ದರ್ಶನಕ್ಕೆ ಒಂದೇ ದಿನ ಬಾಕಿ
ಕನ್ನಡಪ್ರಭ ವಾರ್ತೆ ಹಾಸನ ನ. 4
ಹಾಸನಾಂಬೆ ದರ್ಶನೋತ್ಸವಕ್ಕೆ 12ನೇ ದಿನವಾದ ಸೋಮವಾರ ಭಕ್ತಸಾಗರವೇ ಹರಿದು ಬಂದಿತ್ತು. ಖ್ಯಾತ ಹಾಸ್ಯ ಕಲಾವಿದ ಹೊನ್ನವಳ್ಳಿ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು.
ಸೋಮವಾರ ದೀಪಾವಳಿ ಹಬ್ಬದ ಪ್ರಯುಕ್ತ ರಜಾ ದಿನವಾದ್ದರಿಂದ ಸಹಸ್ರಾರು ಭಕ್ತರು ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದರು. ಹೀಗಾಗಿ ಸುಮಾರು ಅರ್ಧ ಕಿಲೋಮೀಟರ್ ಉದ್ದದ ಸರತಿ ಸಾಲು ನಿರ್ಮಾಣಣವಾಗಿತ್ತು. ಭಕ್ತರಿಗೆ ಬಿಸಿಲು, ಮಳೆಯಿಂದ ತೊಂದರೆ ಆಗದಂತೆ ಮೇಲು ಹೊದಿಕೆ ಹಾಕಲಾಗಿದೆ. ಅಂಗವಿಕಲರು, ಮಕ್ಕಳು ಸೇರಿದಂತೆ ಅನೇಕರು ಸಾಲಿನಲ್ಲಿ ನಿಂತು ದರ್ಶನ ಮಾಡಿದರು.
ಬೆಳಗ್ಗೆ 6 ರಿಂದ ಮಧ್ಯಾಹ್ನ 1 ಮತ್ತು 3ರಿಂದ ತಡರಾತ್ರಿವರೆಗೂ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಒಂದು ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಕೆಲವರು ದೂರದ ಊರುಗಳಿಂದ ಬಂದು ಸಾಲಿನಲ್ಲಿ ನಿಂತಿದ್ದರೆ, ಕೆಲವರು ಮಧ್ಯೆ ಮಧ್ಯೆ ಬಂದು ದರ್ಶನ ಮಾಡಿ ಹೋಗುತ್ತಿದ್ದುದರ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತರಿಗೆ ಯುವಕರು ಮಜ್ಜಿಗೆ, ನೀರನ್ನು ವಿತರಿಸಿದರು.
ಇದೇ ವೇಳೆ ಚಲನಚಿತ್ರ ಹಾಸ್ಯ ಕಲಾವಿದ ಹೊನ್ನವಳ್ಳಿ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ತಾಯಿ ಹಾಸನಾಂಬೆಯ ದರ್ಶನ ಪಡೆದು ಪುನೀತರಾದರು. ಕೃಷ್ಣ ಅವರು, ಸೋಮವಾರ ಬೆಳಿಗ್ಗೆ ಸ್ನೇಹಿತರೊಂದಿಗೆ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು.
ದೇವಿ ದರ್ಶನಕ್ಕೆ ಮಳೆ ಅಡ್ಡಿ: ದೇವಿಯ ದರ್ಶನಕ್ಕಾಗಿ ಸಹಸ್ರಾರು ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದವರಿಗೆ ಮಳೆರಾಯ ಕೆಲವೊತ್ತು ಅಡಚಣೆ ಉಂಟು ಮಾಡಿತು. ಬೆಳಗ್ಗೆಯಿಂದಲೇ ಬಿಸಿಲು ಮತ್ತು ಮೋಡ ಕವಿದ ವಾತಾವರಣ ಇದ್ದರಿಂದ ಮಳೆ ಬರುವ ನಿರೀಕ್ಷೆ ಇತ್ತು. ಅದರಂತೆ ಸಂಜೆ ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಸುರಿದ ಮಳೆ ಹಾಗೂ ಗಾಳಿಯಿಂದ ದೇವಿಯ ದರ್ಶನಕ್ಕೆ ಕೆಲ ಸಮಯ ಅಡಚಣೆ ಉಂಟಾಯಿತು. ಆದರೂ ಭಕ್ತರು ಮಳೆ ಹಾಗೂ ಗಾಳಿಗೆ ಜಗ್ಗದೆ ದೇವಿ ದರ್ಶನ ಪಡೆದು ಧನ್ಯತಾಭಾವ ಹೊಂದಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

