ಹಾಸನ

ಹಾಸನ, ಕನ್ನಡ ಶಾಲೆಗಳ ಅವಸಾನ!

Published On :

- ಹಾಸನ ಜಿಲ್ಲೆಯಲ್ಲಿ 92 ಸರ್ಕಾರಿ ಪ್ರಾಥಮಿಕ ಶಾಲೆಗಳು ಬಂದ್

ಕ.ಪ್ರ.ವಾರ್ತೆ, ಹಾಸನ, ನ. 3
-
ಪ್ರತಿ ವರ್ಷದ ರಾಜ್ಯೋತ್ಸವದ ವೇದಿಕೆಗಳಲ್ಲಿ 'ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ' ಎಂದು ಕನ್ನಡ ಉಳಿಸುವಂತೆ ಕನ್ನಡಿಗರನ್ನೇ ಗೋಗರೆಯಲಾಗುತ್ತಿದೆ. ಕನ್ನಡ ಉಳಿಸಿ ಎನ್ನುವ ವಿಪರ್ಯಾಸದ ಜೊತೆಗೆ ಕನ್ನಡಶಾಲೆಗಳು ಕೂಡಾ ಮುಚ್ಚುತ್ತಿರುವುದು ಮಾತ್ರ ದುರಂತ.
ಶಿಕ್ಷಣ ಇಲಾಖೆಯು ಸರ್ವ ಶಿಕ್ಷಣ ಅಭಿಯಾನ ಮತ್ತಿತರ ಆಕರ್ಷಕ ಯೋಜನೆಗಳ ಮೂಲಕ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಮಾಡುತ್ತಿರುವ ಪ್ರಯತ್ನ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡುತ್ತಿಲ್ಲ. ಇದು ಗ್ರಾಮೀಣ ಪ್ರದೇಶದ ಪೋಷಕರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗುವಂತೆ ಮಾಡುತ್ತಿದೆ. ಜಿಲ್ಲೆಯಲ್ಲಿ ಸುಮಾರು 20 ಕಿಮೀ ದೂರ ವಾಹನ ಕಳುಹಿಸಿ, ತಮ್ಮ ಕಾನ್ವೆಂಟ್‌ಗಳಿಗೆ ಮಕ್ಕಳನ್ನು ಕರೆದುಕೊಂಡು ಬರಲು ವ್ಯವಸ್ಥೆ ಮಾಡಿವೆ. ಪೋಷಕರು ಕೂಡಾ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುವಲ್ಲಿಯೇ ಹೆಚ್ಚು ಉತ್ಸುಕರಾಗಿದ್ದಾರೆ. ಈ ಪರಿಸ್ಥಿತಿಯನ್ನು ಮನಗಂಡು ಸರ್ಕಾರವೇ ಗ್ರಾಮಾಂತರ ಪ್ರದೇಶದ ಪ್ರಾಥಮಿಕ ಶಾಲೆಗಳಲ್ಲಿ 'ಮಕ್ಕಳ ಮನೆ' ಎಂಬ ಘಟಕ ತೆರೆದು ಅಲ್ಲಿ ಎಬಿಸಿಡಿ ಕಲಿಸಲಾರಂಭಿಸಿತು. ಆದರೂ ಗ್ರಾಮೀಣ ಮತ್ತು ನಗರ ಪ್ರದೇಶದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಶಾಲೆಗೆ ಕಳುಹಿಸುವುದನ್ನು ತಡೆಗಟ್ಟಲಾಗುತ್ತಿಲ್ಲ.

ಹೀಗಾದರೆ ಹೇಗೆ?
ಒಂದೆಡೆ ಪೋಷಕರ ಇಂಗ್ಲಿಷ್ ವ್ಯಾಮೋಹ, ಮತ್ತೊಂದೆಡೆ ಶಿಕ್ಷಕರ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಕನ್ನಡಶಾಲೆಗಳಲ್ಲಿ ಪಾಠ, ಪ್ರವಚನಗಳು ನಡೆಯುತ್ತಿಲ್ಲ. ಕೆಲವೆಡೆ ಶಿಕ್ಷಕರೇ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿರುವ ಘಟನೆಗಳು ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇವೆ. ಸರ್ಕಾರಿ ಶಾಲೆಗಳು ನೇಪಥ್ಯಕ್ಕೆ ಸರಿಯಲು ಇದೂ ಒಂದು ಕಾರಣ ಎನ್ನಲಾಗುತ್ತಿದೆ. ಅಲ್ಲದೇ ಬಹುತೇಕ ಖಾಸಗಿ ಶಾಲೆಗಳು ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಹಿಡಿತದಲ್ಲಿಯೇ ಇರುವುದರಿಂದ ಸರ್ಕಾರಿ ಶಾಲೆಗಳನ್ನು ನಿಗೂಢವಾಗಿ ಮುಚ್ಚಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏಕರೂಪ ಶಿಕ್ಷಣ ನೀತಿಯನ್ನು ಜಾರಿಗೆ ತಂದು ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು. ಹೀಗೆ ಮಾಡದಿದ್ದರೆ ಶಿಕ್ಷಣ ಕ್ಷೇತ್ರವನ್ನು ಬಲ ಪಡಿಸಲೂ ಆಗುವುದಿಲ್ಲ. ಕನ್ನಡವನ್ನು ಉಳಿಸುವುದೂ ಕಷ್ಟ.

ಹಾಸನ ಜಿಲ್ಲೆಯಲ್ಲಿ ಮುಚ್ಚಿದ ಶಾಲೆಗಳೆಷ್ಟು?
ಎಂಟು ತಾಲೂಕುಗಳಲ್ಲಿ 87 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು (ಎಲ್‌ಪಿಎಸ್), 5 ಹಿರಿಯ ಪ್ರಾಥಮಿಕ ಶಾಲೆಗಳನ್ನು (ಎಚ್‌ಪಿಎಸ್) ಈಗಾಗಲೇ ಮುಚ್ಚಲಾಗಿದೆ. ಹಾಸನ ತಾಲೂಕಿನಲ್ಲಿ 35 ಎಲ್‌ಪಿಎಸ್, 3 ಎಚ್‌ಪಿಎಸ್, ಅರಸೀಕೆರೆಯಲ್ಲಿ 23 ಎಲ್‌ಪಿಎಸ್, ಅರಕಲಗೂಡಿನಲ್ಲಿ 12 ಎಲ್‌ಪಿಎಸ್, ಆಲೂರಿನಲ್ಲಿ ಮೂರು ಎಲ್‌ಪಿಎಸ್, ಹೊಳೆನರಸೀಪುರದಲ್ಲಿ 7 ಎಲ್‌ಪಿಎಸ್, ಸಕಲೇಶಪುರದಲ್ಲಿ 2 ಎಲ್‌ಪಿಎಸ್, 1 ಎಚ್‌ಪಿಎಸ್, ಬೇಲೂರಿನಲ್ಲಿ 4 ಮತ್ತು ಚನ್ನರಾಯಪಟ್ಟಣ ತಾಲೂಕಿನಲ್ಲಿ 1 ಎಲ್‌ಪಿಎಸ್ ಹಾಗೂ 1 ಎಚ್‌ಪಿಎಸ್ ಶಾಲೆಗಳನ್ನು ಮುಚ್ಚಲಾಗಿದೆ.

ಶಿಕ್ಷಕರೂ ಇಲ್ಲ

ಜಿಲ್ಲಾದ್ಯಂತ ಇರುವ 3065 ಸರ್ಕಾರಿ ಎಲ್‌ಪಿಎಸ್‌ಗಳಲ್ಲಿ 3065 ಶಿಕ್ಷಕರಿಬೇಕು. ಆದರೆ, 2757 ಶಿಕ್ಷಕರಿದ್ದು, 308 ಶಿಕ್ಷಕರ ಕೊರತೆ ಇದೆ. ಹಾಗೆಯೇ ಎಚ್‌ಪಿಎಸ್‌ಗಳಲ್ಲಿಯೂ 4803 ಶಿಕ್ಷಕರಿದ್ದು, 492 ಶಿಕ್ಷಕರ ಕೊರತೆ ಇದೆ.  

ಖಾಸಗಿ ಶಾಲೆಗಳ ದರ್ಬಾರ್!
ಹಾಸನ ಜಿಲ್ಲೆಯಲ್ಲಿ 62 ಎಲ್‌ಪಿಎಸ್(ಕಿರಿಯ ಪ್ರಾಥಮಿಕ ಶಾಲೆ), 235 ಎಚ್‌ಪಿಎಸ್(ಹಿರಿಯ ಪ್ರಾಥಮಿಕ ಶಾಲೆ) ಅನುದಾನ ರಹಿತ ಇಂಗ್ಲಿಷ್ ಶಾಲೆಗಳಿದ್ದು, ಅಲ್ಲಿ 65,000 ವಿದ್ಯಾರ್ಥಿಗಳಿದ್ದಾರೆ. 2 ಎಲ್‌ಪಿಎಸ್ ಮತ್ತು 46 ಎಚ್‌ಪಿಎಸ್ ಅನುದಾನಿತ ಖಾಸಗಿ ಶಾಲೆಗಳಲ್ಲಿ 4,500 ಮಕ್ಕಳಿದ್ದಾರೆ. ಆದರೆ 1390 ಎಲ್‌ಪಿಎಸ್ ಮತ್ತು 998 ಎಚ್‌ಪಿಎಸ್ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2,388 ವಿದ್ಯಾರ್ಥಿಗಳು ಮಾತ್ರ ಓದುತ್ತಿದ್ದಾರೆ. ಇದನ್ನು ಅವಲೋಕಿಸಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸರ್ಕಾರಿ ಶಾಲೆಗಳು ಮುಚ್ಚುವುದು ಎಗ್ಗಿಲ್ಲದೇ ಸಾಗುತ್ತದೆ.

ಕೇಂದ್ರೀಯ, ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಬೇರೆ ಬೇರೆ ರೀತಿಯ ಪಠ್ಯವನ್ನು ಕಲಿಸಲಾಗುತ್ತಿದೆ. ಖಾಸಗಿ ಶಾಲೆಗಳಲ್ಲಿ ತಮಗೆ ಬೇಕಾದಂತೆ ಶಿಕ್ಷಣ ನೀಡಲಾಗುತ್ತಿದೆ. ಕನ್ನಡವನ್ನು ಉಳಿಸಿಕೊಳ್ಳುವ ಜತೆಯಲ್ಲಿ ಇಂಗ್ಲಿಷ್ ಅನ್ನು ಸರ್ಕಾರಿ ಶಾಲೆಗಳಲ್ಲಿ ಕಲಿಸುವ ವ್ಯವಸ್ಥೆ ಆಗಬೇಕು.
- ಶಿವೇಗೌಡರು, ಹಾಸನ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ

- ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.