ಶಾಸಕರಿಂದ ಅಹೋರಾತ್ರಿ ಧರಣಿ
ಕ.ಪ್ರ.ವಾರ್ತೆ ಚನ್ನರಾಯಪಟ್ಟಣ ನ. 22
ತಾಲೂಕಿನಲ್ಲಿ ಭೀಕರ ಬರಗಾಲವಿದ್ದರೂ ರಾಜ್ಯ ಸರ್ಕಾರ ಬರಗಾಲ ಪೀಡಿತ ಪಟ್ಟಿಗೆ ತಾಲೂಕನ್ನು ಸೇರಿಸದಿರುವ ರಾಜ್ಯ ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿ ಶಾಸಕ ಸಿ.ಎನ್.ಬಾಲಕೃಷ್ಣ ಮಿನಿ ವಿಧಾನಸೌಧ ಮುಂಭಾಗದಲ್ಲಿ ಶುಕ್ರವಾರ ಸಂಜೆ ಆಹೋರಾತ್ರಿ ಧರಣಿ ಪ್ರಾರಂಭಿಸಿದರು. ಇದಕ್ಕೆ ತಾಲೂಕಿನ ಜನತೆ ತುಂಬು ಬೆಂಬಲ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ರಾಜ್ಯದ 64 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದು, ಚನ್ನರಾಯಪಟ್ಟಣ ತಾಲೂಕನ್ನು ಪಟ್ಟಿಯಿಂದ ಕೈ ಬಿಟ್ಟಿರುವುದನ್ನು ಖಂಡಿಸಿ ಶಾಸಕರು ತಮ್ಮ ಬೆಂಬಲಿಗರೊಂದಿಗೆ ತಾಲೂಕು ಪಂಚಾಯಿತಿಯ ತಮ್ಮ ಕಚೇರಿಯಿಂದ ಕಾಲ್ನಡುಗೆಯಲ್ಲಿ ಸಾಗಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮಿನಿ ವಿಧಾನ ಸೌಧಕ್ಕೆ ತೆರಳಿ ಆಹೋರಾತ್ರಿ ಧರಣಿ ಕೈಗೊಂಡರು.
ಆಹೋರಾತ್ರಿ ಧರಣಿ ಕೈಗೊಳ್ಳಲು ಹಾಕಿದ್ದ ಶಾಮಿಯಾನದ ಬಳಿಗೆ ಬಂದ ಶಾಸಕ ಬಾಲಕೃಷ್ಣ ಅವರು ಮಹಾತ್ಮಗಾಂಧಿ ಭಾವಚಿತ್ರಕ್ಕೆ ಹಾರ ಹಾಕಿ ನಮಿಸಿ ನಂತರ ಧರಣಿ ಆರಂಭಿಸಿದರು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ತಾಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟ ದಿನದಿಂದಲೇ ಸರ್ಕಾರ ತಾಲೂಕಿನಲ್ಲಿ ಆಗಿರುವ ಬೆಳೆ ನಷ್ಟವನ್ನು ರೈತರಿಗೆ ನೀಡುವಂತೆ ಒತ್ತಾಯಿಸುತ್ತಿದ್ದರೂ ತಮ್ಮ ಕೂಗಿಗೆ ಬೆಲೆ ಸಿಗಲಿಲ್ಲ. ಸರ್ಕಾರ ರಾಜ್ಯದ ಬರಪೀಡಿತ ತಾಲೂಕುಗಳನ್ನು ನಿರ್ಧರಿಸುವ ಸಂದರ್ಭದಲ್ಲಿ ತಮ್ಮ ತಾಲೂಕು ಸೇರುತ್ತದೆ ಎಂದು ನಂಬಿಕೆಯಿಟ್ಟಿದ್ದು ಅದರಲ್ಲಿ ತಾರತಮ್ಯ ಮಾಡಿರುವುದರಿಂದ ತಾಲೂಕಿನ ಜನತೆಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.
ಗುಳೆ ಹೋಗುವ ಪರಿಸ್ಥಿತಿ: ತಾಲೂಕಿನ ಪ್ರಮುಖ ಬೆಳೆಯಾದ ತೆಂಗಿನ ಮರಗಳು ಮಳೆಯಿಲ್ಲದೆ ಸುಳಿ ಒಣಗಿ ಹೋಗಿವೆ. ರಾಗಿ ಇಳುವರಿಯಲ್ಲಿ ಕುಸಿತ ಕಂಡಿದೆ. ಜನತೆ ತಮ್ಮ ಬದುಕನ್ನು ಸಾಗಿಸುವುದು ಕಷ್ಟಕರವಾಗಿರುವುದರಿಂದ ಗುಳೇ ಹೋಗುವ ಪರಿಸ್ಥಿತಿಗೆ ಬಂದಿದ್ದಾರೆ ಎಂದು ತಿಳಿಸಿದರು.
ಬರಪೀಡಿತವಾಗಿರುವುದರಿಂದ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿಲ್ಲದೆ ಕಸಾಯಿಖಾನೆ ಸೇರುತ್ತಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ಅಧಿಕಾರಿಗಳ ಮುಖೇನ ತರಲಾಗಿದ್ದರೂ ರಾಜ್ಯ ಸರ್ಕಾರ ಸಂಕಷ್ಟದ ಜನತೆಯನ್ನು ಮರೆತು ತಮ್ಮ ರಾಜಕೀಯ ದ್ವೇಷವನ್ನು ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.
ಕಳೆದ ಸಾಲಿನಲ್ಲಿಯೂ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದು, ಕಳೆದ ಸಾಲಿನಲ್ಲಿ ನೀಡಬೇಕಾಗಿರುವ ಹಣವನ್ನೂ ನೀಡದೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಈ ಬಗ್ಗೆ ತಾಲೂಕು ದಂಡಾಧಿಕಾರಿ ಕಡೆಯಿಂದ ಸರ್ಕಾರದ ಗಮನಕ್ಕೆ ತರಲಾಗಿದೆ.
ತಾಲೂಕಿನಲ್ಲಿ ತೆಂಗು ಬೆಳೆ ಹಾಳಾಗಿರುವ ಬಗ್ಗೆ ಕೇಂದ್ರ ಸರ್ಕಾರ ನಿಯೋಜಿಸಿದ್ದ ಮಾಂಟೆಕ್ಸಿಂಗ್ ಅವರು ತಾಲೂಕಿನಲ್ಲಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಆ ವರದಿ ಆಧಾರವಾಗಿಟ್ಟು ಕೊಂಡಾದರೂ ಸರ್ಕಾರ ತಮ್ಮ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬಹುದಾಗಿತ್ತು ಎಂದು ತಿಳಿಸಿದರು.
ಜಿಲ್ಲೆಯ ಎರಡು ತಾಲೂಕುಗಳಲ್ಲಿ ಬರಪೀಡಿತವೆಂದು ಘೋಷಣೆ ಮಾಡಿದ್ದು, ಅಲ್ಲಿನ ಮಳೆ ನೀರಾವರಿ ಸೌಲಭ್ಯದ ಅಂಕಿ ಅಂಶವನ್ನು ತೆಗೆದುಕೊಂಡು ಅಧಿಕಾರಿಗಳು ವರದಿ ನೀಡಬಹುದಾಗಿದ್ದು, ಈ ನಿಟ್ಟಿನಲ್ಲಿ ರಾಜಕೀಯ ಪ್ರೇರಣೆಯಿರುವುದು ಖಚಿತವಾಗುತ್ತದೆ ಎಂದು ಹೇಳಿದರು.
10 ಸಾವಿರ ರು. ದಂಡ: ತಾಲೂಕಿನಲ್ಲಿನ ಕೃಷಿ ಪಂಪ್ಸೆಟ್ಗಳನ್ನು ರೈತರು ಸಕ್ರಮಗೊಳಿಸಬೇಕಾದರೆ 10 ಸಾವಿರ ರು. ದಂಡವನ್ನು ಸೆಸ್ಕ್ ಇಲಾಖೆಗೆ ನೀಡಬೇಕಾಗಿದೆ. ಬೇರೆ ತಾಲೂಕಿನಲ್ಲಿರುವಂತೆ ತಮ್ಮ ತಾಲೂಕಿನ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರೂ ಅದು ಪ್ರಯೋಜನವಾಗಿಲ್ಲ. ಈ ಬಗ್ಗೆ ಬೆಳಗಾಂ ಅಧಿವೇಶನದಲ್ಲಿ ಚರ್ಚಿಸಲು ಅವಕಾಶ ಕೋರಲಾಗಿದೆ ಎಂದು ತಿಳಿಸಿದರು.
ಧರಣಿ ಘೋಷಣೆಯಾಗುವವರೆಗೆ: ಬರಗಾಲದಿಂದ ಕೂಡಿರುವ ತಮ್ಮ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವವರಗೆ ತಾವು ಧರಣಿಯನ್ನು ಹಿಂತೆಗೆದುಕೊಳ್ಳಬಾರದೆಂದು ನಿರ್ಧರಿಸಿ ಧರಣಿ ಕುಳಿತಿದ್ದು, ತಮ್ಮ ಪಕ್ಷದ ನಾಯಕರು ಮುಂದೆ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ದನಾಗಿದ್ದೇನೆ ಎಂದರು.
ಜಿಪಂ ಅಧ್ಯಕ್ಷೆ ಅಂಬಿಕಾರಾಮಕೃಷ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಪರಮದೇವರಾಜೇಗೌಡ, ಜಿಪಂ ಸದಸ್ಯ ಶಿವಶಂಕರ್ಕುಂಠೆ, ತಾಪಂ ಸದಸ್ಯ ಬಸವರಾಜು ಸೇರಿದಂತೆ ಹಲವು ಮುಖಂಡರು ಧರಣಿಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

