ಹಾಸನ

'ಕೈ' ಮಂತ್ರಿಗಳಿಂದ ಜಿಲ್ಲೆ ಶಾಸಕರಿಗೆ ಅಗೌರವ

Published On :

ಕ.ಪ್ರ.ವಾರ್ತೆ    ಹಾಸನ    ನ. 7
ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಜಿಲ್ಲೆಯ ಶಾಸಕರಿಗೆ ಅಗೌರವ ತೋರಿಸುವ ಮೂಲಕ ಜನತೆಯನ್ನು ಅವಮಾನಿಸಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಶೋಭೆ ತರುವಂಥದ್ದಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಸಾರ್ವಜನಿಕ ಸಮಸ್ಯೆಗಳ ಪರಿಶೀಲನೆಗೆ ಬರುವ ಮಂತ್ರಿ ಮಹೋದಯರು ಸ್ಥಳೀಯ ಕ್ಷೇತ್ರದ ಶಾಸಕರಿಗೆ ತಿಳಿಸದೇ ಕಾಂಗ್ರೆಸ್ ಮುಖಂಡರನ್ನು ಕರೆದುಕೊಂಡು ಹೋಗುತ್ತಾರೆ. ಸಕಲೇಶಪುರಕ್ಕೆ ಹೋದಾಗ ಅರಣ್ಯ ಸಚಿವರು ಅಲ್ಲಿಯ ಸ್ಥಳೀಯ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರನ್ನು ಕಾರಿನಿಂದ ಇಳಿಸಿ ಬೇರೆ ಕಾರಿನಲ್ಲಿ ಬರುವಂತೆ ಹೇಳಿ, ತಮ್ಮ ಪಕ್ಷದ ಮುಖಂಡರನ್ನು ಕರೆದುಕೊಂಡು ಹೋಗುತ್ತಾರೆ. ಇದು ಪ್ರಜಾತಂತ್ರವನ್ನು ಗೌರವಿಸುವ ದಾರಿಯಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿಷಾದಿಸಿದರು.
ಕಡೂರಿಗೆ ಹೋಗುವ ಸಚಿವರು ಅಲ್ಲಿನ ಶಾಸಕ ದತ್ತ ಅವರಿಗೆ ಕಾರ್ಯಕ್ರಮದ ಮಾಹಿತಿ ನೀಡುವುದಿಲ್ಲ. ರಸ್ತೆ ಕಾಮಗಾರಿನೋ, ಇಲಾಖೆಯ ಕಾರ್ಯ ವೈಖರಿ ಪರಿಶೀಲನೆ ನಡೆಸಲು ಸಚಿವ ಮಹಾಶಯರು ಹಠಾತ್ ಭೇಟಿ ಕೊಡಲಿ. ಯಾರು ಬೇಡವನ್ನಲಾಗುವುದಿಲ್ಲ. ಆದರೆ ಸಾರ್ವಜನಿಕರ ಸಮಸ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಬಂದಾಗ ಸ್ಥಳೀಯ ಶಾಸಕರಿಗೆ ತಿಳಿಸಬೇಕು. ಹಾಗೇ ಮಾಡದಿರುವುದು ಕ್ಷೇತ್ರದ ಲಕ್ಷಾಂತರ ಮತದಾರರಿಗೆ ಮಾಡುವ ಅವಮಾನವಲ್ಲದೇ ಬೇರೇನೂ ಅಲ್ಲ. ಅಧಿಕಾರ ಶಾಶ್ವತ ಅಲ್ಲ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.
ಏನು ಪಾಪ ಮಾಡಿದ್ದಾರೆ: ಕೇಂದ್ರದಲ್ಲಿ ಯುಪಿಎ ಸರ್ಕಾರದ ಪರ ತಮ್ಮ ಪಕ್ಷ ಓಟ್ ಮಾಡಿದ್ದು ಇದಕ್ಕೇನಾ ಎಂದು ಪ್ರಶ್ನಿಸಿದ ಗೌಡರು, ಹಾಸನ ಜಿಲ್ಲೆ ಜನತೆ ಏನು ಪಾಪ ಮಾಡಿದ್ದಾರೋ ಗೊತ್ತಿಲ್ಲ. ಹಾಸನ- ಬೆಂಗಳೂರು ಮಾರ್ಗ ನಿರ್ಮಾಣ ಕಾಮಗಾರಿ 17 ವರ್ಷಗಳಾದರೂ ಪೂರ್ಣಗೊಂಡಿಲ್ಲ. ಹಾಸನ ನಗರದ ಹೈಟೆಕ್ ಬಸ್ ನಿಲ್ದಾಣದ ಬಳಿ ಮೇಲ್ಸುತುವೆ ನಿರ್ಮಾಣ ಮಾಡಲು ರೇಲ್ವೆ ಅಧಿಕಾರಿಗಳನ್ನು ಕರೆ ತಂದು ಸ್ಥಳ ತೋರಿಸಿ, ಹಣ ಬಿಡುಗಡೆ ಮಾಡಲು ಕೋರಲಾಯಿತು. ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೋರಲಾಯಿತು. ಮತ್ತೋರ್ವ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ಮನೆಗೆ ಅಲೆದು ಮನವಿ ಸಲ್ಲಿಸಲಾಯಿತು. ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಹಾಸನ ಜಿಲ್ಲೆಯ ರಸ್ತೆಗಳನ್ನು ನೋಡಿದರೆ ಹೇಸಿಗೆ ಆಗುತ್ತದೆ. ಅಷ್ಟರ ಮಟ್ಟಿಗೆ ಹದಗೆಟ್ಟಿವೆ. ಪ್ರಚಾರದ ಗೀಳಿಗಾಗಿ ಶಾಸಕರಿಗೆ ಅಗೌರವ ತೋರಿಸುವುದು ಸಲ್ಲದು. ಅರಣ್ಯ ಇಲಾಖೆ ಪ್ರಧಾನ ಸಂರಕ್ಷಣಾಧಿಕಾರಿ ದೀಪಕ್ ಶರ್ಮ ಅವರು ಮೂರೋ, ನಾಲ್ಕೋ ಕಾಡಾನೆಗಳನ್ನು ಸೆರೆ ಹಿಡಿಯಬಹುದು ಎಂದು ಹೇಳಿದರೆ ಅರಣ್ಯ ಸಚಿವರು ಎಲ್ಲ 25 ಆನೆಗಳನ್ನು ಹಿಡಿದು ಸ್ಥಳಾಂತರಿಸಲಾಗುವುದು ಎನ್ನುತ್ತಾರೆ. ಒಂದೇ ಇಲಾಖೆಯಿಂದ ಹೀಗೆ ಭಿನ್ನ ಹೇಳಿಕೆ ವ್ಯಕ್ತವಾದರೆ, ಸಮಸ್ಯೆ ಬಗೆಹರಿಯುತ್ತದೆಯೇ ಎಂದು ಗೌಡರು ಪ್ರಶ್ನಿಸಿದರು.
ಚುನಾವಣೆ ವೇಳೆ ಹೋರಾಟ ಇದ್ದದ್ದೇ. ಜನರಿಗೆ ಯಾರನ್ನು ಗೆಲ್ಲಿಸಬೇಕು ಎಂಬುದು ಗೊತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬಂದು 60 ವರ್ಷಗಳಾಗಿವೆ. ಯಾರೂ ದಡ್ಡರಲ್ಲ. ಮತದಾರರಿಗೆ ಸಾಕಷ್ಟು ತಿಳಿವಳಿಕೆ ಇದೆ ಎಂಬುದನ್ನು ಕಾಂಗ್ರೆಸ್ ಮಂದಿ ಅರಿತು ನಡೆಯಬೇಕು. ಇಲ್ಲ ಸಲ್ಲದ ಕಾರಣಗಳಿಗೆ ಜನಪ್ರತಿನಿಧಿಗಳನ್ನು ಅವಮಾನಿಸುವ ಕೆಲಸ ಮಾಡಬಾರದು ಎಂದರು.
ಶಾಸಕ ಎಚ್.ಎಸ್. ಪ್ರಕಾಶ್, ಮಾಜಿ ಶಾಸಕ ಬಿ.ವಿ. ಕರೀಗೌಡ, ಮುಖಂಡರಾದ ಕೆ.ಎಂ.ರಾಜೇಗೌಡ, ಹೊನ್ನಾವಳ್ಳಿ ಸತೀಶ್, ಸಿ.,ಆರ್. ಶಂಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.