ಹಾಸನ

ಕ್ಷಮೆಯಾಚಿಸದಿದ್ದರೆ ಮಾನನಷ್ಟ ಮೊಕದ್ದಮೆ

Published On :

ಕನ್ನಡಪ್ರಭ ವಾರ್ತೆ೤ ಹಾಸನ೤ ಅ. 5
ಅಕ್ರಮವಾಗಿ ಮರಳು ಮತ್ತು ಮರ ಸಾಗಾಣಿಕೆ ನಡೆಸುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿರುವ ಶಾಸಕ ಎಚ್.ಎಸ್.ಪ್ರಕಾಶ್ 15 ದಿನದೊಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕಾಂಗ್ರೆಸ್ ಮುಖಂಡ ಎಚ್.ಕೆ.ಜವರೇಗೌಡ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಳು, ಕಲ್ಲು ಮತ್ತು ಮರಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ. ಕೆಐಎಡಿಬಿಯಿಂದ ಭೂಮಿ ತೆಗೆದುಕೊಂಡು ಬೇರೆ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದು, ಪ್ರಕಾಶ್ ಈ ಬಗ್ಗೆ ದಾಖಲೆಗಳನ್ನು ಸಾಬೀತು ಪಡಿಸಿದರೆ ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಇದು ಸುಳ್ಳಾಗಿದ್ದು, ನನ್ನ ತೇಜೋವಧೆ ಹಾಗೂ ಮಾನಹಾನಿ ಮಾಡುವ ದುರುದ್ದೇಶದಿಂದಲೇ ಹೀಗೆಲ್ಲ ಆರೋಪಿಸಿದ್ದಾರೆ ಎಂದು ದೂರಿದರು.
ಕೆಲ ದಿನಗಳ ಹಿಂದೆ ಕಾಂಗ್ರೆಸ್ ಕಾರ್ಮಿಕ ಘಟಕದ ಕಾರ್ಯಕ್ರಮದಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಶಿವರಾಂ ರನ್ನು ಮಾಧ್ಯಮದವರು ಮಾತನಾಡಿಸುವಾಗ ನಾನು ಇದ್ದ ಕಾರಣಕ್ಕೆ ಎಚ್.ಎಸ್.ಪ್ರಕಾಶ್ ನನ್ನ ವಿರುದ್ಧ ಅಕ್ರಮ ಮರಳು, ಮರ ದಂಧೆ ನಡೆಸುತ್ತಿದ್ದಾರೆಂದು ನನ್ನ ವಿರುದ್ಧ ಸುಳ್ಳ ಆರೋಪ ಮಾಡಿದ್ದಾರೆ ಎಂದು ಹೇಳಿದರು.
ಬೀಟೆ ಮರ ಹಾಕಿದ್ದಾರೆಂಬ ಆರೋಪ: ಜೆಡಿಎಸ್ನಲ್ಲಿದ್ದಾಗ ಸ್ನೇಹಿತರಾಗಿದ್ದ ಶಾಸಕ ಎಚ್.ಎಸ್.ಪ್ರಕಾಶ್ ನಮ್ಮ ಮನೆಗೆ ಕೆಲವೊಮ್ಮೆ ಬಂದಿದ್ದಾರೆ. ಆ ಸಂದರ್ಭದಲ್ಲಿ ನಮ್ಮ ಮನೆಯ ಬಾತ್ರೂಂಗೆ ಬೀಟೆ ಮರ ಹಾಕಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಸ್ನೇಹಿತ ಅಂತ ಮನೆಯೊಳಗೆ ಸೇರಿಸಿಕೊಂಡರೆ ಮನೆಯಲ್ಲಿ ಏನೆಲ್ಲ ಇದೆ ಹಾಗೂ ಯಾರು ಇದ್ದಾರೆ ಅಂತ ನೋಡುತ್ತಾರೆ. ಇಂತವರನ್ನು ಮನೆಯೊಳಗೆ ಸೇರಿಸುವುದೇ ತಪ್ಪು. ಅವರ ದೃಷ್ಟಿಕೋನ ಸರಿಯಾಗಿಲ್ಲ ಎಂದು ಟೀಕಿಸಿದರು. 1985ರಿಂದ ನಾನು ತೆರಿಗೆ ಕಟ್ಟುತ್ತಿದ್ದೇನೆ. ವಕೀಲ ವೃತ್ತಿಯಿಂದ ಸಾಕಷ್ಟು ಹಣ ಮತ್ತು ಜನರ ವಿಶ್ವಾಸ ಗಳಿಸಿದ್ದೇನೆ. ರಾಜಕೀಯ ನಂಬಿ ನಾನು ಹಣ ಗಳಿಸಬೇಕಾದ ಅವಶ್ಯಕತೆ ನನಗಿಲ್ಲ. ಕದ್ದು ಮುಚ್ಚಿ ಮರಗಳನ್ನು ಸಾಗಾಣಿಕೆ ಮಾಡುವಂತಹ ಅವಶ್ಯಕತೆ ಇಲ್ಲ. ಪ್ರಕಾಶ್ ಕ್ಷಮಾಪಣೆ ಕೇಳದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದು ಗ್ಯಾರೆಂಟಿ ಎಂದು ಎಚ್ಚರಿಕೆ ನೀಡಿದರು.
ಜನತಾ ಪರಿವಾರದ ಸದಸ್ಯರೆ ಹೆಚ್ಚು: ಜನತಾ ಟ್ರಸ್ಟ್ನಲ್ಲಿ ಜನತಾ ಪರಿವಾರದ ಸದಸ್ಯರೆ ಹೆಚ್ಚಾಗಿದ್ದು, ನಾನು ಜೆಡಿಎಸ್ಗೆ ರಾಜೀನಾಮೆ ನೀಡದ ನಂತರ ಜನತಾ ಟ್ರಸ್ಟ್ಗೂ ರಾಜೀನಾಮೆ ನೀಡಿದ್ದೇನೆ. ಇಲ್ಲಿ ಜನತಾ ಪರಿವಾರದವರೇ ಹೆಚ್ಚಾಗಿರುವುದರಿಂದ ನಾನು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಆನ್ನೋ ಕಾರಣಕ್ಕೆ ರಾಜಿನಾಮೆ ನೀಡಿದೆ. ಹಾಸನದಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್ ಕಟ್ಟಡಕ್ಕೆ ಜಾಗವನ್ನು 1986ರಲ್ಲಿ ಟ್ರಸ್ಟ್ಗೆ ಜಾಗ ನೀಡಲಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಶಿವರಾಂ, ಮುಖಂಡ ಎಸ್.ಎಂ.ಆನಂದ್, ಎಚ್.ಕೆ.ಮಹೇಶ್, ಡಿ.ಮಲ್ಲೇಶ್, ಸಿ.ಎಸ್.ಪುಟ್ಟೇಗೌಡ ಇದ್ದರು.

ಮರಳು, ಕಲ್ಲು ಮತ್ತು ಮರಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ. ಕೆಐಎಡಿಬಿಯಿಂದ ಭೂಮಿ ತೆಗೆದುಕೊಂಡು ಬೇರೆ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದು, ಪ್ರಕಾಶ್ ಈ ಬಗ್ಗೆ ದಾಖಲೆಗಳನ್ನು ಸಾಬೀತು ಪಡಿಸಿದರೆ ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಇದು ಸುಳ್ಳಾಗಿದ್ದು, ನನ್ನ ತೇಜೋವಧೆ ಹಾಗೂ ಮಾನಹಾನಿ ಮಾಡುವ ದುರುದ್ದೇಶದಿಂದಲೇ ಹೀಗೆಲ್ಲ ಆರೋಪಿಸಲಾಗಿದೆ
ಟಿ  ಎಚ್.ಕೆ.ಜವರೇಗೌಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.