ಪ್ರಸಿದ್ಧ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಇಂದು
ಕ.ಪ್ರವಾರ್ತೆಹೊಳೆನರಸೀಪುರ ಮಾ.24
ಭಕ್ತಿ, ಧರ್ಮ, ಆಧ್ಯಾತ್ಮಗಳ ತಪೋಭೂಮಿ ಎಂಬ ಖ್ಯಾತಿಯೊಂದಿಗೆ ಧರ್ಮಕ್ಷೇತ್ರ ಎನಿಸಿರುವ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಮಾ.25 ರ ಸೋಮವಾರ ವೈಖಾನಸ ಆಗಮೋಕ್ತವಾಗಿ ನಾಡಿನ ನಾನಾ ಭಾಗಗಳಿಂದ ಆಗಮಿಸುವ ಭಕ್ತ ಜನರ ಸಮ್ಮುಖ ಜರುಗಲಿದೆ.
ಮಾ.25ರಂದು ನಡೆಯುವ ಮಹಾ ರಥೋತ್ಸವಕ್ಕೆ ನಾಡಿನ ವಿವಿಧ ಮೂಲೆಗಳಿಂದಲೂ ಭಕ್ತಾಧಿಗಳು ಆಗಮಿಸುತ್ತಾರೆ. ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ ನಡೆಯುವ ಇಲ್ಲಿನ ರಥೋತ್ಸವಕ್ಕೂ ಪೂರ್ವದಲ್ಲಿ ನಾನಾ ಉತ್ಸವಗಳು ಶ್ರೀಯವರಿಗೆ ಸಲ್ಲುತ್ತದೆ. ರಥೋತ್ಸವ ಮಾ.25ರಂದು ನಂದನನಾಮ ಸಂವತ್ಸರದ ಶುಭ ಚರ ಮೀನ ಲಗ್ನದಲ್ಲಿ ಬೆಳಗ್ಗೆ 7 ರಿಂದ 7.30ರ ಒಳಗೆ ನೆರವೇರಲಿದೆ.
ಇದೇ ಸಂದರ್ಭದಲ್ಲಿ ಕಳೆದ 10 ವರ್ಷಗಳಿಂದಲೂ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ನಾಡಿನ ವೈವಿಧ್ಯಮಯ ಸಂಗೀತ ನೃತ್ಯ ಮತ್ತು ಪ್ರವಚನಗಳ ವಿವಿಧ ಪ್ರಾಕಾರಗಳನ್ನು ಕಲಾಸಕ್ತರಿಗೆ ಉಣಬಡಿಸುತ್ತಿರುವ ಇಲ್ಲಿನ ಭಕ್ತಿವರ್ಧನ ಪ್ರತಿಷ್ಠಾನವು ಈ ಬಾರಿಯೂ ವಿಶೇಷ ಕಾರ್ಯಕ್ರಮಗಳನ್ನು ದೇವಾಲಯ ಆವರಣದ ಸಂಕ್ರಾಂತಿ ಮಂಟಪದಲ್ಲಿ ಹಮ್ಮಿಕೊಂಡಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಹಿರಿಯ ವಕೀಲ ಎ.ತಾಂಡವೇಶ್ವರ ತಿಳಿಸಿದ್ದಾರೆ.
26ರಂದು ಸಂಜೆ 6 ಗಂಟೆಗೆ ಭಕ್ತಿ ಮೇಳವು ಆರಂಭ. ಮಾಜಿ ಪ್ರಧಾನಿ ದೇವೇಗೌಡರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎಚ್.ಡಿ.ರೇವಣ್ಣ ಹಾಗೂ ತಹಸೀಲ್ದಾರ್ ಈಶ್ವರಪ್ಪ ಉಪಸ್ಥಿತರಿದ್ದು,
ತಾಂಡವೇಶ್ವರ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ನಾಡಿನ ಸುಪ್ರಸಿದ್ಧ ಕಲಾತಂಡಗಳಿಂದ ಜಾನಪದ ಕಲಾ ವೈಭವ ಕಾರ್ಯಕ್ರಮ ನಡೆಯಲಿದೆ.
27ರಂದು ತುಮಕೂರಿನ ರಾಮಕೃಷ್ಣಾಶ್ರಮದ ವೀರೇಶಾನಂದಸರಸ್ವತಿ ಸ್ವಾಮಿಗಳಿಂದ ಚಿಂತನ-ಮಂಥನ-ಭಜನೆ ಕಾರ್ಯಕ್ರಮವಿದೆ. 28ರಂದು ಚೆನ್ನೈನ ವಿ.ಜಿ.ಶ್ರೀಕಾಂತ್ ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿದೆ.
ಮಾ.29 ರಂದು ಬೆಂಗಳೂರಿನ ಖ್ಯಾತ ಹಿನ್ನೆಲೆ ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ ಅವರಿಂದ ಭಕ್ತಿ-ಭಾವ ಸುಗಮ-ವಿಶ್ವ ಸಂಗೀತ ಏರ್ಪಡಿಸಿದೆ.
30ರಂದು ನೃಸಿಂಹೋತ್ಸವ ಭಕ್ತಿ ಮೇಳದ ಸಮಾರೋಪ, ನಂತರ ಬೆಂಗಳೂರಿನ ವಿ.ಶುಭಾ ಧನಂಜಯ್ ನೇತೃತ್ವದ ನಾಟ್ಯಾಂತರಂಗ ಬಳಗದಿಂದ ಶ್ರೀ ಶ್ರೀನಿವಾಸ ಪದ್ಮಾವತಿ ಪರಿಣಯ ನೃತ್ಯ ನಾಟಕ ಹಮ್ಮಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

