ಸಕಲೇಶಪುರದ ಮ್ಯಾಗೆ ಮೋಟಮ್ಮನ ಕಣ್ಣು
-ವಿಶೇಷ ವರದಿ
ಹಾಸನ: ಕರ್ನಾಟಕ ರಾಜ್ಯದಲ್ಲಿ ಸ್ತ್ರೀಶಕ್ತಿಗಳ ಸಂಘ ಸ್ಥಾಪನೆಯ ರೂವಾರಿ ಮಾಜಿ ಸಚಿವೆ ಮೋಟಮ್ಮ ಹಠಾತ್ತನೆ ಹಾಸನ ಜಿಲ್ಲೆ ಸಕಲೇಶಪುರ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದು, ಟಿಕೆಟ್ ಪಡೆಯಲು ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ!
ದೆಹಲಿಯಲ್ಲಿರುವ ಪಕ್ಷದ ಮುಖಂಡರ ಮೇಲೆ ಒತ್ತಡ ಹೇರಲು ಸಕಲೇಶಪುರ ತಾಲೂಕಿನ ಪ್ರಮುಖ ಮುಖಂಡರನ್ನು ಜತೆಯಲ್ಲಿ ಕರೆದುಕೊಂಡೇ ಹೋಗಿದ್ದಾರೆ. ಎರಡು ವರ್ಷಗಳ ಹಿಂದಿನಿಂದಲೂ ಸಕಲೇಶಪುರದಿಂದ ಮೋಟಮ್ಮ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಇದ್ದರೂ, ಅದನ್ನು ಮೋಟಮ್ಮ ನಿರಾಕರಿಸಿದ್ದರು.
ಮೋಟಮ್ಮ ಅವರ ವಿಧಾನಪರಿಷತ್ತಿನ ಸದಸ್ಯತ್ವ ಇನ್ನೂ 5 ವರ್ಷ 4 ತಿಂಗಳಿದ್ದು, ವಿಧಾನಸಭೆಗೆ ಟಿಕೆಟ್ ನೀಡುವುದು ಸರಿಯಲ್ಲ. ಸುಖಾಸುಮ್ಮನೆ ಪರಿಷತ್ತಿನ ಸದಸ್ಯತ್ವ ಕಾಂಗ್ರೆಸ್ಗೆ ನಷ್ಟವಾಗುತ್ತದೆ. ಆದ್ದರಿಂದ ಮೋಟಮ್ಮನವರಿಗೆ ಟಿಕೆಟ್ ನೀಡುವುದು ಬೇಡವೆಂದು ಕೆಪಿಪಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಮತ್ತು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಪಕ್ಷದ ವರಿಷ್ಠರಿಗೆ ಹೇಳಿದ್ದಾರೆ. ಇದರಿಂದ ತೀವ್ರ ಅಸಮಾಧಾನಗೊಂಡಿರುವ ಮೋಟಮ್ಮ ರಾಜ್ಯ ನಾಯಕರಿಗೆ ಸೆಡ್ಡು ಹೊಡೆದು ಟಿಕೆಟ್ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಸೋನಿಯಾ ಭೇಟಿ: ಹಿಂದೆಯೂ ಖರ್ಗೆ ಮತ್ತು ಪರಮೇಶ್ವರ್ ವಿರೋಧದ ನಡುವೆಯೂ ಎಂಎಲ್ಸಿ ಮಾಡಿದ್ದ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಮಾತು ಪಕ್ಷದ ಹೈಕಮಾಂಡ್ನಲ್ಲಿ ಏನೂ ನಡೆಯುತ್ತಿಲ್ಲ. ಆದ್ದರಿಂದ ಸೋನಿಯಾರೊಂದಿಗೆ ತುಸು ಉತ್ತಮ ಸಂಬಂಧ ಹೊಂದಿರುವ ಮೋಟಮ್ಮ ಖುದ್ದು ಕಾಂಗ್ರೆಸ್ ಅಧಿನಾಯಕಿಯನ್ನೇ ಭೇಟಿಯಾಗಲು ಯತ್ನಿಸುತ್ತಿದ್ದಾರೆ. ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಸಾಥ್ ನೀಡುತ್ತಿದ್ದಾರೆ.
ಮಹಿಳೆಯರಿಗೆ ಆದ್ಯತೆ ನೀಡಲು ಆಗ್ರಹ: ಈಗಾಗಲೇ ಸಿದ್ಧಪಡಿಸಿರುವ 139 ಅಭ್ಯರ್ಥಿಗಳ ಪಟ್ಟಿಯಲ್ಲಿ ನಟಿ ಉಮಾಶ್ರೀ ಹೊರತುಪಡಿಸಿ, ಮಹಿಳೆಯರಿಗೆ ಮಣೆ ಹಾಕಿಲ್ಲ. ಆದ್ದರಿಂದ ನಾನೂ ಸೇರಿದಂತೆ ಹಲವು ಮಹಿಳೆಯರಿಗೆ ಟಿಕೆಟ್ ನೀಡಬೇಕೆಂದು ಸೋನಿಯಾ ಅವರಲ್ಲಿ ಮೋಟಮ್ಮ ಮನವಿ ಮಾಡಿಕೊಳ್ಳಲಿದ್ದಾರೆ ಎಂದು ದೆಹಲಿಯಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್ ಮುಖಂಡ ಸ್ಪಷ್ಟಪಡಿಸಿದ್ದಾರೆ.
ಏಕೆ ಹೀಗೆ?: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೀಸಲು ಕ್ಷೇತ್ರದಿಂದ ಮಾಜಿ ಸಚಿವ ಬಿ. ಬಿ. ನಿಂಗಯ್ಯನವರಿಗೆ ಟಿಕೆಟ್ ನೀಡುವುದು ಖಚಿತವಾಗಿದೆ. ಬೇರೆ ದಾರಿಯಿಲ್ಲದೇ ಸಕಲೇಶಪುರದೆಡೆ ಒಲವು ತೋರಿದ್ದಾರೆ.
ಈ ಕ್ಷೇತ್ರದಿಂದ ಜಿಪಂ ಸದಸ್ಯ ಡಿ.ಸಿ. ಸಣ್ಣಸ್ವಾಮಿಗೆ ಟಿಕೆಟ್ ನೀಡಲು ಖರ್ಗೆ ಯತ್ನಿಸುತ್ತಿದ್ದರೆ, ಮಾಜಿ ಶಾಸಕ ಡಿ. ಮಲ್ಲೇಶ್ಗೆ ಟಿಕೆಟ್ ನೀಡಲು ಮಾಜಿ ಸಚಿವ ಬಿ. ಶಿವರಾಂ ಯತ್ನಿಸುತ್ತಿದ್ದಾರೆ. ಮಲ್ಲೇಶ್ಗೆ ಬಹುತೇಕ ಟಿಕೆಟ್ ಸಿಗುತ್ತದೆ ಎಂದು ಹೇಳುತ್ತಿರುವಾಗಲೇ ಮೋಟಮ್ಮ ಸ್ಪರ್ಧಿಸಲು ಮುಂದಾಗಿರುವುದು ಜಿಲ್ಲೆಯ ಕಾಂಗ್ರೆಸ್ ರಾಜಕೀಯದಲ್ಲಿ ಹೊರ ತಿರುವು ಪಡೆದುಕೊಂಡಿದೆ.
ಒಂದು ವೇಳೆ ಮೋಟಮ್ಮ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ, ಸ್ಥಳೀಯ ಮುಖಂಡರ ವಿರೋಧವನ್ನು ಎದುರಿಸಬೇಕಾಗುತ್ತದೆ.
ಮೋಟಮ್ಮ ಸಕಲೇಶಪುರದಿಂದ ಸ್ಪರ್ಧಿಸಲು ಬಯಸಿ, ಟಿಕೆಟ್ ಪಡೆಯಲು ದೆಹಲಿಯಲ್ಲಿದ್ದಾರೆ. ಸ್ಥಳೀಯ ಜನರಿಂದ ಮೋಟಮ್ಮವರ ಸ್ಪರ್ಧೆಗೆ ವಿರೋಧವಿಲ್ಲ.
-ಎಚ್.ಪಿ. ಮೋಹನ್, ಕೆಪಿಸಿಸಿ ಸದಸ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

