ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸೋಣ: ನಟೇಕರ್
ಕನ್ನಡಪ್ರಭ ವಾರ್ತೆ ಹಾಸನ ನ. 24
ಜನರಲ್ಲಿ, ಶಿಕ್ಷಣದಲ್ಲಿ ತಾರ್ಕಿಕ ಆಲೋಚನೆ, ವೈಜ್ಞಾನಿಕತೆಯ ಹಾದಿಯನ್ನು ಪ್ರಜ್ಞಾಪೂರ್ವಕವಾಗಿಯೇ ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ವಿಜ್ಞಾನದ ಆಂದೋಲನ ನಡೆಯಬೇಕಿದೆ ಎಂದು ವಿಚಾರವಾದಿ ಹಾಗೂ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ನಟೇಕರ್ ಹೇಳಿದರು.
ಜಿಲ್ಲಾ ಬಿಜಿವಿಎಸ್ ಹಾಗೂ ಕರಾವಿಪ ಆಯೋಜಿಸಿದ್ದ ಐಸಾನ್ ಧೂಮಕೇತು ಜಿಲ್ಲಾ ಮಟ್ಟದ ಕಾರ್ಯಾಗಾರದ ಸಮಾರೋಪದಲ್ಲಿ ಭಾಷಣ ಮಾಡಿದ ಅವರು, ಇತ್ತೀಚೆಗೆ ಮಾದ್ಯಮಗಳಲ್ಲಿ ಬಿತ್ತರ ಗೊಳ್ಳುತ್ತಿರುವ ಮೂಢನಂಬಿಕೆ ವಿರೋಧಿ ಕರಡಿಗೆ ಅನಗತ್ಯ ವಿರೋಧದ ಎಸಳುಗಳು ನಿಜವಾಗಿಯೂ ಅತ್ಯಂತ ಅಪಾಯಕಾರಿಯಾಗಿದೆ. ವಾಸ್ತವವಾಗಿ ಅದೊಂದು ಕರಡಲ,್ಲ ಸಲಹೆ. ಆ ಸಲಹೆಯನ್ನು ವಿಮರ್ಷಾತ್ಮಕವಾಗಿ ಓದದೆ ಉದ್ದೇಶಪೂರ್ವಕವಾಗಿಯೇ ಜನತೆಯನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಾಸವಿ ಶಾಲೆಯ ವಿಜ್ಞಾನ ಶಿಕ್ಷಕ ಮರಿಶೆಟ್ಟಿ ಮಾತನಾಡಿ, ನಮ್ಮ ದೈನಂದಿನ ಬದುಕಿನಲ್ಲಿ ಟೀವಿಯಲ್ಲಿ ಬಿತ್ತರಗೊಳ್ಳುವ ಧಾರಾವಾಹಿಗಳು ಮೌಢ್ಯ ಮತ್ತು ಕಂದಾಚಾರಗಳನ್ನೇ ಬಿತ್ತಿ ನಮ್ಮನ್ನು ಕಾಲದ ಹಿಂದಕ್ಕೇ ಕರೆದೊಯ್ಯುತ್ತಿವೆ ಹಾಗೂ ಫಲ ಜ್ಯೋತಿಷ್ಯಗಳನ್ನು ಹಿಡಿದ ಆಧುನಿಕ ಜೋತಿಷಿಗಳು ಟಿವಿ ಮೂಲಕ ನೇರ ಶೋಷಣೆ ಮಾಡುತ್ತಿವೆ ಜನರಿಗೆ ವೈಜ್ಞಾನಿಕ ಶಿಕ್ಷಣ ನೀಡುವ ಮೂಲಕ ವೈಚಾರಿಕ ಪ್ರಜ್ಞೆ ಮೂಡಿಸಲು ಸರ್ಕಾರ ಹಾಗೂ ಪ್ರಗತಿಪರ ಸಂಘಟನೆಗಳು ಕೈಜೋಡಿಸಬೇಕೆಂದರು. ಕಾರ್ಯದರ್ಶಿ ಅಹಮದ್ ಹಗರೆ ಇದ್ದರು.
ಎರಡು ದಿನ ನಡೆದ ತರಬೇತಿ ಶಿಬಿರದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಕವಿತ ಮತ್ತು ಮಂಜುಳ ಖಗೋಳದ ಸರಳ ಪ್ರಯೋಗಗಳಾದ ಸೂರ್ಯನ ವೇಗ ಅಳೆಯುವ, ದೂರ ಕಂಡು ಹಿಡಿಯುವ, ಸೌರಕಲೆಗಳನ್ನು ಪತ್ತೆ ಹಚ್ಚುವ ಮುಂತಾದ ಪ್ರಾತ್ಯಕ್ಷಿಕೆ ನಡೆಸಿದರು.
ಹಾಸನಾಂಬ ಶಿಕ್ಷಣ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಕಾಶ್, ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ನಡುವಿನ ವ್ಯತ್ಯಾಸವನ್ನು ವಿವರಿಸುತ್ತ ಜ್ಯೋತಿಷ್ಯ, ವಾಸ್ತುಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರಗಳು ಖಗೋಳ ಮತ್ತು ಗಣಿತವನ್ನು ಬಳಸಿ ಫಲಜ್ಯೋತಿಷ್ಯವನ್ನು ಹುಟ್ಟು ಹಾಕಿ ಮೋಸಮಾಡುತ್ತಿರುವ ಕಟ್ಟು ಗ್ರಂಥಗಳೇ ಹೊರತು ಅವುಗಳ ಪರಿಣಾಮಗಳಿಗೆ ವೈಜ್ಞಾನಿಕ ಆಧಾರಗಳಿಲ್ಲ ಎಂದು ಹೇಳಿದರು.
ವಿಜ್ಞಾನ ಲೇಖಕ ಕೆ.ಎಸ್.ರವಿಕುಮಾರ್, ವಿಶ್ವದ ಅದ್ಬುತಗಳನ್ನು ಪರಿಚಯಿಸುತ್ತಾ ವಿಶ್ವದ ವಿಕಾಸ, ಸೌರವ್ಯೂಹದ ವಿಕಾಸ, ಭೂಮಿಯ ವಿಕಾಸ, ಜೀವಿಗಳ ವಿಕಾಸಗಳನ್ನು ಎಳೆ ಎಳೆಯಾಗಿ ವಿವರಿಸಿದರು.
ಕಲಾವಿದ ಹಾಗೂ ದೀಪು ಓರಿಗಾಮಿ ಮೂಲಕ ಧೂಮಕೇತು ಅವುಗಳ 2 ಬಾಲಗಳನ್ನು ರಚಿಸುವ, ಮಾದರಿಗಳ ಮೂಲಕ ಅವುಗಳ ಪಥ ಮೂಡಿಸುವ ಚಟುವಟಿಕೆ ನಡೆಸಿಕೊಟ್ಟರು. ಜಿಲ್ಲೆಯ ನಾನಾ ತಾಲೋಕುಗಳಿಂದ ಸುಮಾರು 50 ಶಿಕ್ಷಕರು, ಉನ್ನತ ವ್ಯಾಸಂಗದ ವಿದ್ಯಾರ್ಥಿಗಳು, ವಿಜ್ಞಾನಾಸಕ್ತರು ಹಾಗೂ ವಿವಿಧ ಸಂಘಟನೆಗಳ ಆಯ್ದ ಪ್ರತಿನಿಧಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.
ತಾಲೂಕು ಅಧ್ಯಕ್ಷೆ ಮಮತ ಶಿವು ಸ್ವಾಗತಿಸಿದರು. ಕಾರ್ಯದರ್ಶಿ ಜಯಪ್ರಕಾಶ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

