ಬಾಲ್ ಬ್ಯಾಡ್ಮಿಂಟನ್: ತೃತೀಯ ಸ್ಥಾನ
ಜಾವಗಲ್: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಾಲಕಿಯರು ಬಾಗಲಕೋಟೆಯಲ್ಲಿ ನಡೆದ ಪಿಯು ಕಾಲೇಜುಗಳ ರಾಜ್ಯಮಟ್ಟದ ಬಾಲ್ಬ್ಯಾಡ್ಮಿಂಟನ್ ಪಂದ್ಯದಲ್ಲಿ ತೃತೀಯ ಸ್ಥಾನ ಪಡೆದು ಕಾಲೇಜಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಪ್ರಾಂಶುಪಾಲ ವಸಂತರಾಜ ಅರಸ್ ವಿಜೇತ ಬಾಲಕಿಯರಾದ ಪ್ರೇಮ, ಅಮೃತ, ಪವಿತ್ರ, ರಚನಾ, ತನುಶ್ರೀರನ್ನು ಅಭಿನಂದಿಸಿ ಪಾರಿತೋಷಕ ನೀಡಿ ಗೌರವಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಈ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಕ್ರೀಡಾ ಶಿಕ್ಷಕರಿಲ್ಲದಿದ್ದರೂ, ಉಪನ್ಯಾಸಕ ಮಂಜುನಾಥ್ ಮಾರ್ಗದರ್ಶನದಲ್ಲಿ ಸತತ ಪ್ರಯತ್ನದಿಂದ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆಂದರು. ಉಪನ್ಯಾಸಕ ಮಂಜುನಾಥ್, ಎನ್.ಉದಯ್ಕುಮಾರ್, ಬಿ.ಎಂ.ನಾಗರಾಜ್, ಎಚ್.ಕೆ.ಉದಯಕುಮಾರ್ ಮಾತನಾಡಿ ಕ್ರೀಡೆಯು ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು ವಿದ್ಯಾರ್ಥಿಗಳು ಓದಿನೊಂದಿಗೆ ಕ್ರೀಡೆಗೂ ಗಮನ ನೀಡಬೇಕೆಂದರು. ಉಪನ್ಯಾಸಕ ಶಿವಲಿಂಗಯ್ಯ, ಸ್ವಪ್ನ, ತಬಸಂ, ಲತಾ, ನಾಗೇಶ್, ಶ್ರೀನಿವಾಸ್ ಇದ್ದರು.
ರು. 1,100 ಬೆಲೆಯ ಮದ್ಯ ವಶ
ಹಾಸನ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಬುಧವಾರ ನಡೆದಿದೆ. ತಾಲೂಕಿನ ದುದ್ದ ಹೋಬಳಿ, ಚೀರನಹಳ್ಳಿ ಹೊಸೂರು ಗ್ರಾಮದ ಚಂದ್ರಶೇಖರ(43) ತಮ್ಮ ಮನೆಯ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ದುದ್ದ ಠಾಣೆ ಪಿಎಸ್ಐ ಜಗದೀಶ್ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಚಂದ್ರಶೇಖರ್ನ್ನು ಬಂಧಿಸಿ, ಮಾರಾಟಕ್ಕಿಟ್ಟಿದ್ದ 1,100 ರು. ಬೆಲೆಯ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಮಟ್ಕಾ-ಇಬ್ಬರ ಬಂಧನ
ಹಾಸನ: ಅಕ್ರಮವಾಗಿ ಮಟ್ಕಾ ಜೂಜಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಬುಧವಾರ ನಡೆದಿದೆ.
ಹಾಸನದ ಮಿರ್ಜಾಮೊಹಲ್ಲಾ ಸ್ಟ್ಯಾಂಡ್ ಹತ್ತಿರ ಮಟ್ಕಾ ಆಡುತ್ತಿದ್ದಾಗ ಪೆನ್ಷ್ನ್ ಮೊಹಲ್ಲಾ ಠಾಣೆಯ ಪಿ ಎಸ್ಐ ಮೋಹನ್ಕುಮಾರ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಮಟ್ಕಾ ಜೂಜಾಡಿಸುತ್ತಿದ್ದ ಅಂಬೇಡ್ಕರ್ ನಗರದ ಆದಿಲ್ (28) ಎಂಬಾತನನ್ನು ಬಂಧಿಸಿದ್ದು, ಮಟ್ಕಾ ಜೂಜಾಟದಿಂದ ಗಳಿಸಿದ್ದ 205 ನಗದು ವಶಪಡಿಸಿಕೊಂಡಿದ್ದಾರೆ. ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಹಾಸನ ನಗರ ಬಂಬೂ ಬಜಾರ್ನಲ್ಲಿ ಮಟ್ಕಾ ಜೂಜಾಟ ಆಡುತ್ತಿದ್ದಾಗ ಎಸ್ಐ ಸಂಜೀವೇಗೌಡರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಕಾಂತರಾಜು (23) ಎಂಬಾತನನ್ನು ಬಂಧಿಸಿ, ಮಟ್ಕಾ ಜೂಜಾಟದಿಂದ ಗಳಿಸಿದ್ದ 1,065 ರು. ನಗದನ್ನು ವಶಪಡಿಸಿಕೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸಳೆ ಹೊಸಳ್ಳಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ
ಹಾಸನ: ಮೊಸಳೆ ಹೊಸಹಳ್ಳಿ ವಿವಿ ಕೇಂದ್ರದಲ್ಲಿ ಬ್ರೇಕರ್ ಅಳವಡಿಸುವ ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ನ. 23 ರಂದು ಬನವಾಸೆ, ಮಾದಾಪುರ, ಮುತ್ತಿಗೆ ಹಿರೇಹಳ್ಳಿ, ಎ.ಗುಡುಗನಹಳ್ಳಿ, ಕಿತ್ತಾನೆ, ತೆರಣ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ವಿದ್ಯುತ್ಸ್ರಬರಾಜು ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ಹಾಸನದ ಚಾವಿಸನಿನಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
ಬೆಂಬಲ ಬೆಲೆಯಲ್ಲಿ ಜೋಳ ಖರೀದಿ: ಜಿಲ್ಲಾಧಿಕಾರಿಗೆ ಮನವಿ
ಹಾಸನ: ಜೋಳ ಬೆಳೆಗೆ ಮಾರುಕಟ್ಟೆಯಲ್ಲಿ ದರ ಕುಸಿತವಾಗಿದ್ದು ಪ್ರತಿ ಕ್ವಿಂಟಾಲ್ಗೆ ಕೇವಲ 600ರಿಂದ 800ರು.ಗಳಿಗೆ ವಿಕ್ರಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ 1300ರು.ಗಳ ಬೆಂಬಲ ಬೆಲೆ ನಿಗದಿಪಡಿಸಿ ಸರ್ಕಾರದಿಂದ ಜೋಳ ಖರೀದಿಗೆ ತುರ್ತು ಸಭೆ ನಡೆಸಬೇಕೆಂದು ಹಾಸನ ಶಾಸಕ ಎಚ್.ಎಸ್.ಪ್ರಕಾಶ್ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.
'ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧಿಸುವ ಬಯಕೆ'
ಚನ್ನರಾಯಪಟ್ಟಣ: ಮುಂದಿನ ತಿಂಗಳು ನಡೆಯಲಿರುವ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ತಾವು ಸ್ಪರ್ಧಿಸಲು ಬಯಸಿದ್ದೇನೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಬಾಗೂರು ಮಂಜೇಗೌಡ ತಿಳಿಸಿದರು.
ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ
ಹಾಸನ: ಮಾಳವೀಕ ಶಾಲೆ ಆವರಣದಲ್ಲಿ ಮಲೆನಾಡು ತಾಂತ್ರಿಕ ಕಾಲೇಜು ವಿದ್ಯಾರ್ಥಿ ಘಟಕದಿಂದ ಏರ್ಪಡಿಸಲಾಗಿದ್ದ ನಾನಾ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಾನಾ ಶಾಲೆಯ ಮಕ್ಕಳು ಭಾಗವಹಿಸಿದ್ದರು. ರಂಗೋಲಿ ಸ್ಪರ್ಧೆ, ಭರತ ನಾಟ್ಯ, ಚಿತ್ರಕಲೆ, ಹಾಡುವುದು ಸೇರಿದಂತೆ ಇತರೆ ಸ್ಪರ್ಧೆಯಲ್ಲಿ 54 ಶಾಲೆಯಿಂದ 2 ಸಾವಿರ ಮಕ್ಕಳು ಭಾಗವಹಿಸಿದ್ದರು. 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಭಾಗವಹಿಸಿಲು ಅವಕಾಶ ನೀಡಿಲಾಗಿತ್ತು. ರೋಟರಿ ಅಧ್ಯಕ್ಷ ಸುಧೀರ್ ಪೈ,ಕಾರ್ಯದರ್ಶಿ ಸಿ.ವಿದ್ಯಾಶ್ರೀ,ರಮೇಶ್, ಮದನಕುಮಾರ್, ವೀಕ್ಷಿತ್, ಮಧುಕರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

