ಸುದ್ದಿ ಸಂಕ್ಷೇಪ
ರೈತ ಆತ್ಮಹತ್ಯೆ: ಸರ್ಕಾರದ ವಿರುದ್ಧ ಆಕ್ರೋಶ
ಕ.ಪ್ರ.ವಾರ್ತೆ ಹಾಸನ ನ.27
ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡದ ಪರಿಣಾಮ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಖಂಡಿಸಿ ಬುಧವಾರ ರಾತ್ರಿ ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು ಮೇಣದ ಬತ್ತಿ ಮೆರವಣಿಗೆ ನಡೆಸಿ ಪ್ರತಿಭಟನೆ ಮಾಡಿದರು. ನಗರದ ಹೇಮಾವತಿ ಪ್ರತಿಮೆ ಬಳಿ ಕೆಲ ಸಮಯ ಧರಣಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ರೈತನ ಆತ್ಮಹತ್ಯೆಗೆ ಸರ್ಕಾರ ಕಾರಣವಾಗಿದೆ ಎಂದು ದೂರಿ ಮೃತ ರೈತನ ಆತ್ಮಕ್ಕೆ ಶಾಂತಿ ಕೋರಿದರು. ಅಧಿವೇಶನ ಆರಂಭವಾಗುವುದಕ್ಕೂ ಮೊದಲಿನಿಂದಲು ಕಬ್ಬು ಬೆಳೆಗಾರರು ಪ್ರತಿಭಟನೆ ಮಾಡಲಾಗುತ್ತಿದ್ದರೂ ಇದುವರೆಗೂ ಅವರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿಲ್ಲ. ದೇಶದ ಬೆನ್ನಲುಬಾಗಿರುವ ರೈತರಿಗೆಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ. ಕೂಡಲೇ ರೈತರ ಕಷ್ಟಕ್ಕೆ ಸ್ಪಂದಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ಹೆಚ್.ಎನ್. ನಟೇಶ್, ಜಿಲ್ಲಾ ಕಾರ್ಯದರ್ಶಿ ಬಿ.ಎಸ್. ನವೀನ್ಕುಮಾರ್, ಸಂಘಟನಾ ಕಾರ್ಯದರ್ಶಿ ಸೈಯದ್ ಏಜಾಜ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರಸಾದ್, ತಾಲೂಕು ಅಧ್ಯಕ್ಷ ಭಾನುಪ್ರಕಾಶ್ ಇತರರು ಭಾಗವಹಿಸಿದ್ದರು.
ಸರ್ಕಾರದ ಧೋರಣೆ ಕಾರಣ: ಬಿಜೆಪಿ
ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಳೆದಿರುವ ರೈತ ವಿರೋಧಿ ಧೋರಣೆಯಿಂದಾಗಿ ಬೆಳಗಾವಿಯಲ್ಲಿ ವಿಠಲ ಅರಭಾವಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಜೆಪಿ ಜಿಲ್ಲಾ ಸಮಿತಿ ಆರೋಪಿಸಿದೆ. ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸಲು ಸರ್ಕಾರ ನಿರ್ಲಕ್ಷ್ಯ ತಾಳಿದ್ದರ ಪರಿಣಾಮ ಕಬ್ಬು ಬೆಳೆಗಾರ ಅರಭಾವಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೇರ ಹೊಣೆ ಹೊರಬೇಕು. ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಬೇಕೆಂದು ಜಿಲ್ಲಾ ಬಿಜೆಪಿ ಆಗ್ರಹಿಸಿದೆ. ಆತ್ಮಹತ್ಯೆ ಮಾಡಿಕೊಂಡಿರುವ ರೈತ ವಿಠಲ ಅರಭಾವಿ ಅವರ ಕುಟುಂಬಕ್ಕೆ ತಕ್ಷಣ 10 ಲಕ್ಷ ಪರಿಹಾರ ನೀಡಬೇಕು ಮತ್ತು ಕಬ್ಬಿಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಬಿಜೆಪಿಯ ಜಿಲ್ಲಾ ಮಾಧ್ಯಮ ಪ್ರಮುಖ ಎಚ್.ಜಿ. ರವಿಕುಮಾರ್ ಒತ್ತಾಯಿಸಿದ್ದಾರೆ.
ಬೆಳವಾಡಿಯಲ್ಲಿಂದು ಎಸ್ಬಿಎಂ ಶಾಖೆ ಶುರು
ಅರಕಲಗೂಡು: ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನೂತನ ಶಾಖೆ ಆರಂಭಗೊಳ್ಳಲಿದೆ. ತಾಲೂಕಿನ ದೊಡ್ಡ ಗ್ರಾಮಗಳಲ್ಲೊಂದಾದ ಬೆಳವಾಡಿ ಗ್ರಾಮದ ಸುತ್ತಮುತ್ತಲು ಗ್ರಾಮಗಳ ಗ್ರಾಹಕರಿಗೆ ಇದು ಉಪಯುಕ್ತವಾಗಲಿದೆ.
ನಾಳೆ ವಿಕಲಚೇತನರ ದಿನಾಚರಣೆ
ಹಾಸನ: ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಜಿಲ್ಲೆಯ ವಿಕಲಚೇತನರು ಮತ್ತು ವಿಶೇಷ ಶಾಲೆಗಳ ಮಕ್ಕಳಿಗೆ ನಾನಾ ಆಟೋಟ ಸ್ಪರ್ಧೆಗಳನ್ನು ನ.29ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಹಾಸನ ಹಾಗೂ ಜಿಲ್ಲೆಯ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿಕಲಚೇತನರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಈ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ, ಆಟೋಟ ಸ್ಪರ್ಧೆಗಳು ಯಶಸ್ವಿಯಾಗಿ ನಡೆಸಲು ಸಹಕರಿಸಲು ಕೋರಲಾಗಿದೆ. ವಿವರಕ್ಕೆ ದೂ. 08172-264546.
ಸಂವಿಧಾನ ಎಲ್ಲರೂ ಗೌರವಿಸಬೇಕು
ಅರಕಲಗೂಡು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವನ್ನು ಗೌರವಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದ್ದು ದೇಶದ ಸಂವಿಧಾನವನ್ನು ಗೌರವಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕಂಬೇಗೌಡ ತಿಳಿಸಿದ್ದಾರೆ. ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಕಾನೂನು ದಿನಾಚರಣೆಯನ್ನು ಉದ್ಘಾಟಿಸಿ ಮತನಾಡುತ್ತಿದ್ದ ಅವರು ದೇಶದಲ್ಲಿ ಬ್ರಿಟಿಷ್ ಆಳ್ವಿಕೆ ಇದ್ದ ಸಮಯದಲ್ಲೇ ಸಂವಿಧಾನ ರಚನಾ ಸಮಿತಿಯು ಪ್ರಭಾವಶಾಲಿಯಾಗಿತ್ತು. ಅದು ಬೀರಿದ ಪ್ರಭಾವದಿಂದ ನಾವು ಬಹುಬೇಗ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಯಿತು ಎಂದು ನುಡಿದರು. ಸಿವಿಲ್ ನ್ಯಾಯಾಧೀಶ ಗಿರೀಶ್ ಮಾತನಾಡಿ ದೇಶದಲ್ಲಿ ಸಂವಿಧಾನ ವರದಿ ಅನುಷ್ಠಾನ ಗೊಂಡ ಬಳಿಕವಷ್ಟೇ ದೇಶದಲ್ಲಿ ಬಲಿಷ್ಟವಾದ ಕಾನೂನನ್ನು ಜಾರಿಗೆ ತರಲು ಸಾಧ್ಯವಾಯಿತು. ಅಂಬೇಡ್ಕರ್ ರಚಿಸಿದ ನಮ್ಮ ಸಂವಿಧಾನ ಇಡೀ ವಿಶ್ವದಲ್ಲೇ ಉನ್ನತ ಸ್ಥಾನ ಹೊಂದಿದೆ ಎಂದು ತಿಳಿಸಿದರು. ವಕೀಲರ ಸಂಘದ ಅಧ್ಯಕ್ಷ ಬಿ.ಸಿ. ರಾಜೇಶ್ ಅಧ್ಯತೆ ವಹಿಸಿದ್ದರು. ಹಿರಿಯ ವಕೀಲರಾದ ಜನಾರ್ದನ ಗುಪ್ತ, ಎಸ್.ಪಿ. ಜಯಪ್ಪ, ವಕೀಲರಾದ ಶಂಕರಯ್ಯ, ಪ್ರಕಾಶ್ ಇತರರು ಉಪಸ್ಥಿತರಿದ್ದರು.
ಇಂದು ಪ್ರತಿಭಾ ಕಾರಂಜಿ
ಅರಕಲಗೂಡು: ಪಟ್ಟಣದ ನಿವೇದಿತಾ ವಿದ್ಯಾಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ವಿ. ಶಾಲಿನಿ ತಿಳಿಸಿದ್ದಾರೆ. ಅರಕಲಗೂಡು ಕಸಬ ಕ್ಲಸ್ಟರ್ನ ಸುಮಾರು 19 ಶಾಲೆಗಳ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ರೇವಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕ್ಷೇತ್ರ ಸಮನ್ವಯಾಧಿಕಾರಿ ರಮೇಶ್ ಸೇರಿದಂತೆ ಶಿಕ್ಷಣ ಇಲಾಖೆಯ ಇತರೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.
ದನಗಳ ಜಾತ್ರೆಗೆ ನಿಷೇಧ
ಅರಕಲಗೂಡು: ತಾಲೂಕಿನ ರಾಮನಾಥಪುರದ ಐತಿಹಾಸಿಕ ದನಗಳ ಜಾತ್ರೆಗೆ ನಿಷೇಧ ಹೇರಲಾಗಿದೆ. ರಾಜ್ಯದಲ್ಲಿ ಜಾನುವಾರುಗಳಲ್ಲಿ ಕಾಲುಬಾಯಿ ರೋಗವೂ ಸೇರಿದಂತೆ ವಿವಿಧ ರೋಗಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಪಶು ಸಂಗೋಪನಾ ಇಲಾಖೆ ಇಂತಹ ದನಗಳ ಸಂತೆ, ಜಾತ್ರೆಗಳು ಮತ್ತು ಜಾನುವಾರುಗಳ ಸಾಗಣೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ನೀಡಿರುವ ಸೂಚನೆ ನೀಡಿದ್ದು, ಅದರ ಅನ್ವಯ ಜಿಲ್ಲೆಯಲ್ಲೂ ಜಾನುವಾರುಗಳ ಸಾಗಣೆ ಮತ್ತು ಜಾತ್ರೆಗಳನ್ನು ನಡೆಸದಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದು, ಅದರನ್ವಯ ತಾಲೂಕಿನ ರಾಮನಾಥಪುರದಲ್ಲಿ ಆರಂಭಗೊಂಡಿದ್ದ ದನಗಳ ಜಾತ್ರೆಗೂ ನಿಷೇಧ ಅನ್ವಯಿಸಿದ್ದು, ನಿರ್ಬಂಧದ ಬಿಸಿ ಮುಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

