ಸೋಲಾರ್ ಬೇಲಿಗೆ ರು. 30 ಕೋಟಿ ಬಿಡುಗಡೆ
ಕನ್ನಡಪ್ರಭ ವಾರ್ತೆ ಆಲೂರು ನ. 5
ಕಾಡಾನೆಗಳು ನಾಡಿಗೆ ಬಾರದಂತೆ ತಡೆಯಲು ಕಂದಕ ಹಾಗು ಸೋಲಾರ್ ಬೇಲಿ ನಿರ್ಮಿಸಲು 30 ಕೋಟಿ ರು. ಬಿಡುಗಡೆಯಾಗಿದ್ದು ಮುಂದಿನ ದಿನಗಳಲ್ಲಿ 100 ಕೋಟಿ ಮಂಜೂರಾಗಲಿದೆ. ಈ ಯೋಜನೆಯೂ ಫಲಕಾರಿಯಾಗದಿದ್ದಲ್ಲಿ ರೈಲ್ವೆ ಹಳಿಗಳಿಂದ ತಡೆಗೋಡೆ ನಿರ್ಮಾಣ ಮಾಡುವ ಕಾರ್ಯಕ್ಕೆ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಅರಣ್ಯ ಸಚಿವ ರಮಾನಾಥ್ ರೈ ತಿಳಿಸಿದ್ದಾರೆ.
ಮಂಗಳವಾರ ರಾಯರಕೊಪ್ಪಲು ಸಮುದಾಯ ಭವನದಲ್ಲಿ ನಡೆದ ಸಾರ್ವಜನಿಕ ಸಂವಾದ ಸಭೆಯಲ್ಲಿ ಮಾತನಾಡಿದ ಸಚಿವರು, ಕಾಡಾನೆ ಹಾವಳಿಯಿಂದ ಈ ಭಾಗದ ಜನರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಇನ್ನು ಎರಡು ದಿನ ಜಿಲ್ಲೆಯಲ್ಲಿದ್ದು ಸಕಲೇಶಪುರ-ಆಲೂರು-ಬೇಲೂರಿನಲ್ಲಿ ಜನತೆ ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಹೇಳಿದರು.
30 ವರ್ಷಗಳಿಂದ ಹಾವಳಿ: ತಾಲೂಕಿನ ಕುಂದೂರು ಕೆ.ಹೊಸಕೋಟೆ ಹೋಬಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಹಾಗೂ ಸಕಲೇಶಪುರ ತಾಲೂಕಿನ ವಿವಿಧೆಡೆಗಳಲ್ಲಿ 30 ವರ್ಷಗಳಿಂದ ನಡೆಯುತ್ತಿರುವ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ನೀಡಲು ಜನವರಿ ತಿಂಗಳಿನಲ್ಲಿ ಇಲ್ಲಿರುವ ಎಲ್ಲಾ ಆನೆಗಳನ್ನು ಹಿಡಿದು ಸ್ಥಳಾಂತರಿಸಲು ಕಾರ್ಯಾಚರಣೆ ಪ್ರಾರಂಭಿಸಲಾಗುವುದೆಂದು ಅರಣ್ಯ ಸಚಿವ ರಮಾನಾಥ ರೈ ಭರವಸೆ ನೀಡಿದರು.
ಈಗಾಗಲೇ ಹೈಕೋರ್ಟ್ ಆನೆಗಳನ್ನು ಹಿಡಿದು ಸ್ಥಳಾಂತರಿಸಲು ಸೂಚನೆ ನೀಡಿದ್ದು ಮುಂದಿನ ಆರು ತಿಂಗಳೊಳಗೆ ಎಲ್ಲಾ ಆನೆಗಳನ್ನು ಹಿಡಿಯಲು ಕ್ರಮ ಕೈಗೊಳ್ಳಲಾಗುವುದು. ಈ ಮೊದಲು ಹಿಡಿದು ಬೇರೆಡೆಗೆ ಸ್ಥಳಾಚಿತರಿಸಿದ ಆನೆಗಳು ಪುನ- ಇದೇ ಅರಣ್ಯಕ್ಕೆ ಬರುತ್ತಿದ್ದು ಅದಕ್ಕಾಗಿ ಶೀಘ್ರ ಆನೆ ಕ್ಯಾಂಪಪ್ನಿರ್ಮಿಸಿ ಎಲ್ಲಾ ಆನೆಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.
ಪರಿಹಾರ ಮೊತ್ತ ಅತ್ಯಲ್ಪ: ಬೆಳೆ ನಷ್ಟಕ್ಕೆ ಈಗ ನೀಡುತ್ತಿರುವ ಪರಿಹಾರ ಮೊತ್ತ ಅತ್ಯಲ್ಪವಾಗಿದೆ. ನೈಜ ನಷ್ಟಕ್ಕೆ ನೈಜ ಪರಿಹಾರ ಒದಗಿಸಲು ಈ ಹಣಕಾಸು ವರ್ಷದಿಂದಲೇ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪೈಲೆಟ್ ಯೋಜನೆಯಲ್ಲಿ ನಾಗರಹೊಳೆ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ನಿಷ್ಕ್ರಿಯ ರೈಲ್ವೆ ಹಳಿಗಳಿಂದ ತಡೆ ಗೋಡೆ ನಿರ್ಮಿಸುವ ಕಾರ್ಯ ಚಾಲ್ತಿಯಲ್ಲಿದೆ. ಇದು ಫಲಕಾರಿಯಾದಲ್ಲಿ ಈ ಭಾಗಕ್ಕೂ ಯೋಜನೆಯನ್ನು ಅಳವಡಿಸಲಾಗುವ್ಯದೆಂದ ಅವರು ಸಕಲೇಶಪುರ ತಾಲೂಕಿನಲ್ಲಿ 2300 ಎಕರೆ ಪ್ರದೇಶದಲ್ಲಿ ಆನೆ ಕಾರಿಡಾರ್
ನಿರ್ಮಿಸಲು ಸ್ವಯಂಪ್ರೇರಿತರಾಗಿ ತಮ್ಮ ಜಮೀನನ್ನು ನೀಡಲು ಮುಂದೆ ಬಂದಿರುವ ವಿಚಾರ ತಮ್ಮ ಗಮನಕ್ಕೆ ಬಂದಿದ್ದು ಈ ಸಂಬಂಧವಾಗಿ ಸಕಲೇಶಪುರದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಅರಣ್ಯ ಇಲಾಖೆಯ 60 ಕ್ಕೂ ಹೆಚ್ಚು ಮಂದಿ ನೌಕರರು ಸೇವೆ ನಿರ್ವಹಿಸುವಾಗ ಮೃತಪಟ್ಟಿದ್ದು ನೌಕರರ ಹಿತ ರಕ್ಷಣೆಯು ನಮ್ಮ ಜವಾಬ್ದಾರಿಯಾಗಿದೆ. ಹಾಗೂ ರೈತರ ಜಮೀನಿನಲ್ಲಿ ಬೆಳೆದಿರುವ ಮರಗಳನ್ನು ಮಾರಾಟ ಮಾಡಲು ಹೊಸ ಸುತ್ತೋಲೆ ಹೊರಡಿಸುವ ಭರವಸೆ ನೀಡಿದರು. ಈ ಭಾಗದಲ್ಲಿ ವನ್ಯ ಜೀವಿ ಉಪ ವಿಭಾಗ ತೆರೆಯುವವುದಾಗಿ ತಿಳಿಸಿದರು.
5 ವರ್ಷದ ಹೋರಾಟದ ಫಲ: ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ ಈ ಭಾಗದ ಸಮಸ್ಯೆಯನ್ನು ಬಗೆಹರಿಸಲು ಹೈಕೋರ್ಟ್ ಆನೆಗಳನ್ನು ಹಿಡಿಯಲು ಅನುಮತಿ ನೀಡಿದ್ದು 5 ವರ್ಷದ ಹೋರಾಟದ ಫಲ ಈಗ ದೊರೆತಿದೆ. ತಡ ಮಾಡದೆ ಮುಂಗಾರು ಪ್ರಾರಂಭಕ್ಕೆ ಮುಂಚೆ ಆನೆಗಳನ್ನು ಹಿಡಿದು ಸ್ಥಳಾಂತರಿಸಬೇಕು ಶೀಘ್ರ ಆನೆ ಕಾರಿಡಾರ್ ನಿರ್ಮಿಸಲು ಬಿಸಿಲೆ,ವಣಗೂರು, ಹೊಂಗಡಹಳ್ಳ ಸುತ್ತ ಮುತ್ತಲ ಪ್ರದೇಶದ 2300 ಎಕರೆ ಜಾಗವನ್ನು ಶೀಘ್ರ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬೇಕು ಹಾಗು ಈ ಭಾಗದ ರೈತರಿಗೆ ಬಂದೂಕು ಲೈಸೆನ್ಸ್ ನೀಡಬೇಕೆಂದರು.
ತಾಲೂಕು ಕಾಂಗ್ರೆಸ್ ಅಧ್ಯಕ್ಷ ಜಿ.ಆರ್.ರಂಗನಾಥ್ ಮಾತನಾಡಿ, ಸರ್ಕಾರದ ಪರಿಹಾರ ಅವೈಜ್ಞಾನಿಕವಾಗಿದ್ದು ಶೀಘ್ರ ಸೂಕ್ತ ಪರಿಹಾರ ನೀಡಿ ಆನೆ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಶೀಘ್ರ ಒದಗಿಸುವಂತೆ ಒತ್ತಾಯಿಸಿದರು.
ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ಈ ಭಾಗದಲ್ಲಿ ಆನೆ ಹಾವಳಿಯಿಂದಾಗಿ ಜನತೆಗೆ ಬಿ.ಪಿ.ಶುಗರ್ ನಂತಹ ಕಾಯಿಲೆಗಳು ಬಂದಿವೆ. ಶೀಘ್ರ ಆನೆಗಳನ್ನು ಹಿಡಿದು ಶ್ರೀಲಂಕಾ ಮಾದರಿಯಲ್ಲಿ ಆನೆ ಧಾಮ ನಿರ್ಮಿಸಬೇಕೆಂದರು.
ಪರಿಸರವಾದಿ ಎಚ್.ಪಿ.ಮೋಹನ್ ಮಾತನಾಡಿ, ಕಾಫಿ ಬೆಳೆ ಗಣನೀಯವಾಗಿ ಕುಸಿದ ಪರಿಣಾಮ ಬೆಳೆಗಾರರು ಕಂಗಾಲಾಗಿದ್ದು, ಆರ್ಥಿಕ ಮಟ್ಟವು ತೀರಾ ಕುಸಿದಿದು ಅವರು ತೋಟದಲ್ಲಿ ಬೆಳೆದಿರುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯವರು ತೊಂದರೆ ನೀಡುತ್ತಿದ್ದು ಕಾನೂನು ಸಡಿಲಗೊಳಿಸಿ ಮರಕಡಿಯಲು ಅನುಮತಿ ನೀಡುವಂತೆ ಕೋರಿದರು.
ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಚ್.ವಿ.ಚಂದ್ರೇಗೌಡ ,ಜಿ.ಪಂ.ಸದಸ್ಯ ಪುರುಷೋತ್ತಮ್, ಮುಖಂಡ ಕೆ.ಎಸ್. ಮಂಜೇಗೌಡ, ಎಸ್.ಎಂ.ಆನಂದ್, ಕಬ್ಬಿನಹಳ್ಳಿ ಜಗದೀಶ್, ಎಚ್.ಕೆ.ಜವರೇಗೌಡ, ತಾಲೂಕು ಪಂಚಾಯಿತಿ ಸದಸ್ಯ ಜೀವನ್, ಕಾಂತರಾಜ್, ಮಾದಿಹಳ್ಳಿ ಚಂದ್ರೇಗೌಡ, ರವಿ ಚನ್ನಣನವರ್,ಎ.ಸಿ ಶ್ರೀ ವಿದ್ಯಾ, ತಹಸೀಲ್ದಾರ್ ಶಾರದಾಂಬ, ಆರ್.ಎಫ್.ಓ.ದೇವರಾಜ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

