ಉದ್ಯೋಗ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಚಾಲನೆ
ಕ.ಪ್ರ.ವಾರ್ತೆ ಹೊಳೆನರಸೀಪುರ ನ. 19
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಕ್ತಿ ಆಲೋಚನೆ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಭವ್ಯ ಭವಿಷ್ಯ ರೂಪಿಸಿಕೊಳ್ಳಲು ಮುಂದಾದಲ್ಲಿ, ವಿಶ್ವವಿದ್ಯಾಲಯ ಅಂತಹ ಆಸಕ್ತ ವಿದ್ಯಾರ್ಥಿಗಳಿಗೆ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನವನ್ನು ಉಚಿತವಾಗಿ ನೀಡುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ಉದ್ಯೋಗ ಮಾಹಿತಿ ತರಬೇತಿ ಅಧಿಕಾರಿ ವೆಂಕಟೇಶಪ್ಪ ತಿಳಿಸಿದರು.
ಅವರು ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ವೃತ್ತಿ ಸಮ್ಮೇಳನ ಮತ್ತು ವೃತ್ತಿ ಸಾಹಿತ್ಯ ಪ್ರದರ್ಶನದಲ್ಲಿ ಭವಿಷ್ಯದಲ್ಲಿನ ವೃತ್ತಿಯ ಆಯ್ಕೆಗಿರುವ ಅವಕಾಶಗಳು ಹಾಗೂ ಅದರ ಕುರಿತಾದ ಮಾಹಿತಿಗಳನ್ನು ಮನವರಿಕೆ ಮಾಡಿಕೊಟ್ಟರು.
ಪದವಿ ನಂತರ ಮುಂದೇನು ಎಂಬ ಪ್ರಶ್ನೆಗೆ ಎಷ್ಟೋ ವಿದ್ಯಾರ್ಥಿಗಳಿಗೆ ನಿರ್ಧಿಷ್ಟ ಗುರಿ ಹಾಗೂ ದಾರಿ ಏನು ಎಂದು ತಿಳಿಯದಿದ್ದಾಗ, ಮೈಸೂರು ವಿವಿಯ ಉದ್ಯೋಗ ಮಾಹಿತಿ ಕೇಂದ್ರ ಸೂಕ್ತ ಮಾರ್ಗದರ್ಶನ ನೀಡಲಿದೆ ಎಂದು ತಿಳಿಸಿದ ಅವರು, ಅದಕ್ಕೂ ಮೊದಲು ವಿದ್ಯಾರ್ಥಿಗಳಲ್ಲಿ ತಮ್ಮ ಭವಿಷ್ಯದ ಕುರಿತು ಸರಳ ಮತ್ತು ಸ್ಪಷ್ಟವಾದ ಗುರಿಯನ್ನು ಹೊಂದಿ, ಆ ಗುರಿಯೆಡೆಗೆ ತನ್ನ ಪ್ರಯತ್ನವೇನೆಂಬುದನ್ನು ಅಳತೆ ಮಾಡಿಕೊಂಡು, ಸಾಧಿಸುವ ಛಲದೊಂದಿಗೆ ಗುರಿಯನ್ನು ಖಚಿತಪಡಿಸಿಕೊಂಡು ಸಮಯಪ್ರಜ್ಞೆಯೊಂದಿಗೆ ಮುಂದುವರೆದಲ್ಲಿ ಸಾಧನೆ ಕಷ್ಟಸಾಧ್ಯವೇನಲ್ಲ ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಕಲಿಕೆಯ ಹಂತದಲ್ಲಿ ಸಮಯವನ್ನು ಸದುಪಯೋಗಪಡಿಸಿಕೊಂಡು, ಕೀಳರಿಮೆಯನ್ನು ತೊರೆದು ಆತ್ಮವಿಶ್ವಾಸ, ಬದ್ಧತೆ, ಧೈರ್ಯ ಹಾಗೂ ಪರಿಪೂರ್ಣ ಸಿದ್ಧತೆಯೊಂದಿಗೆ ಗುರಿಯೆಡೆಗೆ ಸಾಗುವುದು ಕಷ್ಟವಲ್ಲ ಎಂದು ಹೇಳಿದರು.
ಸ್ನಾತಕೋತ್ತರ ಪದವಿ ನಂತರದಲ್ಲಿ ಡಾಕ್ಟರೇಟ್, ಸ್ಕಾಲರ್ಶಿಪ್ ಹಾಗೂ ಮುಂದಿನ ಕ್ಷೇತ್ರದ ಆಯ್ಕೆ ಏನಿರಬೇಕು ಮತ್ತು ಹೇಗಿರಬೇಕು ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಮೈಸೂರು ಮಾನಸ ಗಂಗೋತ್ರಿಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರವು ನೀಡಲಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಬಸವಣ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಚಂದ್ರಕುಮಾರ್, ಪ್ರೊ.ರಾಜಶೇಖರ್ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ರಂಜಿತ ಪ್ರಾರ್ಥಿಸಿದರು. ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

