ಹಾಸನ

ಜಿಲ್ಲಾದ್ಯಂತ ಮೆಗಾ ಲೋಕಾ ಅದಾಲತ್

Published On :

ಕ.ಪ್ರ.ವಾರ್ತೆ    ಹಾಸನ    ನ. 1
ತ್ವರಿತಗತಿಯಲ್ಲಿ ಜನರಿಗೆ ನ್ಯಾಯ ದೊರೆಯ ಬೇಕೆಂಬ ಆಶಯದಿಂದ ಜಿಲ್ಲಾದ್ಯಂತ ನವೆಂಬರ್ 1 ರಿಂದ 23 ರ ವರೆಗೆ ಮೆಗಾ ಲೋಕಾ ಆದಾಲತ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಜನತೆ ಶೀಘ್ರವಾಗಿ ನ್ಯಾಯ ಪಡೆಯುವುದು ಸಂವಿಧಾನಾತ್ಮಕ ಹಕ್ಕು. ಈ ಹಿನ್ನೆಲೆಯಲ್ಲಿ ಮೆಗಾ ಅದಾಲತ್ ಕಾರ್ಯಕ್ರಮವನ್ನು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ನಡೆಸಲಾಗುವುದು. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ.
 ಅದಾಲತ್ಮೂಲಕ ಇಂತಿಷ್ಟು ಪ್ರಕರಣಗಳನ್ನು ಇತ್ಯರ್ಥ ಮಾಡಬೇಕೆಂದು ಗುರಿ ನಿಗದಿಪಡಿಸಲಾಗಿದೆ ಎಂದು   ಹೈಕೋರ್ಟ್ ನ್ಯಾಯಾಧೀಶ ಬಿ.ಎಸ್. ಪಾಟೀಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  
ವಕೀಲರು, ಪೊಲೀಸರು ಮತ್ತು ಸರ್ಕಾರಿ ಅಭಿಯೋಜಕರು ಇದಕ್ಕೆ ಸಹಕಾರ ನೀಡಬೇಕಾಗಿದೆ. ಅದಕ್ಕಿಂತ ಹೆಚ್ಚಾಗಿ ಕಕ್ಷಿದಾರರಲ್ಲಿ ತ್ವರಿತ ನ್ಯಾಯ ಪಡೆದುಕೊಳ್ಳಬೇಕೆಂಬ ಅಭಿಲಾಷೆಯನ್ನು ಉಂಟು ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಆದಾಲತ್ ಹಮ್ಮಿಕೊಳ್ಳಬೇಕು. ಕಕ್ಷಿದಾರರು ಇದರ ಉಪಯೋಗವನ್ನು ಪಡೆಯಬೇಕು ಎಂದು ಹೇಳಿದರು.  
ಸುಮ್ಮ ಸುಮ್ಮನೆ ಕೇಸು ದಾಖಲಿಸುವುದನ್ನು ತಪ್ಪಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದ್ದು, ಅದಾಲತ್ನಲ್ಲಿ ಶೇ. 15 ರಿಂದ 20 ರಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದರು.
46,325 ಪ್ರಕರಣಗಳು ದಾಖಲು: ಜಿಲ್ಲಾದ್ಯಂತ ನಾನಾ ಹಂತಗಳ ನ್ಯಾಯಾಲಯಗಳಲ್ಲಿ ಇಲ್ಲಿಯವರೆಗೆ 46, 325 ಕೇಸು ದಾಖಲಾಗಿವೆ. ಆ ಪೈಕಿ  26,745 ಕ್ರಿಮಿನಲ್, 20,072 ಸಿವಿಲ್ ಪ್ರಕರಣಗಳು ಇವೆ. ಇಲ್ಲಿಯವರೆಗೆ 1.70 ಕೋಟಿ ರು. ಪರಿಹಾರ ನೀಡಲಾಗಿದೆ. ಅದರಲ್ಲಿ 166 ರಸ್ತೆ ಅಪಘಾತಗಳು ಸೇರಿವೆ.  ಕುಟುಂಬ ವ್ಯವಸ್ಥೆಗೆ ಧಕ್ಕೆಯಾಗಬಾರದು ಎಂಬ ಸದುದ್ದೇಶದಿಂದ ವರದಕ್ಷಿಣೆ ಪ್ರಕರಣಗಳಲ್ಲಿ ಮೊದಲು ಪತಿ- ಪತ್ನಿ ಮತ್ತು ಕುಟುಂಬದವರ ನಡುವೆ ಸಾಮರಸ್ಯ ಮೂಡಿಸಲು ಯತ್ನಿಸಲಾಗುತ್ತದೆ ಎಂದು ತಿಳಿಸಿದರು.
ಪತಿಗೂ ಪರಿಹಾರ: ಪತ್ನಿ ಪತಿಗೆ ಕಿರುಕುಳ ನೀಡುವ ವರದಿಗಳೂ ಪ್ರಕಟವಾಗುತ್ತಿವೆ. ಪತ್ನಿ ಕಿರುಕುಳಕ್ಕೆ ಈಡಾದ ಪತಿಯೂ ಪರಿಹಾರ ಪಡೆಯಲು ಅವಕಾಶ ಇದೆ. ಪತಿಗೆ ಆದಾಯದ ಮೂಲ ಇಲ್ಲದ ಸಂದರ್ಭದಲ್ಲಿ ಪತ್ನಿ ಆದಾಯ ಹೊಂದಿದ್ದರೆ ಜೀವನ ನಿರ್ವಹಣೆ ಭತ್ಯೆ ನೀಡಬೇಕಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ನ್ಯಾಯಾಧೀಶ ಜೆ.ಎಸ್. ಸೋಮಶೇಖರ್, ಮುಖ್ಯ ನ್ಯಾಯಿಕ ದಂಡಾಧಿಕಾರಿ ಮುಸ್ತಫಾ ಹುಸೇನ್,  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.