ಹಾಸನ

ಮೂಢನಂಬಿಕೆ ವಿಧೇಯಕ ಬೆಂಬಲಿಸಿ

Published On :

ಕ.ಪ್ರ.ವಾರ್ತೆ    ಹಾಸನ    ನ. 9
ರಾಜ್ಯ ಸರ್ಕಾರ ಮೂಢನಂಬಿಕೆಗಳನ್ನು ತಡೆಗಟ್ಟಲು ಮುಂದಾಗಿದ್ದು, ಸಾರ್ವಜನಿಕರು ಇದಕ್ಕೆ ಸಹಕಾರ ನೀಡುವ ಮೂಲಕ ಮೂಢನಂಬಿಕೆಯನ್ನು ಕಿತ್ತೊಗೆಯಬೇಕು ಎಂದು ನಿವೃತ್ತ ನ್ಯಾಯಾಧೀಶ ಟಿ.ಜೆ.ಮರಿಯಪ್ಪ ಹೇಳಿದರು.
ಕಾನೂನು ಯುವ ಚಿಂತನ ಬಳಗದ ವತಿಯಿಂದ ಶನಿವಾರ ನಡೆದ ಕಾನೂನಿಗೆ ಸಂಬಂಧಿಸಿದ ವಿಷಯಗಳ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಂಬಿಕೆಗಳ ಹೋರಾಟ ಈ ಕರಡಿನ ಉದ್ದೇಶವಲ್ಲ. ಮೂಢನಂಬಿಕೆಗಳ ವಿರುದ್ಧದ ಕರಡಾಗಿದೆ. ಈ ಮೂಢನಂಬಿಕೆ ಕರಡು ರಚನೆ ತಂಡದಲ್ಲಿ ತಾವು ಸಹ ಇರುವುದಾಗಿ ಹೇಳಿದ ಅವರು, ಮೂಢನಂಬಿಕೆ ವಿರುದ್ಧ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ನುಡಿದರು.
ಇತ್ತೀಚೆಗೆ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗಿ ನಡೆಯುತ್ತಿದ್ದು, ಅದನ್ನು ತಡೆಗಟ್ಟುವಂತಹ ಕಾರ್ಯ ಆಗಬೇಕು. ಮಾನವ ಹಕ್ಕುಗಳು ಸಂವಿಧಾನ ಬದ್ಧವಾಗಿದ್ದು, ಸಂವಿಧಾನ ಬಾಹೀರವಾಗಿ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ರಾಜಕೀಯ ಶಕ್ತಿಯಿಂದ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗಿ ನಡೆಯುತ್ತಿದೆ. ಹಿಂದೆಂದಿಗಿಂತಲು ನಡೆಯದಷ್ಟು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿರುವ ಬಗ್ಗೆ ವಕೀಲರು ಚಿಂತನೆ ನಡೆಸಬೇಕು ಎಂದ ಅವರು, ಈಶಾನ್ಯ ರಾಷ್ಟ್ರಗಳಲ್ಲಿ ಇರುವಂತಹ ಮಿಲಿಟರಿ ವ್ಯವಸ್ಥೆಯಿಂದ ದೌರ್ಜನ್ಯ ದಬ್ಬಾಳಿಕೆಯಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗಿ ನಡೆಯುತ್ತಿದೆ. ದೌರ್ಜನ್ಯ ಎಸಗುವಂತಹ ಮಿಲಿಟರಿ ವ್ಯವಸ್ಥೆಯ ವಿರುದ್ಧ ದೂರು ನೀಡಿದರೂ ಅವರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ.
ಈ ರೀತಿಯ ವ್ಯವಸ್ಥೆಗಳು ದೇಶದ ಜಮ್ಮು ಮತ್ತು ಕಾಶ್ಮೀರದಲ್ಲಿ ಎಸಗಲಾಗುತ್ತಿದೆ. ಅಂತಹದರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದ ಅವರು, ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದ ವಿರುದ್ಧ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಭಯೋತ್ಪಾದಕ ಅಥವಾ ಅಪರಾಧಿ ಎಂಬ ಕಾರಣ ನೀಡಿ ಕೆಲವೊಂದು ವೇಳೆ ಪೊಲೀಸ್ ಇಲಾಖೆಯವರು ಎನ್ಕೌಂಟರ್  ಮಾಡುವಂತಹ ವ್ಯವಸ್ಥೆ ಇದೆ. ಅದು ಸಹ ಮಾನವ ಹಕ್ಕುಗಳ ಉಲ್ಲಂಘನೆಯಾದಂತಾಗುತ್ತದೆ. ಯಾವುದೇ ಆರೋಪಿಯಾದರೂ ಆತನನ್ನು ಮೊದಲು ಬಂಧಿಸಿ ವಿಚಾರಣೆಗೆ ಒಳಪಡಿಸಿ ತಪ್ಪಿತಸ್ಥನೆಂದಾದಲ್ಲಿ ಶಿಕ್ಷೆಗೆ ಗುರಿ ಮಾಡಬೇಕು. ಅದನ್ನು ಬಿಟ್ಟು ಏಕಾಏಕಿ ಎನ್ಕೌಂಟರ್ ಕೈಗೊಳ್ಳಬಾರದು ಎಂದರು.
ಭಯೋತ್ಪಾದನೆ ವಿಚಾರ ಬಂದಾಗ ಕೇವಲ ಮುಸ್ಲಿಂ ಸಮುದಾಯವೊಂದನ್ನೇ ನೇರವಾಗಿ ಗುರಿ ಮಾಡಲಾಗುತ್ತದೆ. ಆದರೆ ಇದು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಹಿಂದು ಭಯೋತ್ಪಾದನೆಯಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ ಎಂದ ಅವರು, ಮಾಧ್ಯಮಗಳು ಸಹ ಮುಸ್ಲಿಂ ಸಮುದಾಯವನ್ನೇ ಭಯೋತ್ಪಾದನಾ ಸಮುದಾಯವೆಂಬಂತೆ ಸಮಾಜದಲ್ಲಿ ಬಿಂಬಿಸುತ್ತಿವೆ. ಭಯೋತ್ಪಾದನೆ ಎಲ್ಲಾ ಸಮುದಾಯಗಳಲ್ಲಿ ಇವೆ ಎಂದು ಹೇಳಿದರು. ಕಾನೂನು ಉಪನ್ಯಾಸಕ ವಿ.ಶ್ರೀನಿವಾಸ್, ಪ್ರಾಂಶುಪಾಲ ಶ್ರೀನಾಥ್ ಬಾಲನ್ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.