ಹಾಸನ

ರಾಷ್ಟ್ರೀಯ ಅಂಚೆ ನೌಕರರ ಜಂಟಿ ಸಭೆ

Published On :

ಹಾಸನ: ರಾಷ್ಟ್ರೀಯ ಅಂಚೆ ನೌಕರರ ಸಂಘ, ಮೂರನೇ ವರ್ಗ, ಪೋಸ್ಟ್‌ಮನ್, ನಾಲ್ಕನೇ ವರ್ಗ, ಗ್ರಾಮೀಣ ಡಾಕ್ ಸೇವಕ್, ಹಾಸನ ವಿಭಾಗದಿಂದ ಮಾರ್ಚ್  24ರಂದು ಬೆಳಗ್ಗೆ 10ಕ್ಕೆ ನಗರದ ಸಾಹಿತ್ಯ ಪರಿಷತ್ ಭವನದಲ್ಲಿ ಜಂಟಿ ಮಹಾ ಸಭೆ ಏರ್ಪಡಿಸಲಾಗಿದೆ. ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ  ಕಾರ್ಯಕ್ರಮ  ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಹಾಸನ ವಿಭಾಗದ ಅಂಚೆ ಆಧೀಕ್ಷಕ ಎಚ್.ಸಿ. ಸದಾನಂದ, ಹಾಗೂ ಗಣ್ಯರು ಭಾಗವಹಿಸುವರು.

ಇಂದು ಯೋಗ ಪ್ರಾಣಾಯಾಮ ಶಿಬಿರ
ಹಾಸನ:
ಪತಂಜಲಿ ಯೋಗ ಸಮಿತಿಯಿಂದ ಮಾರ್ಚ್ 24ರಿಂದ 31ರವರೆಗೆ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಳಿಗ್ಗೆ 5.30ರಿಂದ 7ರವರೆಗೆ ಉಚಿತ ಯೋಗ ಪ್ರಾಣಾಯಾಮ ಶಿಬಿರ ಏರ್ಪಡಿಸಲಾಗಿದೆ. ಶಿಬಿರದಲ್ಲಿ ಬಸ್ತಿಕಾ ಪ್ರಾಣಾಯಾಮ, ಕಪಾಲಭೂತಿ ಪ್ರಾಣಾಯಾಮ, ಬಾಹ್ಯ ಪ್ರಾಣಾಯಾಮ ಹೇಳಿಕೊಡಲಾಗುತ್ತದೆ. ಶಿಬಿರದಲ್ಲಿ ಭಾಗವಹಿಸುವವರು ಖಾಲಿ ಹೊಟ್ಟೆಯಲ್ಲಿ ಬರಬೇಕು. ಕುಳಿತುಕೊಳ್ಳಲು ದಪ್ಪಗಿರುವ ಬೆಡ್‌ಶೀಟ್ ತರಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪತಂಜಲಿ ಯೋಗ ಸಮಿತಿ ಕೋರಿದೆ.

ಅರಸೀಕೆರೆ: ಇಂದು ಸಹಜ ರಾಜಯೋಗ ಶಿಬಿರ
ಕನ್ನಡಪ್ರಭ ವಾರ್ತೆ ಅರಸೀಕೆರೆ ಮಾ 23

ಪಟ್ಟಣದ ಮಾರುತಿ ನಗರ,ಪ್ರತಿಭಾ ಕಾಲೇಜ್ ಸಮೀಪವಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದಲ್ಲಿ ಮಾ.24 ಭಾನುವಾರ ಸಂಜೆ 5 ಕ್ಕೆ ಒತ್ತಡ ಮುಕ್ತ ಜೀವನಕ್ಕಾಗಿ ಸಹಜ ರಾಜಯೋಗ ಶಿಬಿರ ಆಯೋಜಿಸಲಾಗಿದೆ ಎಂದು ಸಂಚಾಲಕ ರಾಜಯೋಗಿನಿ ಬಿ.ಕೆ.ವಿನೋದ ತಿಳಿಸಿದ್ದಾರೆ. ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಚಂದ್ರಶೇಖರ್ ಉದ್ಘಾಟಿಸುವರು. ಪುರಸಭಾ ಮಾಜಿ ಅಧ್ಯಕ್ಷ ಎನ್.ಎಸ್.ಸಿದ್ದರಾಮಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಅಧ್ಯಕ್ಷ ಯೋಗೀಶಚಾರ್, ಡಾ.ಜಗದೀಶ್, ಡಾ.ವಿರುಪಾಕ್ಷಪ್ಪ, ಟೌನ್ ಕ್ಲಬ್ ಅಧ್ಯಕ್ಷ ಕೆ.ವಿ.ನಿರ್ವಾಣಸ್ವಾಮಿ, ಪುರಸಭಾ ಸದಸ್ಯೆ ಗೀತಾ ವಿಶ್ವನಾಥ್, ವಾಣಿಜ್ಯೋದ್ಯಮಿ ಕೆ.ಸಿ.ಯೋಗೀಶ್, ಕೆ.ಪಿ.ಎಸ್.ವಿಶ್ವನಾಥ್ ಪಾಲ್ಗೊಳ್ಳಲಿದ್ದಾರೆ.

ಮಹಿಳಾ ದೌರ್ಜನ್ಯ ಕುರಿತ ಸಂವಾದ
ಹಾಸನ: ಲೈಂಗಿಕ ದೌರ್ಜನ್ಯ ನಿವಾರಣಾ ವೇದಿಕೆ ಕಾನೂನು ಸೇವೆಗಳ ಪ್ರಾಧಿಕಾರ ಹಾಸನ ಸಂಯುಕ್ತ ಆಶ್ರಯದಲ್ಲಿ ಮಾ. 24 ರಂದು ಸಂಜೆ 5.30ಕ್ಕೆ ಬೂವನಹಳ್ಳಿಯ ಸಮುದಾಯ ಭವನದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ಕುರಿತು ಸಂವಾದ ಏರ್ಪಡಿಸಿದೆ.

ಲಾರಿಯಿಂದ ಬೃಹತ್ ಬಾಕ್ಸ್ ಬಿದ್ದು ಕಾಲೇಜು ವಿದ್ಯಾರ್ಥಿನಿಗೆ ತೀವ್ರ ಗಾಯ
ಕ.ಪ್ರವಾರ್ತೆ ಹಾಸನ ಮಾ 23

ಲಾರಿಯಿಂದ  ತಲೆ ಮೇಲೆ ದೊಡ್ಡ ಬಾಕ್ಸ್ ಬಿದ್ದ ಪರಿಣಾಮ ವಿದ್ಯಾರ್ಥಿನಿಯೊಬ್ಬಳು ತೀವ್ರ ಗಾಯಗೊಂಡಿರುವ ಘಟನೆ ನಗರದಲ್ಲಿ ಶನಿವಾರ ನಡೆದಿದೆ. ನಗರದ ಕೆ.ಆರ್.ಪುರಂ ನ ರೆಹಮತ್ ಶರೀಫ್ ಎಂಬುವರ ಪುತ್ರಿ ಮಾಹೇತ್‌ತಲತ್ ಬಿಕಾಂ ವಿದ್ಯಾರ್ಥಿನಿಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
 ವಿದ್ಯಾರ್ಥಿನಿ ಮಾಹೇತ್ ವಾಣಿವಿಲಾಸ ಶಾಲೆ ಬಳಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ವಸ್ತುಗಳಿಂದ ತುಂಬಿ ಓವರ್‌ಲೋಡ್ ಆಗಿದ್ದ ಲಾರಿಯಿಂದ ದೊಡ್ಡ ಬಾಕ್ಸ್ ಈಕೆಯ ತಲೆ ಮೇಲೆ ಬಿದ್ದಿದ್ದು, ತಲೆಗೆ ಹಾಗೂ ಮೂಗಿಗೆ ತೀವ್ರ ಗಾಯವಾಗಿದೆ.
  ತಲೆಗೆ ಹೊಲಿಗೆ ಹಾಕಲಾಗಿದೆ. ನಗರದ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಾರಿ ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ಲಾರಿ ಮತ್ತು ಟ್ರ್ಯಾಕ್ಟರ್‌ಗಳ ಹಾವಳಿ ವಿಪರೀತವಾಗಿದ್ದು, ಇತ್ತ ಪೊಲೀಸರು ಗಮನಹರಿಸುತ್ತಿಲ್ಲ.
 ಚಾಲನೆ ಬಗ್ಗೆ ಕಿಂಚಿತ್ತೂ ತಿಳಿವಳಿಕೆ ಇಲ್ಲದವರು ಟ್ರ್ಯಾಕ್ಟರ್ ಯದ್ವಾತದ್ವಾ ಚಾಲನೆ ಮಾಡುವುದರಿಂದ ಅನೇಕರು ಪ್ರಾಣ ಕಳೆದುಕೊಳ್ಳುತ್ತಿರುವುದು ಮಾಮೂಲಿಯಾಗಿದೆ.
  ಲಾರಿಗಳು ಓವರ್ ಲೋಡ್ ಮಾಡಿಕೊಂಡು ಚಲಿಸುವುದು ಕೂಡಾ ಸಾಮಾನ್ಯವಾಗಿದೆ. ಇತ್ತ ಪೊಲೀಸರು ದಿವ್ಯ ನಿರ್ಲಕ್ಷ್ಯ ತಳೆದಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮಗ್ಗೆಯಲ್ಲಿ ವ್ಯಾಪಾರಿ ಅಪಹರಣ
ಕನ್ನಡಪ್ರಭವಾರ್ತೆ ಆಲೂರು ಮಾ. 24

ತಾಲೂಕಿನ ಮಗ್ಗೆ ಗ್ರಾಮದಲ್ಲಿ ವ್ಯಾಪಾರಿಯೊಬ್ಬರನ್ನು ಅಪಹರಿಸಿ ಒತ್ತೆಯಾಳಾಗಿ ಇಟ್ಟುಕೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಗ್ರಾಮದ ಬಸ್‌ನಿಲ್ದಾಣ ಮುಂಭಾಗ ದಿನಸಿ ಅಂಗಡಿ ಇಟ್ಟುಕೊಂಡಿದ್ದ ಜೋಸ್ಲಿ ಮಂಥೆರೋ ಅಪಹರಣಕ್ಕೆ ಒಳಗಾದವರು.
 ಶುಕ್ರವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ ಮಂಥೆರೋ ವ್ಯಾಪಾರ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ವಿನಾಯಕ ದೇವಾಲಯ ಮುಂಭಾಗ ಟಾಟಾ ಸುಮೋದಲ್ಲಿ  ಬಂದ ದುಷ್ಕರ್ಮಿಗಳು ಅವರನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಈ ಸ್ಥಳದಲ್ಲಿ ಅವರ ಚಪ್ಪಲಿ ಬಿದ್ದಿದ್ದು, ಮಂಥೆರೋ ತಪ್ಪಿಸಿಕೊಳ್ಳಲು ತೀವ್ರ ಪ್ರಯತ್ನಿಸಿರುವ ಕುರುಹುಗಳು ಇವೆ. ಅಪಹರಣಕಾರರು ವ್ಯಾಪಾರಿಯ ಬಿಡುಗಡೆಗಾಗಿ ಲಕ್ಷಗಟ್ಟಲೆ ಹಣ  ಕೇಳುತ್ತಿದ್ದಾರೆ ಎಂದು ಬಲ್ಲಮೂಲಗಳು ತಿಳಿಸಿವೆ.

ಲಾರಿ ಡಿಕ್ಕಿ: ಬೈಕ್ ಸವಾರ ಸಾವು
ಕನ್ನಡಪ್ರಭವಾರ್ತೆ ಅರಕಲಗೂಡು ಮಾ 23

ಲಾರಿಯೊಂದು ಬೈಕ್‌ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಶುಕ್ರವಾರ ಅರಕಲಗೂಡು-ಮಲ್ಲಿಪಟ್ಟಣ ರಸ್ತೆಯಲ್ಲಿ ನಡೆದಿದೆ. ತಾಲೂಕಿನ ಕಸಬಾ ಹೋಬಳಿ ಮಲ್ಲೇನಹಳ್ಳಿ ಗ್ರಾಮದ ಜಗದೀಶ (40) ಮೃತಪಟ್ಟಿರುವ ದುರ್ದೈವಿ.
 ಜಗದೀಶ್ ಬೈಕಿನಲ್ಲಿ ಅರಕಲಗೂಡಿಗೆ ಹೋಗಿ ವಾಪಸ್ ಊರಿಗೆ ಹೋಗಲು ಅರಕಲಗೂಡು-ಮಲ್ಲಿಪಟ್ಟಣ ರಸ್ತೆ, ಅಡಿಕೆ ಬೊಮ್ಮೇನಹಳ್ಳಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಲಾರಿ ಚಾಲಕನ ನಿರ್ಲಕ್ಷ್ಯತೆಯಿಂದ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಗಾಯವಾಗಿದ್ದು, ನಂತರ ಜಗದೀಶ ಮೃತಪಟ್ಟಿದ್ದಾರೆ. ತಂದೆ ಹೊನ್ನೇಗೌಡ  ಅರಕಲಗೂಡು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಟ್ರ್ಯಾಕ್ಟರ್ ಉರುಳಿ ಬಿದ್ದು ಇಬ್ಬರು ಸಾವು
ಹಾಸನ:
ಜಿಲ್ಲೆಯ ಪ್ರತ್ಯೇಕ ಪ್ರಕರಣದಲ್ಲಿ ಟ್ರ್ಯಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಶುಕ್ರವಾರ ಇಬ್ಬರು ಸಾವನ್ನಪ್ಪಿದ್ದಾರೆ. ಅರಸೀಕೆರೆ ತಾಲೂಕಿನ ಕಸಬಾ ಹೋಬಳಿ ಹಾರನಹಳ್ಳಿಯ ಪುಟ್ಟಸ್ವಾಮಿ (49) ಟ್ರ್ಯಾಕ್ಟರ್‌ನಲ್ಲಿ ಕಾಯಿಮಟ್ಟೆಯನ್ನು ತುಂಬಿಕೊಂಡು ಪತ್ನಿ ಶಾರದಮ್ಮ, ಗ್ರಾಮದ ಅಣ್ಣಪ್ಪ, ಕೆಂಚಮ್ಮ ಅವರನ್ನು ಕೂರಿಸಿಕೊಂಡು ಅಣ್ಣನಾಯ್ಕನಹಳ್ಳಿಯಿಂದ ಹಾರನಹಳ್ಳಿ ಗ್ರಾಮಕ್ಕೆ ಹೋಗಲು, ಅಣ್ಣನಾಯಕನಹಳ್ಳಿ ಕೆರೆ ಕೋಡಿಯಲ್ಲಿ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿದ ಪರಿಣಾಮ ಟ್ರ್ಯಾಕ್ಟರ್ ಮಗುಚಿ ಚಾಲಕ ಪುಟ್ಟಸ್ವಾಮಿ ಸಾವನ್ನಪ್ಪಿದ್ದಾರೆ. ಸಂಬಂಧಿ ಪ್ರೇಮಕುಮಾರ್ ಅರಸೀಕೆರೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
 ಮತ್ತೊಂದು ಪ್ರಕರಣದಲ್ಲಿ ಬೇಲೂರು ತಾಲೂಕಿನ ಕಸಬಾ ಹೋಬಳಿ ಲಕ್ಷ್ಮಿಪುರ ಗ್ರಾಮದ ಜಯರಾಮೇಗೌಡ ರವರ ಟ್ರ್ಯಾಕ್ಟರ್‌ನಲ್ಲಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ನಿರ್ಲಕ್ಷ್ಯತೆಯಿಂದ ಓಡಿಸಿದ ಪರಿಣಾಮ ಪಲ್ಟಿ ಹೊಡೆದು ಜಯರಾಮೇಗೌಡ ಮೃತಪಟ್ಟಿದ್ದಾರೆ. ಲೋಕೇಶ್ ಬೇಲೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಅಪರಿಚಿತರಿಂದ ವ್ಯಕ್ತಿ ಹತ್ಯೆ: ಮೃತ ದೇಹ ಪತ್ತೆ
ಬೇಲೂರು:
ತಾಲೂಕಿನ ಕಸಬಾ ಹೋಬಳಿ ಸೂರಾಪುರ ಗ್ರಾಮದ ಶಿವಕುಮಾರ್ (35) ಎಂಬುವರನ್ನು ದುರ್ಷ್ಕಮಿಗಳು ಕೊಲೆ ಮಾಡಿ ಹುಲ್ಲಿನ ಹಿತ್ತಲಿಗೆ ತಂದು ಹಾಕಿ ಹೋಗಿದ್ದು, ಮೃತ ದೇಹ ಪತ್ತೆಯಾಗಿದೆ. ಅಣ್ಣ ಪುಪ್ಪೇಗೌಡ ಬೇಲೂರು ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.
ಯುವತಿ ನಾಪತ್ತೆ:  ಹಾಸನದ  ಎ.ವಿ.ಕೆ.ಕಾಲೇಜಿನಲ್ಲಿ ಅಂತಿಮ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಅನುಷಾ (20) ಇತ್ತೀಚೆಗೆ ಮನೆಯಿಂದ ಹೊರಗೆ ಹೋದವರು ನಾಪತ್ತೆಯಾಗಿದ್ದಾರೆ. ಸಾಧಾರಣ ಮೈಕಟ್ಟು ದುಂಡು ಮುಖ, ಎಡ ಕೆನ್ನೆಯಲ್ಲಿ ಒಂದು ಇಂಚು ಉದ್ದದ ಹಳೆಯ ಗಾಯದ ಗುರುತು ಇದೆ. ಕನ್ನಡ, ಇಂಗ್ಲಿಷ್ ಮಾತನಾಡುತ್ತಾರೆ. ನೇರಳೆ ಬಣ್ಣದ ಟಾಪ್ ಹಾಗೂ ಕೆಂಪು ಬಣ್ಣದ ಚೂಡಿದಾರ ಧರಿಸಿದ್ದರು ಎಂದು ತಂದೆ ಸಿದ್ದಮಲ್ಲಯ್ಯ ಬಡಾವಣೆ  ಠಾಣೆಗೆ ದೂರಿತ್ತಾದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.