ಮಳೆ, ಬೆಳೆ ಇಲ್ಲ, ಆದರೂ ಬರಪಟ್ಟಿಗೇಕಿಲ್ಲ?
-ಮಾದಿಹಳ್ಳಿ ವೆಂಕಟೇಶ್
ಚನ್ನರಾಯಪಟ್ಟಣ: ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಏನೆಲ್ಲಾ ಯೋಜನೆಗಳನ್ನು ಜಾರಿಗೆ ತಂದಿರಬಹುದು. ಆದರೆ ಜಿಲ್ಲೆಯ ರಾಜಕಾರಣದ ವಿಚಾರದಲ್ಲಿ ತನ್ನ ರಾಜಕೀಯ ದ್ವೇಷ ಸಾಧಿಸುವತ್ತ ಮುಂದಾಗಿರುವುದಂತೂ ನಿಜವೇ. ಇದರಿಂದ ತಾಲೂಕಿನ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ತಾಲೂಕಿನಲ್ಲಿ ಜೆಡಿಎಸ್ ಶಾಸಕ ಇರುವುದರಿಂದ ಸರ್ಕಾರದ ಯಾವುದೇ ಅನುದಾನ ತಾಲೂಕಿಗೆ ಬಾರದಿರುವುದು ಒಂದೆಡೆಯಾದರೆ, ಗ್ರಾಮೀಣ ಭಾಗದ ರೈತರ ಸಂಕಷ್ಟಗಳನ್ನು ನೀಗಿಸುವ ಸಲುವಾಗಿ ಬರಪೀಡಿತ ತಾಲೂಕು ಘೋಷಣೆಯಲ್ಲಿಯೂ ಕಾಂಗ್ರೆಸ್ ಸರ್ಕಾರ ತಾರತಮ್ಯವೆಸಗಿದೆ.
ತಾಲೂಕಿನಲ್ಲಿ ಶೇ.20ರಷ್ಟು ಹೇಮಾವತಿ ನಾಲೆಯಿಂದ ಅಚ್ಚುಕಟ್ಟು ಪ್ರದೇಶವಿದ್ದು, ಉಳಿದ ಶೇ.80ರಷ್ಟು ಭಾಗ ಒಣ ಭೂಮಿ ಪ್ರದೇಶದಿಂದ ಕೂಡಿದೆ. ಈ ಭಾಗದಲ್ಲಿ ಯಾವ ಕೆರೆಗಳಲ್ಲಿಯೂ ಒಂದು ಹನಿ ನೀರು ಮಳೆಯಿಂದ ಸಂಗ್ರಹವಾಗಿಲ್ಲ. ಇಂತಹ ಸಂದರ್ಭದಲ್ಲಿಯೂ ಸರ್ಕಾರ ಯಾವ ಮಾನದಂಡ ಅನುಸರಿಸಿ ಬರಪೀಡಿತ ತಾಲೂಕಿನಿಂದ ಹೊರಗಿಟ್ಟಿದೆ?
ಕಳೆದ ಸಾಲಿನಲ್ಲಿ ಭೀಕರ ಬರಗಾಲ ಆವರಿಸಿ ತಾಲೂಕಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕೃಷಿ ಪಂಪ್ಸೆಟ್ಗಳು ನೀರಿಲ್ಲದೆ ಬರಿದಾದ ಹಿನ್ನೆಲೆಯಲ್ಲಿ 4 ಲಕ್ಷಕ್ಕೂ ಹೆಚ್ಚು ತೆಂಗಿನ ಮರಗಳಲ್ಲಿ ಸುಳಿಯಿಲ್ಲದೆ ಮರ ಕಡಿಯುವವರ ಪಾಲಾಗಿವೆ. ಇರುವ ಶೇ.20 ನೀರಾವರಿ ಪ್ರದೇಶದಲ್ಲಿ ಗರಿ ತಿನ್ನುವ ರೋಗದಿಂದಾಗಿ ತೆಂಗಿನಕಾಯಿ ಕಾಣುವುದಿರಲಿ, ಎಳನೀರು ಕೂಡ ಸಿಗದ ಮಟ್ಟಕ್ಕೆ ಬಂದಿದ್ದಾನೆ. ಪ್ರಸಕ್ತ ಸಾಲಿನಲ್ಲಿ ಕೆರೆಗಳಲ್ಲಿ ನೀರಿಲ್ಲದ ಕಾರಣ ಅಂತರ್ಜಲ ಮಟ್ಟ ಮತ್ತೊಮ್ಮೆ ಕುಸಿಯುವುದರಿಂದ ಕಳೆದ ಸಾಲಿನಲ್ಲಿ ಅಲ್ಪ ಸ್ವಲ್ಪ ನೀರಿದ್ದ ಕೃಷಿ ಪಂಪ್ಸೆಟ್ಗಳು ಬರಿದಾಗುವುದು ಖಚಿತವಾಗಿದ್ದು, ಕುಡಿಯುವ ನೀರಿನದೇ ಹೆಚ್ಚಿನ ಸಮಸ್ಯೆಯಾಗಿದೆ.
ತಾಲೂಕಿನಲ್ಲಿ ಮಳೆ ಬಾರದೆ ಮುಂಗಾರು ಬೆಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಹಿಂಗಾರು ಬೆಳೆ ರಾಗಿಯನ್ನು ಬೆಳೆಯಲು ರೈತ ಸಿದ್ಧತೆ ನಡೆಸಿಕೊಂಡು ಮಳೆಯ ನಿರೀಕ್ಷೆಯಲ್ಲಿದ್ದರೂ ಸರಿಯಾದ ಸಮಯದಲ್ಲಿ ಮಳೆಯಾಗದ ಕಾರಣ ಒಂದು ತಿಂಗಳು ರಾಗಿ ಬಿತ್ತನೆಯಲ್ಲಿ ಹಿನ್ನಡೆ ಕಂಡಿದೆ. ಆದರೂ ಕೃಷಿ ಇಲಾಖೆ ಅಧಿಕಾರಿಗಳು ಗ್ರಾಮ ಪರ್ಯಟನೆ ಮಾಡದೆ ಕಚೇರಿಯಲ್ಲಿಯೇ ಕು ಳಿತು ಬೆಳೆ ನಷ್ಟವಾಗುವ ನಿರೀಕ್ಷೆಯಿಲ್ಲ ಎಂದು ಸರ್ಕಾರಕ್ಕೆ ನೀಡಿದ ವರದಿ ಇಂದು ತಾಲೂಕಿಗೆ ದೊಡ್ಡ ಪೆಟ್ಟು ನೀಡಿದೆ.
ತಾಲೂಕಿನ 378 ಗ್ರಾಮಗಳಲ್ಲಿ 100 ಗ್ರಾಮಗಳಲ್ಲಿ ಕುಡಿಯಲು ನೀರಿಲ್ಲದೆ ಹಾಹಾಕಾರ ಪ್ರಾರಂಭವಾಗಿದೆ. ಬೇಸಿಗೆ ಪ್ರಾರಂಭವಾಗುವಷ್ಟರಲ್ಲಿ ಶೇ.50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಬವಣೆ ಪ್ರಾರಂಭವಾಗುವ ನಿರೀಕ್ಷೆ ಕಾಣುತ್ತಿದೆ. ಬೆಳೆ ಕಾಣದ ರೈತ ಡೈರಿ ಉದ್ಯಮಕ್ಕೆ ಕಾಲು ಹಾಕಿದ್ದು, ಮನುಷ್ಯರಿಗೇ ಕುಡಿಯುವ ನೀರಿಲ್ಲದ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಸ್ಥಿತಿ ಬಂದಿದೆ.
ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುತ್ತದೆಯೋ ಬಿಡುತ್ತೋ ಅದು ಗ್ರಾಮೀಣ ಜನತೆಗೆ ಅರ್ಥವಾಗದ ಪರಿಸ್ಥಿತಿಯಾಗಿದ್ದು, ಒಟ್ಟಾರೆ ತಾಲೂಕು ಆಡಳಿತ ಜನತೆಗೆ ಕುಡಿಯುವ ನೀರು ಹಾಗೂ ಜಾನುವಾರು ಸಾಕಣೆಗೆ ಗೋಶಾಲೆಗಳನ್ನು ತೆರೆಯುವಂತೆ ಒತ್ತಾಯಿಸುತ್ತಿದ್ದಾರೆ.
ಅಂತರ್ಜಲ ಕುಸಿದು ರೈತರ ಕೃಷಿ ಪಂಪ್ಸೆಟ್ಗಳು ದಿನದಿಂದ ದಿನಕ್ಕೆ ಬರಿದಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದ್ದು, ಈ ನಡುವೆ ಸರ್ಕಾರ ತಮ್ಮ ತಾಲೂಕನ್ನು ಕಪ್ಪು ಪಟ್ಟಿಗೆ ಸೇರಿಸಿರುವುದರಿಂದ ಕೃಷಿ ಪಂಪ್ಸೆಟ್ಗಳನ್ನು ಅಕ್ರಮದಿಂದ ಸಕ್ರಮಗೊಳಿಸಿಕೊಳ್ಳಲು ಸೆಸ್ಕ್ ಇಲಾಖೆಗೆ 10 ಸಾವಿರ ದಂಡ ಸೇರಿಸಿ ಇತರೆ ವೆಚ್ಚವಾಗಿ 13 ಸಾವಿರ ಪಾವತಿಸಬೇಕಾಗಿರುವುದು ವಿಪರ್ಯಾಸವಾಗಿದೆ.
ಶಾಸಕರಿಗೆ ಸವಾಲು: ತಾಲೂಕಿನಲ್ಲಿ ತಲೆದೋರಿರುವ ಬರಗಾಲದಿಂದ ತಾಲೂಕಿನ ಜನತೆಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ನೀಡುವುದೇ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಎದುರಿಸಿ ಆಡಳಿತ ಚುರುಕುಗೊಳಿಸುವುದು ಸವಾಲಾಗಿದ್ದು, ಇಂತಹ ಭೀಕರ ಬರಗಾಲದ ನಡುವೆಯೇ ಲೋಕಸಭಾ ಚುನಾವಣೆ ಎದುರಿಸಲು ಜನತೆಯ ಮುಂದೆ ಯಾವ ಅಸ್ತ್ರವನ್ನು ಹಿಡಿದು ಹೋಗುತ್ತಾರೆಯೋ ಕಾದು ನೋಡಬೇಕಾಗಿದೆ.
ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡದಿರುವುದರಿಂದ ಕಂಗಾಲಾಗಿರುವ ಶಾಸಕ ಸಿ.ಎನ್.ಬಾಲಕೃಷ್ಣ ಬರಪೀಡಿತ ತಾಲೂಕೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ಆಹೋ ರಾತ್ರಿ ಧರಣಿ ಕುಳಿತು ಸರ್ಕಾರದ ಗಮನ ಸೆಳೆಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

