ವೈದ್ಯಕೀಯ ಶಿಕ್ಷಣ ಲೋಪಕ್ಕೆ ಹೊಸ ಲೇಪ: ಸಚಿವ ಶರಣ
ಕ.ಪ್ರ.ವಾರ್ತೆ ಹಾಸನ ನ. 7
ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದ ಸೀಟುಗಳ ಹಂಚಿಕೆ, ಪರೀಕ್ಷಾ ವಿಧಾನ, ಮೀಸಲಾತಿ ವ್ಯವಸ್ಥೆ ಮತ್ತು ಶುಲ್ಕ ಪದ್ಧತಿಯಲ್ಲಿ ಇರುವ ಲೋಪ ಸುಧಾರಿಸಲು ಹೊಸ ನೀತಿಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಹೊಸ ನೀತಿ ಪ್ರಕಾರ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ 2 ಸಮಿತಿಗಳು ಇರುತ್ತವೆ. ಒಂದು ಸಮಿತಿ ಶುಲ್ಕ ನಿಗದಿ ಬಗ್ಗೆ ನಿರ್ಧರಿಸಿದರೆ, ಮತ್ತೊಂದು ಸಮಿತಿ ಪರೀಕ್ಷೆ ವ್ಯವಸ್ಥೆ ಮತ್ತು ಮೀಸಲಾತಿ ವ್ಯವಸ್ಥೆಯನ್ನು ಸುಧಾರಿಸಲು ತೀರ್ಮಾನ ತೆಗೆದುಕೊಳ್ಳುತ್ತದೆ. ಸಮಿತಿಗಳ ಸೂಚನೆಯಂತೆ ಶುಲ್ಕ, ಪರೀಕ್ಷೆ, ಸೀಟುಗಳ ಮೀಸಲಾತಿ ಇರಬೇಕಾಗುತ್ತದೆ. ಮುಂದಿನ ವರ್ಷ ಈ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಾಮಾಣಿಕ ಯತ್ನ ಮಾಡಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಖಾಸಗಿ ಮತ್ತು ಸರ್ಕಾರಿ ವೈದ್ಯಕೀಯ ಸೀಟುಗಳು ಪ್ರತಿಭಾವಂತರಿಗೆ ಹೆಚ್ಚೆಚ್ಚು ಸಿಗಬೇಕು. ಕಡ್ಡಾಯವಾಗಿ ಮೀಸಲಾತಿ ಜಾರಿಯಾಗಬೇಕು. ಸೀಟುಗಳ ಹಂಚಿಕೆ, ಶುಲ್ಕ ನಿಗದಿ ಪಾರದರ್ಶಕವಾಗಿರಬೇಕು. ಒಟ್ಟಾರೆ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಸಮರ್ಪಕವಾಗಿ ಇರಬೇಕೆಂದು ಹೊಸ ನೀತಿ ಜಾರಿಗೆ ತರಲಾಗುತ್ತಿದೆ. ಈಗಾಗಲೇ ಇಬ್ಬರು ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಬೇಕೆಂದು ರಾಜ್ಯ ಹೈಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಬೇಕಾಬಿಟ್ಟಿ ವರ್ತನೆ ಸಾಧ್ಯವಿಲ್ಲ: ಖಾಸಗಿ ಕಾಲೇಜುಗಳು ತಮ್ಮ ಆರ್ಥಿಕ ನೆರವಿನಿಂದ ಮೂಲ ಸೌಲಭ್ಯಗಳನ್ನು ಒದಗಿಸಿಕೊಂಡು ವೈದ್ಯಕೀಯ ಶಿಕ್ಷಣ ನೀಡುತ್ತಿವೆ ಎಂದಾಕ್ಷಣ ಬೇಕಾಬಿಟ್ಟಿ ನಡೆದುಕೊಳ್ಳುವುದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸಚಿವರು ಖಡಾಖಂಡಿತವಾಗಿ ಹೇಳಿದರು.
ಸಿಇಟಿ ಮೂಲಕ ಹಂಚಿಕೆಯಾದ ಸೀಟುಗಳನ್ನು ನೀಡಲು ಹೆಚ್ಚು ಶುಲ್ಕವನ್ನು ಕೆಲ ಖಾಸಗಿ ಕಾಲೇಜುಗಳು ಪಡೆಯುತ್ತಿವೆ ಎಂಬ ದೂರುಗಳು ಬಂದಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸುಪ್ರಿಂಕೋರ್ಟ್ನ 5 ಆದೇಶಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ರಕ್ಷಣೆಯನ್ನು ಸೂಚಿಸುತ್ತವೆ.
ಹಾಗಾಗಿ ವೈದ್ಯಕೀಯ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವುದು ಸುಲಭದ ಮಾತಲ್ಲ ಎಂದು ಅವರು ಹೇಳಿದರು.
ಸುಪ್ರೀಂನಿಂದ ತಡೆಯಾಜ್ಞೆ
ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಕಾಲೇಜಿಗೆ ಬಂದಿರುವ 144 ತಜ್ಞ ವೈದ್ಯರನ್ನು ಮಾತೃ ಇಲಾಖೆಗೆ ಕಳುಹಿಸಬೇಕೆಂದು ಹೈಕೋರ್ಟ್ ತೀರ್ಪು ನೀಡಿದೆ. ಆದರೆ ತಜ್ಞ ವೈದ್ಯರು ಸುಪ್ರೀಂ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ಈಗಾಗಲೇ ಗದಗ, ಮಡಿಕೇರಿ, ಕಾರವಾರ, ಚಾಮರಾಜನಗರ, ಗುಲ್ಬರ್ಗದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ತಲಾ 30 ಕೋಟಿ ನಿಗದಿ ಮಾಡಲಾಗಿದೆ ಎಂದರು. ಹಾಲಿ ಇರುವ ಕಾಲೇಜುಗಳಿಗೆ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ನಿಗದಿ ಪಡಿಸಿದ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಹೊಸ ಕಾಲೇಜುಗಳ ಅಗತ್ಯವಿತ್ತೇ ಎನ್ನುವುದು ಸರಿಯಲ್ಲ. ಹಂತ ಹಂತವಾಗಿ ಸೌಲಭ್ಯ ಒದಗಿಸಬೇಕಾಗುತ್ತದೆ. ವೈದ್ಯಕೀಯ ಶಿಕ್ಷಣ ಇಲಾಖೆಗೆ ಅನುದಾನದ ಕೊರತೆ ಇದ್ದು, ಹೆಚ್ಚು ಹಣ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

