ಹಾಸನ

ಜಿಲ್ಲೆಯಲ್ಲಿ ಬಿಜೆಪಿ - ಕೆಜೆಪಿ ಟಿಕೆಟ್‌ಗಾಗಿ ಅಂತಿಮ ಕಸರತ್ತು

Published On :

ಕ.ಪ್ರ.ವಾರ್ತೆ ಹಾಸನ ಮಾ. 23
ಜಿಲ್ಲೆಯಲ್ಲಿ ಬೇಲೂರು ಮತ್ತು ಅರಸೀಕೆರೆ ಕ್ಷೇತ್ರ ಬಿಟ್ಟರೇ ಕೆಜೆಪಿಯಿಂದ ಬೇರೆ ಯಾವ ಕ್ಷೇತ್ರದಲ್ಲೂ ಟಿಕೆಟ್ ಪಡೆಯಲು ಪೈಪೋಟಿ ಕಂಡು ಬಂದಿಲ್ಲ.
ಬೇಲೂರು ಕ್ಷೇತ್ರದಿಂದ ಇತ್ತೀಚೆಗೆ ಜೆಡಿಎಸ್‌ನಿಂದ ವಲಸೆ ಬಂದ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಹಾಗೂ ಶಿವರುದ್ರಪ್ಪ ಟಿಕೆಟ್ ಪಡೆಯಲು ಬೆಂಗಳೂರಿನಲ್ಲಿ ಮೊಕ್ಕಾಂ ಮಾಡಿ ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಅರಸೀಕೆರೆ ಕ್ಷೇತ್ರದಿಂದ ಡಾ. ಲೋಕೇಶ್ ಸ್ಪರ್ಧಿಸಲು ಮುಂದಾಗಿದ್ದಾರೆ. ಆದರೆ ಇಲ್ಲಿ ಕಾಂಗ್ರೆಸ್ ಹಾಗೂ ಕೆಜೆಪಿ ನಡುವೆ ಒಳ ಒಪ್ಪಂದ ಏರ್ಪಡುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಕೆಜೆಪಿಯಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಡಿದೆ.
ಬಿಜೆಪಿ ಗತಿ:  ಸದ್ಯದ ಪರಿಸ್ಥಿತಿ ನೋಡಿದರೇ ಬಿಜೆಪಿ ಯಾವ ಕ್ಷೇತ್ರದಲ್ಲೂ ಗೆಲ್ಲುವುದಿರಲಿ, ಠೇವಣೆಯನ್ನೂ ಉಳಿಸಿಕೊಳ್ಳುವುದು ಕಷ್ಟವಿದೆ. ಆದರೂ ಆ ಪಕ್ಷದಿಂದ ಸ್ಪರ್ಧಿಸಲು ಅನೇಕರು ಮುಂದಾಗಿರುವುದು ಹಲವು ಅನುಮಾನಗಳಿಗಷ್ಟೇ ಅಲ್ಲ, ಅಚ್ಚರಿಗೂ ಕಾರಣವಾಗಿದೆ. ಹಾಸನ ನಗರಸಭೆಯ 35 ವಾರ್ಡ್‌ಗಳಲ್ಲಿ ಬಿಜೆಪಿ ಪಡೆದಿರುವುದು ಕೇವಲ 2387 ಮತಗಳಷ್ಟೇ. ಎಲ್ಲಾ ವಾರ್ಡ್‌ಗಳಲ್ಲಿರುವ ಮತದಾರರ ಸಂಖ್ಯೆ 80 ಸಾವಿರ. ಹಾಗೆಯೇ 5 ಪುರಸಭೆ, ಎರಡು ಪಟ್ಟಣ ಪಂಚಾಯ್ತಿಗಳಲ್ಲಿ ಅತ್ಯಲ್ಪ ಮತಗಳನ್ನು ಬಿಜೆಪಿ ಪಡೆದಿದೆ. ಹಾಸನ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳಾಗಲು ಹುಡಾ ಅಧ್ಯಕ್ಷ ನವಿಲೆ ಅಣ್ಣಪ್ಪ, ಎಂ.ಕೆ.ಕಮಲ್‌ಕುಮಾರ್, ಲೋಹಿತ್‌ಗೌಡ, ನಗರಸಭೆ ಮಾಜಿ ಸದಸ್ಯ ಪ್ರಸನ್ನಕುಮಾರ್, ಶ್ರೀನಿವಾಸ್, ಮಂಜುನಾಥ್, ಐನೆಟ್ ವಿಜಯಕುಮಾರ್, ಎಸ್. ಕೆ. ರಾಮಚಂದ್ರ ಮತ್ತು ತಮ್ಮಪುರ ಕೃಷ್ಣೇಗೌಡರು, ಅರಸೀಕೆರೆಯಿಂದ ಕಾಟಿಕೆರೆ ಪ್ರಸನ್ನಕುಮಾರ್, ಎನ್.ಡಿ. ಪ್ರಸಾದ್, ಹಾರನಹಳ್ಳಿ ಸಿದ್ದಪ್ಪ, ಡಿ.ಬಿ. ಗಂಗಾಧರ್, ಬೇಲೂರಿನಿಂದ ಸ್ಪರ್ಧಿಸಲು ರೇಣುಕುಮಾರ್, ಹಳೇಬೀಡು ಬಸವರಾಜು, ಜಿಪಂ ಸದಸ್ಯ ಲಕ್ಷಣ, ಅಮಿತ್‌ಶೆಟ್ಟಿ ಹಳೇಬೀಡು ಮೋಹನ್, ಅಬುಗೌಡ, ಅರಕಲಗೂಡು ಕ್ಷೇತ್ರದಿಂದ ನಟರಾಜ್, ನಟೇಶ್‌ಕುಮಾರ್, ಟಿ.ಬಿ. ಕೇಶವೇಗೌಡ, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಂಜುಂಡೇಗೌಡ, ನವಿಲೆ ಅಣ್ಣಪ್ಪ, ಚನ್ನರಾಯಪಟ್ಟಣದಿಂದ ಪಟೇಲ್ ಮಂಜುನಾಥ್, ಶೋಭಾ ಶುಭಕರ್, ಎ.ಆರ್. ನಾಗರಾಜ್, ಆಲೂರಿನಿಂದ ಎ.ಬಿ. ನಾಗರಾಜ್, ಸಕಲೇಶಪುರದಿಂದ ಡಾ. ನಾರಾಯಣಸ್ವಾಮಿ ಸ್ಪರ್ಧಿಸಲು ಬಯಸಿದ್ದಾರೆ. ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿಗಳು ಕಾಣಿಸುತ್ತಿಲ್ಲ.
ಜೆಡಿಎಸ್ ಹೊಳೆನರಸೀಪುರದಲ್ಲಿ:  ಜೆಡಿಎಸ್‌ನಿಂದ ಈಗಾಗಲೇ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಸಕಲೇಶಪುರದಿಂದ ಎಚ್.ಕೆ.ಕುಮಾರಸ್ವಾಮಿ, ಅರಸೀಕೆರೆಯಿಂದ ಕೆ.ಎಂ.ಶಿವಲಿಂಗೇಗೌಡ,  ಅರಕಲಗೂಡಿನಲ್ಲಿ ಎ.ಟಿ.ರಾಮಸ್ವಾಮಿ, ಚನ್ನರಾಯಪಟ್ಟಣದಿಂದ ಸಿ.ಎನ್. ಬಾಲಕೃಷ್ಣ,  ಹೊಳೆನರಸೀಪುರದಿಂದ ಎಚ್.ಡಿ.ರೇವಣ್ಣ ಸ್ಪರ್ಧಿಸುವುದು ಖಚಿತ. ಆದರೆ ಬೇಲೂರಿನಿಂದ ರಾಜ್ಯಸಭೆ ಸದಸ್ಯ ಎಚ್.ಕೆ.ಜವರೇಗೌಡ ಅಥವಾ ಭವಾನಿ ರೇವಣ್ಣ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಜವರೇಗೌಡರು ಕ್ಷೇತ್ರದಲ್ಲಿ ಬಿರುಸಿನ ಸಂಚಾರ ಮಾಡುತ್ತಿದ್ದಾರೆ. ಹಾಸನ ದಿಂದ ಶಾಸಕ ಎಚ್.ಎಸ್. ಪ್ರಕಾಶ್ ಅವರಿಗೆ ಟಿಕೆಟ್ ನೀಡಬಾರದೆಂದು ಕೆಲ ಮುಖಂಡರು ಹೇಳುತ್ತಿದ್ದಾರೆ.
ಪ್ರತ್ಯೇಕ ಸಭೆ:  ಮುಖಂಡ ಕೆ.ಎಂ.ರಾಜೇಗೌಡರಿಗೆ ಈ ಬಾರಿ ಹಾಸನ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ಜೆಡಿಎಸ್ ಮುಖಂಡರ ಒಂದು ಗುಂಪು ಒತ್ತಡ ಹೇರುತ್ತಿದೆ. ಜಿಲ್ಲಾ ಪಂಚಾಯ್ತಿ ಸದಸ್ಯ ಎನ್.ಸಿ. ನಾರಾಯಣಗೌಡ, ಸ್ವಾಮಿಗೌಡ ಮತ್ತಿತರರು ಪ್ರತ್ಯೇಕವಾಗಿ ಸಭೆ ನಡೆಸಿ, ರಾಜೇಗೌಡರಿಗೆ ಟಿಕೆಟ್ ನೀಡಬೇಕೆಂದು ಜೆಡಿಎಲ್ಪಿ ನಾಯಕ ರೇವಣ್ಣನವರ ಮೇಲೆ ಒತ್ತಡ ಹೇರಲು ಹೊರಟಿದ್ದಾರೆ. ಆದರೆ ಇದಕ್ಕೆ ನಿರೀಕ್ಷಿತ ಮಟ್ಟದಲ್ಲಿ ಯಶ ಸಿಗುವುದು ಕಷ್ಟಕರವೇ ಎಂದು ಹೇಳಲಾಗುತ್ತಿದೆ.  ಏಕೆಂದರೆ, ಈಗಾಗಲೇ ಚುನಾವಣೆ ತೀರ ಸಮೀಪವಾಗಿದೆ. ಇಂತಹ ಸಂದರ್ಭದಲ್ಲಿ ಶಾಸಕ ಎಚ್.ಎಸ್. ಪ್ರಕಾಶ್ ಅವರಿಗೆ ಟಿಕೆಟ್ ನೀಡದೇ ಇರುವುದು ಸರಿಯಲ್ಲ. ಹಾಗಾಗಿ ರಾಜೇಗೌಡರಿಗೆ ವಿಧಾನಪರಿಷತ್
ಸದಸ್ಯರಾಗಿ ಮಾಡುವ ಇರಾದೆ ಜೆಡಿಎಸ್ ವರಿಷ್ಠರಲ್ಲಿ ಇದೆ. ಈಗಾಗಲೇ ಹಾಸನ ನಗರಸಭೆ ಚುನಾವಣೆಯಲ್ಲಿ ಕಳಪೆ ಮಟ್ಟದ ಸಾಧನೆ ಮಾಡಿಸಿ, ಪರೋಕ್ಷವಾಗಿ ಶಾಸಕ ಪ್ರಕಾಶ್ ಅವರಿಗೆ ವಿರೋಧ ಹೆಚ್ಚಾಗುವ ತಂತ್ರವನ್ನು ಹೂಡಲಾಗಿತ್ತು. ಆದರೆ ಮತದಾರರು ಅದಕ್ಕೆ ಅವಕಾಶ ನೀಡದೇ 17 ವರ್ಷ ಗಳ ನಂತರ ಪ್ರಥಮ ಬಾರಿಗೆ ಜೆಡಿಎಸ್ ಹಾಸನ ನಗರಸಭೆ ಆಡಳಿತವನ್ನು ಸ್ವತಂತ್ರವಾಗಿ ಹಿಡಿಯುವಂತೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.