ಹಾಸನ

28ರಿಂದ ಬಿಎಸ್‌ಪಿ ಬೃಹತ್ ಧರಣಿ

Published On :

ಕ.ಪ್ರ.ವಾರ್ತೆ ಹಾಸನ ನ.25
ಬಗರ್‌ಹುಕುಂ ಸಾಗುವಳಿ ಸಕ್ರಮಗೊಳಿಸಿ ಭೂ ರಹಿತರಿಗೆ ಭೂಮಿ ನೀಡುವಂತೆ ಆಗ್ರಹಿಸಿ ನ.28ರಿಂದ ಮೂರು ದಿನಗಳ ಕಾಲ ರಾಜ್ಯಾದ್ಯಂತ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಧರಣಿ ನಡೆಸುವುದಾಗಿ ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ಜಿಲ್ಲಾಧ್ಯಕ್ಷ ಬಿ.ಸಿ. ರಾಜೇಶ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಎಸ್ಸಿ ಎಸ್ಟಿ ಮತ್ತು ಒಬಿಸಿಗಳು ಸರ್ಕಾರಿ ಜಮೀನನ್ನು ಸಾಗುವಳಿ ಮಾಡಿದ್ದು, ಈ ಜಮೀನನ್ನು ಸಕ್ರಮಗೊಳಿಸಬೇಕು ಎಂದು ಫಾರಂ ನಂ.50-53ರಲ್ಲಿ ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದು, ಈವರೆಗೂ ಅರ್ಜಿ ಸಲ್ಲಿಸಿದವರಿಗೆ ಜಮೀನು ಮಂಜೂರಾತಿ ಮಾಡಿಲ್ಲ. 2009ರಲ್ಲಿ ವಿ. ಬಾಲಸುಬ್ರಹ್ಮಣ್ಯ ಅವರಿಂದ ಸರ್ಕಾರಿ ಭೂಮಿ ಒತ್ತುವರಿ ಆಗಿರುವ ಬಗ್ಗೆ 2011ರಲ್ಲಿ ವರದಿ ಸಲ್ಲಿಸಿದ್ದಾರೆ.
ಆ ವರದಿ ಪ್ರಕಾರ, ಸುಮಾರು 12 ಲಕ್ಷಕ್ಕೂ ಹೆಚ್ಚು ಸರ್ಕಾರಿ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆ ನಡೆಸುವವರು ಭೂಮಾಪ್ಯಗಳು ಮತ್ತು ಇತರೆ ಪ್ರಭಾವಿ ವ್ಯಕ್ತಿಗಳು ಸಾವಿರಾರು ಎಕರೆ ಜಮೀನನ್ನು ಅಕ್ರಮವಾಗಿ ಸ್ವಾಧೀನ ಹೊಂದಿದ್ದಾರೆ. ಆದ್ದರಿಂದ ತಕ್ಷಣ ಬಾಲಸುಬ್ರಹ್ಮಣ್ಯರ ವರದಿಯನ್ನು ಜಾರಿ ಮಾಡುವುದರ ಮೂಲಕ ಸರ್ಕಾರಿ ಭೂಮಿಯನ್ನು ರಕ್ಷಣೆ ಮಾಡಬೇಕು. ಎಸ್ಸಿ, ಎಸ್ಟಿ ಮತ್ತು ಒಬಿಸಿ ಜನಾಂಗದವರು ಗ್ರಾಮದಲ್ಲಿ ಹಕ್ಕು ಸಾಗುವಳಿ ಮಾಡುತ್ತಿರುವ ಜಮೀನನ್ನು ಕೂಡಲೇ ಸಕ್ರಮಗೊಳಿಸಬೇಕು ಎಂದರು. ಅನ್ನಭಾಗ್ಯ ಯೋಜನೆಯಡಿ ಸುಮಾರು 80 ಸಾವಿರ ಕುಟುಂಬಗಳಿಗೆ ಸೌಲಭ್ಯ ಕಲ್ಪಿಸಿದ್ದು, ಈ ಯೋಜನೆಯ ಪ್ರಕಾರ ಸುಮಾರು 2 ಕೋಟಿ ಜನರಿಗೆ ತಿನ್ನಲು ಅನ್ನ ಇಲ್ಲ ಎಂಬ ಕಟುಸತ್ಯವನ್ನು ಅರಿಯಬೇಕಾಗಿದೆ. ವಾಸ್ತವಾಗಿಕೇಂದ್ರ ಯೋಜನಾ ಆಯೋಗದ ವರದಿ ಪ್ರಕಾರ ಶೇ.22ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ವರದಿ ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ ಅಹಾರ ಭದ್ರತಾ ಯೋಜನೆಯನ್ನು ಶೇ.70ರಷ್ಟು ಜನರಿಗೆ ತರಲು ಯೋಜನೆ ಹಮ್ಮಿಕೊಂಡಿದೆ. ಆದರೆ ದೇಶದಲ್ಲಿ ಬಹುತೇಕ ಜನರು ತಿನ್ನಲು ಅನ್ನ ಆಹಾರ ಇಲ್ಲದೆ ಬದುಕುತ್ತಿದ್ದಾರೆ ಎಂದು ಹೇಳಿದರು.
ದೇಶದಲ್ಲಿ 7,730 ಜನ ಶ್ರೀಮಂತರು ಇದ್ದು, ಇವರ ಒಟ್ಟು ಆದಾಯ 50,61,810 ಕೋಟಿ ಇದೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನ ವಿರೋಧಿ ನೀತಿಯನ್ನು ರೂಪಿಸಿದ್ದು, ಬಡವರು ಬಡವರಾಗಿಯೇ ಇರಬೇಕು ಹಾಗೂ ಶ್ರೀಮಂತರು ಶ್ರೀಮಂತರಾಗಿಯೇ ಇರಬೇಕು ಎಂಬ ಸಿದ್ಧಾಂತವನ್ನು ಸರ್ಕಾರಗಳು ಹೊಂದಿದ್ದಾವೆ ಎಂದು ದೂರಿದರು.
ಆದ್ದರಿಂದ ರಾಜ್ಯಾದ್ಯಂತ ನ.28, 29 ಮತ್ತು 30ರಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಧರಣಿ ನಡೆಸಲಾಗುತ್ತಿದ್ದು, ಇದಕ್ಕೆ ದಲಿತ ಹಾಗೂ ಇತರೆ ಸಂಘಟನೆಗಳು ಬೆಂಬಲಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಎಸ್‌ಪಿ ಉಪಾಧ್ಯಕ್ಷ ರಾಜು, ಜಿಲ್ಲಾ ಸಂಯೋಜಕ ದೇವರಾಜು ತಿರುಪತಿಹಳ್ಳಿ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.