ಬಲಿಪಾಡ್ಯಮಿಗೆ ಸಡಗರದ ಸಿದ್ಧತೆ
ಕ.ಪ್ರ. ವಾರ್ತೆ ಅರಸೀಕೆರೆ ನ. 3
ಸತತ ಬರಗಾಲ ಮಳೆ ಅಭಾವದಿಂದ ಅಂತರ್ಜಲ ಮಟ್ಟ ಕುಸಿದು ಇಲ್ಲಿನ ಜೀವನಾಡಿಯಾದ ತೆಂಗು ಬೆಳೆ ಸುಳಿ ಬಿದ್ದು ನಾಶವಾಗಿ ಭೀಕರ ಬರ ಪರಿಸ್ಥಿತಿ ಎದುರಿಸುತ್ತಿದ್ದರೂ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಜನತೆ ಬಲಿಪಾಡ್ಯಮಿ ಹಬ್ಬದ ಸಂಭ್ರಮದಲ್ಲಿದ್ದುದು ಕಂಡು ಬಂತು.
ಬರ ಪರಿಸ್ಥಿತಿಯಿಂದ ಅಗತ್ಯ ವಸ್ತುಗಳ ಬೆಲೆ ತೀವ್ರ ಏರಿಕೆಯಾಗಿದ್ದರೂ ಸಾಲ ಮಾಡಿಯಾದರೂ ಹಬ್ಬದ ಶಾಸ್ತ್ರ ಮುಗಿಸಬೇಕೆಂಬ ಗ್ರಾಮಾಂತರ ಜನತೆ ಖರೀದಿಗೆ ಮಾರುಕಟ್ಟೆಗೆ ಬಂದರೆ ಹಬ್ಬದ ಸಂಭ್ರಮಕ್ಕೆ ಕೊಡಲಿ ಪೆಟ್ಟು ಎಂಬಂತೆ ವರ್ತಕರು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ತೀವ್ರ ಬೆಲೆ ಏರಿಕೆ ಮಾಡಿದ್ದರೂ ಪಟ್ಟಣದ ಆರ್.ಆರ್.ರಸ್ತೆಯಲ್ಲಿ ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ರಜಾ ದಿನ ಭಾನುವಾರವೂ ಮುಗಿ ಬಿದ್ದಿದ್ದರು.
ಪರಿಸ್ಥಿತಿಯ ಲಾಭ ಪಡೆದುಕೊಂಡಿರುವ ವ್ಯಾಪಾರಿಗಳು ಎಲ್ಲವಸ್ತುಗಳ ಬೆಲೆ ಗಗನಕ್ಕೇರಿಸಿದ್ದು ಸೇವಂತಿಗೆ ಹೂ ಪ್ರತಿ ಮಾರಿಗೆ 20, ಕಾಕಡ 50, ಕನಕಾಂಬರ 60, ಬಾಳೆಹಣ್ಣು 1 ಡಜನ್‌ಗೆ 55, ಸೇಬು ಕೆಜಿಗೆ 100-110 ರು. ಕಿತ್ತಲೆ 60-80 ರು.ಗಳಾಗಿವೆ, ಬಾಳೆಕಂದು ಹಾಗೂ ಮಾವಿನಸೊಪ್ಪು ಇತ್ಯಾದಿಗಳ ಬೆಲೆ ಹೆಚ್ಚಿದ್ದರೂ ಸರಿ ಹಬ್ಬ ಮಾಡಬೇಕೆಂದಿರುವ ಜನಸಾಮಾನ್ಯರು ತಮ್ಮ ಬಳಿ ಇರುವಷ್ಟು ಹಣದಲ್ಲಿ ವಸ್ತುಗಳನ್ನು ಕೊಳ್ಳತೊಡಗಿದ್ದಾರೆ.
ಸರ್ಕಾರ ಹಾಪ್‌ಕಾಮ್ಸ್ ಮಳಿಗೆಗಳನ್ನು ತೆರೆದು ರಿಯಾಯಿತಿ ದರದಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಜಾವಗಲ್ ವರದಿ: ದೀಪಾವಳಿ ಹಬ್ಬದ ಪ್ರಯುಕ್ತ ಹೂವು-ಹಣ್ಣು ಮತ್ತು ತರಕಾರಿಗಳ ಬೆಲೆ ತುಟ್ಟಿಯಾಗಿ ಗ್ರಾಹಕರು ಅಚ್ಚರಿ ಪಡುವಂತಾಯಿತು ಮತ್ತು ಹಬ್ಬದ ಪ್ರಯುಕ್ತ ತುಟ್ಟಿಯಾದರೂ ಹೂವು-ಹಣ್ಣುಗಳನ್ನು ಕೊಳ್ಳಬೇಕಾಯಿತು. ಜಾವಗಲ್‌ನ ಸಂತೆ ದಿನವಾದ ಭಾನುವಾರ ಸೇವಂತಿಗೆ, ಬಟನ್ ಕಾಕಡ, ಕನಕಾಂಬರ ಹೂವಿನ ಬೆಲೆ 1 ಮಾರಿಗೆ 30-40 ರು. ಗಳಾಗಿತ್ತು. ತಾಜಾ ತರಕಾರಿಗಳು ಪ್ರತಿ ಶನಿವಾರ ಬೆಳಿಗ್ಗೆ 10ಗಂಟೆಯೊಳಗೆ ಸಗಟು ವ್ಯಾಪಾರವಾಗಿ ಮಂಗಳೂರು, ಕೇರಳ, ಚಿಕ್ಕಮಗಳೂರು ಮತ್ತಿತರ ಕಡೆಗಳಿಗೆ ಲೋಡುಗಟ್ಟಲೆ ರವಾನೆಯಾಗುತ್ತದೆ. ಉಳಿದ ಸುಮಾರದ ತರಕಾರಿಗಳು ಭಾನುವಾರ ಮಾರಾಟವಾಗುತ್ತದೆ.
ಉತ್ತಮ ದರ್ಜೆಯ 1000 ತೆಂಗಿನಕಾಯಿಗಳ ಬೆಲೆ 10,1000 ದಿಂದ 12,000 ರು.ಗಳಾಗಿತ್ತು. ಕೊಬ್ಬರಿಬೆಲೆ ಕ್ವಿಂಟಾಲ್‌ಗೆ 6 ಸಾವಿರ ರು.ಗಳಿಗೆ ಏರಿಕೆ ಕಂಡಿತು. ಉಳಿದಂತೆ ಕ್ಯಾರೆಟ್, ಬಿಟ್ರೂಟ್, ಹಾಗಲಕಾಯಿ, ಗೆಡ್ಡೆಕೋಸು ಸೇರಿದಂತೆ ತರಕಾರಿಗಳ ಬೆಲೆ ಕಿಲೊ 1ಕ್ಕೆ 30-40 ರು.ಗಳಾಗಿತ್ತು. ಈರುಳ್ಳಿಬೆಲೆ ಕುಸಿತ ಕಂಡು ಕಿಲೊ 1ಕ್ಕೆ 25 ರು.ನಿಂದ 30 ರು. ಗಳಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

