ಕಾಮಗಾರಿಗೆ ಮರಳು, ಜಲ್ಲಿ ಸರಿಯಾಗಿ ಒದಗಿಸಿ
ಕ.ಪ್ರ.ವಾರ್ತೆ ಹಾಸನ ನ. 23
ಸರ್ಕಾರಿ ಕಾಮಗಾರಿಗಳಿಗೆ ಮತ್ತು ಸ್ವಂತ ಮನೆ ಕಟ್ಟುವವರಿಗೆ ತೊಂದರೆಯಾಗದಂತೆ ಮರಳು, ಜಲ್ಲಿ ಕಲ್ಲುಗಳನ್ನು ಪೂರೈಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತವಾಗಿ ಸ್ಪಂದಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮರಳು, ಜಲ್ಲಿ, ಕುಡಿಯುವ ನೀರು ಹಾಗೂ ಬರಪೀಡಿತ ಪರಿಸ್ಥಿತಿ ಬಗ್ಗೆ ಅಧಿಕಾರಿಗಳ ಜತೆ ಕೂಲಂಕಶವಾಗಿ ಚರ್ಚಿಸಿದ ಅವರು, ಮರಳು ಮತ್ತು ಜಲ್ಲಿ ಸರಿಯಾಗಿ ಲಭ್ಯವಾಗದ ಕಾರಣ ಸರ್ಕಾರಿ ಕಾಮಗಾರಿಗಳಿಗೆ ತೊಂದರೆಯಾಗುತ್ತಿದೆ. ಕೆಲವು ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಗಿಸಬೇಕಾಗಿರುವುದರಿಂದ ಅಂತಹ ಕಾಮಗಾರಿಗಳು ಸಕಾಲದಲ್ಲಿ ಮರಳು ಮತ್ತು ಜಲ್ಲಿ ಕಲ್ಲುಗಳನ್ನು ಒದಗಿಸದಿದ್ದರೆ ಕಾಮಗಾರಿಗೆ ಅಡಚಣೆ ಉಂಟಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಜೊತೆಗೆ ಸಕಾಲದಲ್ಲಿ ಬಿಡುಗಡೆಯಾಗಿರುವ ಹಣವನ್ನು ಬಳಸಿಕೊಳ್ಳದಿದ್ದರೆ ಹಣ ಸರ್ಕಾರಕ್ಕೆ ವಾಪಸ್ ಹೋಗುತ್ತದೆ. ಆದ್ದರಿಂದ ಮೊದಲು ಸರ್ಕಾರಿ ಕಾಮಗಾರಿಗಳಿಗೆ ಮರಳು ಮತ್ತು ಜಲ್ಲಿಯನ್ನು ಒದಗಿಸುವುದಕ್ಕೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ದ್ವೇಷದ ರಾಜಕಾರಣ: ಬರಪೀಡಿತ ಪ್ರದೇಶಗಳು ಸೇರಿದಂತೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಹೊತ್ತುಕೊಂಡಂಥವರು ಗಣನೆಗೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು. ಆದರೆ ಇಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಲ್ಲೆಯ ಮರಳು ಮತ್ತು ಜಲ್ಲಿ ಹೊರ ಜಿಲ್ಲೆಗಳಿಗೆ ಸಾಗಣೆಯಾಗುತ್ತಿದೆ ಎಂಬ ದೂರಗಳಿದ್ದು, ಕೂಡಲೇ ಎಲ್ಲಾ ಕಡೆಗಳಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ ಮರಳು ಮತ್ತು ಜಲ್ಲಿ ಜಿಲ್ಲೆಯಿಂದ ಹೊರ ಹೋಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಮಾತನಾಡಿ, ಮರಳಿಗೆ ಸಂಬಂಧಿಸಿದಂತೆ ಹೊಳೆಯಲ್ಲಿ ನೀರು ಹೆಚ್ಚಿದ್ದರಿಂದ ಮರಳುಗಾರಿಕೆಗೆ ತೊಂದರೆ ಉಂಟಾಗಿತ್ತು. ಪ್ರಸ್ತುತ ಹೊಳೆಯಲ್ಲಿ ನೀರು ಕಡಿಮೆಯಾಗಿದ್ದು, ಒಂದು ವಾರದೊಳಗೆ ಮರಳು ಟೆಂಡರ್ ಕರೆದು ಸಾಗಾಣಿಕೆಗೆ ಅನುಮತಿ ನೀಡಲಾಗುತ್ತದೆ. ಜೊತೆಗೆ ಜಲ್ಲಿಕಲ್ಲಿಗೆ ಸಂಬಂಧಿಸಿದಂತೆ ಸರ್ಕಾರಿ ಕೆಲಸ ಕಾರ್ಯಗಳಿಗೆ ಅಡ್ಡಿಯಾಗದಂತೆ ಜಲ್ಲಿ ಕ್ರಷರ್ ಮಾಡಲು ತಾತ್ಕಲಿಕವಾಗಿ ಅನುಮತಿ ನೀಡಿ 15 ದಿನಗಳ ಒಳಗಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಸಭೆಯಲ್ಲಿ ತಿಳಿಸಿದರು.
ಸರ್ಕಾರದ ತಾರತಮ್ಯ: ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಬೇಲೂರು ಮತ್ತು ಅರಕಲಗೂಡು ತಾಲೂಕುಗಳನ್ನು ಬರಬೀಡಿತ ತಾಲೂಕು ಎಂದು ಸೇರಿಸಿದೆ. ಆದರೆ ನಿಜವಾಗಿಯೂ ಬರಗಾಲ ಉಂಟಾಗಿರುವುದು ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ. ಸರ್ಕಾರ ತಮ್ಮ ಪಕ್ಷದ ಶಾಸಕರ ಇದ್ದಾರೆ ಅನ್ನೋ ಕಾರಣಕ್ಕೆ ಈ ರೀತಿ ಮಾಡಿದ್ದು, ಇಷ್ಟರ ಮಟ್ಟಿಗೆ ಕೀಳುಮಟ್ಟದ ರಾಜಕಾರಣವನ್ನು ಸರ್ಕಾರ ಮಾಡಬಾರದು ಎಂದು ದೇವೇಗೌಡರು ಹೇಳಿದರು.
ಜಿಲ್ಲಾಡಳಿತ ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ವರದಿ ಸಲ್ಲಿಸಿದೆ. ಇದರಲ್ಲಿ ಜಿಲ್ಲಾಡಳಿತದ ಯಾವುದೇ ತಪ್ಪಿಲ್ಲ. ಜಿಲ್ಲಾಡಳಿತ ತನ್ನ ಕೆಲಸವನ್ನು ಮಾಡಿದೆ. ಆದರೆ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ನುಡಿದರು.
ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಜಿಲ್ಲೆಯ ಮರಳು ಅಕ್ರಮವಾಗಿ ಬೆಂಗಳೂರು, ಮೈಸೂರು ಸೇರಿದಂತೆ ಹೊರ ಜಿಲ್ಲೆಗಳಿಗೆ ಸಾಗಣೆಯಾಗುತ್ತಿದೆ. ಕೂಡಲೇ ಈ ಅಕ್ರಮ ತಡೆಗಟ್ಟಬೇಕು. ಲಾರಿಗಳಿಗೆ ಜಿಪಿಆರ್ ಅಳವಡಿಸಲಾಗಿದೆ. ಅದನ್ನು ಸರಿಯಾಗಿ ಅಳವಡಿಸದಿದ್ದರೆ, ಜಿಪಿಆರ್ ಅಳಡಿಸುವಂತಹ ಕಂಪನಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಹೇಳಿದರು.
ಅನುಮತಿ ನೀಡದ ಕಾರಣ: ಜಿಲ್ಲೆಯಲ್ಲಿ ಜಲ್ಲಿ ಕ್ರಷರಿಂಗ್ಗೆ ಅನುಮತಿ ನೀಡದ ಕಾರಣ ಸರ್ಕಾರಿ ಕಾಮಗಾರಿಗಳಿಗೆ ಸರಿಯಾಗಿ ಜಲ್ಲಿ ಲಭ್ಯವಾಗುತ್ತಿಲ್ಲ. ಕಾನೂನು ರೀತಿಯಲ್ಲಿ ಕ್ರಮಕೈಗೊಂಡು ಜಲ್ಲಿ ಕ್ರಷರಿಂಗ್ಗೆ ಅವಕಾಶ ಕಲ್ಪಿಸಬೇಕು ಎಂದರು.
ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ ಇಲಾಖೆಯಗಳನ್ನು ಒಟ್ಟುಗೂಡಿಸಿ ಕಾರ್ಯಗಾರವನ್ನು ಮಾಡಬೇಕು. ಇದರಿಂದ ರೈತರಿಗೆ ಮಾಹಿತಿ ನೀಡುವಂತಾಗಬೇಕು. ಜೊತೆಗೆ ಪಶುಗಳಿಗೆ ಅನುಕೂಲವಾಗುವಂತೆ ಮೆಡಿಕಲ್ ಕ್ಯಾಂಪ್ಗಳನ್ನು ಮಾಡಬೇಕು ಎಂದ ಅವರು, ಹಳ್ಳಿಮೈಸೂರು, ಶಾಂತಿಗ್ರಾಮ ಸೇರಿದಂತೆ ಸಾಕಷ್ಟು ಭಾಗಗಳಲ್ಲಿ ಸರಿಯಾಗಿ ಮಳೆಯಾಗಿಲ್ಲ. ಇದರಿಂದ 600ರಿಂದ 700 ಅಡಿಗಳಷ್ಟು ಆಳ ತೋಡಿದರೂ ನೀರು ಲಭ್ಯವಾಗುತ್ತಿಲ್ಲ. ಕೂಡಲೇ ಕ್ರಮಕೈಗೊಳ್ಳದಿದ್ದರೆ ಕುಡಿಯುವ ನೀರಿನ ಸಮಸ್ಯೆಯನ್ನು ಮುಂದೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಜಲ್ಲಿ ಕ್ರಷರಿಂಗ್ ಜಿಲ್ಲಾಡಳಿತ ಅನುಮತಿ ನೀಡದ ಕಾರಣ ಸರ್ಕಾರಿ ಕಾಮಗಾರಿಗಳಿಗೆ ಜಿಲ್ಲಿ ಲಭ್ಯವಾಗುತ್ತಿಲ್ಲ. ಇದರಿಂದ ರಸ್ತೆ ಕಾಮಗಾರಿ ಸೇರಿದಂತೆ ಇದತೇ ಸರ್ಕಾರಿ ಕಾಮಗಾರಿಗೆ ತೊಂದರೆ ಉಂಟಾಗುತ್ತಿದೆ. ಜಲ್ಲಿ ಕ್ರಷರಿಂಗ್ನವರು ಸರ್ಕಾರಿ ಕಾಮಗಾರಿಗೆ ಜಲ್ಲಿ ಸಾಗಿಸದೇ ಖಾಸಗಿಯವರಿಗೆ ಜಲ್ಲಿಯನ್ನು ಸಾಗಿಸುತ್ತಿರುವುದು ಕಂಡ ಬಂದಲ್ಲಿ ಅಂತಹ ಜಲ್ಲಿ ಕ್ರಷರ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಹೇಳಿದರು.
ಬೆಂಗಳೂರಿನಲ್ಲಿ ಜಲ್ಲಿ 15 ರು.ಗಳಿಗೆ ಲಭ್ಯವಾಗುತ್ತಿದ್ದರೆ, ಅರಸೀಕೆರೆಯಲ್ಲಿ 40ರು.ಗಳಿಗೆ ಮಾರಾಟ ವಾಗುತ್ತದೆ. ಆದ್ದರಿಂದ ಕೂಡಲೇ ಜಲ್ಲಿ ಕಲ್ಲು ಲಭ್ಯವಾಗದಿದ್ದರೆ ಈ ವಿರುದ್ಧ ತಾಲೂಕು ಕಚೇರಿಯ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಶಾಸಕ ಎಚ್.ಎಸ್.ಪ್ರಕಾಶ್, ಎಚ್.ಕೆ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಪಂ ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್, ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲಕೃಷ್ಣ ನಾನಾ ಇಲಾಖೆ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

