ಹಾಸನ

ನಾಳೆ ಹಾಸನಾಂಬೆ ದರ್ಶನಕ್ಕೆ ತೆರೆ

Published On :

ಕ.ಪ್ರ.ವಾರ್ತೆ  ಹಾಸನ  ನ.3
ಹಾಸನಾಂಬೆಯ ದರ್ಶನೋತ್ಸವಕ್ಕೆ ನ.5ರಂದು ಶಾಸ್ತ್ರೋಕ್ತವಾಗಿ ತೆರೆ ಬೀಳಲಿರುವ ಹಿನ್ನೆಲೆಯಲ್ಲಿ ಭಾನುವಾರ ದೇವಿಯ ದರ್ಶನ ಭಾಗ್ಯ ಪಡೆಯಲು ಸಹಸ್ರಾರು ಭಕ್ತ ಸಾಗರವೇ ಹರಿದು ಬಂದಿತು.  ನಗರದ ಅಧಿದೇವತೆ ಹಾಸನಾಂಬೆ ದರ್ಶನವನ್ನು ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ, ಮಾಜಿ ಸಚಿವೆ ಶೋಭ ಕರಂದ್ಲಾಜೆ, ಕಾಂಗ್ರೆಸ್ ಮುಖಂಡರಾದ ಮೋಟಮ್ಮ, ಸುಪ್ರೀಂ ಕೋರ್ಟ್ ನ್ಯಾಯಾಧೀಶ ಗೋಪಾಲಗೌಡ, ಆದಿಚುಂಚನಗಿರಿ ಶಾಖಾ ಮಠದ ನಿರ್ಮಾಲಾನಂದ ನಾಥ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಬಿ.ಶಿವರಾಂ ಸೇರಿದಂತೆ ನಾನಾ ಗಣ್ಯರು ಪಡೆದಿದ್ದಾರೆ.
ಹಾಸನಾಂಬೆ ದರ್ಶನಕ್ಕೆ ಕಡೇ 2 ದಿನ ಬಾಕಿಯಿದ್ದು ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಿ ರೈತರಿಗೆ ಒಳ್ಳೆಯದಾಗಲಿ ಎಂದು ದೇವಿಯಲ್ಲಿ ಭಕ್ತರು ಪ್ರಾರ್ಥಿಸಿದರು.
ಹೆಚ್ಚಿದ ಭಕ್ತಸಾಗರ: ದೇವಿಯ ದರ್ಶನ ಬೆಳಗ್ಗೆಯಿಂದ 6 ರಿಂದ ಪ್ರಾರಂಭಿವಾಗಿ 1ರ ತನಕ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟು, ನಂತರ 1ರಿಂದ 3ರವರೆಗೆ ನಿಲ್ಲಿಸಲಾಗಿತ್ತು. ಮಧ್ಯಾಹ್ನ 3ರಿಂದ ದರ್ಶನ ಪ್ರಾರಂಭಿಸಿ  ನಂತರ ರಾತ್ರಿ ಭಕ್ತರು ಇರುವ ತನಕ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು.
ಆದರೆ ಗಂಟೆಗಟ್ಟಲೆಕಾದರೂ ದರ್ಶನ ಲಭ್ಯವಾಗದಿದ್ದುದು ಜನರನ್ನು ಕೆರಳಿಸಿತ್ತು. ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತವಾಯಿತು. ಹಾಸನಾಂಬೆ ದರ್ಶನಕ್ಕೆ ಈ ಬಾರಿ ಹಿಂದೆಂದಿಗಿಂತಲೂ ಅತಿ ಹೆಚ್ಚಿನ ಭಕ್ತ ಸಾಗರವೇ ಹರಿದು ಬರುತ್ತಿದೆ. 13 ದಿನಗಳ ಕಾಲ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದ ದೇವಿ, ಮುಂದಿನ ವರ್ಷದವರೆಗೆ ಗರ್ಭಗುಡಿ ಯೊಳಗೆ ನೆಲೆಗೊಳ್ಳಲಿದ್ದಾಳೆ. ಈ ಬಾರಿ 4 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದ್ದು, ಕಳೆದ ಅ.24ರಂದು ಆಶ್ವೀಜಮಾಸದ ಮೊದಲ ಗುರುವಾರದಿಂದ ಈವರೆಗೆ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದ ಹಾಸನಾಂಬೆಯ ಬಾಗಿಲನ್ನು ಪಂಜಿನ ಆರತಿ ನಂತರ ಮಂಗಳವಾರ ಶಾಸ್ತ್ರೋಕ್ತವಾಗಿ ಮುಚ್ಚಲಾಗುತ್ತದೆ.
   ಜಿಲ್ಲೆಯಲ್ಲದೇ ಹೊರ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಕೊಡಗು, ತುಮಕೂರು, ಮಂಡ್ಯ, ಚಾಮರಾಜನಗರ, ಚನ್ನೈ, ಊಟಿ ಹಾಗೂ ಗೊವಾ ರಾಜ್ಯಗಳಿಂದಲೂ ಭಕ್ತರು ಹಾಸನಾಂಭೆಯ ದರ್ಶನಕ್ಕೆ ಬಂದ ಹಿನ್ನೆಲೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಜನಸಂದಣಿ ಕಂಡುಬಂದಿತು. ಸೂಕ್ತ ವ್ಯವಸ್ಥೆ ಮಾಡದ ಕಾರಣ ಭಕ್ತರು ಹೆಂಗಸರು, ಮಕ್ಕಳು ಹಾಗೂ ವೃದ್ಧರೊಂದಿಗೆ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಯಿತು. ಗಣ್ಯರು ಅತಿಗಣ್ಯರಿಂದಾಗಿ ಸಾಮಾನ್ಯ ಜನರಿಗೆ ದರ್ಶನ ಸ್ಥಗಿತ ಗೊಳಿಸುತ್ತಿದ್ದುದು ಸಹ ದರ್ಶನ ವಿಳಂಬವಾಗಲು ಕಾರಣವಾಯಿತು.
ಹೆಜ್ಜೆ ಹೆಜ್ಜೆಗೂ ಪೊಲೀಸರ ಕಾಟ ಸಹ ಭಕ್ತರಿಗೆ ಅಸಹನೀಯವಾಗಿದ್ದು, ಒಂದು ರೀತಿಯ ಭಯದ ವಾತಾವರಣ ಮೂಡಿತ್ತು. ತಾಲೂಕು ಆಡಳಿತ ಲಕ್ಷಾಂತರ ಜನರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೂ ಕೆಲವು ಸೌಲಭ್ಯ ಕಲ್ಪಿಸದಿದ್ದ ಪರಿಣಾಮ ಭಕ್ತರು ಸರದಿಯಲ್ಲಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ದೇವಿ ದರ್ಶನ ಆರಂಭ ದಿನದಿಂದ ಭಕ್ತರಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ಪ್ರತಿನಿತ್ಯ ನೀರಿನ ಕ್ಯಾನ್ ಒದಗಿಸಲಾಗಿತ್ತು.
4 ಲಕ್ಷ ಕ್ಕೂ ಹೆಚ್ಚು  ಭಕ್ತರಿಂದ ದೇವಿ ದರ್ಶನ: ದರ್ಶನ ಭಾಗ್ಯಕ್ಕೆ ಇನ್ನು 2 ದಿನ ಬಾಕಿಯಿದ್ದು, ಭಕ್ತರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಇದುವರೆಗೂ ಪ್ರತಿ 2ಸೆಕೆಂಡಿಗೆ ಒಬ್ಬ ಭಕ್ತರಂತೆ ದೇವಾಲಯಕ್ಕೆ ಆಗಮಿಸಿದ್ದು, ಈವರೆಗೆ 4 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಭಾಗ್ಯ ಪಡೆದಿದ್ದಾರೆ ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದ್ದಾರೆ.
ಬೆಳಗ್ಗೆ 6 ರಿಂದ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಮಧ್ಯಾಹ್ನ 1ರ ದರ್ಶನಕ್ಕೆ ಬಿಡಲಾಗುತ್ತಿದೆ. ನಂತರ ಮಧ್ಯಾಹ್ನ 3ರಿಂದ ದೇವಿಯ ದರ್ಶನಕ್ಕೆ ಬಿಟ್ಟು ರಾತ್ರಿ ಭಕ್ತರು ಇರುವವಷ್ಟು ಜನರಿಗೆ ದೇವಿಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ದೇವಿಗೆ ಮಹಾ ನೈವೇದ್ಯ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಂಗಳವಾರ ಬೆಳಗ್ಗೆ 6ರಿಂದ ಮಧ್ಯಾಹ್ನ 1ರವರೆಗೆ ಹಾಸನಾಂಬ ದೇವಿಯ ಆಭರಣಗಳನ್ನು ವಿಸರ್ಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತಾಧಿಗಳಿಗೆ ದರ್ಶನಕ್ಕೆ ಅವಕಾಶ ನಿಲ್ಲಿಸಲಾಗುತ್ತದೆ. ಮಧ್ಯಾಹ್ನ 12.30ಕ್ಕೆ ಅಧಿಕಾರಿಗಳ ಸಮಕ್ಷಮದಲ್ಲಿ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.