ಹಾಸನ

ಒಣಗುತ್ತಿರುವ ಅಡಕೆ, ತೆಂಗಿನ ಮರ

Published On :

ಕನ್ನಡಪ್ರಭ ವಾರ್ತೆ೤ ಹಾರನಹಳ್ಳಿ೤ ಅ.7
ಕಲ್ಪತರು ನಾಡು ಅರಸೀಕೆರೆ ತಾಲೂಕಿನಲ್ಲಿ 3 ವರ್ಷಗಳಿಂದ ಉತ್ತಮ ಮಳೆಯಾಗದೆ ತೆಂಗಿನ ಮರಗಳು ಒಣಗಿ ಹೋಗಿವೆ. ತಾಲೂಕಿನಲ್ಲಿ ತೆಂಗಿನ ಮರಗಳ ಜೊತೆಗೆ ಅಡಿಕೆ ಮರಗಳನ್ನು ಬೆಳೆದಿದ್ದ ರೈತರು ಅಡಿಕೆ ಮರಗಳು ಸಹ ಸಂಪೂರ್ಣ ನಾಶವಾಗಿ ರೈತರೇ ಅಡಕೆ ಮರವನ್ನು ಕಡಿಯುತ್ತಿದ್ದಾರೆ.
 ಅರಸೀಕೆರೆ ತಾಲೂಕಿನಲ್ಲಿ ಹಾರನಹಳ್ಳಿ, ಜಾವಗಲ್, ಕಣಕಟ್ಟೆ, ಗಂಡಸಿ, ಕಸಬಾ, ಬಾಣಾವರ ಹೋಬಳಿಗಳ ವಿವಿಧ ಗ್ರಾಮಗಳಲ್ಲಿ ಕೆರೆ ಸಮೀಪವಿರುವ ಭಾಗಾಯ್ತು ಜಮೀನಿನಲ್ಲಿ ತೆಂಗಿನ ಮರಗಳ ಜೊತೆ ಅಡಿಕೆ ತೋಟಗಳನ್ನು ಮಾಡಿದ್ದು ವರ್ಷಕ್ಕೆ ಲಕ್ಷಾಂತರ ರೂ.ಗಳು ಅಡಿಕೆ ಬೆಳೆಯಿಂದ ಲಾಭ ಬರುತ್ತಿತ್ತು. ಆಪತ್ಕಾಲದಲ್ಲಿ ಸಂಜೀವಿನಿಯಾಗಿದ್ದ ಅಡಿಕೆ ಮರಗಳು ಒಣಗಿ ಹೋಗಿದ್ದರಿಂದ ರೈತರು 50-100 ರೂ.ಗಳಿಗೆ ಅಡಿಕೆ ಮರಗಳನ್ನು ಕಡಿದು ಮಾರುವ ಸ್ಥಿತಿ ನಿರ್ಮಾಣವಾಗಿದೆ.
 ಶ್ರೀಮಂತ ಬೆಳೆಯೆಂದು ಕರೆಸಿಕೊಳ್ಳುತ್ತಿದ್ದ ಅಡಿಕೆ ರೈತರ ಪಾಲಿಗೆ ನೋವಿನ ಬೆಳೆಯಾಗಿ ರೈತರು ತೊಟಗಳಲ್ಲಿ ಅಡಿಕೆ ಬೆಳೆಯನ್ನು ಬೆಳೆಯಬೇಕೇ ಅಥವಾ ಪರ್ಯಾಯ ಮಾವು, ಇತರ ಬೆಳೆಗಳನ್ನು ಬೆಳೆಸುವುದರ ಬಗ್ಗೆ ಯೋಚನೆ ಇದ್ದರೂ ಸ್ವೀಕರಿಸಲಾಗದೆ ಗೊಂದಲದಲ್ಲಿ ರೈತರಿದ್ದಾರೆ. ರೈತರ ನೆರವಿಗೆ ಸರ್ಕಾರ ಸಹಾಯ ಹಸ್ತ ನೀಡುವುದೇ ಕಾದುನೋಡಬೇಕಾಗಿದೆ.
 ಅಡಕೆ ಬೆಳೆಗಾರರಾದ ಹಾರನಹಳ್ಳಿ ಮುರುಳಿ ಹೇಳುವಂತೆ ತಾಲ್ಲೂಕಿನಲ್ಲಿ ಅನೇಕ ಗ್ರಾಮಗಳಲ್ಲಿ ಅಡಿಕೆ ತೋಟಗಳಿದ್ದು ಹಾಲಿ ಅಡಿಕೆ ಮರ ನೀರಿನ ಕೊರತೆ, ರೋಗದ ಭಾದೆಯಿಂದ ಸಂಪೂರ್ಣವಾಗಿ ನಾಶವಾಗುತ್ತಿದೆ. ತೋಟಗಾರಿಕಾ ಇಲಾಖೆಯು ಬರಿ ತೆಂಗಿಗೆ ಪರಿಹಾರ ಕೊಡಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದರಾದರೂ ಅಡಕೆ ಬೆಳೆಗೂ ಪರಿಹಾರದ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹೋರಾಟ ನಡೆಸಬೇಕಾಗಿದೆ.
 ಅರಸೀಕೆರೆ ತಾಲೂಕು ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕ ಪ್ರಭು ಹೇಳುವಂತೆ ತಾಲೂಕಿನಲ್ಲಿ ಅಂದಾಜು 500-650 ಹೆಕ್ಟೇರ್ನಲ್ಲಿ ಅಡಿಕೆ ಬೆಳೆದಿದ್ದು ಅವು ಸಹ ನಾಶವಾಗಿದೆ. ಪರಿಹಾರದ ಬಗ್ಗೆ ಸರ್ಕಾರದಿಂದ ಅಡಿಕೆ ಬೆಳೆ ಬಗ್ಗೆ ಮಾಹಿತಿ ಕೊಡುವಂತೆ ಯಾವುದೇ ವರದಿ ಬಂದಿಲ್ಲ. ಹಾಗಾಗಿ ಅಡಕೆ ಬೆಳೆ ಪರಿಹಾರಕ್ಕೆ ಸರ್ಕಾರಕ್ಕೆ ಯಾವುದೇ ವರದಿ ತಯಾರಿಸಿಲ್ಲ ಎಂದರು.
 ರೈತ ಸಂಘದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ತಾಲೂಕಿನಲ್ಲಿ ತೆಂಗಿನಷ್ಟೇ ಅಡಕೆ ಬೆಳೆದ ರೈತರು ಕಂಗಾಲಾಗಿದ್ದಾರೆ. ಇಂತಹ ಸ್ಥಿತಿಯಿದ್ದರೂ ತೋಟಗಾರಿಕಾ ಇಲಾಖೆ ಹಾಗೂ ಜನಪ್ರತಿನಿಧಿಗಳು, ಸರ್ಕಾರ ಅಡಿಕೆ ಬೆಳೆ ಬೆಳೆದ ರೈತರ ಸಂಕಷ್ಟಕ್ಕೆ ಮುಂದಾಗಬೇಕು. ತಾಲ್ಲೂಕಿನಲ್ಲಿ ಅಡಿಕೆ ಬೆಳೆ ನಾಶದ ಬಗ್ಗೆ ತಕ್ಷಣ ವರದಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಬೇಕೆಂದರು.
 ನರ್ಸರಿ ಮಾಲೀಕ  ಸ್ವಾಮಿ  ಹೇಳುವಂತೆ,  ಸುಮಾರು 20 ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಯಿಂದ ಅಡಿಕೆ ಕಾಯಿ ತಂದು ಸಸಿಗಳನ್ನು ಮಾರಾಟ ಮಾಡುತ್ತಿದ್ದು ಕಳೆದ 3 ವರ್ಷಗಳಿಂದ ಅಡಿಕೆ ಸಸಿ ಮಾರಾಟವಾಗದೆ ಲಕ್ಷಾಂತರ ಅಡಿಕೆ ಸಸಿಗಳು ಒಣಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.



 ತಾಲೂಕಿನಲ್ಲಿ ತೆಂಗಿನಷ್ಟೇ ಅಡಕೆ ಬೆಳೆದ ರೈತರು ಕಂಗಾಲಾಗಿದ್ದಾರೆ. ಇಂತಹ ಸ್ಥಿತಿಯಿದ್ದರೂ ತೋಟಗಾರಿಕಾ ಇಲಾಖೆ ಹಾಗೂ ಜನಪ್ರತಿನಿಧಿಗಳು, ಸರ್ಕಾರ ಅಡಕೆ ಬೆಳೆಗಾರರ  ಸಂಕಷ್ಟಕ್ಕೆ ಮುಂದಾಗಬೇಕು   
- ಕನಕಂಚೇನಹಳ್ಳಿ ಪ್ರಸನ್ನಕುಮಾರ್
ರೈತ ಸಂಘದ ಜಿಲ್ಲಾ ಸಂಚಾಲಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.