ಹಾಸನ

ಲೋಕದ ಅನುಭವದ ಅಭಿವ್ಯಕ್ತಿಯೇ ಕಾವ್ಯ: ಚನ್ನೇಗೌಡ

Published On :

ಹಾಸನ: ಕವಿಯ ಮನಸ್ಸು ಎಲ್ಲರಲ್ಲೂ ಇರುತ್ತದೆ. ಆದರೆ ಕೆಲವರು ಮಾತ್ರ ಅಭಿವ್ಯಕ್ತಿಪಡಿಸಬಲ್ಲವರಾಗಿರುತ್ತಾರೆ ಎಂದು  ಸಾಹಿತಿ ಎಚ್.ಎಲ್.ಚನ್ನೇಗೌಡ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಕನ್ನಡ ವಿಭಾಗ ಹಾಗೂ ಪ್ರೇರಣ ವಿಕಾಸ ವೇದಿಕೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಸ್ವರಚಿತ ಕವನ ವಾಚನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಅಂತರಂಗದ ಬೇಗೆಯನ್ನು ಹೊರ ಹಾಕುವುದೇ ಕವಿತೆಯ ಕೆಲಸ. ಘಟನೆ, ವ್ಯಕ್ತಿ, ಪ್ರಕೃತಿ ಯಾವುದೇ ಇರಲಿ, ಆದರೆ ತುಡಿತ ಮಾತ್ರ ಇರಲೇಬೇಕು. ಪ್ರಾಚೀನ ಕಾವ್ಯ ಪರಂಪರೆಯೊಂದಿಗೆ ಆಧುನಿಕ ಕಾವ್ಯ ಪರಂಪರೆ ಸಾಗಬೇಕಾಗಿದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ಯುವಜನತೆಯಲ್ಲಿ ಸೃಜನಶೀಲತೆ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ. ಲೋಕದ ಅನುಭವದ ವಿಶಿಷ್ಟ ಅಭಿವ್ಯಕ್ತಿಯೇ ಕಾವ್ಯ. ಭಾಷೆ ಯಾವುದೇ ಇರಲಿ. ಅದರ ಭಾವವೇ ಕಾವ್ಯವಾಗುತ್ತದೆ ಎಂದರು.
ಕವಯತ್ರಿ ರೂಪ ಹಾಸನ ಮಾತನಾಡಿ, ಕಣ್ಣಿಗೆ ಕಂಡದ್ದನ್ನು ಬರೆದರೆ ಅದು ವರದಿಯಾಗಬಹುದೇನೋ, ಅದನ್ನು ಮೀರಿದ ಸತ್ಯ ಕಟ್ಟಿಕೊಟ್ಟರೆ ಮಾತ್ರ ಕಾವ್ಯ ಆಗುತ್ತದೆ. ಸೂಕ್ಷ್ಮಾತಿಸೂಕ್ಷ್ಮ ಗ್ರಹಿಕೆಯನ್ನು ಅಭಿವ್ಯಕ್ತಿಗೊಳಿಸಬೇಕು. ಹೃದಯದ ಆಳದಿಂದ ಮೂಡಿಬರಬೇಕು. ನಮ್ಮೊಳಗಿನ ಅನನ್ಯ ಅನುಭವದ ಅಭಿವ್ಯಕ್ತಿಯೇ ಕಾವ್ಯವಾಗುತ್ತದೆ ಎಂದರು.
ಸಹಾಯಕ ಪ್ರಾಧ್ಯಾಪಕಿ ಪಿ.ಭಾರತಿದೇವಿ ಮಾತನಾಡಿ, ವ್ಯವದಾನದಿಂದ ಗ್ರಹಿಸಲಾರದ ದ್ರವ್ಯ ಕಾವ್ಯವಾಗಲಾರದು. ನಿರಂತರ ಓದು, ಪರಿಶ್ರಮ ಬೇಕಾಗುತ್ತದೆ. ಬರವಣಿಗೆ ಎನ್ನುವುದು ಒಂದು ಶಿಸ್ತು. ಕವಿಗಳಾಗುವುದೆಂದರೆ ಮನುಷ್ಯನಾಗುವುದು ಎಂದರ್ಥ. ಸಾಮಾಜಿಕ ಬದ್ಧತೆ ಮತ್ತು ಬರಹ ಬದ್ಧತೆ ಒಳ್ಳೆಯ ಕಾವ್ಯ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಐ.ಎಂ.ಮೋಹನ್ ಮಾತನಾಡಿ, ಸಂವೇದನೆಗಳ ಅಭಿವ್ಯಕ್ತಿಯೇ  ಕಾವ್ಯ. ಕವಿ ಮನಸ್ಸಿಗೆ ಪರಿಸರದ, ಸಮಾಜದ ಆಗುಹೋಗುಗಳ ಗ್ರಹಿಕೆ ಬಹಳ ಮುಖ್ಯವಾಗುತ್ತದೆ ಎಂದರು.
ಕಾರ್ಯಕ್ರಮ ಸಂಚಾಲಕ ಪ್ರೊ. ರಾಘವೇಂದ್ರ ಕರ್ಜೆ ಇದ್ದರು. ಶೃತಿಶ್ರೀ ಪ್ರಾರ್ಥಿಸಿದರು. ಕೆ.ಆರ್. ಮುರಳೀಧರ್ ಸ್ವಾಗತಿಸಿದರು. ಕಾಂತರಾಜು ವಂದಿಸಿದರು. ಎಚ್.ವಿ.ಗಿರೀಶ್ ನಿರೂಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.