ಮದುವೆಗಾಗಿ ಅಪಹರಣ ನಾಟಕವಾಡಿದ ಪ್ರೇಮಿಗಳು!
- ದಯಾಶಂಕರ ಮೈಲಿ
ಹಾಸನ: 'ನೀ ಪರೀಕ್ಷೆಗೆ ಹೋಗುವ ಹಾಗೆ ಹೋಗು... ನಾನು ಕಿಡ್ನಾಪ್ ಮಾಡಿದ ಹಾಗೆ ಮಾಡ್ತೀನಿ...' ಹೀಗೆಂದು ತೀರ್ಮಾನಿಸಿ ನಾಟಕವಾಡಿದ ಪ್ರೇಮಿಗಳು ಮದುವೆಯಾಗಿ ಹಿಂದಿರುಗಿದ ಪ್ರಸಂಗ ಇಲ್ಲಿ ನಡೆದಿದೆ.
ಹಾಸನ ನಗರದ ಕಾಲೇಜಿನಲ್ಲಿ ನ.18 ರಂದು ಮುಕ್ತ ವಿಶ್ವವಿದ್ಯಾಲಯದ ತೃತೀಯ ಬಿ.ಎ ಪರೀಕ್ಷೆ ಬರೆಯುವುದಾಗಿ ಹೇಳಿ ಬಂದಿದ್ದ ಸೌಮ್ಯಾಳನ್ನು ಮಾರುತಿ ವ್ಯಾನ್ನಲ್ಲಿ ಅಪಹರಿಸಿಕೊಂಡು ಹೋಗಲಾಗಿತ್ತು. ಇದು ರಾಜ್ಯಾದ್ಯಂತ ಸುದ್ದಿಯನ್ನೇ ಮಾಡಿತ್ತು. ಆದರೆ ವಾಸ್ತವದಲ್ಲಿ ಇದು ಅಪಹರಣ ಅಲ್ಲ. ಅಪಹರಣದಂತೆ ಇರುವ ನಾಟಕವಷ್ಟೇ. ಹೌದು ಪ್ರೇಮಿಗಳು ತಾವು ಮದುವೆಯಾಗಲು ಹೂಡಿದ ಈ ನಾಟಕ ಪೋಷಕರಿಗೆ ಗಾಬರಿಯ ಜೊತೆಗೆ ಪೊಲೀಸರನ್ನು ಫಜೀತಿ ಉಂಟು ಮಾಡಿದೆ.
ನಡೆದಿದ್ದು ಏನು?: ಹಾಸನದ ಬಾಗಡೇ ದೇವಕೊಪ್ಪಲಿನ ಚೇತನ್ಕುಮಾರ್ ಎಂಬ ಯುವಕ, ಅರಸೀಕೆರೆ ತಾಲೂಕು ಗಂಡಸಿ ಹೋಬಳಿ ನಾಹರಹಳ್ಳಿಯ ಪುಟ್ಟರಾಜು ಎಂಬವರ ಪುತ್ರಿ ಸೌಮ್ಯಾ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಚೇತನ್ ಕಡೆಯವರು, ಸೌಮ್ಯಾಳ ತಂದೆಯೊಂದಿಗೆ ಮಾತನಾಡಿ ಇಬ್ಬರಿಗೆ ಮುದುವೆ ಮಾಡುವ ಪ್ರಸ್ತಾಪ ಇಟ್ಟರು. ಇದಕ್ಕೆ ಸೌಮ್ಯಾಳ ತಂದೆ ಒಪ್ಪಲಿಲ್ಲ. ಆಗ ಚೇತನ್ ಮತ್ತು ಸೌಮ್ಯಾ ಸೇರಿ ಒಂದು ಯೋಜನೆ ರೂಪಿಸಿದ್ದಾರೆ.
ನಮ್ಮ ತಂದೆ ಬೇರೆಯವರಿಗೆ ಕೊಟ್ಟು ವಿವಾಹ ಮಾಡಲು ಮುಂದಾಗಿದ್ದಾರೆ. ಆದ್ದರಿಂದ ಎಲ್ಲಾದರೂ ಹೋಗಿ ಮದುವೆ ಮಾಡಿಕೊಳ್ಳೋಣ ಎಂದಿದ್ದಾಳೆ ಸೌಮ್ಯಾ. ಇದಕ್ಕೆ ಚೇತನ್ ಕೂಡ ಒಪ್ಪಿದ್ದಾನೆ. ನಂತರ ಹೇಗೆ ಹೋಗುವುದು ಎಂದು ಯೋಚಿಸಿದಾಗ ಅವರಿಬ್ಬರಿಗೆ ಹೊಳೆದಿದ್ದು ಅಪಹರಣದ ನಾಟಕ. ಅದರಂತೆ 'ನಾನು ಪರೀಕ್ಷೆ ಬರೆಯಲು ಕಾಲೇಜಿನ ಬಳಿ ಬರುತ್ತೇನೆ. ಆಗ ನೀನು ಅಲ್ಲಿಗೆ ಬಾ' ಎಂದು ಸೌಮ್ಯಾ ಹೇಳಿದ್ದಾಳೆ. ಅದರಂತೆ ಚೇತನ್ ನ.18 ರಂದು ಬೆಳಗ್ಗೆ 9ಕ್ಕೆ ಕಾಲೇಜು ಸಮೀಪ ಮಾರುತಿ ವ್ಯಾನ್ ತಂದು, ಕೂಡಲೇ ಸೌಮ್ಯಾಳನ್ನು ಹತ್ತಿಸಿಕೊಂಡು ರಭಸದಿಂದ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ಕಿಡ್ನಾಪ್ ಎಂದು ಬೊಬ್ಬೆ ಹೊಡೆದು ಪೊಲೀಸರಿಗೆ ವಿಷಯ ತಿಳಿಸಿದರು. ಸೌಮ್ಯಾಳ ಮನೆಯವರು ಕೂಡ, ಯಾರು ಹಿಂಗೆ ಮಾಡಿದರು ಎಂಬುದು ನಮಗೆ ಗೊತ್ತಿಲ್ಲ. ಬೆಳಗ್ಗೆ ಮನೆಯಿಂದ ಪರೀಕ್ಷೆ ಬರೆಯಲು ನನ್ನ ಅಣ್ಣನ ಮಗ ಗಿರೀಶ್ನಿಂದ ಬೈಕ್ನಲ್ಲಿ ಹೋಗಿದ್ದಳು. ಇದು ಬಿಟ್ಟರೆ ನಮಗೇನು ಗೊತ್ತಿಲ್ಲ ಎಂದ ಸೌಮ್ಯಾಳ ಪೋಷಕರು, ನಂತರ ಠಾಣೆಗೆ ದೂರು ನೀಡಿದ್ದಾರೆ.
ನಂತರ ಪೊಲೀಸರು, ಅಪಹರಣಕ್ಕೆ ಬಳಸಿದ ಮಾರುತಿ ವ್ಯಾನ್ ನಂಬರ್ ಆಧರಿಸಿ ಪತ್ತೆ ಕಾರ್ಯ ಆರಂಭಿಸಿದರು. ತದನಂತರ ಪ್ರೇಮಿಗಳು ಮಡಿಕೇರಿಯ ಕುಶಾಲನಗರ ಸಮೀಪ ಇರುವ ಹೋಂ ಸ್ಟೇನಲ್ಲಿ ತಂಗಿದ್ದ ಮಾಹಿತಿ ತಿಳಿಯಿತು. ಕೂಡಲೇ ಹಾಸನ ಬಡಾವಣೆ ಠಾಣೆಯ ಎಎಸ್ಸೈ ವಿಜಯಕೃಷ್ಣ ತಂಡ ಇಬ್ಬರನ್ನು ಹಾಸನ ಕ್ಕೆ ಕರೆತಂದಿತು.
ನಂತರ ಇಬ್ಬರನ್ನೂ ವಿಚಾರಿಸಿದಾಗ ವಿವಾಹವಾಗಲು ಪ್ರೇಮಿಗಳು ಆಡಿದ ಅಪಹರಣ ನಾಟಕ ಎಂದು ತಿಳಿದಿದೆ. ಎಸ್ಪಿ ರವಿ ದ್ಯಾಮಪ್ಪ ಚನ್ನಣ್ಣನವರ, ತಮ್ಮ ಕಚೇರಿಗೆ ಪ್ರಿಯಕರ- ಪ್ರಿಯತಮೆಯ ಪೋಷಕರನ್ನು ಕರೆಸಿಕೊಂಡು ಘಟನೆ ವಿವರ ತಿಳಿಸಿದ್ದಾರೆ. ಬೇರೆ ದಾರಿಯಿಲ್ಲದೇ ಪ್ರೇಮಿಗಳ ಪೋಷಕರು ಶ್ರೀ ಸೀತಾರಾಮಾಂಜನೇಯ ದೇವಾಲಯದಲ್ಲಿ ಬುಧವಾರವೇ ವಿವಾಹ ಮಾಡಿದ್ದಾರೆ.
ಪ್ರಿಯಕರ ಪಿಯುಸಿ, ಪ್ರಿಯತಮೆ ಡಿಗ್ರಿ: ಚೇತನ್ಕುಮಾರ್ ಓದಿರೋದು ಪಿಯುಸಿ. ಸೌಮ್ಯಾ ಪಿಯುಸಿ ಮುಗಿಸಿ ಮೈಸೂರು ಮುಕ್ತ ವಿವಿಯಲ್ಲಿ ಫೈನಲ್ ಇಯರ್ ಬಿ.ಎ ವ್ಯಾಸಂಗ ಮಾಡುತ್ತಿದ್ದಾಳೆ. ಚೇತನ್ ಕಾಲೇಜು ಬಿಟ್ಟ ನಂತರ ವ್ಯಾಪಾರ ಮಾಡುತ್ತಿದ್ದಾನೆ. ಯುವತಿ ನಗರಕ್ಕೆ ಬರುತ್ತಿದ್ದಾಗ ಪರಸ್ಪರ ಪರಿಚಯವಾಗಿದ್ದು ಪ್ರೇಮಕ್ಕೆ ತಿರುಗಿ ಈ ವಿವಾಹದಲ್ಲಿ ಅಂತ್ಯವಾಗಿದೆ.
ಪೋಷಕರು ಒಪ್ಪದ ಕಾರಣ ಹೀಗೆ ಮಾಡಿದ್ದಾರೆ. ಕೊನೆಗೆ ಇಬ್ಬರನ್ನು ಪತ್ತೆ ಮಾಡಿ ಕರೆತಂದು ಪೋಷಕರ ಒಪ್ಪಿಗೆಯ ಮೇರೆಗೆ ವಿವಾಹ ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ನೀವು ಬಾಳಿ ಬದುಕುವ ಮಹತ್ತರವಾದ ಜವಾಬ್ದಾರಿ ಇದೆ ಎಂದು ಬುದ್ಧಿವಾದ ಹೇಳಿ ಇಬ್ಬರನ್ನು ಕಳುಹಿಸಿದ್ದೇನೆ.
-ರವಿ ದ್ಯಾಮಪ್ಪ ಚನ್ನಣ್ಣನವರ್, ಎಸ್ಪಿ
ನಾನು ಸ್ವಇಚ್ಛೆಯಿಂದ ವ್ಯಾನ್ ಹತ್ತಿ ಹೋದೆ. ನಾವಿಬ್ಬರು ಪ್ರೀತಿಸುತ್ತೇವೆ ಎಂದು ತಿಳಿಸಿದ್ದರೂ ಮನೆಯವರು ಮದುವೆ ಮಾಡಿಕೊಳ್ಳಲು ಒಪ್ಪದ ಕಾರಣ ಹೀಗೆ ಮಾಡಿದೇವು.
-ಸೌಮ್ಯಾ
ನಮ್ಮನೆಯವರು ಹೋಗಿ ಮದುವೆ ಮಾಡಿಕೊಡು ಎಂದು ಕೇಳಿದಾಗ ಸೌಮ್ಯಾಳ ಅಪ್ಪ ಹೆಣ್ಣು ಕೊಡಲ್ಲ ಎಂದುಬಿಟ್ಟರು. ನಂತರ ಬೇರೆ ದಾರಿಯಿಲ್ಲದೇ ಅಪಹರಣ ಮಾಡಿಕೊಂಡು ಹೋಗುವಂತೆ ಮಾಡಲಾಯಿತು.
-ಚೇತನ್ಕುಮಾರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

