ಬಿಜೆಪಿ ಸರ್ಕಾರ ಉಳಿಸಿಕೊಳ್ಳಲು ಜನತೆಗೆ ಅನ್ಯಾಯ: ರೇವಣ್ಣ ಟೀಕೆ
ಕ.ಪ್ರ.ವಾರ್ತೆ ಅರಕಲಗೂಡು ಮಾ. 23
ರಾಜ್ಯ ಬಿಜೆಪಿ ಸರ್ಕಾರ ಕೇವಲ ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವ ಮೂಲಕ ರಾಜ್ಯದ ಜನತೆಗೆ ತುಂಬಾ ಅನ್ಯಾಯವೆಸಗಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ರೇವಣ್ಣ ಆರೋಪಿಸಿದರು.
ಹೊನ್ನವಳ್ಳಿ ಸತೀಶ್ ರಾಜ್ಯ ಜೆಡಿಎಸ್ ಉಪಾಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾವೇರಿ ನದಿ ನೀರು ಹಂಚಿಕೆ ವಿಷಯವಾಗಿ ರಾಜ್ಯ ಸರ್ಕಾರದ ಧೋರಣೆ ಅಕ್ಷಮ್ಯ, ರಾಜ್ಯವನ್ನು ತೀವ್ರ ಬರಗಾಲಕ್ಕೆ ತಳ್ಳಿದೆ ಎಂದು ನುಡಿದ ಅವರು ಈ ನಿಟ್ಟಿನಲ್ಲಿ ಕೇಂದ್ರದ ಕಾಂಗ್ರೆಸ್ ಸರ್ಕಾರದ ಧೋರಣೆ ಏಕಪಕ್ಷೀಯವಾದುದು ಎಂದರು.
ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರೂ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗೆಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡದೇ ಅದೂ ಕೂಡ ರಾಜ್ಯಕ್ಕೆ ಅನ್ಯಾಯವೆಸಗುವ ನಿಟ್ಟಿನಲ್ಲಿ ಸಮಪಾಲು ಹೊಂದಿದೆ ಎಂದು ಆರೋಪಿಸಿದರು.
ಯಾವ ಮುಖ ಹೊತ್ತು: ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಕಾವೇರಿ ನದಿ ನೀರು ಹಂಚಿಕೆ ಬಗೆಗೆ ಧ್ವನಿ ಎತ್ತಿದರೂ ಕೇಂದ್ರ ಸರ್ಕಾರ ತಮಿಳುನಾಡು ಪರ ತನ್ನ ನಿಲುವು ಪ್ರಕಟಿಸಿದೆ.ಆಗ ಧ್ವನಿ ಮಾಡದ ರಾಜ್ಯ ಕಾಂಗ್ರೆಸ್ ನಾಯಕರು ಈಗ ಯಾವ ಮುಖ ಹೊತ್ತು ಜನರ ಬಳಿ ಮತ ಕೇಳುತ್ತಾರೆ ಎಂದು ಪ್ರಶ್ನಿಸಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವ ಜೊತೆಗೆ, ವಿಧವಾ ವೇತನ, ಅಂಗವಿಕಲ ವೇತನವನ್ನು ಎರಡೂವರೆ ಸಾವಿರ ರು.ಗಳಿಗೆ ಏರಿಸುವ ಭರವಸೆ ಇತ್ತರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಾವು ಮಾಡಿದ ತಪ್ಪಿನಿಂದಾಗಿ ಜೈಲಿಗೆ ಸೇರುವ ಭಯದಲ್ಲಿ ಕಾಂಗ್ರೆಸ್ ಅಣತಿಯಂತೆ ಕೆಜಿಪಿ ಪಕ್ಷ ಕಟ್ಟಿದ್ದಾರೆಯೇ ಹೊರತು ಯಾವುದೇ ಸದುದ್ದೇಶದಿಂದಲ್ಲ ಎಂದು ಟೀಕಿಸಿದರು. ಕೇಂದ್ರದಲ್ಲಾಗಲಿ, ರಾಜ್ಯದಲ್ಲಾಗಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದ ಅವರು ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಎ.ಟಿ.ರಾಮಸ್ವಾಮಿ ಸೋಲಿನ ಬಗೆಗೆ ಪ್ರಸ್ತಾಪಿಸಿದ ಅವರು ಯಾವುದೇ ವದಂತಿಗಳಿಗೆ ಕಿವಿ ಕೊಡುವ ಅಗತ್ಯವಿಲ್ಲ. ಎ.ಟಿ.ರಾಮಸ್ವಾಮಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ, ಅವರನ್ನು ಬೆಂಬಲಿಸಿ ಎಂದರು.
ಹಣ ಕೊಟ್ಟರೆ ನಿರಾಕರಿಸಬೇಡಿ: ತಾಲೂಕಿನಲ್ಲಿ ಪೊಟ್ಯಾಟೋ ಕ್ಲಬ್ ಹೆಸರಿನಲ್ಲಿ ಯೋಗಾರವುಶ್ ರಾಜಕೀಯ ಪ್ರವೇಶ ಹಾಗೂ ಹಣ ಹಂಚಿಕೆ ಕುರಿತು ಪ್ರಸ್ತಾಪಿಸಿದ ಅವರು ಹಣ ಕೊಟ್ಟರೆ ನಿರಾಕರಿಸಬೇಡಿ. ಅದು ಬಡವರ, ಸಾರ್ವಜನಿಕರ ಹಣ ಅದನ್ನು ಪಡೆದು, ಅಭಿವೃದ್ಧಿ ಪರವಾದ ಜೆಡಿಎಸ್ಗೆ ಮತ ಹಾಕಿ ಎಂದು ನುಡಿದರು. ಇದೇ ವೇಳೆ ಹೊನ್ನವಳ್ಳಿ ಸತೀಶ್ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸತೀಶ್ ಅವರು ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಪಕ್ಷದ ಬಲವರ್ಧನೆಗೆ ಶ್ರಮಿಸುವುದಾಗಿ ತಿಳಿಸಿದರು. ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಎಂ.ಸಿ.ರಂಗಸ್ವಾಮಿ, ಜಿಪಂ ಸದಸ್ಯ ವಿ.ಎ.ನಂಜುಂಡಸ್ವಾಮಿ, ಪಾರ್ವತಮ್ಮ ನಂಜುಂಡಾಚಾರ್, ಭಾಗ್ಯ ಗೋವಿಂದೇಗೌಡ, ಎಪಿಎಂಸಿ ಅಧ್ಯಕ್ಷ ಎಚ್.ಎಸ್.ಶಂಕರ್, ಮಾಜಿ ತಾಪಂ ಅಧ್ಯಕ್ಷ ಸಂತೋಷ್ಗೌಡ, ಎಂ.ಎಸ್. ಯೋಗೇಶ್, ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಜನಾರ್ದನಗುಪ್ತ, ಮುಖಂಡ ಎಂ.ಎಸ್.ರಮೇಶ್, ತಾಪಂ ಸದಸ್ಯ ನರಸೇಗೌಡ,ದೇವರಾಜೇಗೌಡ, ವೀರೇಶ್, ಸತೀಶ್, ಯುವ ಜೆಡಿಎಸ್ ಮುಖಂಡ ಶಶಿಕುಮಾರ್,ರೇಣು ಕುಮಾರ್, ಮುತಾಹಿರ್ಪಾಷಾ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

