ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ, ಗಣ್ಯರಿಗೆ ಸನ್ಮಾನ
ಹಾಸನ: ಜಿಲ್ಲಾಡಳಿತ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಪ್ರದರ್ಶನಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಣಿಯವಾಗಿದ್ದವು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಾಯಿ ಕನ್ನಡಾಂಬೆಗೆ ಪುಷ್ಪಾರ್ಚನೆ ಸಲ್ಲಿಸಿ, ನಂತರ ನಾಡ ಧ್ವಜ ಹಾಗೂ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಮಕ್ಕಳು ರಾಷ್ಟ್ರಗೀತೆ, ನಾಡ ಗೀತೆ ಹಾಗೂ ರೈತ ಗೀತೆ ಹಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ನಂತರ ಸಚಿವರು ತೆರೆದ ವಾಹನದಲ್ಲಿ ಪೊಲೀಸ್ ತುಕಡಿ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಸಮವಸ್ತ್ರಧಾರಿ ವಿದ್ಯಾರ್ಥಿಗಳು ಮತ್ತು ಪೊಲೀಸ್ ತುಕಡಿಗಳ ತಂಡ ಆಕರ್ಷಕ ಪಥ ಸಂಚಲನ ನಡೆಸಿದವು. ಜಿಲ್ಲೆಯ ಎಲ್ಲಾ ಪ್ರಾಥಮಿಕ ಶಾಲೆ ಮಕ್ಕಳು ಭಾಗವಹಿಸಿದ್ದರು. ಸಚಿವರು ತೆರೆದ ವಾಹನ ಮುಖಾಂತರ ಪೊಲೀಸ್, ಗೃಹರಕ್ಷಕದಳ, ಎನ್ಸಿಸಿಸಿ, ಸೇವಾದಳ, ಸ್ಕೌಟ್ಸ್ ತರೆ ತಂಡಗಳನ್ನು ಪರಿಚಯ ಮಾಡಿಕೊಂಡು ಗೌರವ ವಂದನೆ ಸ್ವೀಕರಿಸಿದರು.
ಮಕ್ಕಳು ದೇಶ ಭಕ್ತಿ ಗೀತೆಗಳಿಗೆ, ಟ್ಯಾಬ್ಲೋಗಳಲ್ಲಿ ನಾಡಿಗಾಗಿ ಹೋರಾಡಿ ಮಾಡಿದ ಧೀಮಂತ ನಾಯಕರ ಕಥೆಯ ಟ್ಯಾಬ್ಲೋ ಪ್ರದರ್ಶನ ನೀಡಿದರು. ನಾನಾ ಶಾಲೆಯ ಮಕ್ಕಳು ಆಕರ್ಷಕ ಪಥ ಸಂಚಲನ ನಡೆಸಿ ನೆರೆದಿದ್ದ ಅತಿಥಿಗಳು ಹಾಗೂ ಸಾರ್ವಜನಿಕರ ಮನ ಸೆಳೆದರು. ಜಿಲ್ಲಾ ಕ್ರೀಡಾಂಗಣದಲ್ಲಿ ನೆರೆದಿದ್ದ ಜನಸ್ತೋಮ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ವಿದ್ಯಾರ್ಥಿಗಳಿಗೆ ಮೆಚ್ಚುಗೆಯ ಸುರಿಮಳೆಗೈದರು.
ಇದೇ ವೇಳೆ ಯಕ್ಷಗಾನ, ಕೀಲು ಕುದುರೆಯಾಟ, ನವಿಲು ಕುಣಿತ ಹಾಗೂ ನಾನಾ ಕಲಾ ತಂಡಗಳು ಪ್ರದರ್ಶನ ನೀಡಿದವು. ರಾಜ್ಯೋತ್ಸವ ಆಚರಣೆ ಮಕ್ಕಳಿಗೆ ಒಂದು ರೀತಿಯಲ್ಲಿ ಹಬ್ಬದ ವಾತಾವರಣದಂತೆ ನಿರ್ಮಾಣವಾಗಿತ್ತು.
ನಾನಾ ಕ್ಷೇತ್ರದ ಸಾಧಕರಿಗೆ ಸನ್ಮಾನ: ಸಾಹಿತ್ಯ ಕ್ಷೇತ್ರದಲ್ಲಿ ಮೇಟಿಕೆರೆ ಹಿರಿಯಣ್ಣ, ಕ್ರೀಡಾ ಕ್ಷೇತ್ರದಲ್ಲಿ ಜಿ.ವಿ.ಜಗನ್ನಾಥ್ (ಜಿಮ್ನಾಸ್ಟಿಕ್ ತರಬೇತಿದಾರರು) ಹೊಳೆನರಸೀಪುರ ತಾ. ಕೋಡಂಗಿಕೊಪ್ಪಲಿನ ಪ್ರಗತಿಪರ ರೈತ ಪುಟ್ಟಪ್ಪ, ಅತ್ಯುತ್ತಮ ಪೌರ ಕಾರ್ಮಿಕ ರಂಗೇಗೌಡ, ಜಾನಪದ ಕ್ಷೇತ್ರದಲ್ಲಿ ಗ್ಯಾರಂಟಿ ರಾಮಣ್ಣ, ಸಂಗೀತ ಕ್ಷೇತ್ರದಲ್ಲಿ ಬಿ.ಎನ್.ಎಸ್.ಮುರುಳಿ, ರಂಗಭೂಮಿ(ನಾಟಕ) ಕ್ಷೇತ್ರದಲ್ಲಿ ಎಸ್.ಡಿ.ಹನುಮಂತ, ಪತ್ರಿಕೋದ್ಯಮದಲ್ಲಿ ಜೋಸೆಫ್, ಅತ್ಯುತ್ತಮ ಪೊಲೀಸ್ ಆರ್.ವಿ.ಗಂಗಾಧರಪ್ಪ, ಅತ್ಯುತ್ತಮ ಕಂದಾಯ ನೌಕರರಾಗಿ ಉಪವಿಭಾಗಾಧಿಕಾರಿ ಕಚೇರಿ ವಾಹನ ಚಾಲಕ ಜೆ.ಶಿವಾನಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

