ಸಾರಿಗೆ ಬಸ್ ತಡೆದು ಪ್ರತಿಭಟನೆ
ಕ.ಪ್ರ.ವಾರ್ತೆ ಆಲೂರು ನ. 9
ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ಗಳು ಹಾಸನ ನಗರದೊಳಗೆ ಹಾದು ಸಂತೇಪೇಟೆ ಮೂಲಕ ಆಲೂರಿಗೆ ಬರಬೇಕೆಂಬ ಇಲಾಖೆಯ ಸ್ಪಷ್ಟ ಆದೇಶವಿದ್ದರೂ ಚಾಲಕ ಹಾಗೂ ನಿರ್ವಾಹಕರ ಉದ್ಧಟತನದಿಂದಾಗಿ ಹಾಸನದ ಬೈಪಾಸ್ ಮೂಲಕವೇ ಬಸ್ಗಳು ಸಂಚರಿಸುತ್ತಿರುವುದನ್ನು ನಾಗರಿಕರು ತೀವ್ರವಾಗಿ ಖಂಡಿಸಿ ಶನಿವಾರ ಆಲೂರಿನ ಕೆಇಬಿ ವೃತ್ತದಲ್ಲಿ ಬಸ್ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಈ ಹಿಂದೆ ಇದೇ ವಿಚಾರವಾಗಿ ಪ್ರತಿಭಟನೆ ನಡೆದಾಗ ಆಲೂರು ಪಟ್ಟಣದ ಮೂಲಕ ಸಂಚರಿಸುವ ಬಸ್ಗಳ ಎಲ್ಲಾ ವಿಭಾಗದ (ಕೆ.ಎಸ್.ಆರ್.ಟಿ.ಸಿ.) ಡಿ.ಸಿ ಹಾಗೂ ಡಿ.ಟಿ.ಒ.ಗಳು ಜನ ಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಕಡ್ಡಾಯವಾಗಿ ಎಲ್ಲಾ ಬಸ್ಗಳು ಎನ್.ಆರ್. ಸರ್ಕಲ್ ಮೂಲಕ ಸಂತೇಪೇಟೆ, ತಣ್ಣೀರು ಹಳ್ಳ ಮಾರ್ಗವಾಗಿ ಆಲೂರಿಗೆ ಸಂಚರಿಸಬೇಕೆಂದು ಆದೇಶಿಸಿದ್ದರು.
ಆದರೂ ಕೆಲವೊಂದು ವಿಭಾಗದ ಚಾಲಕ - ನಿರ್ವಾಹಕರು ಈ ಆದೇಶವನ್ನು ಗಾಳಿಗೆ ತೂರಿ ಬೈಪಾಸ್ನಲ್ಲಿಯೇ ಸಂಚರಿಸುತ್ತಿದ್ದು ಇದನ್ನು ಪ್ರಶ್ನಿಸಿದ ಪ್ರಯಾಣಿಕರೊಂದಿಗೆ ಅಸಭ್ಯ ಹಾಗೂ ಅನುಚಿತವಾಗಿ ವರ್ತಿಸುತ್ತಿದ್ದರು. ಇದರಿಂದ ಬೇಸತ್ತ ಪ್ರಯಾಣಿಕರು ಶನಿವಾರ ಸಹ ಬೈಪಾಸ್ ಮೂಲಕ ಸಂಚರಿಸಿದ ಬಸ್ಗಳನ್ನು ತಡೆದು ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಡಿ.ಸಿ. ಹಾಗೂ ಡಿ.ಟಿ.ಒ.ಗಳು ಸ್ಥಳಕ್ಕೆ ಬರುವವರೆಗೂ ಬಸ್ಗಳನ್ನು ಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದರು.
ಈ ಹಿಂದೆ ಕೂಡ ಪ್ರತಿಭಟನೆ ನಡೆದಾಗ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ ಇನ್ನು ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುವುದಾಗಿ ಪೊಳ್ಳು ಭರವಸೆ ನೀಡಿ ಹೋಗುತ್ತಿದ್ದು ಈ ಬಾರಿ ಇದಕ್ಕೆ ಅವಕಾಶ ನೀಡುವುದಿಲ್ಲವೆಂದು ಆಕ್ರೋಶ ವ್ಯಕ್ತ ಪಡಿಸಿದ ಪ್ರತಿಭಟನಾಕಾರರು, ಇದಕ್ಕೆಲ್ಲಾ ಹಾಸನ ವಿಭಾಗದ ಡಿಸಿ ಯ ಬೇಜವಾಬ್ದಾರಿತನವೇ ಕಾರಣ ಎಂದು ದೂರಿದರು. ಈ ಹಿಂದೆ ಪಟ್ಟಣದಲ್ಲಿ ನಡೆದ ಜನ ಸಂವಾದ ಸಭೆಯಲ್ಲಿ ನೀಡಿದ ಭರವಸೆಯಲ್ಲಿ ಒಂದೇ ಒಂದು ಭರವಸೆ ಈಡೇರಿಸಿಲ್ಲ. ಸ್ಥಳಕ್ಕೆ ಡಿಸಿ ಬರುವವರೆಗೂ ಬಸ್ಗಳನ್ನು ಬಿಡುವುದಿಲ್ಲವೆಂದು ಪಟ್ಟು ಹಿಡಿದರು.
ಸುಮಾರು ಒಂದು ಗಂಟೆ ಕಾಲ ಬಸ್ಸನ್ನು ತಡೆಹಿಡಿದ ಸಾರ್ವಜನಿಕರು ಬಸ್ಸಿನಲ್ಲಿದ್ದ ಪ್ರಯಾಣಿಕರ ಕೋರಿಕೆಯ ಮೇರೆಗೆ ಮತ್ತೆ ಬಸ್ಸನ್ನು ಹಾಸನಕ್ಕೆ ಕಳುಹಿಸಿ ಎನ್.ಆರ್. ಸರ್ಕಲ್, ಸಂತೇಪೇಟೆ ಹಾಗು ತಣ್ಣೀರು ಹಳ್ಳದ ಮೂಲಕ ಆಲೂರಿಗೆ ಬರುವಂತೆ ಮಾಡಿದರು. ಮುಂದಿನ ದಿನಗಳಲ್ಲಿ ಇದೇ ಪುನರಾವರ್ತನೆಯಾದರೆ ಎಲ್ಲಾ ಬಸ್ಗಳನ್ನು ತಡೆದು ಹೆದ್ದಾರಿ ತಡೆ ನಡೆಸುವುದಾಗಿ ಎಚ್ಚರಿಸಿದ ಪ್ರತಿಭಟನಾಕಾರರು ಮುಂದಾಗುವ ಪರಿಣಾಮಗಳಿಗೆ ಹಾಸನ ವಿಭಾಗದ ಡಿಸಿ ಯೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

