ಹಾಸನ

ಜೂಜು; ವಿವಿಧೆಡೆ ದಾಳಿ, ಬಂಧನ

Published On :

ಹಾಸನ: ಜಿಲ್ಲೆಯ ನಾನಾ ಕಡೆಗಳಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ 17 ಮಂದಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದು, 41,650 ವಶಪಡಿಸಿಕೊಂಡಿದ್ದಾರೆ. ನಗರದ ಹಳೆ ಅಂಚೆ ಕಚೇರಿ ರಸ್ತೆಯ ಡಬಲ್ ಟ್ಯಾಂಕ್ ಹತ್ತಿರ ಅಂದರ್‌ಬಾಹರ್ ಆಡುತ್ತಿದ್ದಾಗ ಹಾಸನ ಡಿವೈಎಸ್ಪಿಗೆ ಬಂದ ಖಚಿತ ಮಾಹಿತಿ ಮೇರೆಗೆ ಹಾಸನ ನಗರ ಠಾಣೆಯ ಪಿಎಸ್‌ಐ ಲಕ್ಷ್ಮಣಗೌಡ ಹಾಗೂ ಸಿಬ್ಬಂದಿ ದಾಳಿ ನಡೆಸಿ ಕುಮಾರ(33), ರವಿ(35), ಕೃಷ್ಣ(22), ಮಧು(28), ಮಂಜುನಾಥ(21), ಜಗದೀಶ (35), ನಟರಾಜ(28), ವಸಂತ(27), ಮಧು(30) ಮತ್ತು ಧರ್ಮ(30) ಎಂಬವರನ್ನು ಬಂಧಿಸಿದ್ದಾರೆ. ಪಣಕ್ಕಿಟ್ಟಿದ್ದ 4,150 ನಗದನ್ನು ವಶಪಡಿಸಿಕೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಹೊಳೆನರಸೀಪುರ ತಾಲೂಕಿನ ಹಳೇಕೋಟೆಯ ಪಶು ಆಸ್ಪತ್ರೆ ಹತ್ತಿರ ಜೂಜಾಡುತ್ತಿದ್ದ ಇಂದ್ರಕುಮಾರ(43), ಅಬ್ದುಲ್ ರಫೀಕ್ (58), ರವಿ(45), ಸುನೀಂದ್ರ(30), ಜಗದೀಶ(35),  ನಾರಾಯಣಪ್ಪ(49) ಮತ್ತು ವಿಶ್ವನಾಥ (32) ಎಂಬವರನ್ನು ಹೊಳೆನರಸೀಪುರ ನಗರ ಠಾಣೆಯ ಉಪ-ನಿರೀಕ್ಷಕ ಶಿವಕುಮಾರ್ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಪಣಕ್ಕಿಟ್ಟಿದ್ದ 37,500 ನಗದನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿದ್ದಾರೆ.

ವೃದ್ಧ ನಾಪತ್ತೆ
ಸಕಲೇಶಪುರ: ಪಟ್ಟಣದ ಮಲ್ಲಿಕಾರ್ಜುನ ನಗರ ವಾಸಿ ಪ್ರಕಾಶ್ ಅವರ ತಂದೆ ನಂಜಪ್ಪಾಚಾರ್(70) ಮನೆಯಿಂದ ಹೊರಗೆ ಹೋಗಿ ಬರುತ್ತೇನೆಂದು ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಚಹರೆ: 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಕನ್ನಡ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಪುತ್ರ ಪ್ರಕಾಶ್ ಸಕಲೇಶಪುರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಮಟ್ಕಾ; ಬಂಧನ
ಹಾಸನ: ನಗರದ ಶಾಹಿ ಮಸೀದಿ ಸರ್ಕಲ್‌ನಲ್ಲಿ ಒಬ್ಬ ವ್ಯಕ್ತಿ ಮಟ್ಕಾ ಜೂಜಾಡುತ್ತಿದ್ದಾಗ ಪೆನ್ಷ್‌ನ್ ಮೊಹಲ್ಲಾ ಠಾಣೆಯ ಎಎಸ್‌ಐ ಚಂದ್ರಶೇಖರ್ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ 1ಕ್ಕೆ 80 ಕೊಡುವುದಾಗಿ ಮಟ್ಕಾ ಬರೆಯುತ್ತಿದ್ದ ಆದಿಲ್(26) ಎಂಬಾತನನ್ನು ಬಂಧಿಸಿದ್ದಾರೆ. ಆತನ ಬಳಿ ಇದ್ದ 290 ನಗದನ್ನು ವಶ ಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

ವ್ಯಕ್ತಿ ನಾಪತ್ತೆ
ಹಾಸನ: ಅರಸೀಕೆರೆ ತಾಲೂಕಿನ ಅಣ್ಣನಾಯಕನಹಳ್ಳಿ ವಾಸಿ ಹೇಮಾವತಿಯವರ ಪುತ್ರ ಶಿವಕುಮಾರ(28) ಕಾಣೆಯಾಗಿದ್ದಾರೆ. ಚಹರೆ: 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಕನ್ನಡ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕ್ರೀಂ ಬಣ್ಣದ ಶರ್ಟ್, ಕಪ್ಪು ಪ್ಯಾಂಟ್ ಧರಿಸಿರುತ್ತಾರೆ.

ಚಿರತೆ ಪ್ರತ್ಯಕ್ಷ, ಗಾಬರಿಗೊಂಡ ಜನತೆ
ಹಾಸನ: ಚಿರತೆಯೊಂದು ಗ್ರಾಮದಲ್ಲಿ ಕಾಣಿಸಿಕೊಂಡ ಪರಿಣಾಮ ಭಾನುವಾರ ತಾಲೂಕಿನ ದೊಡ್ಡಹೊನ್ನೇನಹಳ್ಳಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ತಾಲೂಕಿನ ಯಡಿಯೂರು ಬಳಿಯ ದೊಡ್ಡಹೊನ್ನೇನಹಳ್ಳಿಯ ಗ್ರಾಮಸ್ಥರು ಚಿರತೆಯನ್ನು ಕಂಡು ಗಾಬರಿಗೊಂಡಿದ್ದಾರೆ. ಚಿರತೆ ಮೊದಲು ಯಡಿಯೂರು ಗ್ರಾಮದಲ್ಲಿ ಕಾಣಿಸಿಕೊಂಡು ನಂತರ ಅಲ್ಲಿಂದ ಪಲಾಯನ ಮಾಡಿದೆ.  ದೊಡ್ಡಹೊನ್ನೆನಹಳ್ಳಿ ಗ್ರಾಮಸ್ಥರು ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಎದುರಿಗೆ ಬಂದಂತಹ ಚರಿತೆಯನ್ನು ಕಂಡು ಗಾಬರಿಗೊಂಡಿದ್ದಾರೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿಯನ್ನು ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿದರು ಸಿಬ್ಬಂದಿ ಚಿರತೆಯ ಹುಡುಕಾಟ ನಡೆಸಿ ವಾಪಸ್ ತೆರಳಿದರು.  ಕೆಲ ದಿವಸಗಳಿಂದ ಚಿರತೆ ದಾಸರಕೊಪ್ಪಲು ಸುತ್ತ ಮುತ್ತ ಜನರ ಕಣ್ಣಿಗೆ ಕಾಣಿಸಿಕೊಳ್ಳುವ ಮೂಲಕ ಈ ಭಾಗದಲ್ಲಿ ವಾಸಮಾಡುವ ಜನರಲ್ಲಿ ಭಯದ ವಾತಾವರಣ ಉಂಟು ಮಾಡಿದೆ. ತಕ್ಷಣ ಅರಣ್ಯ ಸಿಬ್ಬಂದಿ ಚಿರತೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.  ಈ ಸಂದರ್ಭದಲ್ಲಿ ನೂರಾರು ಜನರು ಚಿರತೆ ಹೊಲದೊಳಗೆ ಅವಿತುಕೊಂಡಿರಬಹುದೆಂದು ಹುಡುಕಾಟ ನಡೆಸಿದರು.

ಜೂಜು; 7 ಮಂದಿ ಬಂಧನ
ಹೊಳೆನರಸೀಪುರ: ತಾಲೂಕಿನ ಹಳೇಕೋಟೆ ಸಮೀಪ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿ ಅವರಲ್ಲಿದ್ದ 7,500 ವಶಪಡಿಸಿಕೊಂಡು ಏಳು ಮಂದಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಹಳೇಕೋಟೆ ಗ್ರಾಮದ ವಿಶ್ವನಾಥ್, ನಾರಾಯಣಪ್ಪ, ಶಿವಕುಮಾರ್, ರಫೀಕ್, ಕ್ಯಾತನಹಳ್ಳಿಯ ಇಂದ್ರಕುಮಾರ್, ನ್ಯಾಮನಹಳ್ಳಿ ಜಗದೀಶ್ ಬಂಧಿತರು. ದಾಳಿಯಲ್ಲಿ ನಗರಠಾಣೆ ಪಿಎಸ್‌ಐ ಶಿವಕುಮಾರ್, ಪೇದೆಗಳಾದ ಅರಸು, ಪ್ರವೀಣ, ಬೋರೇಗೌಡ, ರಾಜಶೆಟ್ಟಿ, ಗವಿರಂಗಪ್ಪ ದಾಳಿ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.