ಬೈಪಾಸ್ ಮೂಲಕ ಬಸ್ ಸಂಚಾರ ಬೇಡ
ಆಲೂರು ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ಗಳು ಹಾಸನ ನಗರದೊಳಗೆ ಹಾದು ಸಂತೇಪೇಟೆ ಮೂಲಕ ಆಲೂರಿಗೆ ಬರಬೇಕೆಂಬ ಇಲಾಖೆಯ ಸ್ಪಷ್ಟ ಆದೇಶವಿದ್ದರೂ ಚಾಲಕ ಹಾಗೂ ನಿರ್ವಾಹಕರ ಉದ್ಧಟತನದಿಂದಾಗಿ ಹಾಸನದ ಬೈಪಾಸ್ ಮೂಲಕವೇ ಬಸ್ಗಳು ಸಂಚರಿಸುತ್ತಿವೆ.
ಈ ವಿಚಾರವಾಗಿ ಪ್ರತಿಭಟನೆ ನಡೆದಾಗ ಆಲೂರಿನಲ್ಲಿ ಪಟ್ಟಣದ ಮೂಲಕ ಸಂಚರಿಸುವ ಬಸ್ಗಳ ಎಲ್ಲಾ ವಿಭಾಗದ (ಕೆ.ಎಸ್.ಆರ್.ಟಿ.ಸಿ.)ಡಿ.ಸಿ ಹಾಗು ಡಿ.ಟಿ.ಒ.ಗಳು ಜನ ಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಕಡ್ಡಾಯವಾಗಿ ಎಲ್ಲಾ ಬಸ್ಗಳು ಎನ್.ಆರ್. ಸರ್ಕಲ್ ಮೂಲಕ ಸಂತೇಪೇಟೆ,ತಣ್ಣೀರು ಹಳ್ಳ ಮಾರ್ಗವಾಗಿ ಆಲೂರಿಗೆ ಸಂಚರಿಸಬೇಕೆಂದು ಆದೇಶಿಸಿದ್ದರು.
ಆದರೆ ಕೆಲ ವಿಭಾಗದ ಚಾಲಕ - ನಿರ್ವಾಹಕರು ಆದೇಶವನ್ನು ಗಾಳಿಗೆ ತೂರಿ ಬೈ ಪಾಸ್ನಲ್ಲಿ ಸಂಚರಿಸುತ್ತಿದ್ದು ಇದನ್ನು ಪ್ರಶ್ನಿಸಿದ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಬಸ್ಸನ್ನು ಹಾಸನಕ್ಕೆ ಕಳುಹಿಸಿ ಎನ್.ಆರ್.ಸರ್ಕಲ್, ಸಂತೇಪೇಟೆ ಹಾಗು ತಣ್ಣೀರು ಹಳ್ಳದ ಮೂಲಕ ಆಲೂರಿಗೆ ಬರುವಂತೆ ಮಾಡಬೇಕು.
ಟಿ ರಾಘವೇಂದ್ರ ವೆಂಕಟೇಶ್
ಹೆದ್ದಾರಿಯಲ್ಲಿ ಬಿಡಾಡಿ ದನಗಳ ಹಾವಳಿ
ಅರಸೀಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಡಾಡಿ ದನಗಳ ಹಾವಳಿಯಿಂದ ವಾಹನ ಚಾಲಕರು ಮತ್ತು ಪಾದಚಾರಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಈ ಬಗ್ಗೆ ಪುರಸಭೆ ಆಡಳಿತ ಅಸಹಾಯಕ ರೀತಿಯಲ್ಲಿ ಕೈಕಟ್ಟಿ ಕುಳಿತಿರುವುದು ನಾಚಿಕೆಗೇಡಿನ ಸಂಗತಿ.
ಪಟ್ಟಣದ ಮಧ್ಯೆ ಹಾದುಹೋಗಿರುವ ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಈ ರಸ್ತೆಯ ಮಧ್ಯೆ ಭಾಗದಲ್ಲಿ ಬಿಡಾಡಿ ದನಗಳ ಗುಂಪು ಬೀಡು ಬೀಡುವ ಕಾರಣ ವಾಹನದ ಚಾಲಕರು ಹರಸಾಹಸ ಮಾಡಿಕೊಂಡು ಪಟ್ಟಣದಿಂದ ಹೊರ ಹೋಗಬೇಕಾಗಿದ್ದು, ಇಂತಹ ಸಂದರ್ಭದಲ್ಲಿ ಅನೇಕ ಅಪಘಾತಗಳು ಸಂಭವಿಸಿ ವಾಹನ ಸವಾರರು ಕೈ,ಕಾಲು ಕಳೆದುಕೊಂಡರೆ ದನಗಳು ಸಹ ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಂಡಿರುವ ಉದಾಹರಣೆಗಳು ಸಾಕಷ್ಟಿದೆ.
ಪ್ರತಿ ವರ್ಷ ಬೀದಿ ನಾಯಿಗಳ ನಿಯಂತ್ರಣಕ್ಕೆ ಲಕ್ಷಾಂತರ ರು. ವೆಚ್ಚ ಮಾಡುತ್ತಿರುವ ಪುರಸಭಾ ಆಡಳಿತ ಇದನ್ನು ನಿಯಂತ್ರಿಸಲು ಸಂಪೂರ್ಣ ವಿಫಲವಾಗಿರುವ ಕಾರಣ ಬೀದಿ ನಾಯಿಗಳಂತೂ ಗುಂಪು ಗುಂಪಾಗಿ ಬಿ.ಎಚ್.ರಸ್ತೆ, ಶಿವಾಲಯ ದೇವಾಲಯ ಸುತ್ತ ಮುತ್ತ, ಲಕ್ಷ್ಮೀಪುರ ಬಡಾವಣೆ, ಶಿವಾನಂದ ಕಾಲೋನಿ, ಶ್ಯಾನುಭೋಗರ ಬೀದಿ, ಈಡಿಗರ ಕಾಲೋನಿ, ಹಾಸನ ರಸ್ತೆಯ ಎಡ ಮತ್ತು ಬಲಭಾಗದ ಬಡಾವಣೆಗಳು ಸೇರಿದಂತೆ ಇನ್ನೂ ಹಲವು ಭಾಗಗಳಲ್ಲಿ ಹೆಚ್ಚಿನ ಹಾವಳಿ ಮಾಡುತ್ತಿದ್ದು ಮಹಿಳೆಯರು ಮತ್ತು ಮಕ್ಕಳು ಮನೆಯ ಹೊರಗಡೆ ಬರಲು ಭಯ ಪಡುತ್ತಿದ್ದಾರೆ.
ಹಂದಿಗಳ ಹಾವಳಿ- ಮಾರುತಿ ನಗರ, ಕಂತೇನಹಳ್ಳಿ, ಹಾಸನರಸ್ತೆಯ ಬಡಾವಣೆ, ಸರಸ್ವತಿಪುರಂ ಬಡಾವಣೆಗಳಲ್ಲಿ ವಿಪರೀತ ಹಂದಿಗಳಿದ್ದು, ಅವುಗಳ ಉಪಟಳ ಮಿತಿಮೀರಿದೆ. ಬಡಾವಣೆಗಳಲ್ಲಿನ ಕೊಳಚೆ ಪ್ರದೇಶಗಳು ಮತ್ತು ಚರಂಡಿಗಳನ್ನು ತಮ್ಮ ವಾಸಸ್ಥಾನ ಮಾಡಿ ಕೊಂಡಿರುವ ಈ ಹಂದಿಗಳು ಮನೆಗಳ ಹಿತ್ತಲಿಗೆ ಲಗ್ಗೆ ಹಾಕಿ ಹಿತ್ತಲಿನಲ್ಲಿ ಬೆಳೆಸಿರುವ ಹೂ,ಹಣ್ಣು ಗಿಡಗಳನ್ನು ಕೀಳುವ ಜೊತೆಗೆ ಒಣ ಹಾಕಿರುವ ಬಟ್ಟೆಗಳು ಮತ್ತು ದವಸ ಧಾನ್ಯ ಹಾಳು ಮಾಡುವ ಮೂಲಕ ಇನ್ನಿಲ್ಲದ ತೊಂದರೆ ನೀಡುತ್ತಿವೆ. ಈ ಹಂದಿಗಳಿಗೆ ಕಚ್ಚಿದ ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗಗಳನ್ನು ಹರಡುವ ಭೀತಿಯನ್ನು ಇಲ್ಲಿನ ನಾಗರಿಕರು ಎದುರಿಸುತ್ತಿದ್ದಾರೆ.
ಇನ್ನಾದರೂ ಪುರಸಭಾ ಆಡಳಿತ ನಿದ್ರಾವಸ್ಥೆಯಿಂದ ಎಚ್ಚೆತ್ತು ರಸ್ತೆಯಲ್ಲಿರುವ ಬಿಡಾಡಿ ದನಗಳನ್ನು ಗೋಶಾಲೆಗೆ ಸೇರಿಸುವ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗುವರೇ ಮತ್ತು ಬೀದಿ ನಾಯಿಗಳು ಹಾಗೂ ಹಂದಿಗಳನ್ನು ಸೆರೆ ಹಿಡಿದು ಹೊರಹಾಕಲು ಕಾರ್ಯಪ್ರವೃತ್ತರಾಗುವರೇ ಎಂಬುದನ್ನು ಕಾದು ನೋಡಬೇಕಾಗಿದೆ.
ಟಿ ಪಿ. ಶಾಂತಕುಮಾರ್, ಸಮಾಜ ಸೇವಕ
ದಿನೇ ದಿನೇ ಹೆಚ್ಚುತ್ತಿರುವ ಕರಡಿ ಕಾಟ
ಅರಸೀಕೆರೆ ತಾಲೂಕಿನಲ್ಲಿ ನಡೆಯುತ್ತಿರುವ ಕರಡಿಗಳ ದಾಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಅರಣ್ಯ ಇಲಾಖೆಯವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ತಾಲೂಕಿನ ಬಾಣಾವರ ಹೋಬಳಿ ಚಿಕ್ಕಮ್ಮನಹಳ್ಳಿ ಗ್ರಾಮದ ಹೊರವಲಯದ ತೋಟದ ಮನೆಯಲ್ಲಿ ವಾಸವಾಗಿರುವ ಸಿದ್ದಪ್ಪ, ಶಂಕರಲಿಂಗಪ್ಪ ಎಂಬುವರ ಮೇಲೆ ಎರಡು ಕರಡಿಗಳು ಇತ್ತೀಚೆಗೆ ದಾಳಿ ನಡೆಸಿವೆ. ದಾಳಿ ಇವರಿಬ್ಬರಿಗೆ ತುಂಬಾ ಗಾಯಗಳಾಗಿವೆ.
ತಾಲೂಕಿನ ಸುತ್ತಮುತ್ತಲ್ಲೂ ಅರಣ್ಯ ಪ್ರದೇಶವಿರುವ ಕಾರಣ ಕಾಡು ಪ್ರಾಣಿಗಳು ಬೆಟ್ಟಗುಡ್ಡದ ತಪ್ಪಲಿನ ಗ್ರಾಮಗಳಿಗೆ ಪದೇ ಪದೇ ನುಗ್ಗಿ ಮನುಷ್ಯರು ಮತ್ತು ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿರುವ ಘಟನೆಗಳು ನಡೆದಿದೆ. ಅ.22ರಂದು ತಾಲೂಕಿನ ಬಾಣಾವರ ಹೋಬಳಿ ಬ್ಯಾಡರಹಳ್ಳಿ ಸಮೀಪದ ವಡ್ಡರಹಟ್ಟಿಯ ರಾಮಾಬೋವಿ ಎಂಬ ರೈತ ಕೂಲಿ ಕಾರ್ಮಿಕನ ಮೇಲೆ ಕರಡಿಯು ದಾಳಿ ನಡೆಸಿದ ಪ್ರಕರಣ ಜನಮಾನಸದಲ್ಲಿ ಇನ್ನೂ ಮಾಯಾವಾಗುವ ಮುನ್ನವೇ ಮತ್ತೊಂದು ಕರಡಿ ದಾಳಿಯ ಘಟನೆ ಮರುಕಳಿಸಿರುವುದು ಈ ಭಾಗದ ಗ್ರಾಮಸ್ಥರಲ್ಲಿ ಯದ ವಾತವರಣ ನಿರ್ಮಾಣವಾಗಲು ಕಾರಣವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು.
ಟಿ ಚಿಕ್ಕಬೊಮ್ಮನಹಳ್ಳಿ ಗ್ರಾಮಸ್ಥರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

