ಇನ್ನೂ ಸಿಕ್ಕಿಲ್ಲ ಪಿಜಿ ಸೀಟು
ಹಾಸನ: ಮೇಲೆಲ್ಲಾ ಥಳಕು, ಒಳಗೆ ಹುಳುಕು ಎಂಬ ಗಾದೆ ಮಾತು ಹಾಸನ ವೈದ್ಯಕೀಯ ಕಾಲೇಜಿಗೆ ಅನ್ವಯಿಸುತ್ತವೆ. ಇಲ್ಲಿನ ವೈದ್ಯಕೀಯ ಕಾಲೇಜಿಗೆ ವಿಶಾಲವಾದ ಭವ್ಯ ಕಟ್ಟಡವಿದೆ. ಆದರೆ ಬೋಧಕ ಸಿಬ್ಬಂದಿ ಮತ್ತಿತರ ಬಲು ಮುಖ್ಯವಾದ ಮೂಲ ಸೌಲಭ್ಯಗಳಿಲ್ಲ. ಇಲ್ಲಿ ಕೊರತೆಗಳದ್ದೇ ಅಬ್ಬರ...
ಇದರಿಂದಾಗಿ 7 ವರ್ಷಗಳಾದರೂ ವೈದ್ಯಕೀಯ ಪದವಿಯ ಹೆಚ್ಚುವರಿ 50 ಸೀಟುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಹಾಗೂ ಸ್ನಾತಕೋತ್ತರ ಪದವಿ ಸೀಟುಗಳನ್ನು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ನಿಂದ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಬೋಧಕ ಸಿಬ್ಬಂದಿ ಅಗತ್ಯಕ್ಕೆ ಅನುಗುಣವಾಗಿ ನೇಮಿಸಿಕೊಂಡರೇ 36 ಪಿಜಿ ಸೀಟುಗಳನ್ನು ಪಡೆದುಕೊಳ್ಳಬಹುದು. ಇದೂ ಕೂಡಾ ಸಾಧ್ಯವಾಗಿಲ್ಲ.
ಅದಕ್ಕೆ ಕಾರಣ ಇಲ್ಲಿದೆ: ನಾನಾ ವಿಷಯಗಳ ಪ್ರೊಫೇಸರ್ ಗ್ರೇಡ್ಅಧ್ಯಾಪಕರು ಇಲ್ಲ, ಸಿಟಿ ಸ್ಯಾನ್ ಸೆಂಟರ್ ಇಲ್ಲ, ಎಂಆರ್ಐ ಸ್ಟಾನಿಂಗ್ ವ್ಯವಸ್ಥೆ ಇಲ್ಲ, ಆಪರೇಷನ್ ಥಿಯೇಟರ್ಗಳು ಅಗತ್ಯ ಪ್ರಮಾಣದಲ್ಲಿ ಇಲ್ಲ...
ತುರ್ತು ಚಿಕಿತ್ಸಾ ಘಟಕ (ಐಸಿಯು) ನಲ್ಲಿ ಕೃತಕ ಉಸಿರಾಟದ ಯಂತ್ರಗಳು (ವೆಂಟಿಲೆಟರ್) ಕೂಡಾ ಇರಬೇಕಾದಷ್ಟು ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಎಂಸಿಐ ನಿಯಮ ಪ್ರಕಾರ ಮೂಲ ಸವಲತ್ತು ಕಲ್ಪಿಸಿಕೊಂಡು ಹೆಚ್ಚುವರಿ ಎಂಬಿಬಿಎಸ್ ಮತ್ತು ಹೊಸದಾಗಿ ಸ್ನಾತಕೋತ್ತರ ಪಿಜಿ (ಎಂಡಿ) ಸೀಟುಗಳನ್ನು ಪಡೆದುಕೊಳ್ಳುವ ಮೂಲಕ ಆಸ್ಪತ್ರೆ ಮತ್ತು ಬೋಧನಾ ಗುಣಮಟ್ಟ ಹೆಚ್ಚಿಸಬೇಕೆಂಬ ಇಚ್ಛಾಶಕ್ತಿ ವ್ಯಕ್ತವಾಗುತ್ತಿಲ್ಲ.
ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೂ ಇದೆ. ಸಿಟಿ ಸ್ಕಾನಿಂಗ್ ಹಾಗೂ ಎಂಆರ್ಐ ಸ್ಟಾನಿಂಗ್ ಯಂತ್ರಗಳನ್ನು ಖರೀದಿಸಲು ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಬೇಕಾದ ಹಣ ನೀಡುತ್ತಿಲ್ಲ. ಕಾಲೇಜಿನ ಹೈಟಕ್ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಅಲ್ಲಿಗೆ ಬೇಕಾದ ಅತ್ಯಾಧುನಿಕ ಉಪಕರಣಗಳನ್ನು ಕಲ್ಪಿಸಿ ಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಅದಕ್ಕಾಗಿ 40 ಕೋಟಿ ರು. ಅನುದಾನ ನೀಡಬೇಕೆಂದು ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಬಹಳ ಹಿಂದೆಯೇ ಸಲ್ಲಿಸಲಾಗಿದೆ
ಸ್ನಾತಕೋತ್ತರ ಪದವಿ ( ಪಿಜಿ) ಆರಂಭವಾದರೆ ಅನೇಕ ಉಪಯೋಗಗಳು ಉಂಟು. ಪಿಜಿ ವಿದ್ಯಾರ್ಥಿಗಳನ್ನು ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳಬಹುದು. ಆ ಮೂಲಕ ರೋಗಿಗಳಿಗೆ ಉತ್ತಮ ಸೇವೆ ಒದಗಿಸಬಹುದು. ಈ ಮೂಲಕ ಬಡರೋಗಿಗಳಿಗೆ ಆಗುತ್ತಿರುವ ನರಕಯಾತನೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ನಿಯಂತ್ರಿಸಬಹುದಾಗಿದೆ.
2006 ರಲ್ಲಿ ಎಚ್. ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮಂಡ್ಯ, ಶಿವಮೊಗ್ಗ, ಬೀದರ್, ರಾಯಚೂರು, ಬೆಳಗಾವಿ ಮತ್ತು ಹಾಸನದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಯಿತು. ದುರಾದೃಷ್ಟವಶಾತ್ ಹಾಸನ ಕಾಲೇಜಿಗೆ ಮಾತ್ರ ಪಿಜಿ ಕೋರ್ಸ್ ಹೊಂದಲು ಸಾಧ್ಯವಾಗಿಲ್ಲ. ಅಲ್ಲದೇ ಹಾಸನ ಕಾಲೇಜಿಗೆ 100 ಪದವಿ ಸೀಟುಗಳನ್ನು 150 ಕ್ಕೆ ಏರಿಸಬೇಕೆಂದು ಹಿಂದಿನಿಂದಲೂ ಸಂಬಂಧಪಟ್ಟವರು ಹೇಳುತ್ತಿದ್ದಾರೆ ವಿನಾ ಅದಿನ್ನೂ ಕಾರ್ಯಗತವಾಗಿಲ್ಲ.
ಕಾಲೇಜಿನಲ್ಲಿ 18 ವಿಭಾಗಗಳು ಇದ್ದು, ಒಂದು ವಿಭಾಗಕ್ಕೆ 2 ಪಿಜಿ ಸೀಟು ಪಡೆಯಬಹುದು. 10 ವಿಭಾಗಗಳಿಗೆ ಪಿಜಿ ಸೀಟು ಪಡೆಯಲು ಎಂಸಿಐ ಪತ್ರ ಬರೆದು, ತಲಾ ಒಂದು ವಿಭಾಗಕ್ಕೆ 2 ಲಕ್ಷ ರು. ನಂತೆ ಹಣ ಪಾವತಿಸಲಾಗಿದೆ. ಜೀವವಿಜ್ಞಾನ ಶಾಸ್ತ್ರ (ಬಯೋಕೆವುಸ್ಟ್ರಿ), ಮನಶಾಸ್ತ್ರ (ಸೈಕಲಾಜಿ), ಪಾಥೋಲಜಿ (ರೋಗಲಕ್ಷಣ ಶಾಸ್ತ್ರ), ಮೈಕ್ರೋ ಬಯೋಲಜಿ (ಸೂಕ್ಷ ಜೀವ ವಿಜ್ಞಾನ ಶಾಸ್ತ್ರ), ಫಾರ್ಮೋಲಜಿ (ಔಷಧಿ ವಿಜ್ಞಾನ ಶಾಸ್ತ್ರ), ಫೆರೋನ್ಸಿಕ್ಸ್ಡಿಷನ್ (ನ್ಯಾಯ ವೈದ್ಯ ಶಾಸ್ತ್ರ), ಕಮ್ಮುನಿಟಿ ಮೆಡಿಷನ್ (ಸಮುದಾಯ ಔಷಧಿ ವಿಜ್ಞಾನ ಶಾಸ್ತ್ರ), ಅಪ್ಟೋಮಲಜಿ (ಕಣ್ಣು ರಚನಾ ಶಾಸ್ತ್ರ), ಡರ್ಮೋಟಲಜಿ (ಚರ್ಮ ರೋಗ ಶಾಸ್ತ್ರ), ಅನೆಸ್ತೇಷಿಯಾ (ಅರವಳಿಕೆ ಶಾಸ್ತ್ರ) ವಿಭಾಗಗಳಲ್ಲಿ ಎಂಡಿ ಕೋರ್ಸ್ ಆರಂಭಿಸಲು ಅನುಮತಿ ನೀಡುವಂತೆ ಎಂಸಿಐ ಗೆ ಲಿಖಿತವಾಗಿ ಮನವಿ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ಶುಲ್ಕ ಪಾವತಿಸಲಾಗಿದೆ.
ಸದ್ಯದಲ್ಲೇ ಎಂಸಿಐ ತಂಡ ಆಸ್ಪತ್ರೆಗೆ ಭೇಟಿ ಪರಿಶೀಲನೆ ನಡೆಸಿದ ನಂತರ ಅನುಮತಿ ನೀಡುವ ಸಾಧ್ಯತೆಗಳಿವೆ ಎಂಬ ಆಶಾಭಾವನೆಯನ್ನು ಹಾಸನ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಎನ್. ರಾಚೇಗೌಡರು ವ್ಯಕ್ತಪಡಿಸುತ್ತಾರೆ.
ರೇಡಿಯೋಲಜಿಗೆ ಪ್ರಾಧ್ಯಾಪಕರೇ ಬರುತ್ತಿಲ್ಲ: ಇಂದಿನ ವೈದ್ಯಕೀಯ ಕ್ಷೇತ್ರದಲ್ಲಿ ರೋಗಗಳನ್ನು ಪತ್ತೆ ಹಚ್ಚುವಲ್ಲಿ ಬಹುಪಯೋಗಿಯಾದ ರೇಡಿಯೋಲಜಿ ವಿಭಾಗದ ಪ್ರೊಫೇಸರ್ ಹುದ್ದೆಗೆ ಹಲವಾರು ಬಾರಿ ಸಂದರ್ಶನ ಕರೆದರೂ ಯಾರು ಬರುತ್ತಿಲ್ಲ. ಇದು ನಿರ್ದೇಶಕರಿಗೆ ತಲೆನೋವಾಗಿ ಪರಿಣಾಮಿಸಿದೆ.
ಅನುಮಾನ: ಈ ವೈದ್ಯಕೀಯ ಕಾಲೇಜು ಮತ್ತು ಅದರ ಆಸ್ಪತ್ರೆಯ ಸ್ಥಿತಿಗತಿಯನ್ನು ಗಮನಿಸಿದರೇ ಪಿಜಿ ಕೋರ್ಸ್ ಆರಂಭಿಸಲು ಎಂಸಿಐ ಅನುಮತಿ ನೀಡುವ ಸಾಧ್ಯತೆಗಳು ಕಡಿಮೆ. ಏಕೆಂದರೆ ಎಂಸಿಐ ನಿಯಾಮವಳಿ ಪ್ರಕಾರ ಬೋಧನ ಸಿಬ್ಬಂದಿ ಮತ್ತು ಉಪಕರಣದ ವ್ಯವಸ್ಥೆ ಸೂಕ್ತ ರೀತಿಯಲ್ಲಿಲ್ಲ.
ದಯಾಶಂಕರ ಮೈಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

