ಹಾಸನ

ಇಂದು, ನಾಳೆ ಬೃಹತ್ ಧರಣಿ

Published On :

ಹಾಸನ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತರಿಂದ ನ.7, 8ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು 48 ಗಂಟೆಗಳ ಕಾಲ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಕರ್ನಾಟಕ ಪ್ರಾಂತ ರೈತ ಸಂಘ, ಬಗರ್ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಎಚ್.ಆರ್.ನವೀನ್ಕುಮಾರ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೇಲ್ನೋಟಕ್ಕೆ ರೈತಪರವಾಗಿರುವಂತೆ ಬಿಂಬಿಸಿಕೊಳ್ಳುತ್ತಿವೆ. ಆದರೆ ರೈತವಿರೋಧಿಯಾದ ದೊಡ್ಡ ಬಂಡವಾಳದಾರರು ಮತ್ತು ಭಾರಿ ಶ್ರೀಮಂತರ ಪರವಾದ ಜಾಗತೀಕರಣದ ನೀತಿಗಳನ್ನೇ ಮುಂದುವರೆಸುತ್ತಿವೆ. ಪರಿಣಾಮವಾಗಿ, ದೇಶದಲ್ಲಿ ಕೃಷಿ ಉತ್ಪಾದನೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಪ್ರತಿ ಅರ್ಧ ಗಂಟೆಗೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ.
ಗ್ರಾಮಾಂತರದಲ್ಲಿ ಶೇ.85ರಷ್ಟಿರುವ ಬಡ ಹಾಗೂ ಮದ್ಯಮ ರೈತರು ಮತ್ತು ಕೂಲಿಕಾರರ ದಿನದ ತಲಾ ಆದಾಯ 10ಕ್ಕೂ ಕಡಿಮೆ ಇದ್ದು, ಬಹುತೇಕರು ಅಪೌಷ್ಟಿಕತೆ ಹಾಗೂ ಹಸಿವಿನಿಂದ ಸಾವಿಗೆ ತುತ್ತಾಗುತ್ತಿದ್ದಾರೆ.
ಶೇ.60ಕ್ಕೂ ಹೆಚ್ಚಿನ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಗುಡಿಸಲುಗಳಲ್ಲಿ 03-04 ಕುಟುಂಬಗಳು ಒಟ್ಟೊಟ್ಟಿಗೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ವಿಷಾದಿಸಿದ್ದಾರೆ. ಆದ್ದರಿಂದ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಮತ್ತು ಕೂಲಿಕಾರರ ವಿರೋಧ ನಿಲುವನ್ನು ತೊರೆಯಬೇಕು. ಬಗರ್ಹುಕುಂ ಮತ್ತು ಅರಣ್ಯ ಭೂಮಿ ಹಕ್ಕು ನೀಡಬೇಕು. ತೆಂಗಿನ ಬೆಳೆಗೆ ಪರಿಹಾರ, ಬಡವರಿಗೆ ಉಚಿತ ಮನೆ, ನಿವೇಶನ ನೀಡಬೇಕು. ಜಿಲ್ಲೆಯಲ್ಲಿ ಆಲೂಗಡ್ಡೆ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ  ಕೆಪಿಆರ್ಎಸ್, ಬಗರ್ಹುಕುಂ ಸಾಗುವಳಿದಾರರ ಹೋರಾಟ ಸಮಿತಿಯಿಂದ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅಹೋ ರಾತ್ರಿ ಬೃಹತ್ ಪ್ರತಿಭಟನಾ ಧರಣಿ ನಡೆಸಲು ತೀರ್ಮಾನಿಸಲಾಗಿ ಎಂದಿದ್ದಾರೆ.
ಎಲ್ಲ ರೈತರು, ಕೂಲಿಕಾರರು, ನಾಗರಿಕರು ಅಂದು ಹಾಸನದ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಯುವ ಈ ಐತಿಹಾಸಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಲು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.