರು ಕುಡಿತದ ಚಟಕ್ಕೆ ಸಿಲುಕಿ ದುಡಿದ ಹಣವನ್ನು ಮಣ್ಣುಪಾಲು ಮಾಡುತ್ತಿದ್ದಾರೆ. ಸಂಸಾರ ಸರಿಯಾಗಿ ನಡೆಸಲು ಗಂಡಸರು ಹಣ ನೀಡದೆ ಎಲ್ಲಾ ಹಣವನ್ನು ಹೆಂಡದ ಬಾಯಿಗೆ ಸುರಿಯುತ್ತಿದ್ದಾರೆ ಎಂದು ಮಹಿಳಾ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜಾರೋಷವಾಗಿ ಮದ್ಯ ಮಾರಾಟ:  ಗ್ರಾಮದಲ್ಲಿ 150 ರಿಂದ 200 ಮನೆಗಳಿದ್ದು, ಈ ಪೈಕಿ ಲೋಕೇಶ್, ನಾಗಣ್ಣಶೆಟ್ಟಿ, ಮಂಜಣ್ಣ, ನೀಲಮ್ಮ, ಪಾಪಣ್ಣ, ರಾಮಣ್ಣ, ಚಿಕ್ಕಣ್ಣ, ಶಾರದಮ್ಮ ಮತ್ತು ಬಸವಣ್ಣ ಎಂಬುವರ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ. ಈ ಅಂಗಡಿಗಳಲ್ಲಿ ಯಾವುದೇ ರೀತಿ ಪರವಾನಗಿ ಇಲ್ಲದಿದ್ದರೂ ಮದ್ಯವನ್ನು  ರಾಜಾರೋಷವಾಗಿ ಹಗಲಿನ ವೇಳೆಯಲ್ಲಿಯೇ ಮಾರಾಟ ಮಾಡುವ ಮೂಲಕ ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು, ಇದರಿಂದಾಗಿ ಸುತ್ತಮುತ್ತಲ ಗ್ರಾಮಗಳ ಗಂಡಸರು ಕುಡಿದು ಹತ್ತು ಹಲವು ಸಮಸ್ಯೆಗೆ ಕಾರಣರಾಗುತ್ತಿದ್ದಾರೆ. ಪಾನಮತ್ತರಿಂದಾಗಿ ಗ್ರಾಮಗಳಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಜಗಳ, ಹೊಡೆದಾಟ ಮಾಮೂಲಾಗಿದೆ. ಜೊತೆಗೆ ದುಡಿದ ಹಣವೆಲ್ಲ ಕುಡಿತಕ್ಕೆ ವ್ಯಯ ಮಾಡುವುದರಿಂದಾಗಿ ಹಲವು ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಲವತ್ತುಕೊಂಡರು.
ಇಲಾಖೆಗೆ ದೂರು ನೀಡಿದ್ದರೂ ಕ್ರಮ ಇಲ್ಲ:  ಮದ್ಯದ ಹಾವಳಿ ಜಾಸ್ತಿಯಾಗಿ ಅನೇಕ ಸಂಸಾರಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಪೊಲೀಸ್ ಇಲಾಖೆಯಾಗಲಿ ಹಾಗೂ ಅಬಕಾರಿ ಇಲಾಖೆ  ಅಧಿಕಾರಿಯಾಗಲಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಹಲವು ಬಾರಿ ಸಂಬಂಧಪಟ್ಟಂತಹ ಇಲಾಖೆಗಳಿಗೆ ದೂರನ್ನು ನೀಡಿದ್ದರೂ  ಈ ವರೆಗೂ ಸಂಬಂಧಪಟ್ಟವರು, ಇಲಾಖೆಯವರು ಕಾನೂನು ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ದೂರಿದರು.
ರಸ್ತೆಗಳಲ್ಲಿ ಮಹಿಳೆಯರು ಏಕಾಂಗಿಯಾಗಿ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಾನಮತ್ತರು ಕುಡಿತದ ಅಮಲಿನಲ್ಲಿ ಮಹಿಳೆಯರೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದು, ಇದರಿಂದ ಮಹಿಳೆಯರನ್ನು ಅಗೌರವಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ ಎಂದು ಕಿಡಿಕಾರಿದರು.
ಶಾಲೆಗಳ ಪಕ್ಕದಲ್ಲಿಯೇ ಮದ್ಯ ಮಾರಾಟ:  ಈಗಿರುವ ಮದ್ಯದ ಅಂಗಡಿಗಳ ಪಕ್ಕದಲ್ಲಿಯೇ ಶಾಲೆಗಳಿದ್ದರೂ ಮದ್ಯ ಮಾರಾಟ ನಿಲ್ಲಿಸಿಲ್ಲ. ಗ್ರಾಮದ ಮಹಿಳೆಯರು ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸುವಂತೆ ಅಂಗಡಿಯವರಿಗೆ ಹೇಳಿದರೇ ಮಹಿಳೆಯರೊಂದಿಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಮತ್ತೆ ಕೆಲವರಿಗೆ ಗ್ರಾಮದಲ್ಲಿ ಬೆದರಿಕೆಯನ್ನು ಹಾಕಿದ್ದಾರೆ ಎಂದ ಅವರು, ಗ್ರಾಮದ ಗಂಡಸು ಮನೆಯಲ್ಲಿ ಇರುವ ವಸ್ತುಗಳೆನ್ನೆಲ್ಲಾ ಮಾರಾಟ ಮಾರಿ ಮದ್ಯ ಸೇವನೆ ಮಾಡುತ್ತಿದ್ದಾರೆ ಎಂದರು.
ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತ್ತಲೇ ಇದೆ ಎಂದು ಆರೋಪಿಸಿದ ಅವರು, ಕೂಡಲೇ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಗ್ರಾಮದ ಲೋಲಾಕ್ಷಿ, ದೀಪ, ಪಾರ್ವತಮ್ಮ, ದೇವಿರಮ್ಮ, ಅನಸೂಯಮ್ಮ, ಕಮಲಮ್ಮ, ಪುಷ್ವ, ಶೋಭ, ಭಾರತಿ, ನಾಗರತ್ನ, ಜಯಲಕ್ಷ್ಮಿ, ಮಂಜುಳಮ್ಮ, ರಾಧಾಮಣಿ, ಭಾಗ್ಯಮ್ಮ, ಲಕ್ಷ್ಮಿದೇವಮ್ಮ, ಇ.ಎಸ್.ನೇತ್ರಾವತಿ, ಸುಮಿತ್ರ, ಕವಿತ, ಶಶಿಕಲಾ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.