ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕೃತಿಕ ವೈಭವ
ಬೇಲೂರು: ಇತ್ತೀಚಿನ ಆಧುನಿಕ ಯುಗದಲ್ಲಿ ಗಣಪತಿ ಮಹೋತ್ಸವದಂತಹ ಕಾರ್ಯಕ್ರಮಗಳು ಕೇವಲ ನೆಪಮಾತ್ರಕ್ಕೆ, ವಾಡಿಕೆಗೆ ಎಂಬಂತೆ ಆಚರಿಸುವುದು ಪರಿಪಾಠವಾಗಿದೆ. ಆದರೆ ಇದಕ್ಕೆ ಅಪವಾದ ಎಂಬಂತೆ ಅರೇಹಳ್ಳಿ ಗ್ರಾಮದಲ್ಲಿ 50ನೇ ವರ್ಷದ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ 30 ದಿನ ಕಾರ್ಯಕ್ರಮ ಹಮ್ಮಿಕೊಂಡು 12 ಲಕ್ಷಕ್ಕೂ ಹೆಚ್ಚು ಖರ್ಚು ಮಾಡುತ್ತಿರುವುದು ವಿಶೇಷವಾಗಿದೆ.
ತಾಲೂಕಿನ ಮಲೆನಾಡು ಭಾಗದಲ್ಲಿರುವ ಅರೇಹಳ್ಳಿ ಗ್ರಾಮದಲ್ಲಿ ಕಳೆದ 50 ವರ್ಷದಿಂದ ಗಣಪತಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅರೇಹಳ್ಳಿ ಗ್ರಾಮದ ಸುತ್ತಮುತ್ತ ಕಾಫಿ ತೋಟವಿದ್ದು ಮಲೆನಾಡಿನ ಸುಂದರ ತಾಣವಾಗಿದೆ.
ಅನ್ಯೋನ್ಯತೆ: ಬಹುತೇಕ ಕಾಫಿ ತೋಟದ ಕೂಲಿ ಕೆಲಸ ನಿರ್ವಹಿಸುವ ಕಾರ್ಮಿಕ ವರ್ಗ ಇಲ್ಲಿ ಹೆಚ್ಚಾಗಿದೆ. ಅಂತೆಯೇ ಗೌಡರು, ಲಿಂಗಾಯತರು, ಮಂಗಳೂರು ಕಡೆಯ ಪೂಜಾರಿ, ಭಂಟರು, ಶೆಟ್ಟರು, ಹಿಂದುಳಿದ ವರ್ಗ, ಪರಿಶಿಷ್ಟ ಜನಾಂಗ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಜನಾಂಗದವರು ಹೆಚ್ಚಾಗಿ ಇದ್ದಾರೆ. ಇಲ್ಲಿ ಎಲ್ಲಾ ಜನಾಂಗದವರು ಒಗ್ಗಟ್ಟಾಗಿದ್ದು, ಪರಸ್ಪರ ಸಹೋದರ ಭಾವನೆಯಿಂದ ಜೀವನ ಸಾಗಿಸುತ್ತಿದ್ದಾರೆ. ರಾಜ್ಯದ ಬಹುತೇಕ ಕಡೆ ಕೋಮುಗಲಭೆ ನಡೆದಿದ್ದರೂ ಇಲ್ಲಿ ಮಾತ್ರ ಅದರ ಸುಳಿವಿಲ್ಲದಷ್ಟು ಅನ್ಯೋನ್ಯತೆಯಿದೆ.
ಕಳೆದ 50 ವರ್ಷದ ಹಿಂದೆ ಗ್ರಾಮದ ಸರ್ಕಲ್ ಮುಂಭಾಗ ಪೆಂಡಾಲ್ ನಿರ್ಮಿಸಿ ಗಣಪತಿ ಪ್ರತಿಷ್ಠಾಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆಗ ಗಣಪತಿ ಪ್ರತಿಷ್ಠಾಪನೆಗೆ ಕಾರಣರಾದವರು ಈಗ ಇಳಿ ಸಂಜೆಯ ವಯಸ್ಸಿನಲ್ಲಿದ್ದರೂ ಆಗಿನ ಕಾಲದ ದೇವರ ಮೇಲಿನ ಭಯ ಭಕ್ತಿ ಹಾಗೂ ದಿನನಿತ್ಯ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅದರಲ್ಲೂ ಹರಿಕಥೆ ಕೇಳುವುದಕ್ಕೆ ಸುತ್ತಮುತ್ತಲಿನ ಗ್ರಾಮದಿಂದ ಸಾವಿರಾರು ಜನ ಬರುತ್ತಿದ್ದರು.
ಗುರುರಾಜನಾಯ್ಡು, ಶೋಭಾ ನಾಯ್ಡು, ಹಿರಿಕೊಲೆ ಮಲ್ಲಪ್ಪ ಹಾಗೂ ಇತರರು ಈ ಪೆಂಡಾಲಿನಲ್ಲಿ ಕಾರ್ಯಕ್ರಮ ನೀಡಿರುವುದನ್ನು ಮೆಲಕು ಹಾಕುತ್ತಾರೆ. ಕಾಲಾನಂತರದಲ್ಲಿ ಅರೇಹಳ್ಳಿಯ ಸುಭಾಷ್ ಯುವಕ ಸಂಘದ ಯುವಕರು, ವಿನಾಯಕ ಹಾಗೂ ಇತರೆ ಸಂಘ- ಸಂಸ್ಥೆಯವರ ನೇತೃತ್ವದಲ್ಲಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಜೊತೆಗೆ ಮನರಂಜನಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಾ ಈಗ 50ನೇ ವರ್ಷದ ಸುವರ್ಣ ಸಂಭ್ರಮಾಚರಣೆಯನ್ನು ನಡೆಯುತ್ತಿದೆ.
ವಿಶೇಷ ಆಮಂತ್ರಣ: 50ನೇ ಸುವರ್ಣ ಮಹೋತ್ಸವದ ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನಾ ಮಹೋತ್ಸವ ಆಹ್ವಾನ ಪತ್ರಿಕೆಯನ್ನು ವಿಶಿಷ್ಟವಾಗಿ ಮುದ್ರಿಸಲಾಗಿದ್ದು 5 ಪುಟಗಳ ಕಲರ್ ವಿನ್ಯಾಸ ಮನಸೂರೆಗೊಳ್ಳುವಂತಿದೆ. ಸತತ 30 ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಚಿಕ್ಕಮಗಳೂರಿನ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳಿಂದ ಕಾರ್ಯಕ್ರಮ, ಹರಿಕಥೆ, ಮಹಿಳೆಯರಿಗೆ, ಪುರುಷರಿಗೆ ಆಟೋಟ, ಗಾಯನ ಸ್ಪರ್ಧೆ, ಚಿತ್ರ ನಟ ನಿಶ್ಚಲ್ ಅವರಿಂದ ಮೆಗಾ ಮ್ಯಾಜಿಕ್, ಮಾತನಾಡುವ ಗೊಂಬೆ, ಮಕ್ಕಳಿಗೆ ವೇಷಭೂಷಣ ಸ್ಪರ್ಧೆ, ಭರತನಾಟ್ಯ, ಟಿ.ವಿ 9 ಖ್ಯಾತಿ ಹಳ್ಳಿ ಕಟ್ಟೆ ಮಿಮಿಕ್ರಿ ಗೋಪಿ, ಜ್ಯೂ. ವಿಷ್ಣು, ರಾಜ್, ಶಂಕರ್, ಉಪೇಂದ್ರರಿಂದ ಮನರಂಜನೆ, ಜಾನಪದ, ಭಾವಗೀತೆ, ಯಕ್ಷ ವಲ್ಲರಿ ಮಹಿಳಾ ತಂಡದಿಂದ ಯಕ್ಷಗಾನ, ಆರ್ಕೆಸ್ಟ್ರಾ, ಉಡುಪಿ ಕೊಂಡದಕುಳಿ ಯಕ್ಷಗಾನ ತಂಡ, ಮಂಗಳೂರಿನ ಡಾನ್ಸ್, ಸಾಲಿಗ್ರಾಮ ಯಕ್ಷಗಾನ ಮಂಡಳಿಯಿಂದ ಮಕ್ಕಳ ಯಕ್ಷಗಾನ, ಡಿಚರ್ಡ್ ಲೂಯಿಸ್ ತಂಡದಿಂದ ನಗೆಹಬ್ಬದಂತಹ ಕಾರ್ಯಕ್ರಮ ನಡೆಸಲಾಗುತ್ತಿದೆ.
ಅ.10ರಂದು ಬೆಳಗ್ಗೆ ಶ್ರೀಯವರನ್ನು ಭವ್ಯ ಪುಷ್ಪ ವಾಹನದಲ್ಲಿ ಬಿಜಯ ಮಾಡಿಸಿ ರಾಷ್ಟ್ರ ಪ್ರಶಸ್ತಿ ವಿಜೇತ ಬಂಟ್ವಾಳದ ಚಿಲಿಪಿಲಿ ಬಳಗದಿಂದ ಗೊಂಬೆ ಮೇಳ, ರಾಮದೇವನಹಳ್ಳಿ ವೀರಗಾಸೆ ತಂಡನೃತ್ಯದೊಂದಿದೆ ರಾಜಬೀದಿಯಲ್ಲಿ ಮೆರವಣಿಗೆ ಹೊರಟು ಅಡಗಂಚನಹಳ್ಳಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು. ಗಣಪತಿಯವರ ವಿಸರ್ಜನೆ ಸಂದರ್ಭದಲ್ಲಿ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಸಮುದಾಯ ಸೇರಿದಂತೆ ಎಲ್ಲಾ ಜನಾಂಗದವರು ಭಾಗವಹಿಸುವುದು ಇಲ್ಲಿನ ವಿಶೇಷ.
ಅಲ್ಲದೆ ಇತರೆ ಜಿಲ್ಲೆ, ರಾಜ್ಯ ಹಾಗೂ ವಿದೇಶದಲ್ಲಿ ನೆಲೆಸಿರುವ ಸ್ಥಳಿಯರು ಗಣಪತಿ ವಿಸರ್ಜನೆಯ ದಿನಾಂಕವನ್ನು ಬಂಧು ಮಿತ್ರರಿಂದ ತಿಳಿದುಕೊಂಡು ಕಾರ್ಯಕ್ರಮದಲ್ಲಿ ಭಾಗವಹಹಿಸುತ್ತಾರೆ. ಈ ಬಾರಿಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ, ಜನಪ್ರತಿನಿಧಿಗಳು, ಗ್ರಾಮಸ್ಥರು, ತೋಟದ ಮಾಲೀಕರು, ಕೆಲಸಗಾರರು, ವರ್ತಕರು, ಆಟೋ ಸಂಘ, ಸಂಘ-ಸಂಸ್ಥೆ, ಕಾರ್ಯಕ್ರಮದ ರುವಾರಿಗಳಾದ ವೀರಸಾವರ್ಕರ್ ಸ್ವಸಹಾಯ ಸಂಘ ಸೇರಿದಂತೆ ಎಲ್ಲರೂ ತಮ್ಮ ಸಹಾಯಹಸ್ತವನ್ನು ಚಾಚಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಚಿರ ನೆನಪಿನಲ್ಲಿ ಉಳಿಯುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

