ಯಾವ ಪುರುಷಾರ್ಥಕ್ಕಿದ್ದಾರೋ?
ಕ.ಪ್ರ.ವಾರ್ತೆ ಹಾಸನ ನ.23
ಜಿಲ್ಲಾದ್ಯಂತ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರ ಬೆಳೆ, ಆಸ್ತಿ ಪಾಸ್ತಿ ನಷ್ಟವಾಗಿದೆ. ಇದಕ್ಕೆ ಸ್ಪಂದಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಇನ್ನೂ ಈ ಸ್ಥಳಗಳಿಗೆ ಭೇಟಿ ನೀಡಿಲ್ಲ. ಉಸ್ತುವಾರಿ ಸಚಿವರು ಯಾವ ಪುರುಷಾರ್ಥಕ್ಕಾಗಿ ಇದ್ದಾರೋ, ಅವರ ಜವಾಬ್ದಾರಿ ಏನು ಎಂಬುದೇ ತಿಳಿಯದಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಿಡಿಕಾರಿದರು.
ಉಸ್ತುವಾರಿ ಸಚಿವರು, ಶಿಷ್ಟಾಚಾರದ ಪ್ರಕಾರವೇ ಎಲ್ಲಾ ಪಕ್ಷಗಳ ಶಾಸಕರನ್ನು ಹಾನಿಪೀಡಿತ ಮತ್ತು ಬರ ಪೀಡಿತ ಸ್ಥಳಗಳಿಗೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದಲ್ಲಿ ವಾಸ್ತವಾಂಶ ತಿಳಿಯದೇ ಇರಲಾರದು. ಆದರೆ ಉಸ್ತುವಾರಿ ಹಾಗೇ ಮಾಡುತ್ತಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಗೌಡರು ಅಸಮಾಧಾನ ವ್ಯಕ್ತಪಡಿಸಿದರು.
ಕಾಫಿ, ಮೆಣಸು, ಏಲಕ್ಕಿ ನಷ್ಟ: ಬೇಲೂರು ಮತ್ತು ಅರಕಲಗೂಡು ತಾಲೂಕಿನಂತೆ ಸಕಲೇಶಪುರ ತಾಲೂಕಿನಲ್ಲೂ ಅತಿವೃಷ್ಟಿಯಿಂದ ಕಾಫಿ, ಮೆಣಸು, ಏಲಕ್ಕಿ ನಷ್ಟವಾಗಿದೆ. ಅಡಕೆಗೆ ಕೊಳೆರೋಗ ಬಂದು ನಾಶವಾಗಿದೆ. ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕುಗಳು ಮಳೆ ಇಲ್ಲದ ಬರದಿಂದ ತತ್ತರಿಸಿ ಹೋಗಿವೆ. ಜಿಲ್ಲಾಧಿಕಾರಿಗಳೆ ಮಳೆಯಿಲ್ಲದ ಬರದಿಂದ ಕೂಡಿರುವ ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕುಗಳನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಿಸಬೇಕೆಂದು ವರದಿ ನೀಡಿದ್ದಾರೆ. ಆದರೆ ಸರ್ಕಾರ ಇನ್ನೂ ಕ್ರಮ ಜರುಗಿಸಿಲ್ಲ.
ಇದನ್ನು ಗಮನಿಸಿದರೆ ಸರ್ಕಾರ ರಾಜಕೀಯ ದುರುದ್ದೇಶ ಮತ್ತು ರಾಜಕೀಯ ಪ್ರೇರಿತದಿಂದ ಹೀಗೆ ಮಾಡಿದೆ ಎಂದು ತಿಳಿಯಬೇಕಾಗುತ್ತದೆ. ಏನೇ ಆದರೂ ಅಂತಿಮವಾಗಿ ಜನ ಸಾಮಾನ್ಯರು ತೊಂದರೆಗೆ ಒಳಗಾಗುತ್ತಾರೆ. ಆದ್ದರಿಂದ ಸರ್ಕಾರ ರಾಜಕೀಯ ಪ್ರೇರಿತ ನಿರ್ಧಾರಗಳನ್ನು ತೆಗೆದುಕೊಂಡರೆ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಹೋರಾಟ ನಮ್ಮ ಪಕ್ಷದ ಜಾಯಮಾನ ಎಂದು ಗೌಡರು ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಯಾವ ತಾಲೂಕು ಬರಪೀಡಿತ ಎಂಬುದನ್ನು ಸರಿಯಾಗಿ ಗುರುತಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಸರ್ಕಾರ ರಾಜಕೀಯ ಕಾರಣಗಳ ಹಿನ್ನೆಲೆಯಲ್ಲಿ ನಿರ್ಣಯ ಮಾಡಿರುವುದು ದುರಂತ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್.ಎಸ್. ಪ್ರಕಾಶ್, ಪಟೇಲ್ಶಿವರಾಂ, ಸಿ.ಎನ್. ಬಾಲಕೃಷ್ಣ, ಮುಖಂಡ ಜಾವಗಲ್ ರಾಜಶೇಖರ್, ಚನ್ನವೀರಪ್ಪ, ತೊ.ಚ.ಅನಂತಸುಬ್ಬರಾವ್, ಸಿ.ಆರ್. ಶಂಕರ್ ಇತರರು ಇದ್ದರು.
ಅಕ್ರಮ ಗಣಿಗಾರಿಕೆಯಲ್ಲಿ ತಿಮಿಂಗಿಲಗಳೇ ಇದ್ದಾವೆ: ಅಕ್ರಮ ಗಣಿ ಆರೋಪ ಹೊತ್ತವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿರುವ ವಿಚಾರದ ಪ್ರಸ್ತಾಪ ಅನಗತ್ಯ. ಆದರೆ ಅಕ್ರಮ ಗಣಿಗಾರಿಕೆಯಲ್ಲಿ ತಿಮಿಂಗಿಲಗಳೇ ಇದ್ದಾವೆ. ಈ ಬಗ್ಗೆ ಮುಖ್ಯಮಂತ್ರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೇವೇಗೌಡರು ಹೇಳಿದರು.
ಈ ಹಿಂದೆ ಆಡಿದ ಮಾತು ನೆನೆಪಿಸಿಕೊಳ್ಳಲಿ: ಹಿಂದೆ ವಿರೋಧಪಕ್ಷದಲ್ಲಿದ್ದಾಗ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಕಾಂಗ್ರೆಸ್ ಮಹಾಶಯರು ಅಕ್ರಮ ಗಣಿಗಾರಿಕೆ ತನಿಖೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇಂದು ಅವರದ್ದೇ ಸರ್ಕಾರ ಇದೆ, ವಿಶೇಷ ನ್ಯಾಯಾಲಯ ಸ್ಥಾಪಿಸಲಿಲ್ಲ ಏಕೆ?. ಹಾಲಿ ಸಿಎಂ ಜನತಾದಳ ರಾಜ್ಯಾಧ್ಯಕ್ಷರಾಗಿದ್ದಾಗ ಆಡಿದ ಮಾತುಗಳನ್ನು ನೆನಪಿಸಿಕೊಳ್ಳಬೇಕು ಎಂದು ಗೌಡರು ಹೇಳಿದರು.
ವೈಮಾನಿಕ ಸಮೀಕ್ಷೆ ನಡೆಸಲಿ: ಚಾಮರಾಜನಗರದಿಂದ ಕನಕಪುರದವರೆಗೆ ಎಷ್ಟು ಬೆಟ್ಟಗುಡ್ಡಗಳು ಬೋಳಾಗಿವೆ ಎಂಬ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಬೇಕು. ಖಾಲಿ ಆಗುತ್ತಿರುವ ಬೆಟ್ಟಗುಡ್ಡಗಳ ಬಳಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹೋಗಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರವೇ ಅಲ್ಲಿ ರಾಜ್ಯದ ಇತರೇ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆಯೂ ರಾಜ್ಯ ಸರ್ಕಾರ ಗಮನಹರಿಸಬೇಕಾಗಿದೆ ಎಂದರು.
ವಾಜಪೇಯಿಗೆ ಭಾರತರತ್ನ: ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು ಎಂಬುದು ಸಾರ್ವಜನಿಕವಾಗಿ ಚರ್ಚೆ ಆಗಬಾರದು. ಮಾಜಿ ಪ್ರಧಾನಿ ದಿ. ವಿ.ಪಿ. ಸಿಂಗ್, ಅಂಬೇಡ್ಕರ್ ಅವರಿಗೆ ಯಾರನ್ನಾದರೂ ಕೇಳಿ ಭಾರತರತ್ನ ಪ್ರಶಸ್ತಿ ಕೊಟ್ಟರೇ. ಮಹಾನ್ ವ್ಯಕ್ತಿಗಳನ್ನು ಗುರುತಿಸಬೇಕಾದುದು ಸರ್ಕಾರದ ಕರ್ತವ್ಯ. ಭಾರತರತ್ನ ಪ್ರಶಸ್ತಿ ಪಡೆದ ಕನ್ನಡ ವಿಜ್ಞಾನಿ ಸಿ.ಎನ್.ಆರ್. ರಾವ್ ಅವರಾಡಿದ ಮಾತುಗಳ ಸಾಂದರ್ಭಿಕ ಪರಿಸ್ಥಿತಿ ಮತ್ತು ಆಂಗ್ಲ ಭಾಷೆಯ ಅರ್ಥ ಗ್ರಹಿಸಿದೇ ಚರ್ಚೆ ಮಾಡಿದ್ದು ವಿವೇಕವಾದುದ್ದಲ್ಲ ಎಂದು ಗೌಡರು ವಿಷಾದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

