ಹಾಸನ

ಮಕ್ಕಳ ಪಾಲನೆ ಪೋಷಕರ ಕರ್ತವ್ಯ

Published On :

ಕ.ಪ್ರ.ವಾರ್ತೆ ಹೊಳೆನರಸೀಪುರ ನ.25
ತಾಲೂಕಿನ ಹೂವಿನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಪಟ್ಟಣದ ರೋಟರಿ ಸಂಸ್ಥೆ ಹಾಗೂ ಮೈಸ್(ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಷನ್ ಸಂಸ್ಥೆ) ಆಶ್ರಯದಲ್ಲಿ ರೋಟರಿ ಹಾಗೂ ಮೈಸ್ ವತಿಯಿಂದ ಮಕ್ಕಳಿಗೆ ಶೂ ವಿತರಣೆ, ಕಂಪ್ಯೂಟರ್ ಹಾಗೂ ಆಂಗ್ಲ ಭಾಷೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ರೋಟರಿ ಸಂಸ್ಥೆಯ ಅಧ್ಯಕ್ಷ .ಆರ್.ಬಿ. ಪುಟ್ಟೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಹಾಗೂ ಸ್ವಚ್ಛತೆ ಕಾಪಾಡುವುದು ಪೋಷಕರ ಮುಖ್ಯ ಜವಾಬ್ದಾರಿ. ಅನೇಕ ಕಾಯಿಲೆಗಳು ಬರುವ ನಿಟ್ಟಿನಲ್ಲಿ ಮಕ್ಕಳು ಹೊರಗೆ ಓಡಾಡುವಾಗಿ ಅವರುಗಳ ಆರೋಗ್ಯದ ದೃಷ್ಟಿಯಿಂದ ಮಕ್ಕಳಿಗೆ ಪಾದರಕ್ಷೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಆಂಗ್ಲ ಭಾಷಾ ಜ್ಞಾನವೂ ಅಗತ್ಯ: ಪ್ರಾಥಮಿಕ ಹಂತದಲ್ಲಿರುವಾಗಲೇ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಕೊಡಿಸಿದರೆ ಯಾವುದೇ ಸರ್ಕಾರಿ ಇಲಾಖೆಯಲ್ಲಿನ ಮಾಹಿತಿಯಾಗಲೀ, ಸರ್ಕಾರದ ಯೋಜನೆಗಳಾಗಲೀ, ನಾಡು, ನುಡಿಗಾಗಿ ದುಡಿದ ಗಣ್ಯರ ಬಗ್ಗೆಯಾಗಲೀ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹನೀಯರ ಬಗ್ಗೆಯಾಗಲೀ ಹೆಚ್ಚು ಜ್ಞಾನ ಸಂಪಾದಿಸಲು ಎಲ್ಲಾ ಮಾಹಿತಿಗಳನ್ನು ಮನೆಯಲ್ಲಿಯೇ ಕುಳಿತು ತಿಳಿದುಕೊಳ್ಳುವಂತಹ ಅನುಕೂಲ ಬಂದಿದೆ. ಇವುಗಳ ಮಾಹಿತಿ ತಿಳಿಯಲು ಆಂಗ್ಲ ಭಾಷೆಯ ಜ್ಞಾನವೂ ಸಹ ಬೇಕಾಗುತ್ತದೆ. ಇದರ ಸದುಪಯೋಗವನ್ನು ಗ್ರಾಮೀಣ ಪ್ರದೇಶದ ಮಕ್ಕಳೂ ಸಹ ಪಡೆಯಲಿ ಎಂಬ ಸದುದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ರೋಟರಿ ಹಾಗೂ ಮೈಸ್ ಸಂಸ್ಥೆ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ತರಬೇತಿ: ರೋಟರಿ ಕ್ಲಬ್‌ನ ಸದಸ್ಯ ಹಾಗೂ ಮೈಸ್ ಕಂಪ್ಯೂಟರ್‌ನ ವ್ಯವಸ್ಥಾಪಕ ನಿರ್ದೇಶಕ ತಮ್ಮಯ್ಯ ಮಾತನಾಡಿ, ಕಂಪ್ಯೂಟರ್ ಜ್ಞಾನ ಪಡೆಯದಿದ್ದರೆ ಭವಿಷ್ಯದಲ್ಲಿ ಅನಕ್ಷರಸ್ಥರೆಂದೇ ಗುರ್ತಿಸುವ ಸಂದರ್ಭ ಒದಗಿಬರುತ್ತದೆ. ಆದ್ದರಿಂದ ಎಲ್ಲರೂ ಈಗಿನಿಂದಲೇ ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳಿ ಎಂದು ತಿಳಿಸಿ, ತಮ್ಮ ಸಂಸ್ಥೆಯ ಸಿಬ್ಬಂದಿ ನೇತ್ರ ಹಾಗೂ ಅನ್ನಪೂರ್ಣ ಇವರೊಂದಿಗೆ ಪ್ರಾಯೋಗಿಕ ಕಂಪ್ಯೂಟರ್ ತರಗತಿಗಳನ್ನು ನಡೆಸಿಕೊಟ್ಟರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ. ಕೆ.ಸಿ. ಮರಿಯಪ್ಪ ಮಾತನಾಡಿ,  ಶಾಲಾ ಮಕ್ಕಳ ಶಿಸ್ತು ಹಾಗೂ ಶಾಲೆಯ ವಾತಾವರಣ ಹಾಗೂ ಪರಿಸರದ ಬಗ್ಗೆ ಕಾಳಜಿ ವಹಿಸಿರುವ ಶಾಲೆಯ ಉಪಾಧ್ಯಾಯರುಗಳ ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಗೆ ಆಯ್ಕೆಯಾಗಿರುವವರು ಒಳ್ಳೆಯ ಮೆರಿಟ್ ಮೇಲೆ ಕೆಲಸಕ್ಕೆ ಬಂದು ಪ್ರತಿಭಾವಂತರಾಗಿರುತ್ತಾರೆ. ಆದುದರಿಂದ ಪೋಷಕರು ಖಾಸಗಿ ಶಾಲೆಯ ವ್ಯಾಮೋಹವನ್ನು ಬಿಟ್ಟು ಸರ್ಕಾರಿ ಶಾಲೆಯಲ್ಲಿಯೇ ಇಂತಹ ಉತ್ತಮ ವಾತಾವರಣದಲ್ಲಿ ಮಕ್ಕಳನ್ನು ಸೇರಿಸಿ ಎಂದು ತಿಳಿಸಿದರು.
ಕನ್ನಡಕ್ಕೆ ಹೆಚ್ಚು ಮಹತ್ವ: ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಹೊಳೆನರಸೀಪುರ ರೋಟರಿ ಸಂಸ್ಥೆ ಹಾಗೂ ಮೈಸ್ ಸಂಸ್ಥೆ ಆಯೋಜಿಸಿರುವುದು ನಮಗೆ ಹೆಮ್ಮೆ ತಂದಿದೆ. ನಮ್ಮ ಸರ್ಕಾರ ಕನ್ನಡಕ್ಕೆ ಹೆಚ್ಚು ಮಹತ್ವ ಕೊಡುತ್ತಿರುವ ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣವೂ ಕೂಡ ಬೇಕಾಗುತ್ತದೆ. ಇದರ ಮಹತ್ವ ತಿಳಿಯಬೇಕಾದರೆ ಆಂಗ್ಲ ಭಾಷೆಯ ಜ್ಞಾನವೂ ಬೇಕಾಗುತ್ತದೆ. ಹಾಗಾಗಿ ನಮ್ಮ ಶಾಲೆಯ ಮಕ್ಕಳೂ ಸಹ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ ಎಂದು ತಿಳಿಸಿದರು.
ಮಕ್ಕಳಿಗೆ ಪಾದರಕ್ಷೆಗಳನ್ನು ವಿತರಿಸಿ, ಇಂತಹ ಅವಕಾಶವನ್ನು ಕಲ್ಪಿಸಿಕೊಟ್ಟ ಹೊಳೆನರಸೀಪುರ ರೋಟರಿ ಸಂಸ್ಥೆ ಹಾಗೂ ಮೈಸ್ ಸಂಸ್ಥೆಗೂ ಗ್ರಾಮಸ್ಥರಾದ ನಾವುಗಳು ಚಿರಋಣಿಯಾಗಿರುತ್ತೇವೆ ಎಂದು ತಿಳಿಸಿದರು.
ಕಂಪ್ಯೂಟರ್ ಪರೀಕ್ಷೆಯಲ್ಲಿ ಭೂಮಿಕಾ ಪ್ರಥಮ, ಕಾಂತಮಣಿ ದ್ವಿತೀಯ ಹಾಗೂ ಇಂಗ್ಲಿಷ್ ಪರೀಕ್ಷೆಯಲ್ಲಿ ಶರತ್ ಪ್ರಥಮ ಹಾಗೂ ದ್ವಿತೀಯ ದಾಕ್ಷಾಯಿಣಿ ಬಹುಮಾನ ಪಡೆದರು. ಶಾಲೆಯ ಮಕ್ಕಳು ಪ್ರಾರ್ಥಿಸಿದರು. ವಸಂತಕುಮಾರ್ ನಿರೂಪಿಸಿದರು. ಮುಖ್ಯ ಶಿಕ್ಷಕ ಸ್ವಾಮಿ ಭೋವಿ ಸ್ವಾಗತಿಸಿದರು. ಶಿಕ್ಷಕಿ ಲತಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.