ಅಂತೂ ಸೆರೆಗೆ ಒಂಟಿ ಸಲಗ
ಕ.ಪ್ರ.ವಾರ್ತೆ ಆಲೂರು ನ.25
ಕಳೆದ ಐದು ದಿನಗಳಿಂದ ಅರಣ್ಯ ಇಲಾಖೆಯವರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ ಒಂಟಿ ಸಲಗವನ್ನು ಸೋಮವಾರ ಹಿಡಿಯವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾದರು.
ಇದೇ ತಿಂಗಳು ಕೇವಲ 1 ವಾರದಲ್ಲಿ ತಾಲೂಕಿನ ರಾಜೇಂದ್ರ ಪುರ ಬಳಿ ಹಾಗೂ ಹೊಂಕರವಳ್ಳಿ ಬಳಿ ಐಬಿಸಿ ಫಾರಂ ಬಳಿ ಮತ್ತೊಬ್ಬ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿದ್ದ ಈ ಒಂಟಿ ಸಲಗವನ್ನು ಹಿಡಿಯಲು ನ.21ರಂದು ಕಾರ್ಯಾಚರಣೆ ನಡೆಸಲು ಐದು ಸಾಕಾನೆಗಳಾದ ಅಭಿಮನ್ಯ, ಗಜೇಂದ್ರ, ಪ್ರಶಾಂತ, ವಿಕ್ರಂ, ಶ್ರೀರಾಮ ಆನೆಗಳು ಮಾಗಡಿಹಳ್ಳಿಯ ಬಳಿಯ ಕ್ಯಾಂಪ್ನಲ್ಲಿ ಕರೆತರಲಾಗಿತ್ತು. ಇದರೊಂದಿಗೆ ಮಾವುತರು ಸೇರಿದಂತೆ 23 ಜನ ಪರಿಣತರು ಹಾಗೂ ವೈದ್ಯರು ಮತ್ತು ಗುರಿಕಾರರು ಸೇರಿ ಒಟ್ಟಾರೆ 50ಕ್ಕೂ ಹೆಚ್ಚು ಸಿಬ್ಬಂದಿ ಕ್ಯಾಂಪ್ನಲ್ಲಿ ಸಕಲ ಸಿದ್ಧತೆ ಮಾಡಿಕೊಂಡು, ನಿಖರವಾದ ಮಾಹಿತಿ ಮೇರೆಗೆ ಒಂಟಿ ಸಲಗದ ಚಲನವಲಗಳನ್ನು ಗುರುತಿಸಿ ನ.21ರಂದು ತಾಲೂಕಿನ ಕಾಗನೂರು ಬಳಿಯ ಅರಣ್ಯದಲ್ಲಿ ಪ್ರಥಮ ದಿನವೇ ಕಾರ್ಯಾಚರಣೆ ಪ್ರಾರಂಭಿಸಿದ್ದರು.
ಮೊದಲ ದಿನ: ಪ್ರಥಮ ದಿನದ ಕಾರ್ಯಾಚರಣೆಯಲ್ಲಿ ಆನೆ ತಪ್ಪಿಸಿಕೊಂಡು ಇಡೀ ದಿನ ಕಣ್ಣಾಮುಚ್ಚಾಲೆ ಆಡಿಸಿದ ಪರಿಣಾಮ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಅಂದು ಆನೆ ಸಿಕ್ಕಿಯೇ ಬಿಟ್ಟಿತ್ತು ಎಂಬ ಸಂತಸದಲ್ಲಿ ಇದ್ದ ಅಧಿಕಾರಿಗಳು ನಿರಾಶರಾಗಿದ್ದರು. ಅಲ್ಲದೆ ಆನೆ ಇಲ್ಲಿಂದ ಬೇರೆಡೆಗೆ ಬಹಳಷ್ಟು ದೂರ ಓಡಿ ಹೋಗಬಹುದು ಎಂಬ ಆತಂಕದಲ್ಲಿ ಇದ್ದರು. ಆದರೆ ಈ ಪುಂಡಾನೆ ರಾತ್ರಿ ಅದೇ ಸ್ಥಳದಲ್ಲಿ ಇದ್ದು, ತಡರಾತ್ರಿಯ ಸಂದರ್ಭದಲ್ಲಿ ತನ್ನನ್ನು ಹಿಡಿಯಲು ಬಂದಿದ್ದ ಸಾಕಾನೆಗಳಿದ್ದ ಕ್ಯಾಂಪ್ಗೆ ನುಗ್ಗಿ ದಾಳಿ ನಡೆಸಲು ಮುಂದಾಗಿತ್ತು.
ಆಗ ಸಿಬ್ಬಂದಿ ಗಾಳಿಯಲ್ಲಿ ಗುಂಡಿ ಹಾರಿಸಿ ಆನೆಯನ್ನು ಓಡಿಸಿದ್ದರು. ಅಲ್ಲಿಂದ ಕೇವಲ 8 ಕಿ.ಮೀ. ಅಂತರದಲ್ಲಿ ಇದ್ದ ಕೊಡಗಿನ ಹಂಪಾಪುರ ಅರಣ್ಯ ಪ್ರದೇಶಕ್ಕೆ ಹೇಮಾವತಿ ಹಿನ್ನೀರಿನಲ್ಲಿ ಈಜಿಕೊಂಡು ಹೋಗಿ ಬೀಡು ಬಿಟ್ಟಿತ್ತು. ಎರಡನೇ ದಿನವಾದ ಶುಕ್ರವಾರ ಆನೆ ಕೊಡಗಿನ ಹಂಪಾಪುರ ಬಳಿಯ ಹುಂಬಳಿಬೆಟ್ಟ ಅರಣ್ಯ ಪ್ರದೇಶದಲ್ಲಿ ಇರುವಿಕೆಯನ್ನು ಕಂಡ ಅರಣ್ಯಾಧಿಕಾರಿಗಳು ಸಾಕಾನೆಗಳೊಂದಿಗೆ ಕಾರ್ಯಾಚರಣೆ ಪ್ರಾರಂಭಿಸಿದ್ದರು. 2ನೇ ದಿನ ಮೂರು ಬಾರಿ ಅರವಳಿಕೆ ಮದ್ದನ್ನು ಆನೆಗೆ ಬಂದೂಕಿನಿಂದ ಹೊಡೆದರೂ ಸಹ ಗುರಿತಪ್ಪಿ ಆನೆ ತಪ್ಪಿಸಿಕೊಂಡು ಪರಾರಿಯಾಗಿತ್ತು.
ಮೂರನೇ ದಿನ: ನಂತರ ಶನಿವಾರ ಮೂರನೇ ದಿನ ಹೆಚ್ಚು ದೂರ ಹೋಗದ ಆನೆ ಆಲೂರು-ಸಕಲೇಶಪುರ ಗಡಿ ಭಾಗವಾದ ಕೆರೋಡಿ ಬಳಿಯ ಸಂತೋಷ್ ಫಾರೆಸ್ಟ್ನಲ್ಲಿ ಅವಿತುಕೊಂಡಿತ್ತು. ಮೂರನೇ ದಿನವು ಸಹ ಮೂರು ಬಾರಿ ಅರವಳಿಕೆ ಮದ್ದನ್ನು ಆನೆಗೆ ನೀಡಿದ ಗುರಿಕಾರರು ಒಂದು ಬಾರಿ ಆನೆಗೆ ನಾಟಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಆನೆಗೆ ಅರವಳಿಕೆ ಚುಚ್ಚುಮದ್ದು ಸರಿಯಾಗಿ ಆನೆಯ ದೇಹದೊಳಗೆ ಪ್ರವೇಶದ ಕಾರಣ ಆನೆ ಪ್ರಜ್ಞೆ ತಪ್ಪಲಿಲ್ಲ ಹಾಗೂ ಆನೆ ಅಂದು ಕಾಲ್ನಡಿಗೆಯಲ್ಲಿ ಕಾರ್ಯಾಚರಣೆ ನಡೆಸಲು ಬಂದಿದ್ದ ಗುರಿಕಾರರ ಮೇಲೆ ಏಕಾಏಕಿ ದಾಳಿ ನಡೆಸಲು ಮುಂದಾಗಿತ್ತು. ಗುರಿಕಾರರಾದ ವೆಂಕಟೇಶ್ ಹಾಗೂ ಅಕ್ರಂ ಅವರು ಕೂದಲೆಳೆಯ ಅಂತರದಲ್ಲಿ ಆನೆ ದಾಳಿಯಿಂದ ತಪ್ಪಿಸಿಕೊಂಡು ಪಾರಾಗಿದ್ದರು.
ಈ ಸಂದರ್ಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಪರಿಣಾಮ ಆನೆ ಅದೇ ಕಾಡಿನಲ್ಲಿ ಬೀಡು ಬಿಟ್ಟಿದ ಆನೆಗಳ ಹಿಂಡಿನೊಳಗೆ ಸೇರಿಕೊಂಡ ಪರಿಣಾಮ ಮೂರನೇ ದಿನದ ಕಾರ್ಯಾಚರಣೆ ಸ್ಧಗಿತಗೊಳಿಸಲಾಗಿತ್ತು. ಅಲ್ಲದೆ ಅಂದು ರಾತ್ರಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಆನೆ ಹಿಡಿಯುವ ಕಾರ್ಯಾಚರಣೆಗೆ ತಡೆಯಾಗಬಹುದು ಎಂಬ ಆತಂಕದಲ್ಲಿ ಅಧಿಕಾರಿಗಳು ಇದ್ದರು. ಆ ಸ್ಥಳದಿಂದ ಬೇರೆಡೆಗೆ ಹೋದರೆ ಸಕಲೇಶಪುರ ಭಾಗದ ದಟ್ಟಡವಿಯಲ್ಲಿ ಕಣ್ಮರೆಯಾಗಬಹುದೆಂಬ ಚಿಂತೆಯಲ್ಲಿ ಇದ್ದರು. ಆದರೆ ಆನೆ ಮೂರು ದಿನಗಳಿಂದ ತಪ್ಪಿಸಿಕೊಂಡು ಓಡಾಡಿ ದಣಿದಿದ್ದ ಹಾಗೂ ಗಾಬರಿಗೊಂಡಿದ್ದ ಆನೆ ಬೇರೆಡೆ ಹೋಗದೆ ಅದೇ ಕೆರೋಡಿ ಬಳಿಯ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿತ್ತು. ನಾಲ್ಕನೇ ದಿನವು ಸಹ ಆದೇ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಭಾನುವಾರ ಸಹ ಆನೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿತ್ತು.
ಸೋಮವಾರ ಮಧ್ಯಾಹ್ನ ಯಶಸ್ವಿ: ಆದರೆ ಸೋಮವಾರ ಆನೆಯ ಅದೃಷ್ಟ ಕೆಟ್ಟಿದ್ದ ಪರಿಣಾಮ ಮಧ್ಯಾಹ್ನ 12.45ರಲ್ಲಿ ಕೆರೋಡಿ ಬಳಿಯ ಕಲ್ಲೂರು ಅರಣ್ಯ ಪ್ರದೇಶದಲ್ಲಿ ಗುರಿಕಾರ ವೆಂಕಟೇಶ್ ಅವರು ನಿಖರವಾದಾಗ ಆನೆಗೆ ಅರವಳಿಕೆ ಮದ್ದನ್ನು ನೀಡುವಲ್ಲಿ ಯಶಸ್ವಿಯಾದರು. ಕಳೆದ ಐದು ದಿನಗಳಿಂದ ಅರಣ್ಯ ಇಲಾಖೆಯವರಿಗೆ ಆಟವಾಡಿಸಿದ ಕಾಡಾನೆ ಇಂದು ಅವರಿಗೆ ಹೆಚ್ಚು ಶ್ರಮ ನೀಡದೆ ಕಾಡಿನಿಂದ ನೇರ ಹೆತ್ತೂರ-ಕೆರೋಡಿ ರಸ್ತೆ ಬಳಿ ಬಂದು ಪ್ರಜ್ಞೆತಪ್ಪಿ ಬಂದು ಬಿದ್ದಿತ್ತು. ಇದರಿಂದ ಹೆಚ್ಚು ಶ್ರಮಪಡದ ಅಧಿಕಾರಿಗಳು ತಕ್ಷಣವೇ ಸಾಕಾನೆಗಳನ್ನು ಸ್ಥಳಕ್ಕೆ ಕರೆತಂದು ಒಂಟಿ ಸಲಗಕ್ಕೆ ಸರಪಳಿ ಹಾಕಿ ಬಂಧಿಸಿ, ಆನೆಗೆ ನೀರನ್ನು ಹಾಕಿ ನಂತರ ಎಚ್ಚರಗೊಳ್ಳಲು ಚುಚ್ಚುಮದ್ದು ನೀಡಿ ಎಚ್ಚರಿಸಿದರು.
ಎಚ್ಚರಗೊಂಡ ಸಂದರ್ಭದಲ್ಲಿ ತೀವ್ರ ಪ್ರತಿರೋಧ ಒಡ್ಡಿದ ಒಂಟಿ ಸಲಗ ಸಾಕಾನೆಗಳೊಂದಿಗೆ ಗುದ್ದಾಟಕ್ಕೆ ಇಳಿಯಿತು. ಆದರೆ ಕೇವಲ 23 ವರ್ಷ ಸುಮಾರಿನ ಸಲಗ ಅತ್ಯಂತ ಬಲಶಾಲಿಯಾಗಿದ್ದ ಸಾಕಾನೆಗಳೊಂದಿಗೆ ಕಾದಾಡಲು ಸಾಧ್ಯವಾಗದೇ ಶರಣಾಗತಿಯನ್ನು ಅನುಭವಿಸಿತು. ನಂತರ ಕಾಡಾನೆಯನ್ನು ಕೆರೋಡಿ-ಐಗೂರು ರಸ್ತೆಯಲ್ಲಿ ಎಳೆದು ತರುವಾಗ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಸಾರ್ವಜನಿಕರ ಕೂಗಾಟದಿಂದ ಸ್ವಲ್ಪ ವಿಚಲಿತ ಆದ ಸಲಗ ದಾರಿ ದಾರಿಯಲ್ಲೇ ಕುಳಿತು ಬರಲು ಹಿಂದೇಟು ಹಾಕುತ್ತಿತ್ತು. ಅತ್ಯಂತ ಬಲಶಾಲಿಯಾದ ಅಭಿಮನ್ಯು ಆನೆ ಕಾಡಾನೆಗೆ ಗುದ್ದಿ ಎಳೆ ತರುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಇತರೆ ಆನೆಗಳು ಸಾಥ್ ನೀಡಿದವು.
ಮಂಗಳವಾರ ಆನೆಯನ್ನು ಕೊಡಗಿನ ಮತ್ತಿಗೋಡಿಗೆ ಸಾಗಣೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಡಿಎಫ್ಓ ಲಕ್ಷ್ಮಣ್, ಆರ್ಎಫ್ಒ ದೇವರಾಜ್, ಗುರಿಕಾರರಾದ ವೆಂಕಟೇಶ್, ಅಕ್ರಂ, ವೈದ್ಯ ಚಟ್ಟಿಯಪ್ಪ, ನಾಗರಾಜ್, ಉಮಾಶಂಕರ್, ಕರಂಬಾಯ್, ವಸಂತ, ಅಭಿಮಾನ್ ಹಾಗೂ ಮಾವುತರು, ಅರಣ್ಯ ಇಲಾಖೆಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಇದ್ದರು. ಪರಿಸರವಾದಿ ಎಚ್.ಬಿ. ಮೋಹನ್, ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ಮುರುಡಿ ವಿಕ್ರಂ ಇತರರು ಇದ್ದರು.
ಸಿಕ್ಕಾಪಟ್ಟೆ ಸತಾಯಿಸಿದ ಕಾಡಾನೆ
ಈವರೆಗೂ 60 ಕಾಡಾನೆಗಳನ್ನು ರಾಜ್ಯಾದ್ಯಂತ ಹಿಡಿಯಲು ಅರವಳಿಕೆ ಚುಚ್ಚುಮದ್ದು ನೀಡುವಲ್ಲಿ ಯಶಸ್ವಿಯಾಗಿರುವ ಅರೆಕಾಲಿಕ ಸಿಬ್ಬಂದಿ ಹೊನ್ನವಳ್ಳಿ ವೆಂಕಟೇಶ್ ಹೇಳುವಂತೆ 25 ವರ್ಷ ಕಾಡಿನಲ್ಲಿ ಆನೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಇದು 60ನೇ ಆನೆ ಆಗಿದೆ. ಇದರಷ್ಟು ಸತಾಯಿಸಿದ ಆನೆಯನ್ನು ನಾನು ಈವರೆಗೂ ಕಂಡಿಲ್ಲ. ಕಾರಣವೆಂದರೆ ಈ ಆನೆ ಸಾಕಷ್ಟು ಚಿಕ್ಕದಾದರೂ ಬಲಿಷ್ಠವಾಗಿತ್ತು. ಚಿಕ್ಕ ಅರಣ್ಯ ಪ್ರದೇಶದಲ್ಲಿ ಮನೆಗಳು ಹಾಗೂ ಗ್ರಾಮಗಳಿದ್ದು, ಆನೆ ಹಿಡಿಯುವ ಕಾರ್ಯಾಚರಣೆ ಸುಲಭದ ಕೆಲಸವಲ್ಲ. ಅಲ್ಲದೆ ಸಾರ್ವಜನಿಕರು ವಾಹನಗಳನ್ನು ಆನೆ ಹಿಡಿಯುವ ಸ್ಥಳದಲ್ಲಿ ತಂದು ಸದ್ದು ಮಾಡುವುದರಿಂದ ಆನೆ ಗಾಬರಿಗೊಂಡು ಗುರಿಗೆ ಸಿಲುಕದೆ ಪರಾರಿಯಾಗುತ್ತಿತ್ತು. ಆನೆ ಒಂದು ಸ್ಥಳದಿಂದ ಒಂದು ದಿನದಲ್ಲಿ ಬೇರೆಗೆ 50ಕ್ಕೂ ಹೆಚ್ಚು ಕಿ.ಮೀ. ಚಲಿಸುವ ಸಾಧ್ಯತೆಗಳಿದ್ದವು. ಆದರೆ ಈ ಪುಂಡಾನೆ ಎಲ್ಲೂ ಹೋಗದೆ 20 ಕಿ.ಮೀ. ವ್ಯಾಪ್ತಿಯಲ್ಲಿಯ ಅರಣ್ಯ ಪ್ರದೇಶದಲ್ಲೇ ಇದ್ದದ್ದು ಸ್ವಲ್ಪ ಮಟ್ಟಿಗೆ ಅನುಕೂಲವಾಯಿತು.
-ಗುರಿಕಾರ ವೆಂಕಟೇಶ್
ಬೈಕ್ ಜಖಂ
ರಸ್ತೆಯ ಬಳಿ ನಿಲ್ಲಿಸಿದ್ದ ಬೈಕ್ ಮೇಲೆ ಆನೆಯನ್ನು ಸರಪಳಿಯಿಂದ ಬಂಧಿಸಿ ಎಳೆ ತರುತ್ತಿದ್ದ ಸಂದರ್ಭದಲ್ಲಿ ಒಂಟಿ ಸಲಗದ ದಾಳಿಗೆ ಬೈಕ್ ಜಖಂಗೊಂಡಿತ್ತು. ಬೈಕ್ ಅಪ್ಪಾಚಿಯಾಗಿದ್ದನ್ನು ಜನರು ನಂತರವಷ್ಟೆ ರಸ್ತೆಯಲ್ಲಿ ನಿಲ್ಲಿಸಿದ್ದ ತಮ್ಮ ಬೈಕ್ ಹಾಗೂ ಕಾರುಗಳನ್ನು ಬೇರೆಡೆಗೆ ಸ್ಥಳಾಂತರಿಸಿದರು. ನೇರವಾಗಿ ಡಾಂಬರ್ ರಸ್ತೆಯಲ್ಲಿ ಆನೆಯನ್ನು ಕರೆತಂದ ಪರಿಣಾಮ ಅಧಿಕಾರಿಗಳು ಹಾಗೂ ಸಾಕಾನೆಗಳಿಗೆ ಈ ಹಿಂದೆ ಹಿಡಿದ ಆನೆಗಳನ್ನು ಕರೆತರುವಲ್ಲಿ ಆದ ಶ್ರಮ ಇಲ್ಲಿ ಆಗಲಿಲ್ಲ. ಮೂರ್ನಾಲ್ಕು ಬಾರಿ ರಸ್ತೆಯಲ್ಲಿ ಕುಳಿತು ಹಠ ಮಾಡಿದ್ದನ್ನು ಬಿಟ್ಟರೆ ಒಂದು ಬಾರಿ ಮಾತ್ರ ಸಾಕಾನೆ ಗುದ್ದಾಟ ನಡೆಸಿತು. ಸಾಕಾನೆಗಳ ಮುಂದೆ ಕಾಡಾನೆಯಾಟ ನಡೆಯದ ಕಾರಣ ಸಲಗ ನಕರ ಮಾಡದೆ ಶಿವನಹಳ್ಳಿ ಕ್ರಾಸ್ ಬಳಿಯ ಆಲದ ಮರದವರೆಗೂ ಆನೆ ಬಂತು. ನಂತರ ಅಧಿಕಾರಿಗಳು ಆನೆಗೆ ಆ ಇಡೀರಾತ್ರಿ ವಿಶ್ರಾಂತಿ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

