ಗಂಧದಗುಡಿಯಲ್ಲಿ ಭಾರೀ ಭಾನಗಡಿ
ಹಾಸನ: ರಾಜ್ಯದ ಮೊದಲ ಶ್ರೀಗಂಧದ ರಕ್ಷಿತ ಅರಣ್ಯದಲ್ಲಿ ಭಾರಿ ಗಾತ್ರದ ಬೆಲೆ ಬಾಳುವ ಶ್ರೀಗಂಧದ ಮರಗಳನ್ನು ಕಡಿದು ಕಳ್ಳಸಾಗಣೆ ಮಾಡುತ್ತಿರುವ ಸಂಗತಿ ತಡವಾಗಿ ಬಯಲಾಗಿದೆ.
ಹಾಸನ ಜಿಲ್ಲೆ ಹಳೇಬೀಡು ರಸ್ತೆಯಲ್ಲಿರುವ ಈ ಶ್ರೀಗಂಧದ ರಕ್ಷಿತ ಅರಣ್ಯದ ಮೇಲೆ ಮರಗಳ್ಳರ ಕಾಕದೃಷ್ಟಿ ಬಿದ್ದಿದೆ. ಕಾಡಿನ ಮಧ್ಯೆ ಇರುವ ಭಾರಿ ಗಾತ್ರದ ಬೆಲೆಬಾಳುವ ಮರಗಳನ್ನು ಕಡಿದು ಕಳ್ಳಸಾಗಣೆ ಮಾಡುತ್ತಿರುವ ಆತಂಕಕಾರಿ ಸಂಗತಿ ಇದೀಗ ಬಯಲಾಗಿದೆ.
ಈ ಸಂಬಂಧ ಆಂಧ್ರ ಮೂಲದ ನಾಲ್ವರು ಕಳ್ಳರನ್ನು ಬಂಧಿಸಲಾಗಿದೆ. ಕಳ್ಳರ ಜಾಲದ ಹಿಂದೆ ಅಂತರರಾಜ್ಯ ಕಳ್ಳರು ಭಾಗಿಯಾಗಿದ್ದಾರೆ ಎಂಬ ಶಂಕೆ ಮೂಡಿದೆ. ಸುಮಾರು ಒಂದೂವರೆ ಲಕ್ಷ ಇರುವ ಗಂಧದ ಮರಗಳನ್ನು ರಕ್ಷಣೆ ಮಾಡಿದರೆ ಸರ್ಕಾರಕ್ಕೆ ಕೋಟಿ ಕೋಟಿ ಆದಾಯ ಬರಲಿದ್ದು, ಸಂರಕ್ಷಣೆಗೆ ಗಮನ ನೀಡುವಂತೆ ಪರಿಸರವಾದಿಗಳು ಒತ್ತಾಯಿಸಿದ್ದಾರೆ.
ಹಾಸನ-ಹಳೇಬೀಡು ಮಧ್ಯೆ 1640 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ಒಂದೂವರೆ ಲಕ್ಷ ಶ್ರೀಗಂಧ ಮರಗಳಿವೆ. 2008-09ನೇ ಸಾಲಿನಲ್ಲಿ ನೆಡಲಾದ ಅಪರೂಪದ ಗಿಡರಾಶಿ ಇಂದು ಮರಗಳಾಗುವತ್ತ ಮುಖ ಮಾಡಿವೆ. ಆದರೆ, ಮರಗಳ್ಳರು ಶ್ರೀಗಂಧದ ಆಸೆಗಾಗಿ ದೊಡ್ಡ ದೊಡ್ಡ ಮರಗಳನ್ನೇ ಕಡಿದು ಕಳ್ಳಸಾಗಣೆ ಮಾಡುತ್ತಿದ್ದಾರೆ.
ಕಾಡಿನೊಳಗೆ ಹೊಕ್ಕರೆ ಸಾಕು, ದಢೂತಿ ಗಾತ್ರದ ಮರಗಳ ಬುಡಕ್ಕೆ ಕೊಡಲಿ ಇಲ್ಲವೇ ಗರಗಸ ಇಟ್ಟು ಧರೆಗುರುಳಿಸಿರುವುದು ಕಾಣಸಿಗುತ್ತದೆ. ಹರಿತ ಆಯುಧಗಳನ್ನು ತಂದು ಅಪರೂಪದ ಶ್ರೀಗಂಧದ ಮರಗಳ ಹನನ ಮಾಡಿ ರಾಜಾರೋಷವಾಗಿ ಬೇರೆಡೆ ಸಾಗಿಸುತ್ತಿದ್ದಾರೆ. ಇಷ್ಟು ವಿಸ್ತಾರವಾದ ಶ್ರೀಗಂಧದ ಅರಣ್ಯ ಇರುವುದು ಇಲ್ಲಿಯೇ. ಗಿಡನೆಟ್ಟ 45 ವರ್ಷಗಳವರೆಗೆ ಕಾಯ್ದುಕೊಂಡರೆ ಸರ್ಕಾರಕ್ಕೆ ಕೋಟಿ ಕೋಟಿ ಆದಾಯ ಬರಲಿದೆ.
ಅಪರೂಪದ ಶ್ರೀಗಂಧದ ರಾಶಿ ಇಲ್ಲಿರುವುದರಿಂದ ಇದನ್ನು ರಕ್ಷಿತ ಅರಣ್ಯ ಎಂದು ಘೋಷಿಸಲಾಗಿದ್ದರೂ, ರಕ್ಷಣೆಯಂತೂ ಇಲ್ಲವಾಗಿದೆ. ರಾಜಾರೋಷವಾಗಿ ಮರಗಳ ಮಾರಣಹೋಮ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಏನು ಮಾಡುತ್ತಿದೆ ಅನ್ನೋದು ಪರಿಸರವಾದಿಗಳ ಪ್ರಶ್ನೆ. ಅರಣ್ಯ ಇಲಾಖೆಯಲ್ಲಿ ಏನೇ ಅರೆಕೊರೆ ಇದ್ದರೂ ಬೆಲೆಬಾಳುವ ಅಪರೂಪದ ವನಸಂತತಿ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕೆಂಬ ಕೂಗು ಕೇಳಿಬಂದಿದೆ.
ಶ್ರೀಗಂಧದ ಮರ ಕಳವು ಮಾಡುತ್ತಿದ್ದ ಆಂಧ್ರ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿ ಈಗಾಗಲೇ ಶಿಕ್ಷೆಗೆ ಗುರಿಪಡಿಸಲಾಗಿದೆ. ಆದ್ರೂ ಕೊಡಲಿ ಹಾಕೋ ಕೃತ್ಯಕ್ಕೆ ಇನ್ನೂ ಕಡಿವಾಣ ಬಿದ್ದಿಲ್ಲ.
ಇನ್ನಾದರೂ ಸರ್ಕಾರ ಎಚ್ಚೆತ್ತು ರಕ್ಷಿತ ಶ್ರೀಗಂಧದ ಅರಣ್ಯದ ಸುತ್ತ ದೊಡ್ಡ ಕಂದಕ ಅಥವಾ ಕಾಂಪೌಂಡ್
ನಿರ್ಮಿಸುವ, ಸೋಲಾರ್ ತಂತಿ ಅಳವಡಿಸುವ ಕೆಲಸಕ್ಕೆ ಮುಂದಾಗಲಿ ಅನ್ನೋದು ವನ್ಯಪ್ರಿಯರ ಸಲಹೆ.
ಇಲ್ಲಿ ಸಾಕಷ್ಟು ಗಂಧದ ಮರಗಳನ್ನು ಅರಣ್ಯ ಇಲಾಖೆಯವರು ಬೆಳೆಸಿದ್ದಾರೆ. ಆದರೆ ಅದಕ್ಕೆ ಸೂಕ್ತ ರಕ್ಷಣೆ ಇಲ್ಲದ ಕಾರಣ ಕಳ್ಳಕಾಕರು ಶ್ರೀಗಂಧದ ಮರ ಕಡಿದು ಹಾಳು ಮಾಡುತ್ತಿದ್ದಾರೆ. ಈಗಲಾದರೂ ಇಲಾಖೆಯವರು ಸೂಕ್ತ ರಕ್ಷಣೆ ಒದಗಿಸಬೇಕು.
ಟಿ ನಾಗಮ್ಮ, ಸ್ಥಳೀಯ ಮಹಿಳೆ
ಹಳೇಬೀಡು ರಸ್ತೆಯಲ್ಲಿರುವ ಶ್ರೀಗಂಧ ರಕ್ಷಿತಾರಣ್ಯದಲ್ಲಿ ಮರಗಳನ್ನು ಅಕ್ರಮವಾಗಿ ಕಡಿಯುತ್ತಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ಇಲಾಖೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಮರ ಕಡಿಯುತ್ತಿದ್ದ ಪ್ರದೇಶಕ್ಕೆ ಹೋಗಿ ಬಿಗಿ ಬಂದೋ ಬಸ್ತ್ ಮಾಡಿದ್ದಾರೆ. ಪ್ರಸ್ತುತ ಕಳ್ಳಳು ಮರ ಕಡಿಯದಂತೆ ಕ್ರಮಕೈಗೊಳ್ಳಲಾಗಿದೆ.
ಟಿ ಲಕ್ಷ್ಮಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ
ರಾಜ್ಯದ ಮೊದಲ ಶ್ರೀಗಂಧದ ರಕ್ಷಿತಾರಣ್ಯ ಪ್ರದೇಶವಿದು. ಇಲ್ಲಿ ಸುಮಾರು ಒಂದೂವರೆ ಲಕ್ಷ ಶ್ರೀಗಂಧದ ಮರಗಳು ಇವೆ. ಅದನ್ನು ರಕ್ಷಿಸಿದರೆ ಮುಂದೆ ಸರ್ಕಾರಕ್ಕೆ ಉತ್ತಮ ಆದಾಯ ಸಿಗುತ್ತದೆ. ಆದ್ದರಿಂದ ಅರಣ್ಯ ಇಲಾಖೆಯ ಒಂದು ಕಚೇರಿ ಮತ್ತು ಪ್ರದೇಶದ ಸುತ್ತ ಸೋಲಾರ್ ತಂತಿ ಅಳವಡಿಸುವಂತಹ ವ್ಯವಸ್ಥೆ ಆಗಬೇಕು. ಈ ಬಗ್ಗೆ ಇಲಾಖೆ ಕ್ರಮಕೈಗೊಂಡು ಸರ್ಕಾರದ ಗಮನಕ್ಕೆ ತರಬೇಕು.
ಟಿ ಕಿಶೋರ್ಕುಮಾರ್, ಪರಿಸರವಾದಿ
ಪಿ.ರವಿಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

