ಹಾಸನ

ಪ್ರಜ್ಞೆ ತಪ್ಪದ ಸಲಗ ಪಲಾಯನ

Published On :

ಕ.ಪ್ರ.ವಾರ್ತೆ ಆಲೂರು ನ. 23
ಶುಕ್ರವಾರ ಕೊಡಗು ಜಿಲ್ಲೆಯ ಹಂಪಾಪುರ ಸುತ್ತಮುತ್ತಲಿನ ಹುಂಬಲಿ ಬೆಟ್ಟ ಅರಣ್ಯ ಪ್ರದೇಶದಲ್ಲಿ ಎರಡನೇ ದಿನ ಕಾಡಾನೆ ಹಿಡಿಯುವ ಕಾರ್ಯಾಚರಣೆ ಫಲಪ್ರದವಾಗದೆ ಬರಿಗೈಯಲ್ಲಿ ವಾಪಸ್ ಆದ ಅರಣ್ಯ ಇಲಾಖೆಯವರು ಮೂರನೇ ದಿನವಾದ ಶನಿವಾರ ಇಡೀ ದಿನ ಕಾರ್ಯಾಚರಣೆ ನಡೆಸಿದರು. ಕಾಡಾನೆ ಅರವಳಿಕೆ ಚುಚ್ಚುಮದ್ದಿನ ಗುರಿಗೆ ಸಿಲುಕಿದ್ದರೂ ತಪ್ಪಿಸಿಕೊಂಡಿದೆ.
ತಾಲೂಕಿನ ಕಾಗನೂರು ಸುತ್ತಮುತ್ತಲ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ಒಂಟಿ ಸಲಗ ಮೊದಲ ದಿನದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಗುರಿಗೆ ನಿಲುಕದೆ ತಪ್ಪಿಸಿಕೊಂಡಿದ ಅಂದು ರಾತ್ರಿ, ಪುನ: ಸಾಕಾನೆ ಬೀಡು ಬಿಟ್ಟಿದ್ದ ಶಿಬಿರಕ್ಕೆ ನುಗ್ಗಿ ದಾಂದಲೇ ನಡೆಸಲು ಮುಂದಾಗಿತ್ತು. ನಂತರ ರಾತ್ರಿ ಹೇಮಾವತಿ ಹಿನ್ನಿರಿನಲ್ಲಿ ಈಜಿಕೊಂಡು ಕೊಡಗು ಜಿಲ್ಲೆಯ ಹಂಪಾಪುರ ಅರಣ್ಯ ಅರಣ್ಯದಲ್ಲಿ ಶುಕ್ರವಾರ ಕಂಡುಬಂದ ಕಾಡಾನೆಯನ್ನು ಹಿಡಿಯಲು ಅರಣ್ಯಾಧಿಕಾರಿ ಕಾರ್ಯಾಚರಣೆ ನಡೆಸಿದರು.
ಅಂದು ಸಹ ಅರಣ್ಯ ಇಲಾಖೆಯವರಿಗೆ ಚಳ್ಳೇಹಣ್ಣು ತಿನ್ನಿಸಿದ ಕಾಡಾನೆ, ಶನಿವಾರ ಆಲೂರು, ಸಕಲೇಶಪುರ ಗಡಿಭಾಗವಾದ ಕೆರೋಡಿಯ ಅರಣ್ಯದಲ್ಲಿ ಕಂಡು ಬಂತು. ಬೆಳಗ್ಗೆ 9ರಲ್ಲಿ ಕಳೆದ ಕೆಲ ತಿಂಗಳ ಹಿಂದೆ ವ್ಯಕ್ತಿಯೋರ್ವ ಆನೆ ದಾಳಿಗೆ ಮೃತಪಟ್ಟಿದ್ದ, ಕೆರೋಡಿ-ಐಗೂರು ರಸ್ತೆಯ ಅದೇ ಸ್ಥಳದಲ್ಲಿ ಬೆಳಗ್ಗೆ ಕಂಡು ಬಂದ ಒಂಟಿ ಸಲಗಕ್ಕೆ ಅರವಳಿಕೆ ನೀಡಲು ಸಾಕಾನೆಗಳ ಸಹಾಯ ಪಡೆಯದೇ ಅರಣ್ಯ ಇಲಾಖೆಯ ಗುರಿಕಾರರು ಕಾಲ್ನಡಿಗೆಯಲ್ಲಿ ಅರಣ್ಯದೊಳಗೆ ಪ್ರವೇಶಿಸಿ 11ಗಂಟೆಯಲ್ಲಿ ಅರವಳಿಕೆ ಮದ್ದನ್ನು ಕೋವಿಯಿಂದ ಹಾರಿಸಿದಾಗ ಗುರಿ ತಪ್ಪಿದ ಕಾರಣ ಆನೆ ತಪ್ಪಿಸಿಕೊಂಡಿತು. ನಂತರ 12.30ರಲ್ಲಿ ಮತ್ತೊಮ್ಮೆ ಅರವಳಿಕೆ ಮದ್ದನ್ನು ಹಾರಿಸಿದಾಗ ಕೂದಲೆಳೆಯ ಅಂತರದಲ್ಲಿ ಗುರಿತಪ್ಪಿತು.
ಈ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿ ಸಿಬ್ಬಂದಿಗಳ ಮೇಲೆ ಏಕಾಏಕಿ ದಾಳಿ ನಡೆಸಲು ಮುಂದಾಯಿತು. ಕಾಡಾನೆಗಳು ಸಮೀಪಕ್ಕೆ ಬಂದೇಬಿಟ್ಟಿತ್ತು ಎಂದಾಗ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿ, ಅಲ್ಲಿಂದ ಓಡಿ ತಪ್ಪಿಸಿಕೊಂಡರು. ನಂತರ ಆನೆ ಅರಣ್ಯದೊಳಗೆ ಓಡಿ ಹೋಯಿತು. ಇದರಿಂದ ವಿಚಲಿತರಾದ ಅರಣ್ಯ ಇಲಾಖೆಯವರು ಆನೆಗಳ ಮೂಲಕ ಮಧ್ಯಾಹ್ನದ ನಂತರ ಸಾಕಾನೆಗಳ ಸಹಾಯದಿಂದ ಕಾರ್ಯಾಚರಣೆ ನಡೆಸಲು ಮುಂದಾದರು.
ದಟ್ಟ ಅರಣ್ಯದಲ್ಲಿ ಇದ್ದುದ್ದರಿಂದ ಹಾಗೂ ವೇಗವಾಗಿ ಆನೆ ಓಡುತ್ತಿದ್ದರಿಂದ ಅದಕ್ಕೆ ಗುರಿ ಇಡಲು ಸಾಧ್ಯವಾಗುತ್ತಿರಲ್ಲಿಲ್ಲ. ಸಂಜೆ 4ರಲ್ಲಿ ಮೂರನೇ ಬಾರಿ ಅರವಳಿಕೆ ಮದ್ದನ್ನು ನಿಖರವಾಗಿ ಗುರಿಮಾಡುವಲ್ಲಿ ಅರಣ್ಯ ಇಲಾಖೆಯ ಗುರಿಕಾರರು ಸಫಲರಾದರು.
ಈ ಸಂದರ್ಭದಲ್ಲಿ ಆನೆ ಹಿಡಿದೇ ಬಿಟ್ಟರು ಎಂಬ ವದಂತಿ ಹರಡಿ ಜನರು ದೌಡಾಯಿಸಿದರು. ಆದರೆ ಅರವಳಿಕೆ ಮದ್ದಿನ ಪ್ರಮಾಣ ಸರಿಯಾಗಿ ಆನೆಗೆ ನಾಟದೆ ಆನೆ ಅಲ್ಲಿಂದ ಪಲಾನಯಗೈದು, ಕಾಡಾನೆಗಳ ಗುಂಪಿನಲ್ಲಿ ಹೋಗಿ ನಿಂತುಕೊಂಡಿತು. ಈ ಸಂದರ್ಭದಲ್ಲಿ ಅಧಿಕಾರಿಗಳು ಆನೆ ಪ್ರಜ್ಞೆ ತಪ್ಪುತ್ತದೆಂದು ನೋಡಿ ಕಾದು ಕಾದು ಸುಸ್ತಾದರು. ಆದರೆ ಆನೆ ಪ್ರಜ್ಞೆ ತಪ್ಪಲಿಲ್ಲ ಹಾಗೂ ಮೂರ್ನಾಲ್ಕು ಆನೆಯಿಂದ ಹೊರಗೂ ಬರಲಿಲ್ಲ. ಈ ಸಂದರ್ಭದಲ್ಲಿ ಕತ್ತಲೆಯಾದ ಪರಿಣಾಮ ಮೂರನೇ ದಿನದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.
ಸಾಕಾನೆಗಳೊಂದಿಗೆ ಅರಣ್ಯ ಇಲಾಖೆಯವರು ಕೆರೋಡಿ ಬಳಿ ಅರಣ್ಯದಲ್ಲಿ ಕ್ಯಾಂಪ್ ಮಾಡಿದ್ದಾರೆ. ಈಗ ಹಿಡಿಯಲು ಗುರುತಿಸಿರುವ ಒಂಟಿ ಸಲಗ ಹೆಚ್ಚು ದೂರ ಹೋಗದೆ ಆರೇಳು ಕಿಮೀ ನಷ್ಟು ಸುತ್ತಮುತ್ತಲೆ ಸ್ವಲ್ಪಮಟ್ಟಿಗೆ ಸಮಾಧಾನಗೊಂಡಿದ್ದು, ಭಾನುವಾರ ಆನೆಯ ಕಾರ್ಯಾಚರಣೆ ಮಾಡಿ ಸೆರೆ ಹಿಡಿಯುವ ಭರವಸೆಯಲ್ಲಿ ಅಧಿಕಾರಿಗಳು ಇದ್ದಾರೆ. ಅರಣ್ಯ ಇಲಾಖೆಯವರು ಒಂದು ಆನೆಯನ್ನು ಹಿಡಿಯಲು ಪ್ರಾರಂಭಿಸಿ ಮೂರು ದಿನ ಕಳೆದಿದ್ದು, ಈ ಬಗ್ಗೆ ಸುತ್ತಮುತ್ತಲಿನ ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಕೇವಲ ಒಂದು ಆನೆಯ ಹಿಂದೆಯೇ ಸುತ್ತುತ್ತಿದ್ದು, ಈ ಪ್ರದೇಶದಲ್ಲಿ ಮಕ್ನಾ ಸೇರಿದಂತೆ ಒಟ್ಟು 5 ಒಂಟಿ ಆನೆಗಳಿದ್ದು, ಈ ಒಂದು ಆನೆಯಿಂದೇ ಅರಣ್ಯ ಇಲಾಖೆಯವರು ಬಿದ್ದಿರುವುದರಿಂದ ಇತರೆ ಆನೆಗಳು ಬೆಳೆ ಹಾನಿ ಮಾಡುತ್ತಿವೇ ಎಂದು ತಾಲೂಕಿನ ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ. ಈ ಬಾರಿ ಕೇವಲ 2 ಆನೆಗಳನ್ನು ಹಿಡಿಯಲು ಮಾತ್ರ ಅನುಮತಿ ಸಿಕ್ಕಿದೆ ಎಂದು ಅರಣ್ಯ ಇಲಾಖೆಯವರು ತಿಳಿಸುತ್ತಿದ್ದು, ಕೇವಲ ಒಂದು ಆನೆ ಹಿಂಡೇ ಇದ್ದು, ವಾರಗಟ್ಟಲೆ ಕಾಲಹರಣ ಮಾಡದೆ ಈ ಪ್ರದೇಶದಲ್ಲಿ ಹಾನಿ ಮಾಡುತ್ತಿರುವ ಎಲ್ಲಾ ಆನೆಗಳನ್ನು ಹಿಡಿಯದ ಹೊರತು, ಸಿಬ್ಬಂದಿಗಳನ್ನು ಇಲ್ಲಿಂದ ಹೊರಹೋಗಲು  ಬಿಡುವುದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.