ಭಕ್ತ್ತಿ ಪರಂಪರೆ ಮುಂದುವರಿಸಿ: ಸ್ವಾಮೀಜಿ
ಚನ್ನರಾಯಪಟ್ಟಣ: ಭೂ ಮಂಡಲದಲ್ಲಿರುವ ದೇಶಗಳಲ್ಲಿ ಭಾರತ ಪುಣ್ಯ ಭೂಮಿ ಎಂದು ಹೆಸರು ಗಳಿಸಿದೆ. ಇಂತಹ ಪುಣ್ಯ ಭೂಮಿಯಲ್ಲಿ ಹಿರಿಯರು ಬೆಳಸಿಕೊಂಡು ಬಂದಂತಹ ಭಕ್ತಿ ಪರಂಪರೆಯನ್ನು ನಾವು ಮುಂದುವರಿಸಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದಸ್ವಾಮೀಜಿ ಕರೆ ನೀಡಿದರು.
ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಕಬ್ಬಳಿ ಬಸವೇಶ್ವರ ಸ್ವಾಮಿ ಸನ್ನಿಧಾನದಲ್ಲಿ ನಡೆದ 82ನೇ ವರ್ಷದ ದನಗಳ ಜಾತ್ರಾ ಮಹೋತ್ಸವ ಹಾಗೂ ಕಾರ್ತೀಕ ಮಾಸದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ನಡೆದ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿ ಮತ್ತು ನಿರ್ಮಲಾನಂದನಾಥ ಸ್ವಾಮಿಗಳ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಚೌಡೇಶ್ವರಿ, ಬಸವೇಶ್ವರ ಸ್ವಾಮಿ ತೆಪ್ಪೋತ್ಸವದ ನಂತರ ಮಾತನಾಡಿದರು.
ಅಮೇರಿಕಾದಿಂದ ಭಾರತಕ್ಕೆ ವಾಪಸ್ಸಾದ ನಂತರ ವಿವೇಕಾನಂದರು ಈ ಪುಣ್ಯ ಭೂಮಿಯ ಮಣ್ಣನ್ನು ತಮ್ಮ ಮೈಮೇಲೆ ಸುರಿದುಕೊಂಡು ಆನಂದಿಸಿದರೆಂದು ತಿಳಿಸಿದರು.
ಮನುಷ್ಯನಲ್ಲಿರುವ ಅಜ್ಞಾನದ ತೆರೆಯನ್ನು ಸರಿಸಬೇಕು. ಅಂಧ ಪ್ರೀತಿ ಹಾಗೂ ಅಂಧ ಶ್ರದ್ಧೆ ಒಳ್ಳ್ಳೆಯದಲ್ಲ. ಇಂದಿನ ಯುಗದಲ್ಲಿ ಮಾನವ ಸಂಬಂಧಗಳು ಹೆಚ್ಚು ಬೆಸೆಯುವಂತಾಗಬೇಕು. ವಿಭಕ್ತ ಕುಟುಂಬಗಳು ಹೆಚ್ಚಾಗಿ ಅವಿಭಕ್ತ ಕುಟುಂಬಗಳಲ್ಲಿ ದೊರೆಯುತ್ತಿದ್ದ ಸುಖ ಸಂತೋಷ ಮಾಯವಾಗಿದೆ ಎಂದರು.
ವೈಜ್ಞಾನಿಕ ಸತ್ಯ ಕಾಲಘಟ್ಟದಲ್ಲಿ ಅಸತ್ಯವಾಗುತ್ತದೆ ಹೇಗೆಂದರೆ ಒಬ್ಬ ವಿಜ್ಞಾನಿ ಕಂಡು ಹಿಡಿದು ಪ್ರತಿಪಾದಿಸಿ ತತ್ವವನ್ನು ಕೆಲವು ವರ್ಷಗಳ ನಂತರ ಮತ್ತೊಬ್ಬ ವಿಜ್ಞಾನಿ ಸುಳ್ಳು ಮಾಡುತ್ತಾನೆ. ಕಬ್ಬಳಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿಯೇ ಪಂಚ ಲಿಂಗಗಳ ದೇವರನ್ನು ಸೇರಿಸಿ ಬೃಹತ್ ದೇವಾಲಯ ನಿರ್ಮಾಣ ಮಾಡಲಾಗುತ್ತದೆ ಇದಕ್ಕೆ ಗ್ರಾಮಸ್ಥರ ಹಾಗೂ ಭಕ್ತರ ತನು,ಮನ ಹಾಗೂ ಧನ ನೀಡಲು ಕೋರಿದರು.
ಶಾಸಕ ಸಿ.ಎನ್.ಬಾಲಕೃಷ್ಣ, ಜಿಪಂ ಉಪಾಧ್ಯಕ್ಷ ಎಚ್.ಎಸ್.ವಿಜಯ್ಕುಮಾರ್, ಹಿರೀಸಾವೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎ.ಗೋಪಾಲಸ್ವಾಮಿ, ಪ್ರೊ. ಕೃಷ್ಣೇಗೌಡ ಮಾತನಾಡಿದರು. ಕಾಂಗ್ರೆಸ್ ಮುಖಂಡ ಕಬ್ಬಳ್ಳಿ ರಂಗೇಗೌಡ ಸ್ವಾಗತಿಸಿದರು. ವಾರಿಧಿ ತಂಡ ಕೋಲಾಟದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿತು ಪತ್ರಕರ್ತ ಮದನ್ಗೌಡ ನಿರೂಪಿಸಿದರು.
ಹಾಸನ ಶಾಖಾ ಮಠದ ಶುಭುನಾಥಸ್ವಾಮೀಜಿ ಆಶೀರ್ವಾದ ನೀಡಿದರು. ಕಬ್ಬಳ್ಳಿ ಶಿವಪುತ್ರ ಸ್ವಾಮೀಜಿ, ಶೃಂಗೇರಿ ಗುಣನಾಥ ಸ್ವಾಮೀಜಿ, ದಸರೀಘಟ್ಟದ ಚಂದ್ರಶೇಖರ ಮಹಾ ಸ್ವಾಮೀಜಿ, ಹನುಂಥನಾಥ ಸ್ವಾಮೀಜಿ, ಲಕ್ಷ್ಮಿನಾರಾಯಣ ಸ್ವಾಮೀಜಿ, ಹಾಸನ ಒಕ್ಕಲಿಗರ ಸಂಘದ ಅಧ್ಯಕ್ಷ ಮುದ್ದೇಗೌಡ ಹಾಗೂ ಕಬ್ಬಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಉಪಸ್ಥಿತರಿದ್ಧರು.
ಬೆಳಗಿನ ಪೂಜಾ ವಿಧಿವಿಧಾನ: ಬೆಳಗ್ಗೆ 7.30 ರ ರಿಂದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಬಸವೇಶ್ವರ ಸ್ವಾಮಿ ಪೂಜೆ, ಅಭಿಷೇಕ ನಡೆಯಿತು. ನಂತರ 11 ಗಂಟೆಗೆ ದೇವಾಲಯ ಆವರಣದಿಂದ ಹೂವಿನಿಂದ ಅಲಂಕೃತಗೊಳಿಸಿದ್ದ ತೇರಿಗೆ ಪೂಜೆ ನೆರವೇರಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು. ಬಸವೇಶ್ವರಮೂರ್ತಿಯುಳ್ಳ ತೇರು ದೇವಾಲಯದ ಹಾಗೂ ಜಾತ್ರೆಯ ಸುತ್ತಲೂ ಸುತ್ತಿ, ಮತ್ತೆ ದೇವಾಲಯದ ಆವರಣಕ್ಕೆ ಬಂದಿತು.
ಅಕ್ಕಪಕ್ಕದ ಹಾಗೂ ದೂರದ ಊರುಗಳಿಂದ ರೈತರು ತಮ್ಮ ಹಸುಗಳನ್ನು ಕರೆತಂದು ದೇವಾಲಯದ ಸುತ್ತ ಪ್ರದಕ್ಷಣೆ ಹಾಕಿಸಿ, ತೀರ್ಥವನ್ನು ವಿನಿಯೋಗಿಸಿಕೊಂಡು ಹೋಗುತ್ತಿದ್ದರು.
ನಿರ್ಮಲಾನಂದನಾಥ ಸ್ವಾಮಿಜಿ ಮಾತನಾಡಿ, ಈ ಕ್ಷೇತ್ರವು ಚುಂಚನಗಿರಿ ಮಠದ ವ್ಯಾಪ್ತಿಗೆ ಬಂದ ನಂತರ ಗ್ರಾಮೀಣರ ಆಶಾ ಕಿರಣವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಜತೆಗೆ ಕ್ಷೇತ್ರದ ಮಹಿಮೆಯೂ ಅಪಾರವಾದುದು. ಪಂಚಲಿಂಗಗಳಿಂದ ಕೂಡಿದ ತಪೋವನದಂತೆ ಕಂಗೊಳಿಸುತ್ತಿದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇಲ್ಲಿ ಯಾವುದೇ ಕೊರತೆಯಾಗದಂತೆ ನಿರ್ವಹಿಸಲಾಗಿದೆ.
ಬಹುಮುಖ್ಯವಾಗಿ ಈಗಿರುವ ದೇವಾಲಯವು ಚಿಕ್ಕದಾಗಿದ್ದು, ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕೆಂಬುದು ಬಾಲಗಂಗಾಧರನಾಥ ಸ್ವಾಮೀಜಿಯ ಕನಸಾಗಿತ್ತು. ಅವರೇ ಈ ದೇವಾಲಯ ನಿರ್ಮಾಣಕ್ಕೆ ನೀಲ ನಕ್ಷೆ ತಯಾರಿಸಿದ್ದು, ಅದರಂತೆ ಕೆಲವೇ ದಿನಗಳಲ್ಲಿ ದೇವಾಲಯವನ್ನು ಬೃಹತ್ ಪ್ರಮಾಣದಲ್ಲಿ ನಿರ್ಮಿಸಲಾಗುವುದು ಎಂದರು.
ಕೃಷಿ ಮೇಳ: ಜಾತ್ರಾ ಮಹೋತ್ಸದಲ್ಲಿ ಮೊದಲ ಭಾರಿಗೆ ಜಿಲ್ಲಾ ಪಂಚಾಯ್ತಿ ವತಿಯಿಂದ ಆಯೋಜಿಸಿರುವ ಕೃಷಿ ಮೇಳವು ವಿಶೇಷ ಆಕರ್ಷಣೆಯಾಗಿತ್ತು. ಅರಣ್ಯ ಇಲಾಖೆಯಿಂದ ಮರಗಳ ಸಂರಕ್ಷಣೆಯ ಬಗ್ಗೆ ಮಾಹಿತಿ, ಇಲಾಖೆಯಿಂದ ಕೃಷಿ ಬಗ್ಗೆ ಮಾಹಿತಿ, ರೇಷ್ಮೆ ಇಲಾಖೆಯ ರೇಷ್ಮೆ ಕೃಷಿ ಹಾಗೂ ವಸ್ತು ಪ್ರದರ್ಶನ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ, ವಿಜಯಲಕ್ಷ್ಮೀ ಸ್ತ್ರಿಶಕ್ತಿ ಸಂಘಗಳು ಮಾಹಿತಿ ನೀಡಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

