ಜನವರಿ ಅಂತ್ಯ ಕಾಡಾನೆಗಳ ಸೆರೆ
ಕ.ಪ್ರ.ವಾರ್ತೆ ಹಾಸನ ನ. 5
ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ರೈತರ ಬೆಳೆ, ಆಸ್ತಿ ಪಾಸ್ತಿ, ಪ್ರಾಣಕ್ಕೆ ಹಾನಿ ಮಾಡುತ್ತಿರುವ 30 ಕಾಡಾನೆಗಳ ಸೆರೆಗೆ ಹೈಕೋರ್ಟ್ ಸೂಚನೆ ನೀಡಿದ್ದು, ಜನವರಿ ಅಂತ್ಯದೊಳಗೆ ಈ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಪ್ರಾರಂಭಿಸುವುದಾಗಿ ಅರಣ್ಯ ಸಚಿವ ರಮಾನಾಥ ರೈ ತಿಳಿಸಿದ ರು.
ನಗರದ ಗೆಂಡೆಕಟ್ಟೆ ಅರಣ್ಯಧಾಮದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಕಲೇಶಪುರ, ಆಲೂರು ಮುಂತಾದ ಕಡೆಗಳಲ್ಲಿ ಸುಮಾರು 35 ಕಾಡಾನೆಗಳಿದ್ದು, ಈ ಪೈಕಿ 30 ಕಾಡಾನೆಗಳನ್ನು ಸೆರೆಹಿಡಿಯಲು ಹೈಕೋರ್ಟ್ ಸಮ್ಮತಿ ನೀಡಿದ್ದು, ಹಂತ ಹಂತವಾಗಿ ಆನೆಗಳನ್ನು ಸೆರೆ ಹಿಡಿಯಲಾಗುತ್ತದೆ. ನಂತರ ಆನೆಗಳನ್ನು ದುಬಾರೆ, ಸಕ್ಕರೆಬೈಲಿನಲ್ಲಿರುವ ಆನೆ ಶಿಬಿರಗಳಿಗೆ ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.
ಸದ್ಯ 30 ಕೋಟಿ ಅನುದಾನ ಬಿಡುಗಡೆ: ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೈಕೋರ್ಟ್ ಆನೆಗಳನ್ನು ಸೆರೆ ಹಿಡಿಯಲು ಸೂಚನೆ ನೀಡಿದೆ. ಜೊತೆಗೆ ಆನೆ ಸಮಸ್ಯೆಗೆ ಕಂದಕಗಳ ನಿರ್ಮಾಣ ಮತ್ತು ಸೋಲಾರ್ ತಂತಿಬೇಲಿ ಹಾಕಲು 30 ಕೋಟಿ ರು. ಅನುದಾನ ಮೀಸಲಿಡಲಾಗಿದೆ. ಕೆಲವೆಡೆ ಸೋಲಾರ್ ತಂತಿ ಬೇಲಿ ವಿಫಲವಾಗಿರುವುದರಿಂದ ರೇಲ್ವೆ ಹಳಿಗಳನ್ನು ಬಳಸಿಕೊಂಡು ಫೆನ್ಸಿಂಗ್ ಹಾಕುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಇದಕ್ಕಾಗಿ 100 ಕೋಟಿ ರು.ಅನುದಾನ ಅವಶ್ಯಕತೆ ಇದ್ದು, ಸದ್ಯಕ್ಕೆ 30 ಕೋಟಿ ರು.ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ನಾಗರಹೊಳೆಯ ಅಭಯಾರಣ್ಯದಲ್ಲಿ ಈಗಾಗಲೇ 71 ಕಿ.ಮೀ. ನಷ್ಟು ಕಂದಕ (ಇಪಿಟಿ)ಗಳನ್ನು ನಿರ್ಮಾಣ ಮಾಡಿದ್ದು, ಇದರಿಂದ ಸಾಕಷ್ಟು ಪ್ರಯೋಜನವಾಗಿದೆ. ಅದೇ ರೀತಿ ಇನ್ನು 41 ಕಿಮೀ. ನಷ್ಟು ಕಂದಕಗಳನ್ನು ನಿರ್ಮಿಸಿ ಸೋಲಾರ್ ತಂತಿಬೇಲಿ ಹಾಕಲಾಗುತ್ತದೆ ಎಂದು ನುಡಿದರು.
ರಾಜ್ಯದಲ್ಲಿ ಪ್ರಸ್ತುತ 6 ಸಾವಿರ ಕಾಡಾನೆಗಳಿವೆ. ಆನೆ ಸಂತತಿ ಹೆಚ್ಚಾಗಿರುವುದರಿಂದ ಕಾಡಿನಲ್ಲಿ ಅವುಗಳಿಗೆ ಆಹಾರ ಸಾಕಾಗದ ಕಾರಣ ಜನನಿಬಿಡ ಪ್ರದೇಶದತ್ತ ಆನೆಗಳು ಬರುತ್ತಿವೆ. ಅದಕ್ಕಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ಬಗ್ಗೆ ಎರಡು ಬಾರಿ ಕ್ಯಾಬಿನೆಟ್ನಲ್ಲಿ ಚರ್ಚೆ ಕೂಡಾ ನಡೆದಿದೆ. ಕಂದಾಯ ಇಲಾಖೆಗೆ ಸೇರಿದ ಪ್ರದೇಶ ಅರಣ್ಯಕ್ಕೆ ಹತ್ತಿರದಲ್ಲಿದ್ದರೆ ಅಂತಹ ಪ್ರದೇಶದಲ್ಲಿರುವ ಮನೆಗಳನ್ನು ಬೇರೆಡೆ ಸ್ಥಳಾಂತರಿಸುವಂತಹ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದ್ದರೆ ಅಂತಹದಕ್ಕೆ ಪರಿಹಾರ ನೀಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆನೆ ಕಾರಿಡಾರ್ ಚಿಂತನೆ: ಆನೆ ಕಾರಿಡಾರ್ ನಿರ್ಮಾಣ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು, ಈಗಾಗಲೇ 2300 ಎಕರೆ ಪ್ರದೇಶವನ್ನು ರೈತರು ನೀಡಿದ್ದಾರೆ. ಖಾಸಗಿ ಭೂಮಿಗೆ ಪರಿಹಾರ ನೀಡುವುದಾಗಿ ಹೇಳಿದ ಅವರು, ಸರ್ಕಾರಿ ಭೂ ಒತ್ತುವರಿಯಾಗಿದ್ದರೆ ಅದಕ್ಕೆ ಪರಿಹಾರ ನೀಡಲು ಬರುವುದಿಲ್ಲ ಎಂದರು.
ಕಾನೂನಿನ ಮುಂದೆ ಎಲ್ಲರು ಒಂದೇ: ಕಾನೂನಿನ ಮುಂದೆ ಯಾರು ದೊಡ್ಡವರಲ್ಲ ಎಂದ ಅವರು, ಅಕ್ರಮ ಎಸಗಿರುವಂತಹ ಯಾವುದೇ ಅಧಿಕಾರಿಗಳನ್ನು ನಾವು ರಕ್ಷಿಸುವಂತ ಕಾರ್ಯ ಮಾಡುತ್ತಿಲ್ಲ ಎಂದ ಅವರು, ಅಷ್ಟೇ ಅಲ್ಲದೆ ಅಂತಹ ಅಧಿಕಾರಿಗಳ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇಲಾಖೆಯು ಜನಸ್ನೇಹಿ, ಪರಿಸರ ಸ್ನೇಹಿಯಾಗಿದೆ ಎಂದು ತಿಳಿಸಿದರು.
ಸರ್ಕಾರದ ಯೋಜನೆ ಯಶಸ್ವಿ: ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವು ಯಶಸ್ವಿಯಾಗಿದೆ. ಹಿಂದೆ ಅಕ್ಷರ ದಾಸೋಹ ಜಾರಿಗೆ ತಂದಾಗ ಯಶಸ್ವಿಯಾಗಲಿಲ್ಲ ಎಂದು ಕೆಲವರು ಟೀಕಿಸಿದರು. ಪ್ರಸ್ತುತ ದೇಶದಾದ್ಯಂತ ಈ ಯೋಜನೆ ಯಶಸ್ವಿಯಾಗಿದೆ. ಆದ್ದರಿಂದ ಶಾದಿ ಭಾಗ್ಯ ಯೋಜನೆ ಸಹ ಯಶಸ್ವಯಾಗಲಿದ್ದು, ಅದು ಒಂದು ಸಮುದಾಯಕ್ಕೆ ಸೀಮಿತವಾಗಬೇಕೇ ಅಥವಾ ಬೇಡವೆ ಎಂಬುದನ್ನು ಮುಖ್ಯಮಂತ್ರಿಗಳು ತೀರ್ಮಾನಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

