4ನೇ ದಿನವೂ ಸಲಗ ಕಣ್ಣಾಮುಚ್ಚಾಲೆ ಆಟ
ಕ.ಪ್ರ.ವಾರ್ತೆ ಆಲೂರು ನ 24
ಪುಂಡಾನೆ ಹಿಡಿಯುವ ಕಾರ್ಯಾಚರಣೆ ನಾಲ್ಕನೇ ದಿನವಾದ ಭಾನುವಾರವೂ ವಿಫಲವಾಗಿದೆ.
ಆಲೂರು, ಸಕಲೇಶಪುರ ತಾಲೂಕಿನ ಗಡಿ ಭಾಗವಾದ ಕೆರೋಡಿ ಬಳಿಯ ಶಿವನಹಳ್ಳಿ, ಮರಡಿಕೆರೆ ಗ್ರಾಮಗಳ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಬೆಳಗ್ಗೆ 10ರಿಂದ ಕಾಡಾನೆ ಹಿಡಿಯುವ ಕಾರ್ಯಾಚರಣೆ ಪ್ರಾರಂಭವಾಗಿ ಸಂಜೆ 7 ಆದರೂ ಕಾಡಾನೆ ಗುರಿಗೆ ಸಿಲುಕಲಿಲ್ಲ. ಎರಡು-ಮೂರು ಬಾರಿ ಅರವಳಿಕೆ ಮದ್ದು ನೀಡುವಲ್ಲಿ ಅರಣ್ಯ ಇಲಾಖೆಯವರು ನಡೆಸಿದ ಪ್ರಯತ್ನ ವಿಫಲಗೊಂಡು ಕಾರ್ಯಾಚರಣೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು.
ಕಳೆದ ಗುರುವಾರ ತಾಲೂಕಿನ ಕಾಗನೂರು ಸುತ್ತಮುತ್ತಲಿನ ಅರಣ್ಯ ಪ್ರದೇಶದಿಂದ ಕಾರ್ಯಾಚರಣೆ ಆರಂಭವಾಗಿದ್ದು, ಅಂದು ಯಾವುದೇ ಅರವಳಿಗೆ ಮದ್ದನ್ನು ನೀಡಲಾಗಿರಲಿಲ್ಲ. ಎರಡನೇ ದಿನ ಕಾಡಾನೆ ಆ ಸ್ಥಳದಿಂದ ಜಿಲ್ಲೆಯ ಗಡಿ ದಾಟಿ ಕೊಡಗಿನ ಹಂಪಾಪುರ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿತ್ತು. 2 ಬಾರಿ ಅರವಳಿಗೆ ಮದ್ದನ್ನು ಹಾಸಿದ್ದು, ಅದು ವಿಫಲಗೊಂಡು ಕಾರ್ಯಾಚರಣೆ ಅಡಚಣೆ ವಿಫಲಗೊಂಡಿತ್ತು. ಆನೆ ಕೊಡಗಿನ ಅರಣ್ಯದಿಂದ ಕೆರೋಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀಡು ಬಿಟ್ಟು, ಶನಿವಾರ ಆನೆಯನ್ನು ಹಿಡಿದೇ ಬಿಟ್ಟರು ಎಂಬ ಸುದ್ದಿ ಎಲ್ಲೆಡೆ ಹಬ್ಬಿ ಜನರು ಸಾಗರೋಪಾದಿಯಲ್ಲಿ ಜನರು ಸ್ಥಳಕ್ಕೆ ಜಮಾಯಿಸಿದ್ದರು.
ಆದರೆ ಶನಿವಾರ ಮೂರು ಬಾರಿ ಅರವಳಿಕೆ ಮದ್ದನ್ನು ಹಾರಿಸಲಾಗಿತ್ತು. ಆ ಪೈಕಿ 2 ಬಾರಿ ಗುರಿ ತಪ್ಪಿದ್ದರೆ, 1 ಆನೆಗೆ ತಾಗಿದ್ದರೂ ಅರವಳಿಕೆ ಮದ್ದು ಆನೆ ದೇಹದ ಒಳಗೆ ಪ್ರವೇಶ ಮಾಡದ ಕಾರಣ ಆನೆಗೆ ಪ್ರಜ್ಞೆ ತಪ್ಪದೆ ಏಕಾಏಕಿ ಅರಣ್ಯಾಧಿಕಾರಿಗಳ ಮೇಲೆ ದಾಳಿ ಮಾಡಲು ಯತ್ನಿಸಿ ನಂತರ, ಆನೆಗಳ ಹಿಂಡಿನೊಳಗೆ ಸೇರಿಕೊಂಡ ಪರಿಣಾಮ ಹಾಗೂ ಕತ್ತಲಾದ ಕಾರಣ ಮೂರನೇ ದಿನದ ಕಾರ್ಯಾಚರಣೆಯೂ ಸ್ಥಗಿತಗೊಂಡಿತ್ತು. 3 ದಿನಗಳಿಂದ ನಡೆಸಿದ ಕಾರ್ಯಾಚರಣೆಯ ಸಂದರ್ಭದಲ್ಲೂ ಕೇವಲ 8ರಿಂದ 10 ಕಿಮೀ ನಷ್ಟು ಸುತ್ತಮುತ್ತ ಇದ್ದ ಆನೆ ಭಾನುವಾರ ಇಲ್ಲಿಂದ ದೂರದ ಪ್ರದೇಶಕ್ಕೆ ಹೋಗುವ ಶಂಖೆಯನ್ನು ಅರಣ್ಯಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಭಾನುವಾರ ಅದೇ ಸ್ಥಳದಲ್ಲಿದ್ದ ಕಾಡಾನೆಯನ್ನು ಹಿಡಿದೇ ತೀರುತ್ತೇವೆ ಎಂಬ ವಿಶ್ವಾಸದೊಂದಿಗೆ ಹರ್ಷ ಹಾಗೂ ಅಭಿಮನ್ಯು ಆನೆಗಳೊಂದಿಗೆ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಪ್ರಾರಂಭಿಸಿದರು. ಬೆಳಗ್ಗೆ ಮೂರು ಬಾರಿ ಅರವಳಿಗೆ ಮದ್ದನ್ನು ಹಾರಿಸಲಾಯಿತು. ಯಾವುದು ಸಹ ಗುರಿ ಮುಟ್ಟದೆ ರಾತ್ರಿ 7ರವರೆಗೂ ಅನೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿತು.
ಈ ಸಂಬಂಧವಾಗಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಮಾತನಾಡಿ, ಕಳೆದ 4 ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಕಾಡಾನೆ ತಪ್ಪಿಸಿಕೊಂಡು ಕೋಪಗೊಂಡಿದೆ. ಇದರಿಂದಾಗಿ ಸುತ್ತಮುತ್ತಲಿನ ಸ್ಥಳೀಯರು ಆತಂಕ್ಕೀಡಾಗಿದ್ದಾರೆ. ಬೆಳಗ್ಗೆ ಇಡೀ ಅರಣ್ಯ ಇಲಾಖೆಯವರು ಆನೆಯನ್ನು ಕಾಡಿನಲ್ಲಿ ಅಟ್ಟಾಡಿಸಿದ್ದು, ಇದರಿಂದ ಆಹಾರ ಸೇವಿಸಲು ಸಾಧ್ಯವಾಗಿಲ್ಲ. ಆದ ಕಾರಣ ಹಸಿವು, ಸಿಟ್ಟು ಹಾಗೂ ಗಾಬರಿಯಿಂದ ಕೂಡಿರುವ ಆನೆ ಗ್ರಾಮಸ್ಥರ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಅರಣ್ಯಾಧಿಕಾರಿಗಳು ಗ್ರಾಮಗಳಿರುವ ಪ್ರದೇಶದಲ್ಲಿ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಿ ಆನೆ ಈ ಭಾಗಕ್ಕೆ ಬಂದರೆ ಓಡಿಸುವ ಕಾರ್ಯ ಕೈಗೊಳ್ಳಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

