ಯಾವ ಸೌಲಭ್ಯವೂ ನಮ್ಮನ್ನು ತಲುಪುತ್ತಿಲ್ಲ
ಕ.ಪ್ರ.ವಾರ್ತೆ ಹಾಸನ ನ.12
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದ ಕಾರ್ಯಕರ್ತರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿದ ಪ್ರತಿಭಟನಾಕಾರರು, ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯು ರಚನೆಯಾಗಿ 5 ವರ್ಷಗಳು ಕಳೆದಿದ್ದು, ಈ ಕಾರ್ಮಿಕರಿಗೆ ಫೆ.1, 2013ರಂದು ಸರ್ಕಾರಿ ಸೌಲಭ್ಯಗಳನ್ನು ಜಾಸ್ತಿ ಮಾಡಿದ್ದಾರೆ. ಆದರೆ ಈ ಸೌಲಭ್ಯಗಳು ಕಟ್ಟಡ ಕಾರ್ಮಿಕರನ್ನು ತಲುಪುತ್ತಿಲ್ಲ. ಆದ್ದರಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯನ್ನು ಪ್ರತ್ಯೇಕ ಮಾಡಬೇಕು ಎಂದು ಆಗ್ರಹಿಸಿದರು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವು 5ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ಮಂಜೂರಾಗಿದ್ದು, ಒಂದು ಮಗುವಿಗೆ ಮಾತ್ರ ಮಂಜೂರು ಮಾಡುತ್ತಿದ್ದು, ಇನ್ನೊಂದು ಮಗುವಿಗೆ ಬ್ಯಾಂಕಿಗೆ ಹಣ ಜಮಾ ಮಾಡಿರುವುದಾಗಿ ಪತ್ರ ಕಳುಹಿಸಿದ್ದಾರೆ. ಆದರೆ ಬ್ಯಾಂಕಿಗೆ ಹಣ ಜಮಾ ಅಗಿಲ್ಲ. ಕಟ್ಟಡ ಕಾರ್ಮಿಕರು ಕೆಲಸ ಮಾಡುವ ಸಮಯದಲ್ಲಿ ಅಪಘಾತ ಉಂಟಾದರೆ ಕುಟುಂಬಕ್ಕೆ 2 ಲಕ್ಷ ಪರಿಹಾರ ಕೊಡಬೇಕಾಗಿದ್ದು, ಬರೀ 54 ಸಾವಿರ ಮಂಜೂರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ತರಬೇತಿ ಕೇಂದ್ರ ತೆರೆದು ಕಾರ್ಮಿಕರಿಗೆ ತರಬೇತಿ ಕೊಟ್ಟು ಸಹಾಯಧನ ಕೊಡಬೇಕು. ಕಾರ್ಮಿಕರಿಗೆ ಮನೆ ಕಟ್ಟಲು, ಮನೆ ಖರೀದಿಸಲು 50 ಸಾವಿರ ಸಬ್ಸಿಡಿ, 1.5 ಲಕ್ಷ ಸಾಲ ಕೊಡುವುದಾಗಿ ಹೇಳಿದ್ದರೂ ಇದುವರೆಗೂ ಮಂಜೂರು ಮಾಡಿಲ್ಲ. ಕಟ್ಟಡ ಕಾರ್ಮಿಕರ ಮಕ್ಕಳ ಮದುವೆಗೆ 50 ಸಾವಿರ ಸಹಾಯಧನ ಕೊಡುವುದಾಗಿ ಆದೇಶ ಹೊರಡಿಸಿದ್ದರೂ ಅರ್ಜಿ ಹಾಕಿ 10 ತಿಂಗಳು ಕಳೆದರೂ ಹಣ ಮಂಜೂರು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ತಾಲೂಕುಗಳಲ್ಲಿ ಕಟ್ಟಡ ಕಾರ್ಮಿಕರಿಗೆ ಒಂದು ಕಲ್ಯಾಣ ಮಂಟಪ ಮಂಜೂರು ಮಾಡಬೇಕು. ಪಿಂಚಣಿ ಮಂಜೂರು ಮಾಡಬೇಕು. ಕಟ್ಟಡ ಕಾರ್ಮಿಕ ಮಂಡಳಿಯ ಕಚೇರಿಗೆ ಹೆಚ್ಚಿನ ಸಿಬ್ಬಂದಿ ಒದಗಿಸಿಕೊಡಬೇಕು. ಪ್ರತಿ ತಾಲೂಕಿನಲ್ಲಿ ಕಟ್ಟಡ ಕಾರ್ಮಿಕರನ್ನು ನೋಂದಾವಣೆ ಮಾಡಲು ಕಾರ್ಮಿಕ ಅಧಿಕಾರಿಗಳನ್ನು ನೇಮಿಸಿ ಸ್ವಂತ ಕಚೇರಿ ಮಂಜೂರು ಮಾಡಬೇಕು. ನಿರಂತರವಾಗಿ ಕೆಲಸ ಮಾಡುವ ಕಟ್ಟಡ ಕಾರ್ಮಿಕರಿಗೆ ಮಾತ್ರ ನೋಂದಣಿ ಮಾಡುವಂತೆ ಆದೇಶ ಮಾಡಬೇಕು. ಎಲ್ಲ ಸೌಲಭ್ಯಕ್ಕೆ ಹಣ ಮಂಜೂರು ಮಾಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆದ ಮೇಲೆ, ಆಗಿದೆಯೇ ಇಲ್ಲವೇ ಎಂದು ಮಂಡಳಿ ಅಧಿಕಾರಿಗಳು ಪರಿಶೀಲಿಸಿ ಪತ್ರ ಕಳಿಸಬೇಕು ಎಂದು ಒತ್ತಾಯಿಸಿದರು. ಸಂಘದ ರಾಜ್ಯಾಧ್ಯಕ್ಷ ಎಚ್.ವಿ.ಸ್ವಾಮಿ, ಜಿಲ್ಲಾಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಮಂಜೇಗೌಡ, ಗೌರವಾಧ್ಯಕ್ಷ ನಾಗರಾಜ್, ತಾಲೂಕು ಅಧ್ಯಕ್ಷ ಸಣ್ಣಸ್ವಾಮಿ, ಚಲುವರಾಜು, ಎಸ್.ಕುಮಾರ್, ಪ್ರಕಾಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

