'ಹೊಳೆ' ದಾಟಲು 'ಅಂಬಿಗರ' ಆಸರೆಗೆ ದುಂಬಾಲು
-ದಯಾಶಂಕರ ಮೈಲಿ
ಕ.ಪ್ರ ವಾರ್ತೆ ಹಾಸನ ಮಾ.22
ಚುನಾವಣಾ ಆಯೋಗ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸುತ್ತಿದ್ದಂತೆ ಹಾಸನ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಪಡೆಯುವ ಮತ್ತು ತಪ್ಪಿಸುವ ಚದುರಂಗದಾಟ ತೀವ್ರಗೊಂಡಿದೆ. ಟಿಕೆಟ್ ಆಕಾಂಕ್ಷಿಗಳು ತಾವು ಹೇಗೆ ಟಿಕೆಟ್ ಪಡೆಯಬೇಕೆಂಬ ತೀವ್ರ ಲಾಬಿಯಲ್ಲಿ ತೊಡಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ತಾನು ಸ್ಪರ್ಧಿಸುವ ಕ್ಷೇತ್ರದಿಂದಲೇ ಸ್ಪರ್ಧಿಸುವ ವ್ಯಕ್ತಿಗೆ ಯಾವ ರೀತಿ ಟಿಕೆಟ್ ತಪ್ಪಿಸುವುದು ಹೇಗೆ ಎಂಬ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ.
ಹೀಗೆ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಪಡೆಯುವ ಮತ್ತು ತಪ್ಪಿಸುವ ಅಂತಿಮ ಆಟ ಬಿರುಸಿನಿಂದ ನಡೆಯುತ್ತಿದೆ. ಕಾಂಗ್ರೆಸ್ನಿಂದ ಟಿಕೆಟ್ ಪಡೆಯುವ ಆಕಾಂಕ್ಷಿಗಳು ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದರೆ, ಬಿಜೆಪಿ, ಕೆಜೆಪಿಯಿಂದ ಟಿಕೆಟ್ ಪಡೆಯುವ ಮಂದಿ ಬೆಂಗಳೂರಿನತ್ತ ಧಾವಿಸಿದ್ದಾರೆ. ಇನ್ನೂ ಜೆಡಿಎಸ್ನಲ್ಲಿ ಟಿಕೆಟ್ ಪಡೆಯಬೇಕಾದರೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಅವರ ಕೃಪಾಕಟಾಕ್ಷ ಬೇಕು ಎಂಬುದನ್ನು ಅರಿತ ಮಂದಿ ಹೊಳೆನರಸೀಪುರದತ್ತ ಹೆಜ್ಜೆ ಹಾಕುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ರೇವಣ್ಣ ಹೇಳಿದ ವ್ಯಕ್ತಿಗೆ ಬಿ ಫಾರಂ ನೀಡುವುದರಿಂದ ರೇವಣ್ಣ ಅವರತ್ತ ಟಿಕೆಟ್ ಆಕಾಂಕ್ಷಿಗಳು ದುಂಬಾಲು ಬಿದ್ದಿದ್ದಾರೆ.
ದೆಹಲಿಗೆ ಯಾರ್ಯಾರ ದೌಡು: ಇತ್ತೀಚೆಗೆ ತಾನೇ ಜೆಡಿಎಸ್ನಿಂದ ವಲಸೆ ಬಂದ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡರಿಗೆ ಕಾಂಗ್ರೆಸ್ ಹೈಕಮಾಂಡ್ ಚನ್ನರಾಯಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಿದೆ ಎಂಬ ಮುನ್ಸೂಚನೆ ಅರಿತ ಕಾಂಗ್ರೆಸ್ ಮುಖಂಡರಾದ ಗೋಪಾಲಸ್ವಾಮಿ, ಚಂದ್ರೇಗೌಡ, ಸಿ.ವಿ.ರಾಜಪ್ಪ, ಕಬ್ಬಳ್ಳಿ ರಂಗೇಗೌಡರು ದೆಹಲಿಗೆ ತೆರಳಿ, ಮೂಲ ಕಾಂಗ್ರೆಸಿಗರಿಗೆ ಟಿಕೆಟ್ ನೀಡಿ. ಇಲ್ಲದಿದ್ದರೆ ಬಂಡಾಯ ಎದುರಿಸಿ ಎಂದು ಏಕಕಾಲಕ್ಕೆ ಒತ್ತಡ ಮತ್ತು ಎಚ್ಚರಿಕೆ ನೀಡಿದ್ದಾರೆ.
ಈ ಬಾರಿ ಏನೇ ಆಗಲಿ... ಬೇಲೂರು ಕ್ಷೇತ್ರದಿಂದ ಟಿಕೆಟ್ ಪಡೆದೇ ತೀರಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಹುರಿಯಾಳು ಚಂದ್ರಕಲಾ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಟಿಕೆಟ್ಗಾಗಿ ಮನವಿ ಮಾಡಿದ್ದಾರೆ. ಹಾಲಿ ಶಾಸಕ ವೈ.ಎನ್. ರುದ್ರೇಶ್ಗೌಡರಿಗೆ ಹಿಂದಿನಿಂದಲೂ ಆರೋಗ್ಯ ಸ್ಥಿತಿ ಸರಿಯಿಲ್ಲ. ಶಾಸಕರಾಗಿ ಕೂಡ ಉತ್ತಮವಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಟಿಕೆಟ್ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ.
ಆದರೆ, ಸಿದ್ದರಾಮಯ್ಯ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯದ ಕಾರಣ, ಚಂದ್ರಕಲಾ ದೆಹಲಿಗೆ ತೆರಳಿ ಜಿಲ್ಲೆಯಲ್ಲಿ ಒಂದು ಕ್ಷೇತ್ರದಲ್ಲಾದರೂ ಮಹಿಳೆಗೆ ಟಿಕೆಟ್ ನೀಡಬೇಕೆಂದು ಒತ್ತಡ ಹಾಕುತ್ತಿದ್ದಾರೆ. ನಡುವೆ ಬೇಲೂರು ಕ್ಷೇತ್ರದಿಂದ ತಮಗೆ ಟಿಕೆಟ್ ನೀಡಬೇಕೆಂದು ಸಲ್ಟಾನಾ ಒತ್ತಾಯಿಸಿದ್ದಾರೆ.
ಇನ್ನೂ ಹೊಳೆನರಸೀಪುರ ಕ್ಷೇತ್ರದಿಂದ ತಮ್ಮ ಪಕ್ಷದ ಕೆಲ ಮುಖಂಡರಿಂದಲೇ ಎಲ್ಲಿ ಟಿಕೆಟ್ ತಪ್ಪಿ ಹೋಗುವುದೋ ಎಂಬ ಚಿಂತೆಯಲ್ಲಿರುವ ಮಾಜಿ ಸಚಿವ ದಿವಂಗತ ಜಿ.ಪುಟ್ಟಸ್ವಾಮಿಗೌಡರ ಸೊಸೆ ಅನುಪಮಾ ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಿ ಪಕ್ಷದ ಮುಖಂಡರನ್ನು ನಿರಂತರವಾಗಿ ಭೇಟಿ ಮಾಡುತ್ತಿದ್ದಾರೆ. ಮುಖಂಡ ಸುರೇಶ್, ಹೆಗರು ವಾಸು ಮತ್ತಿತರರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಅರಕಲಗೂಡು ಕ್ಷೇತ್ರದ ಹಾಲಿ ಶಾಸಕ ಎ.ಮಂಜು ಕಾಂಗ್ರೆಸ್ ಹೈ ಕಮಾಂಡ್ ಒಂದು ವೇಳೆ ಕೈ ಕೊಟ್ಟರೆ ಏನ್ ಮಾಡೋದು ಎಂಬ ಆತಂಕದ ಪ್ರಶ್ನೆಯನ್ನು ಹಾಕಿಕೊಂಡೇ ದೆಹಲಿ ಮತ್ತು ಬೆಂಗಳೂರಿನಲ್ಲಿ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಟಿಕೆಟ್ ಸಿಗುವ ಬಗ್ಗೆ ಖಚಿತ ಭರವಸೆ ಪಡೆದುಕೊಳ್ಳುವಲ್ಲಿ ನಿರತರಾಗಿದ್ದಾರೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ ಪುಟ್ಟಸ್ವಾಮಿ ಅವರು ಕಾಡ ಈ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಟಿಕೆಟ್ ಪಡೆಯಬೇಕೆಂದು ಶತಾಯಗತಾಯ ಯತ್ನಿಸುತ್ತಿದ್ದಾರೆ.
ಈಗಾಗಲೇ ಕಾಂಗ್ರೆಸ್ನ ಸಭೆ, ಸಮಾರಂಭಗಳಿಗೆ, ಕಾರ್ಯಕರ್ತರಿಗೆ ಮತ್ತು ಮುಖಂಡರಿಗಾಗಿ ಬಂಡವಾಳ ಹೂಡಿರುವ ಪುಟ್ಟಸ್ವಾಮಿ ಅವರು, ಒಂದು ವೇಳೆ ಕಾಂಗ್ರೆಸ್ನಿಂದ ಟಿಕೆಟ್ ಸಿಗದಿದ್ದರೆ, ಕೆಜೆಪಿ ಅಥವಾ ಪಕ್ಷೇತರರಾಗಿ ಅಖಾಡಕ್ಕೆ ಇಳಿದರೂ ಆಶ್ಚರ್ಯ ಪಡಬೇಕಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

